ಹೂತಿಟ್ಟ ಮೃತದೇಹ ಹೊರತೆಗೆದು ಪರೀಕ್ಷೆ !

Kannada News

23-08-2017

ಬೆಂಗಳೂರು: ಸಹೋದರ ಕೊಲೆ ಅನುಮಾನ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದ ರೈತನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಹಂದೇನಹಳ್ಳಿಯ ಅಯ್ಯಪ್ಪ ರೆಡ್ಡಿ ಸಾಲ ತೀರಿಸುವ ಸಲುವಾಗಿ ತಮ್ಮ 39 ಗುಂಟೆ ಜಮೀನನ್ನು 80 ಲಕ್ಷಕ್ಕೆ ಮಾರಿದ್ದು, ಇದಾದ ಮೂರೇ ದಿನದಲ್ಲಿ ಅಂದರೆ ಜುಲೈ 31ರಂದು ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಸ್ಥಳೀಯ ಜಮೀನಿನಲ್ಲಿ ನಡೆಸಲಾಗಿತ್ತು. ಇದೀಗ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ವೈದ್ಯರು ನೀಡುವ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಶವ ಸಂಸ್ಕಾರದವರೆಗೂ ಸುಮ್ಮನಿದ್ದ ಅಯ್ಯಪ್ಪ ರೆಡ್ಡಿ ಸಹೋದರ, ರಾಮಕೃಷ್ಣ ರೆಡ್ಡಿ ಇದೀಗ ಅಣ್ಣನನ್ನು ಕೊಲೆ ಮಾಡಲಾಗಿದೆ ಎಂದು, ಅನುಮಾನ ವ್ಯಕ್ತಪಡಿಸಿ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಅತ್ತಿಗೆ ಕಾಳಮ್ಮ ಮತ್ತು ಜಮೀನು ಖರೀದಿಸಿದವರೇ ಅಯ್ಯಪ್ಪ ರೆಡ್ಡಿ ಸಾವಿಗೆ ಕಾರಣ ಎದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಅಯ್ಯಪ್ಪ ಪತ್ನಿ ಕಾಳಮ್ಮ ,ನಮಗೆ ಕಿರುಕುಳ ನೀಡಲೆಂದೇ ರಾಮಕೃಷ್ಣರೆಡ್ಡಿ ಈ ರೀತಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದು, ಸಂಶಯದ ಹಿನ್ನಲೆಯಲ್ಲಿ ಉಪವಿಭಾಗಾಧಿಕಾರಿ ಹರೀಶ್ ನೇತೃತ್ವದಲ್ಲಿ ಅಯ್ಯಪ್ಪ ರೆಡ್ಡಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ