ಗಣೇಶ ಚತುರ್ಥಿ: ಸುರಕ್ಷಾ ಕ್ರಮಗಳು ಕಡ್ಡಾಯ !  

Kannada News

23-08-2017

ಬೆಂಗಳೂರು: ಗಣೇಶ ಚತುರ್ಥಿ ಸಂಭ್ರಮದ ವೇಳೆ ಅಗ್ನಿ ಅವಘಡ ಸೇರಿದಂತೆ ಇನ್ನಿತರ ಅನಾಹುತಗಳನ್ನು ತಡೆಗಟ್ಟಲು, ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ನೀಡಿರುವ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಅವುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಗಣೇಶನನ್ನು ಪ್ರತಿಷ್ಠಾಪಿಸುವ ಪೆಂಡಾಲನ್ನು ಜಿಂಕ್ ಶೀಟ್ ಅಥವಾ ಇತರೆ ಅಗ್ನಿ ನಿರೋಧಕ ವಸ್ತುಗಳನ್ನು ಬಳಸಿ ನಿರ್ಮಿಸುವುದು, ಪೆಂಡಾಲ್‍ಗಳನ್ನು ರಸ್ತೆಯಲ್ಲಿ ಹಾಕದಂತೆ ತಡೆಯುವುದು ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಪೆಂಡಾಲ್ ತಲುಪಲು ಸೂಕ್ತ ರಸ್ತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದೆ.

ಪೆಂಡಾಲ್‍ ಗಳ ಮುಂದೆ ಮತ್ತು ಹಿಂದೆ ಎರಡು ಪ್ರವೇಶ ದ್ವಾರಗಳ ವ್ಯವಸ್ಥೆ ಮಾಡುವುದು, ವಿದ್ಯುತ್ ಸಂಪರ್ಕವನ್ನು ನುರಿತ ಕೆಲಸಗಾರರಿಂದ ಕೈಗೊಳ್ಳುವುದು, ಪ್ರತಿಯೊಂದು ಪೆಂಡಾಲ್‍ ನಲ್ಲಿ 5 ಕೆ.ಜಿ ಅಗ್ನಿ ನಂದನ, 9 ಲೀಟರ್ ವಾಟರ್ ಪ್ರೆಜರ್ ಮಾದರಿ ಅಗ್ನಿ ನಂದಕ, 2 ಬಕೆಟುಗಳಲ್ಲಿ ಮರಳು ಮತ್ತು 2 ಬಕೆಟ್‍ ಗಳಲ್ಲಿ ನೀರನ್ನು ಹಾಗೂ ಕನಿಷ್ಠ 400 ಲೀಟರ್ ನೀರಿನ ಡ್ರಮ್‍ ಗಳನ್ನು ಇರಿಸುವುದು ಕಡ್ಡಾಯವಾಗಿದೆ ಎಂದು ಮಹಾ ನಿರ್ದೇಶಕರಾದ ನೀಲಮಣಿ ರಾಜು ತಿಳಿಸಿದ್ದಾರೆ.

ಪೆಂಡಾಲ್‍ ನಲ್ಲಿ ಅಡುಗೆ ಮತ್ತು ಧೂಮಪಾನಕ್ಕೆ ಅವಕಾಶವಿಲ್ಲ ಎಂಬ ನಾಮಫಲಕಗಳನ್ನು ಇರಿಸಬೇಕು. ಪೆಂಡಾಲ್‍ ಗಳಲ್ಲಿ ಪಟಾಕಿ ಇರಿಸಬಾರದು, ಹಾಗೂ ಪೆಂಡಾಲ್ ಬಳಿ ಪಟಾಕಿಯನ್ನು ಸಿಡಿಸುವಂತಿಲ್ಲ ಹಾಗೂ ಪ್ರತಿ ಪೆಂಡಾಲ್‍ ನಲ್ಲಿ ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆ 101 ಹಾಗೂ ಸ್ಥಳೀಯ ಪೊಲೀಸ್ ಕಂಟ್ರೋಲ್ ದೂರವಾಣಿ ಸಂಖ್ಯೆ 100 ನ್ನು ಫಲಕಗಳ ಸಹಾಯದಿಂದ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ