ಮನೆ ಕೇಳುವ ನೆಪದಲ್ಲಿ: ಹಲ್ಲೆ, ದರೋಡೆ !

Kannada News

24-08-2017

ಬೆಂಗಳೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ, ನಗರದ ಸುಂಕದಕಟ್ಟೆಯ ಮನೆಯೊಂದಕ್ಕೆ ನುಗ್ಗಿದ್ದ ದರೋಡೆಕೋರರು, ಮನೆ ಮಾಲೀಕನ ಮೇಲೆ ಡ್ರ್ಯಾಗರ್‍ ನಿಂದ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿರುವ ದುರ್ಘಟನೆ ಹಾಡಹಗಲೇ ನಡೆದಿದೆ. ಹಲ್ಲೆಯಿಂದ ಗಾಯಗೊಂಡಿರುವ ಸುಂಕದಕಟ್ಟೆಯ ಮಹದೇವಯ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಕೃತ್ಯ ಎಸಗಿದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಆರು ಮಂದಿ ಮನೆ ಬಾಗಿಲು ತಟ್ಟಿದಾಗ, ಮಹದೇವಯ್ಯ ಪತ್ನಿ ಬಾಗಿಲು ತೆಗೆದಿದ್ದರು. ಆಗ ದರೋಡೆಕೋರರು, ಮನೆ ಪಕ್ಕದಲ್ಲಿದ್ದ ಶೆಡ್ ಬಾಡಿಗೆಗೆ ಬೇಕು ಎಂದಿದ್ದಾರೆ. ಅಷ್ಟರಲ್ಲೇ ಅವರ ಬಳಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಮುಂದಾದಾಗ, ಮಹದೇವಯ್ಯ ಪತ್ನಿ ಕಿರುಚಿಕೊಂಡಿದ್ದಾರೆ. ಮನೆಯೊಳಗಿದ್ದ ಮಹದೇವಯ್ಯ ಹೊರಬಂದು ತಡೆಯಲು ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು, ಮಹದೇವಯ್ಯ ಹೊಟ್ಟೆಗೆ ಡ್ರ್ಯಾಗರ್‍ ನಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹದೇವಯ್ಯ ಬಳಿಯಿದ್ದ ಸರ ಮತ್ತು ಅವರ ಪತ್ನಿಯ ಮಾಂಗಲ್ಯ ಸರ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಕಾಮಾಕ್ಷಿ ಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ