ಬ್ಲೂವೇಲ್ ಎಂಬ ಸಾಯೋ ಆಟ..?

Kannada News

22-08-2017 873

ಮೂರು ವರ್ಷಗಳ ಹಿಂದೆ, ಭಾರತದ ಹಲವು ನಗರಗಳೂ ಸೇರಿದಂತೆ ವಿಶ್ವಾದಾದ್ಯಂತ ಐಸ್ ಬಕೆಟ್ ಚಾಲೆಂಜ್ ಅನ್ನುವುದು, ಸಾಕಷ್ಟು ಸುದ್ದಿ ಮಾಡಿತ್ತು. ಒಂದು ಬಕೆಟ್‌ನಲ್ಲಿ ಮಂಜುಗಡ್ಡೆ ಅಥವಾ ಮೈಕೊರೆಯುವಷ್ಟು ತಂಪಾದ ನೀರನ್ನು ತುಂಬಿಸಿ ತಮ್ಮ ತಲೆ ಮೇಲೆ ತಾವೇ ಸುರಿದುಕೊಳ್ಳುವುದು ಅಥವ ಬೇರೆಯವರಿಂದ ಸುರಿಸಿಕೊಳ್ಳುವುದೇ ‘ಐಸ್‌ ಬಕೆಟ್‌ ಚಾಲೆಂಜ್‌’. ಮಿದುಳು ಮತ್ತು ಬೆನ್ನುಹುರಿ ನಿಧಾನವಾಗಿ ತನ್ನ ಸಂವೇದನಾ ಸಾಮರ್ಥ್ಯ ಕಳೆದುಕೊಳ್ಳುವ ಎಎಲ್‌ಎಸ್‌ ಅಂದರೆ amyotrophic lateral sclerosis, ಎಂಬ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರಿಂದ ಪೀಡಿತರಾದವರಿಗೆ ನೆರವು ಸಂಗ್ರಹಿಸಲು, ವಿಶ್ವದಾದ್ಯಂತ ನಡೆದ ಅಭಿಯಾನ ಅದು.

ಆದಾದ ನಂತರ, ಕೆಲವರು ರೈಸ್ ಬಕೆಟ್ ಚಾಲೆಂಜ್ ಕೂಡ ಆರಂಭಿಸಿದ್ದರು. ನಮ್ಮ ಅಡುಗೆ ಮನೆಯಿಂದ ಒಂದು ಬಕೆಟ್ ಅಕ್ಕಿ ತೆಗೆದುಕೊಂಡು ಹೋಗಿ, ಬಡವರಿಗೆ ದಾನ ಮಾಡುವುದೇ ರೈಸ್ ಬಕೆಟ್ ಚಾಲೆಂಜ್.

ಇದೀಗ ಭಾರತವೂ ಸೇರಿದಂತೆ ಜಗತ್ತಿನ ಹಲವು ಕಡೆ ಬ್ಲೂ ವೇಲ್ ಚಾಲೆಂಜ್ ಎಂಬ ಮನೆಹಾಳು ವಿಚಾರದ ಬಗ್ಗೆ ಮತ್ತು ಅದರಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ.  

ಬ್ಲೂವೇಲ್ ಚಾಲೆಂಜ್ ಅನ್ನುವುದು, ಅಂತರ್ಜಾಲ ಅಂದರೆ, ಆನ್‌ಲೈನ್ ಮೂಲಕ ನಡೆಯುವ ಒಂದು ದುಷ್ಟ ಚಟುವಟಿಕೆ. ಇದನ್ನು ಆಟವೆಂದು ಕರೆಯುವುದು ಸಾಧ್ಯವಿಲ್ಲ. ಏಕೆಂದರೆ, ಸಾಮಾನ್ಯವಾಗಿ ಸ್ಮಾರ್ಟ್‌ ಫೋನ್‌ ನಲ್ಲಿ ಆಡುವ ಕೆಲವು ಆಟಗಳನ್ನು ಬಿಟ್ಟರೆ, ಬೇರೆಲ್ಲಾ ಒಳಾಂಗಣ ಮತ್ತು ಹೊರಾಂಗಣದ ಆಟಗಳು, ಮಕ್ಕಳಲ್ಲಿ ಮನೋಲ್ಲಾಸ ತುಂಬಿ, ಹೊನಲು ಹರಿಸುತ್ತವೆ. ಮಕ್ಕಳ ಮನಸ್ಸು ಮತ್ತು ದೇಹಗಳಲ್ಲಿ ಉಲ್ಲಾಸ ತುಂಬುತ್ತವೆ. ಆದರೆ, ಈ ಬ್ಲೂವೇಲ್ ಚಾಲೆಂಜ್ ಎಂದು ಕರೆಯಲ್ಪಡುವುದು, ತನ್ನ ಸಹವಾಸಕ್ಕೆ ಬಂದವರ ಪ್ರಾಣಕ್ಕೆ ಕುತ್ತುತರುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಈವರೆಗೆ ಸುಮಾರು ನೂರಕ್ಕೂ ಹೆಚ್ಚು ಹದಿಹರೆಯದ ಮಕ್ಕಳು, ರಹಸ್ಯ ದುಷ್ಪ್ರೇರಕರ ಹಿಡಿತಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಬ್ಲೂವೇಲ್ ಚಾಲೆಂಜ್ ಎಂದು ಕರೆಸಿಕೊಳ್ಳುವ ಈ ವಿದ್ಯಮಾನ ಏನು ಎಂದು ತಿಳಿದುಕೊಳ್ಳುವ ಮೊದಲು, ನಿಜವಾದ ಬ್ಲೂವೇಲ್ ಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಏಕೆಂದರೆ, ಅದನ್ನು ತಿಳಿದ ಮೇಲೆ ಮಾತ್ರ ಬ್ಲೂವೇಲ್ ಚಾಲೆಂಜ್ ಅನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯ.

ಸಾಮಾನ್ಯವಾಗಿ ಆಳ ಸಮುದ್ರದಲ್ಲಿ ಕಂಡುಬರುವ ಬ್ಲೂವೇಲ್ಸ್ ಅಥವ ನೀಲಿ ತಿಮಿಂಗಿಲಗಳು, ಜಗತ್ತಿನ ಅತ್ಯಂತ ದೊಡ್ಡ ಗಾತ್ರದ ಜಲಚರಗಳು. ಸುಮಾರು ಎಪ್ಪತ್ತರಿಂದ ನೂರು ಅಡಿಗಳಷ್ಟು ಉದ್ದವಿರುವ ನೀಲಿ ತಿಮಿಂಗಿಲಗಳು, ಸುಮಾರು ನೂರು ಟನ್ ಗಳಿಗೂ ಅಧಿಕ ತೂಕವಿರುತ್ತವೆ. ಒಂದು ನೀಲಿ ತಿಮಿಂಗಿಲ ಹತ್ತರಿಂದ ಹದಿನೈದು ಆನೆಗಳಷ್ಟು ತೂಕವಿರುತ್ತದೆ ಎಂದರೆ, ಅವುಗಳ ಗಾತ್ರವನ್ನು ನೀವೇ ಊಹಿಸಿಕೊಳ್ಳಬಹುದು. ಕೆಲವು ನೀಲಿ ತಿಮಿಂಗಿಲಗಳು ಆಗಾಗ, ಯಾವುದೋ ಕಾರಣಕ್ಕಾಗಿ, ಆಳ ಸಮುದ್ರ ಬಿಟ್ಟು ಕಡಲತೀರಕ್ಕೆ ಬಂದು ಪ್ರಾಣ ಕಳೆದುಕೊಳ್ಳುತ್ತವೆ. ನೀರಿನಲ್ಲಿದ್ದರೂ ಕೂಡ ಮೇಲೆ ಬಂದು ಗಾಳಿಯಿಂದಲೇ ಉಸಿರಾಡುವ ಈ ನೀಲಿ ತಿಮಿಂಗಿಲಗಳು, ತೀರಕ್ಕೆ ಬಂದು ನೆಲವನ್ನು ಸ್ಪರ್ಶಿಸಿದಾಗ, ಅವುಗಳ ಆಂತರಿಕ ಅಂಗಾಂಗಗಳ ಮೇಲೆ ಭಾರಿ ಒತ್ತಡ ಉಂಟಾಗುತ್ತದೆ. ತಮ್ಮ ಶರೀರದ ಭಾರದಿಂದ ಅವುಗಳ ಶ್ವಾಸಕೋಶಗಳು ಕೆಲಸ ಮಾಡುವುದಿಲ್ಲ. ಇದರ ಜೊತೆಗೆ, ದೇಹದ ಉಷ್ಣಾಂಶವೂ ಏರಿಕೆಯಾಗುತ್ತದೆ. ಈ ಎಲ್ಲಾ ಕಾರಣಗಳಿಂದ ದಡಕ್ಕೆ ಬಂದು ತಲುಪಿದ ನೀಲಿ ತಿಮಿಂಗಿಲಗಳು ಸಾವನಪ್ಪುತ್ತವೆ.

ಆದರೆ, ಇವು ದಡಕ್ಕೆ ಬರುವುದಕ್ಕೆ ಕಾರಣ ಏನು? ಅವುಗಳೇನಾದರೂ  ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿಯೇ ದಡಕ್ಕೆ ಬರುತ್ತವೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ದೊರೆತಿಲ್ಲ. ಇದಿಷ್ಟೂ ಬ್ಲೂವೇಲ್‌ಗಳ ಕತೆ. ಆದರೆ, ನಾವು ಬ್ಲೂವೇಲ್ ಚಾಲೆಂಜ್‌ ಎಂಬುದಕ್ಕೆ ಮತ್ತೆ ವಾಪಸ್ ಬರೋಣ. ಬ್ಲೂವೇಲ್ ಚಾಲೆಂಜ್‌ ಅನ್ನುವುದು ಒಂದು ಆಟವಲ್ಲ, ಬದಲಿಗೆ ಅಂತರ್ಜಾಲದ ಮೂಲಕ, ಕೆಲವರು ದುಷ್ಟರು ನಿಗೂಢವಾಗಿ ನಡೆಸುವ ಅನೈತಿಕ ಮತ್ತು ಅನಾಹುತಕಾರಿ ಚಟುವಟಿಕೆ ಎಂದು ಈಗಾಗಲೇ ನಿಮಗೆ ತಿಳಿಸಿದ್ದೇವೆ.

2013ರಲ್ಲಿ ಮೊದಲ ಬಾರಿಗೆ ರಷ್ಯಾ ದೇಶದಲ್ಲಿ VKontakte ಎನ್ನುವ ಜನಪ್ರಿಯ ಸಾಮಾಜಿಕ ಜಾಲ ತಾಣದ ಮೂಲಕ, ಈ ಬ್ಲೂವೇಲ್ ಚಾಲೆಂಜ್ ಕಾಟ  ಆರಂಭವಾಯಿತು ಎಂದು ಹೇಳಲಾಗುತ್ತದೆ. ಆರಂಭದಲ್ಲಿ ರಷ್ಯಾ ಮತ್ತು  ಏಷ್ಯಾ ಖಂಡದ ದೇಶಗಳಲ್ಲಿನ ಹತ್ತು ಹನ್ನೆರಡು ವರ್ಷದ ಮಕ್ಕಳನ್ನು ಆಕರ್ಷಿಸಿದ ಈ ಬ್ಲೂವೇಲ್ ಚಾಲೆಂಜ್, ಆನಂತರದ ದಿನಗಳಲ್ಲಿ ಯೂರೋಪ್ ಮತ್ತು ಬ್ರಿಟನ್ ದೇಶಗಳಿಗೂ ಹಬ್ಬಿತು.

ರಷ್ಯಾ ವಿಶ್ವವಿದ್ಯಾಲಯದಿಂದ ಉಗಿದು ಹೊರದಬ್ಬಲ್ಪಟ್ಟ Philipp Budeikin ಎಂಬ ‘ಸೈಕೋ’ ಮನಸ್ಥಿತಿಯ ಇಪ್ಪತ್ತೊಂದು ವರ್ಷದ ವ್ಯಕ್ತಿ, ಈ ಆಟವನ್ನು ಕಂಡು ಹಿಡಿದ ಎಂದು ಹೇಳಲಾಗುತ್ತದೆ.

‘ಸಮಾಜದಲ್ಲಿ ಕೆಲವರು ಕೇವಲ biological waste ಅಂದರೆ ಜೈವಿಕ ತ್ಯಾಜ್ಯದಂತಿದ್ದಾರೆ. ಇಂಥವರು ಸಮಾಜಕ್ಕೆ ಹಾನಿಕರ, ಅದಕ್ಕಾಗಿ ನಾನು ಸಮಾಜವನ್ನು ಶುದ್ದೀಕರಿಸುತ್ತಿದ್ದೇನೆ’ ಎಂದು ಅವನು Saint Petersburg Newsಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾನೆ.

2016ರಲ್ಲಿ ರಷ್ಯಾದಲ್ಲಿ ಹದಿಹರೆಯದ ಮಕ್ಕಳ ಹಲವಾರು ಆತ್ಮಹತ್ಯೆಗಳು ಬೆಳಕಿಗೆ ಬಂದ ಮೇಲೆ, ಆ ಬಗ್ಗೆ ತನಿಖೆ ನಡೆದು Budeikinನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ತಾನೇ ನೇರವಾಗಿ 17 ಜನರ ಆತ್ಮಹತ್ಯೆಗೆ ಪ್ರಚೋದಿಸಿದ್ದೇನೆ ಎಂದು Budeikin ತಪ್ಪೊಪ್ಪಿಗೆ ನೀಡಿದ್ದಾನೆ.

ರಷ್ಯಾ ಪೊಲೀಸರು ಇದೇ ಜುಲೈನಲ್ಲಿ, ಮಾಸ್ಕೊ ನಿವಾಸಿ Ilya Sidorov ಅನ್ನುವವನನ್ನು Blue Whale ಚಾಲೆಂಜ್‌ನ ನಿರ್ವಾಹಕರಲ್ಲಿ ಒಬ್ಬ ಎಂದು ಆರೋಪಿಸಿ ಬಂಧಿಸಿದ್ದಾರೆ.

ಅಮೆರಿಕ, ಅರ್ಜೆಂಟಿನ, ಬ್ರೆಜಿಲ್, ಚಿಲಿ, ಚೀನಾ, ಪಾಕಿಸ್ತಾನ, ಕೊಲಂಬಿಯ, ಇಟಲಿ, ಉರಗ್ವೆ, ಸ್ಪೇನ್ ಮತ್ತು ಸೌದಿ ಅರೇಬಿಯಾದಂಥ ದೇಶದಿಂದ ಬ್ಲೂವೇಲ್ ಚಾಲೆಂಜ್ ಪ್ರಕರಣಗಳು ವರದಿಯಾಗಿವೆ. ಭಾರತವೂ ಸೇರಿದಂತೆ ವಿಶ್ವಾದ್ಯಂತ ಈ ವಿಚಾರದ ಬಗ್ಗೆ ಆತಂಕ ವ್ಯಕ್ತವಾಗಿದೆ.

VKontakte ಇತ್ಯಾದಿ, ವೆಬ್‌ ಸೈಟ್‌ಗಳ ಮೂಲಕ ಬ್ಲೂವೇಲ್ ಚಾಲೆಂಜ್ ಒಪ್ಪಿಕೊಂಡು, ಒಮ್ಮೆ ತಮ್ಮ ಬಲೆಗೆ ಬೀಳುವ ಮಕ್ಕಳಿಗೆ, ಆ ಕೂಟಗಳ ಮೇಲ್ವಿಚಾರಕರು, ಅಂದರೆ ತಮ್ಮನ್ನು ತಾವು ವೇಲ್ ಅಥವ ಅಡ್ಮಿನಿಸ್ಟ್ರೇಟರ್ ಗಳು ಎಂದು ಕರೆದುಕೊಳ್ಳುವವರು, ಐವತ್ತು ದಿನಗಳಲ್ಲಿ ಐವತ್ತು ಟಾಸ್ಕ್ ಗಳನ್ನು ಅಂದರೆ, ಕೆಲಸಗಳನ್ನು ಹೇಳುತ್ತಾರಂತೆ. ಸಾಮಾನ್ಯವಾಗಿ ಬೆಳಗಿನ ಜಾವ 4 ಗಂಟೆ 20 ನಿಮಿಷದಲ್ಲಿ ಈ ಆಟದ ಮೊದಲ ಸವಾಲು ಕಳಿಸಲಾಗುತ್ತದಂತೆ. ಈ ಟಾಸ್ಕ್‌ಗಳು ಮೊದ ಮೊದಲಿಗೆ ತುಂಬಾ ಸುಲಭವಾಗಿರುತ್ತವಂತೆ. ಯಾವುದೋ ಒಂದು ಹಾಡನ್ನು ಕೇಳುವಂತೆ ಅಥವ ರಾತ್ರಿಯ ಯಾವುದೋ ಹೊತ್ತಿನಲ್ಲಿ ಎಚ್ಚರವಾಗಿರುವಂತೆ ಹೇಳಲಾಗುತ್ತದೆ.

ಅವರ ಸವಾಲು ಸ್ವೀಕರಿಸಿದವರು, ಅದನ್ನು ಸರಿಯಾಗಿ ಮಾಡಿದ್ದರ ಬಗ್ಗೆ ಅವರಿಗೆ ಫೋಟೊ ಅಥವ ವಿಡಿಯೊ ಸಾಕ್ಷಿ ಕಳಿಸಬೇಕಂತೆ. ಆದರೆ, ಮುಂದೆ ಮುಂದೆ ಹೋದಂತೆ ಬೆಳಗಿನ ಜಾವದಲ್ಲಿ, ಮಧ್ಯರಾತ್ರಿಯಲ್ಲಿ ಏಳಿಸುವುದು, Horror ಅಂದರೆ, ದೆವ್ವ ಭೂತಗಳ ಸಿನಿಮಾ ವಿಡಿಯೋ ಕಳಿಸಿ, ಇಡೀದಿನ ನೋಡು ಎಂದು ಒತ್ತಾಯಿಸುವುದು, ನಿನ್ನ ತುಟಿ ಕತ್ತರಿಸಿಕೋ ಎಂದು ಹೇಳುತ್ತಾರಂತೆ. ಇದಲ್ಲದೆ, ಯಾವುದೋ ಒಂದು ಕ್ರೇನ್ ಹತ್ತುವಂತೆ ಹೇಳುವುದು, ದೇಹದ ಭಾಗಗಳಲ್ಲಿ ಬ್ಲೇಡಿನಿಂದ ನಿನ್ನ ಹೆಸರನ್ನು ಕೆತ್ತಿಕೋ ಎಂದು ಹೇಳುವುದು,  ತಿಮಿಂಗಿಲದ ಚಿತ್ರ ಕೆತ್ತಿಕೋ ಅನ್ನುವುದು, ಮತ್ಯಾವುದೋ ಚಿತ್ರವನ್ನು ಕೆತ್ತಿಕೊಳ್ಳುವಂಥ ವಿಕೃತ ಕೆಲಸಗಳನ್ನು ಮಾಡಿಸಲಾಗುತ್ತದಂತೆ.

ಮುಂದುವರಿದಂತೆ, ತೋಳು ಅಥವಾ ಕಾಲುಗಳಿಗೆ ಸೂಜಿ ಚುಚ್ಚಿಕೊಳ್ಳುವಂತೆ, ಸೇತುವೆ ಅಥವಾ ಟೆರೇಸ್ ಅಂಚಿನಲ್ಲಿ ಅಪಾಯಕಾರಿಯಾಗಿ ನಿಂತುಕೊಂಡು ಸಂಗೀತ ಕೇಳುವುದು ಮುಂತಾದ ಅಪಾಯಕಾರಿ ಟಾಸ್ಕ್ ಗಳನ್ನು ನೀಡುತ್ತಾರಂತೆ. ಇದೆಲ್ಲವನ್ನೂ ಇವರು ಮಾಡುತ್ತಿಲ್ಲ ಎಂದಾಗ, ಸ್ಕೈಪ್ ಇತ್ಯಾದಿಗಳ ಮೂಲಕವೂ ಅವರ ಚಟುವಟಿಕೆ ಪರಿಶೀಲಿಸುತ್ತಾರಂತೆ ಮತ್ತು ಇವೆಲ್ಲವನ್ನೂ ಮನೆಯವರಿಗಾಗಲಿ ಬೇರೆಯವರಿಗಾಗಲಿ ಒಂದಿಷ್ಟೂ ಗೊತ್ತಾಗದ ಹಾಗೆ ಮಾಡಬೇಕೆಂದು ಮಾತು ಪಡೆದಿರುತ್ತಾರಂತೆ.

ಈ ದುಷ್ಟರು ಹೇಳುವ ಕೆಲಸಗಳು, ಬರುಬರುತ್ತಾ ಹೆಚ್ಚು ಕುತಂತ್ರದ ಮತ್ತು ಬೆದರಿಸುವ ಹಂತ ತಲುಪುತ್ತವೆ. ಇಷ್ಟವಾಗಲಿ ಆಗದೇ ಇರಲಿ, ಅವರ ಸವಾಲುಗಳನ್ನು ಒಪ್ಪಿಕೊಳ್ಳುತ್ತಾ ಹೋಗುವುದು ಅನಿವಾರ್ಯವಾಗುವಂತೆ ಮಾಡುತ್ತಾರೆ. ಪ್ರತಿಯೊಂದು ಟಾಸ್ಕ್ ಗಿಂತ ಮುಂದಿನ ಟಾಸ್ಕ್ ಅಪಾಯಕಾರಿಯಾಗುತ್ತಾ ಬರುತ್ತದೆ. ಕೊನೆಗೆ ಐವತ್ತು ದಿನಗಳು ಕಳೆಯುವ ಹೊತ್ತಿಗೆ, ಆ ಆಟ ಆಡುತ್ತಿರುವ ವ್ಯಕ್ತಿಯ ಬ್ರೇನ್ ವಾಷ್ ಮಾಡಿ, ನೀನು ಈ ಆಟ ಗೆಲ್ಲಲು ಬ್ಲೂವೇಲ್ ಆಗಬೇಕು, ಅಂದರೆ ಆತ್ಮಹತ್ಯೆ ಮಾಡಿಕೊಳ್ಳಲೇಬೇಕು ಎಂದು ಮೊದಲು ಉಪಾಯವಾಗಿ ಹೇಳುತ್ತಾರಂತೆ, ಅದಕ್ಕೆ ಒಪ್ಪದಿದ್ದರೆ, ಬೆದರಿಕೆ ಒಡ್ಡಿ ಬಲವಂತದಿಂದ ಒತ್ತಾಯಿಸಲಾಗುತ್ತದಂತೆ. ಹೀಗಾಗಿ, ನಾವು ಸೋಲಬಾರದು ಎಂಬ ಹಠದಿಂದ ಕೆಲವು ಮಕ್ಕಳು, ತಮ್ಮ ಪ್ರಾಣ ಕಳೆದುಕೊಂಡರೆ, ಮತ್ತೆ ಕೆಲವರು ಆ ದುಷ್ಟರ ಬೆದರಿಕೆಗೆ ಶರಣಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರಂತೆ.

ಈ ಬ್ಲೂ ವೇಲ್ ಚಾಲೆಂಜ್ ಎಂಬುದನ್ನು, 'A Silent House’, 'A Sea Of Whales' ಮತ್ತು 'Wake Me Up At 4:20 am ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರಂತೆ.

ರಷ್ಯಾದಿಂದ ಆರಂಭಿಸಿ ಜಗತ್ತಿನ ಹಲವು ದೇಶಗಳನ್ನು ತಲುಪಿರುವ ಈ ದುಷ್ಟರ ಹುನ್ನಾರಕ್ಕೆ, ಭಾರತದಲ್ಲೂ ಮೊದಲ ಬಲಿ ಆಗಿದೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮುಂಬೈನ ಅಂಧೇರಿಯ 14 ವರ್ಷದ ಬಾಲಕನೊಬ್ಬ, ಇನ್ನು ಮುಂದೆ ನಾನು ಸ್ಕೂಲಿಗೆ ಬರುವುದಿಲ್ಲವೆಂದು ಸ್ನೇಹಿತರಿಗೆ ತಿಳಿಸಿ, 5ನೇ ಮಹಡಿಯಿಂದ ಕೆಳಗೆ ನೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಾಲಕನ ಆತ್ಮಹತ್ಯೆಗೆ ಬ್ಲೂವೇಲ್ ಚಾಲೆಂಜ್ ಪ್ರಚೋದನೆ ನೀಡಿರಬಹುದು ಎಂಬ ಮಾಹಿತಿ ಬೆಳಕಿಗೆ ಬಂದಿತ್ತು.

ಸಾಮಾಜಿಕ ಜಾಲ ತಾಣಗಳಾದ Instagram, Snap Chat, You Tube ಮೂಲಕವೂ ಇದು ಹಲವರಿಗೆ ಪರಿಚಯವಾಗುತ್ತಿದೆಯಂತೆ.

ಆದರೆ, ಗೂಗಲ್ ಸ್ಟೋರ್‌ ನಲ್ಲಾಗಲಿ ಬೇರೆ App ಸ್ಟೋರ್‌ಗಳಲ್ಲಾಗಲಿ ಬ್ಲೂವೇಲ್ ಚಾಲೆಂಜ್ ಅನ್ನುವಂಥ ಯಾವುದೇ App ಇಲ್ಲ ಎಂದು ಸೈಬರ್ ತಜ್ಞರು ಹೇಳುತ್ತಾರೆ. ಬ್ಲೂವೇಲ್ ಬಗ್ಗೆ ಸುದ್ದಿ ಹಬ್ಬಿದ ಮೇಲೆ, ಅದೇ ಹೆಸರಿನ ನಕಲಿಗಳು ವೆಬ್ ಸೈಟ್‌ಗಳಲ್ಲಿ ಹುಟ್ಟಿಕೊಂಡಿವೆಯಂತೆ.

Blue Whale ಅನ್ನುವುದು ಒಂದು ಆಟ ಅಲ್ಲ, ಅದು ಕಂಪ್ಯೂಟರ್ ವೈರಸ್ ಕೂಡ ಅಲ್ಲ, ಅದು ಯಾರನ್ನೂ ಆತ್ಮಹತ್ಯೆಗೆ ಪ್ರಚೋದಿಸುವ ಪ್ರಶ್ನೆಯೂ ಇಲ್ಲ. ಇದರ ಜೊತೆಗೆ, ಹೆಚ್ಚಿನ ಪ್ರಕರಣಗಳಲ್ಲಿ Blue Whale ಜಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರು ಅನ್ನುವುದು, ಕುಟುಂಬಸ್ಥರು ಹೇಳಿರುವ ಮಾಹಿತಿ ಆಧರಿಸಿದ್ದಷ್ಟೇ ಹೊರತು, ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ, Blue Whale ಅನ್ನುವುದು ಒಂದು sick phenomenon ಅಂದರೆ, ರೋಗಿಷ್ಟ ವಿದ್ಯಮಾನವಷ್ಟೇ ಹೊರತು ವಾಸ್ತವ ಅಲ್ಲ ಅನ್ನುತ್ತಾರೆ ಕೆಲವರು.

ಇದೀಗ Blue Whale ವಿಚಾರ ಹಬ್ಬುತ್ತಿರುವುದರಿಂದ, ದುಷ್ಟಮನಸ್ಸಿನ ದುರುಳರು, ಹದಿಹರೆಯದ ಮಕ್ಕಳನ್ನು ಬಲೆಗೆ ಬೀಳಿಸಿಕೊಂಡು, ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೀಗ ಜಗತ್ತಿನಲ್ಲಿ ಎಷ್ಟು ಜನ ಈ ಬ್ಲೂವೇಲ್ ಚಾಲೆಂಜ್‌ ನಂಥ ಜಾಲಕ್ಕೆ ಬಿದ್ದಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಹೈಕ್, ವಾಟ್ಸಾಪ್‌ ಮತ್ತು ಇತರೆ ವೆಬ್‌ ಸೈಟ್‌ ಗಳ ಮೂಲಕ, ತಮ್ಮ ಬಲೆಗೆ ಬೀಳಬಹುದಾದ ಅಮಾಯಕರಿಗಾಗಿ, ದುಷ್ಟರು ಹುಡುಕಾಟವನ್ನಂತೂ ನಡೆಸುತ್ತಲೇ ಇದ್ದಾರೆ. ಒಮ್ಮೆ ತಮ್ಮ ಸಂಪರ್ಕಕ್ಕೆ ಬಂದರೆ ಸಾಕು, ಅವರನ್ನು ತಮ್ಮ ಕೈವಶ ಮಾಡಿಕೊಂಡು, ಒಂದಲ್ಲಾ ಒಂದು ಕೆಟ್ಟ ಆಟ ಶುರು ಮಾಡುತ್ತಾರೆ ಅನ್ನುವುದಂತೂ ನಿಜ.

ಹೀಗಾಗಿ, ಈ ಬ್ಲೂವೇಲ್ ವಿದ್ಯಮಾನವನ್ನು ಎಲ್ಲಾ ತಂದೆ ತಾಯಿಗಳು, ಪೋಷಕರು, ಶಾಲೆಗಳು ಮತ್ತು ಶಿಕ್ಷಕರು ಒಂದು ಎಚ್ಚರಿಕೆ ಗಂಟೆಯಾಗಿ ತೆಗೆದುಕೊಳ್ಳಬೇಕಾಗಿದೆ. ತಮ್ಮ ಮಕ್ಕಳು, ಇಂಟರ್ ನೆಟ್ ನಲ್ಲಿ ಏನೆಲ್ಲಾ ನೋಡುತ್ತಾರೆ, ಮಾಡುತ್ತಾರೆ ಎಂಬ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ.

ಸಾಮಾನ್ಯವಾಗಿ, ನಾವು ದಿನನಿತ್ಯದ ಬದುಕಿನಲ್ಲಿ, ನಮ್ಮ ಮಕ್ಕಳಿಗೆ ಅಪರಿಚಿತರೊಂದಿಗೆ ಮಾತನಾಡಬೇಡಿ, ಸಂಪರ್ಕ ಬೆಳೆಸಬೇಡಿ ಎಂದು ಹೇಳುತ್ತೇವೆ. ಅದೇ ರೀತಿ virtual worldನಲ್ಲಿ ಅಂದರೆ, ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಅಪರಿಚಿತರ ಸಂಪರ್ಕ ಬೆಳೆಸಬೇಡಿ, ನಿಮ್ಮ ಬಗ್ಗೆ ಅನಗತ್ಯ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಮಕ್ಕಳಿಗೆ ತಿಳುವಳಿಕೆ ನೀಡಬೇಕಿದೆ.

ಇದರ ಜೊತೆಗೆ ಮಕ್ಕಳಾಗಲಿ, ದೊಡ್ಡವರಾಗಲಿ, ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ನಿಮಗೆ ನಿದ್ದೆ ಬರದಿದ್ದರೆ, ಯಾವುದಾದರೂ ವಿಚಾರದ ಬಗ್ಗೆ ನಿಮಗೆ ಭಯವಿದ್ದರೆ ಅದನ್ನೆಲ್ಲಾ ಇಂಟರ್‌ ನೆಟ್ ಬ್ಲಾಗ್‌ ಗಳಲ್ಲಿ ಬರೆಯುವುದು ಸರಿಯಲ್ಲ. ನಿಮ್ಮ ಸಮಸ್ಯೆಗೆ ಒಳ್ಳೆಯ ಸ್ನೇಹಿತರು, ಕುಟುಂಬದ ಹಿರಿಯರು ಅಥವ ವೈದ್ಯರ ನೆರವು ಪಡೆಯಿರಿ. ಏಕೆಂದರೆ, ಈ ರೀತಿ ನೀವು ಬಹಿರಂಗ ಪಡಿಸುವ ಸೂಕ್ಷ್ಮ ಮಾಹಿತಿಗಳನ್ನೇ ಬಳಸಿಕೊಂಡು, ಕೆಲವು ದುಷ್ಟಶಕ್ತಿಗಳು ನಿಮ್ಮನ್ನು ಪೀಡಿಸಲು ಅಥವ ಹಾಳು ಮಾಡಲು ಪ್ರಯತ್ನಿಸಬಹುದು.

ಒಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕ್ರಾಂತಿಯ, ಉಪ ಉತ್ಪನ್ನಗಳಾದ ಸಾಮಾಜಿಕ ಜಾಲತಾಣಗಳು, ಜನರಿಗೆ ತಮ್ಮ ಭಾವನೆ ವ್ಯಕ್ತಪಡಿಸಲು, ಗೆಳೆಯರು, ಬಂಧುಗಳೊಂದಿಗೆ ಖುಷಿ ಹಂಚಿಕೊಳ್ಳಲು ನೆರವಾಗಿರುವುದು ಸತ್ಯ. ಆದರೆ, ಅದು ಮಿತಿ ಮೀರಿದರೆ ಅನಾಹುತಗಳನ್ನು ತಂದೊಡ್ಡುವುದೂ ಖಚಿತ ಅನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಸಂಬಂಧಿತ ಟ್ಯಾಗ್ಗಳು

ಬ್ಲೂವೇಲ್ ಎಂಬ ಸಾಯೋ ಆಟ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ