ಅಪಘಾತ: ಕಿರುತೆರೆ ನಟ-ನಟಿ ದುರ್ಮರಣ !

Kannada News

24-08-2017

ಬೆಂಗಳೂರು: ಗೌರಿಹಬ್ಬದ ದಿನವೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಾನದಿ ಧಾರಾವಾಹಿಯ ನಾಯಕಿ ಕಿರುತೆರೆ ನಟಿ ರಚನಾಗೌಡ, ನಟ ಜೀವನ್ ಸುರೇಶ್ ಮೃತಪಟ್ಟು ಐವರು ಸಹ ಕಲಾವಿದರು ಗಾಯಗೊಂಡಿದ್ದಾರೆ.

ನಗರದ ಹೊರಲಯದ ರಾಷ್ಟ್ರೀಯ ಹೆದ್ದಾರಿ 75ರ ನೆಲಮಂಗಲದ ಸೋಲೂರು ಬಳಿ ಗುರುವಾರ ನಸುಕಿನಲ್ಲಿ ವೇಗವಾಗಿ ಹೋಗುತ್ತಿದ್ದ ಟಾಟಾ ಸಫಾರಿ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರಾಜರಾಜೇಶ್ವರಿನಗರದ ಬಿಇಎಂಎಲ್ ಲೇಔಟ್‍ನ ರಚನಾಗೌಡ(23) ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟರೆ,ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಆಶೋಕನಗರದ ವೈಜಿ ಪಾಳ್ಯದ ಜೀವನ್ ಸುರೇಶ್(25)ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಸಹನಟರಾದ ಬಿ.ಎಸ್. ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್‍ನನ್ನು ನೆಲಮಂಗಲದ ಹರ್ಷ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಹ ನಟ ಕಾರ್ತಿಕ್‍ ನ ಹುಟ್ಟುಹಬ್ಬದ ಆಚರಣೆ ಮಾಡಲು ರಾಜರಾಜೇಶ್ವರಿನಗರದಿಂದ ರಾತ್ರಿ 12ಕ್ಕೆ ಕುಕ್ಕೆ ಸುಬ್ರಮಣ್ಯಕ್ಕೆ ರಚನಾಗೌಡ,ಜೀವನ್ ಸುರೇಶ್,ಬಿ.ಎಸ್. ರಂಜಿತ್, ಉತ್ತಮ್, ಹೊನ್ನೇಶ್, ಹಾಗೂ ಎರಿಕ್ ಟಾಟಾ ಸಫಾರಿ ಕಾರಿನಲ್ಲಿ ವೇಗವಾಗಿ ಹೊರಟರು. ಮಾರ್ಗ ಮಧ್ಯೇ ನಸುಕಿನ 2ರ ವೇಳೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸೋಲೂರು ಬಳಿಯ ಲ್ಯಾಕೋ ಟೋಲ್ ಬಳಿ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ರಚನಾಗೌಡ ತಲೆ ಹೊಳಾಗಿ ಸ್ಥಳದಲ್ಲೇ ಮೃತಪಟ್ಟರು. ಕಾಲು ಮುರಿದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಲಾಯಿಸುತ್ತಿದ್ದ ಜೀವನ್ ಸುರೇಶ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹಿಂದಿನ ಸೀಟುಗಳಲ್ಲಿ ಕುಳಿತಿದ್ದ ಬಿ.ಎಸ್.ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್ ಗಾಯಗೊಂಡಿದ್ದು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕೂದೂರು ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಟಿ ರಚನಾಗೌಡ ತ್ರಿವೇಣಿ ಸಂಗಮ, ಮಧುಬಾಲ, ಮಹಾನದಿ ಧಾರವಾಹಿಯಲ್ಲಿ ನಟಿಸಿದ್ದು, ಮಹಾನದಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಉಳಿದರವರು ಸಹನಟರಾಗಿ ಕಿರುತೆರೆಯಲ್ಲಿ ತೊಡಗಿದ್ದರು.

ರಚನಾಗೌಡ ಗುರುವಾರ ಬೆಳಿಗ್ಗೆ ತೆಲುಗಿನ ಧಾರಾವಾಹಿಯೊಂದರ ಚಿತ್ರೀಕರಣವೊಂದರಲ್ಲಿ ಭಾಗವಹಿಸಬೇಕಿತ್ತು ಅದರಿಂದಾಗಿ ರಾತ್ರಿಯೇ ಕುಕ್ಕೇ ಸುಬ್ರಮಣ್ಯಕ್ಕೆ ಹೋಗಿ ವಾಪಾಸ್ ಬರಲು ಹೊರಟಿದ್ದರು ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಪೋಷಕರಿಗೆ ನೀಡಲಾಗಿದ್ದು, ಕೂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ