ಶೋಕಿಗಾಗಿ ಬೈಕ್ ಕದಿಯುತ್ತಿದ್ದವರ ಬಂಧನ !

Kannada News

23-08-2017

ಬೆಂಗಳೂರು: ಶೋಕಿಗಾಗಿ, ಹುಡುಗಿಯ ಒಲೈಕೆಗಾಗಿ ಜಾಲಿರೈಡ್ ವ್ಹೀಲಿಂಗ್‍ ಅಲ್ಲದೇ, ಐಷಾರಾಮಿ ಜೀವನಕ್ಕಾಗಿ ವಾಹನಗಳನ್ನು ಕಳವು ಮಾಡುತ್ತಿದ್ದ 60 ಮಂದಿ ಆರೋಪಿಗಳನ್ನು ಬಂಧಿಸಿ 80 ಲಕ್ಷ ಮೌಲ್ಯದ 159 ಕಾರುಗಳು, ದ್ವಿಚಕ್ರ ವಾಹನಗಳು,ಆಟೋಗಳನ್ನು ಕೇಂದ್ರ,ಉತ್ತರ, ಪಶ್ಚಿಮ, ದಕ್ಷಿಣ ವಿಭಾಗಗಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾಹನ ಕಳವು ಆರೋಪಿಗಳಿಂದ ಅಶೋಕ ನಗರ, ಕಬ್ಬನ್ ಪಾರ್ಕ್, ವಿವೇಕನಗರ, ಮಲ್ಲೇಶ್ವರ, ವಯ್ಯಾಲಿಕಾವಲ್, ಗಂಗಮ್ಮನಗುಡಿ, ಸಂಜಯ ನಗರ, ಹೆಬ್ಬಗೂಡಿ, ಇಂದಿರಾನಗರ, ಜಯನಗರ ಸೇರಿದಂತೆ 46 ಪೊಲೀಸ್ ಠಾಣೆ ವ್ಯಾಪ್ತಿಗಳ 153 ದ್ವಿಚಕ್ರ ವಾಹನಗಳು, 5 ಆಟೋಗಳು, 1 ಕಾರು ಸೇರಿ 159 ವಾಹನಗಳನ್ನು ಪತ್ತೆ ಮಾಡಲಾಗಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪತ್ತೆ ಮಾಡಿದ ಕಳವು ವಾಹನಗಳ ಪ್ರದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಐಷಾರಾಮಿ ಜೀವನ, ಜಾಲಿ ರೈಡ್, ವ್ಹೀಲಿಂಗ್ ಇನ್ನಿತರ ಕಾರಣಗಳಿಗಾಗಿ ವಾಹನ ಕಳವು ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಹೇಳಿದರು.

ಜೆಪಿನಗರ ಪೊಲೀಸರು ಜಾಲಿ ರೈಡ್, ವ್ಹೀಲಿಂಗ್ ಮಾಡಲು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ರಂಜಿತ್ ಆಲಿಯಾಸ್ ವಂದಳ್ ಹಾಗೂ ಮಾರಿಮುತ್ತುನನ್ನು ಬಂಧಿಸಿದ್ದಾರೆ. ಈ ಇಬ್ಬರೂ ಆರೋಪಿಗಳು ಜಾಲಿ ರೈಡ್ ನಂತರ ವಾಹನಗಳನ್ನು ಎಲ್ಲೆಂದರಲ್ಲೇ ಬಿಟ್ಟು ಹೋಗುತ್ತಿದ್ದು, ಹಣಕ್ಕಾಗಿ ಅವುಗಳನ್ನು ಕಳವು ಮಾಡುತ್ತಿರಲಿಲ್ಲ ಎಂದು ತಿಳಿಸಿದರು.

ಕೆಜಿನಗರ ಪೊಲೀಸರು ಗೆಳತಿಯೊಂದಿಗೆ ಸುತ್ತಾಡಿ ಅವಳ ಮನವೊಲಿಸಿಕೊಳ್ಳಲು 16ಕ್ಕೂ ಹೆಚ್ಚು ಬೈಕ್ ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿದ್ದು, ಈತ ಗೆಳತಿಯೊಂದಿಗೆ ಸುತ್ತಾಡಿದ ನಂತರ ಬೈಕ್ ಗಳನ್ನು, ಹಣಕ್ಕಾಗಿ ಮಾರಾಟ ಮಾಡುತ್ತಿದ್ದ. ಇದಲ್ಲದೆ, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು, ಮದ್ಯಪಾನ ಹಾಗೂ ಸ್ಟೈಲ್ ಮಾಡಲು ವಾಹನ ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.

ಕಳವು ಮಾಡಿರುವ ಬಹಳಷ್ಟು ವಾಹನಗಳಲ್ಲಿ ಮಾಲೀಕರು ಕೀಗಳನ್ನು ತಮ್ಮ ವಾಹನಗಳಲ್ಲಿಯೇ ಬಿಟ್ಟು ಹೋಗಿರುವುದು, ಅಲ್ಲದೆ ಸುರಕ್ಷಿತವಾಗಿ ನಿಲ್ಲಿಸದಿರುವುದು ಪತ್ತೆಯಾಗಿದೆ. ಕಳವು ನಿರೋಧಕ ಅಲಾರಂ ಅಳವಡಿಸುವುದು ಅತಿ ಮುಖ್ಯ ಎಂದು ಅವರು ಹೇಳಿದರು.

ವಾಹನಗಳನ್ನು ಕಳವು ಮಾಡದಂತೆ ಮಾಲೀಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸುನಿಲ್ ಕುಮಾರ್ ತಿಳಿಸಿದ್ದು, ಅದರಲ್ಲಿ ಮುಖ್ಯವಾಗಿ ವಾಹನಗಳಿಗೆ ಬೀಗ ಹಾಕದೇ ಬಿಡುವುದು, ಚಾಲನಾ ಸ್ಥಿತಿಯಲ್ಲೇ ಬಿಟ್ಟುಹೋಗುವುದು, ಕಾರುಗಳನ್ನು, ಕಿಟಕಿಗಳನ್ನು ಯಾವುದೇ ಕಾರಣಕ್ಕೂ ತೆರೆಯದೇ ಇರುವುದು, ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಮಾಡುವುದು, ಬಹಳ ಸಮಯಗಳವರೆಗೆ ಒಂದೇ ಕಡೆ ಬಿಡದಿರುವುದು, ಅಡಿಬಲ್ ಅಲಾರಂ ಸಿಸ್ಟಮ್ ಅಳವಡಿಸುವುದೂ ಸೇರಿದೆ.

ವಾಹನಗಳ ಪ್ರದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಡಿಸಿಪಿಗಳಾದ ಡಾ. ಶರಣಪ್ಪ, ಡಾ. ಚಂದ್ರಗುಪ್ತ, ಎಂ.ಎನ್. ಅನುಚೇತ್, ಚೇತನ್ ಸಿಂಗ್ ರಾಥೋರ್ ಅವರು ಭಾಗವಹಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ