ಪಿ.ಜಿಗಳ ಮೇಲೆ ಪೊಲೀಸರ ನಿಗಾ..?

Kannada News

22-08-2017

ಬೆಂಗಳೂರು: ರಾಜ್ಯದ ಪ್ರಮುಖ ನಗರಗಳಲ್ಲಿರುವ ಬಹುತೇಕ ಕಾಲೇಜು ಪಿ.ಜಿ (ಪೇಯಿಂಗ್ ಗೆಸ್ಟ್ )ಗಳಲ್ಲಿ ಪರಭಾಷಿಕ ಮತ್ತು ವಿದೇಶಿ ವಿದ್ಯಾರ್ಥಿಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆಯು ಪಿಜಿಗಳ ಮೇಲೆ ನಿಗಾ ವಹಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲು ನಿರ್ಧರಿಸಿದೆ.

ಸರ್ಕಾರದ ಉನ್ನತ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಮಿತಿ ಮೀರಿರುವ ಬಹುತೇಕ ಪಿ.ಜಿಗಳನ್ನು ನಿಯಂತ್ರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಲು ಗೃಹ ಇಲಾಖೆ ನಿರ್ಧರಿಸಿದೆ. ಸ್ಥಳೀಯರಲ್ಲದೆ, ಉತ್ತರ ಭಾರತೀಯರು ಹಾಗೂ ವಿದೇಶಿ ವಿದ್ಯಾರ್ಥಿಗಳು ಅಧಿಕವಾಗಿರುವ ಪಿ.ಜಿ.ಗಳ ವ್ಯಾಪ್ತಿಯಲ್ಲಿ ದಾಂಧಲೆ ವಿಪರೀತವಾಗಿದೆ. ಇದು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಮೂಲಗಳು ಹೇಳಿವೆ.

ಬಹುತೇಕ ಪಿ.ಜಿ.ಗಳಲ್ಲಿ ಮಧ್ಯರಾತ್ರಿ ಕಳೆದರೂ ಕುಡಿತ, ಮೋಜು, ಮಸ್ತಿಯ ಹಾವಳಿ ಹೆಚ್ಚಾಗುತ್ತಿದೆ. ಈ ಕುರಿತು ಹೇಳಲು ಹೋದರೆ ತಮ್ಮನ್ನು ಕೇಳುವವರು ಯಾರೂ ಇಲ್ಲವೆಂಬಂತೆ ಬಹುತೇಕ ಕಡೆ ವಿದ್ಯಾರ್ಥಿಗಳು ವರ್ತಿಸುತ್ತಿದ್ದಾರೆ. ಬುದ್ಧಿ ಹೇಳಲು ಹೋದವರನ್ನೇ ಅವಾಚ್ಯವಾಗಿ ನಿಂದಿಸುವುದು, ಹೊಡೆಯುವುದನ್ನು ಮಾಡುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ನೆಮ್ಮದಿ ಕಳೆದುಕೊಂಡಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯದ ಬಹುತೇಕ ನಗರಗಳಲ್ಲಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎಂಬ ದೂರು ಸರ್ಕಾರಕ್ಕೆ ತಲುಪಿದೆ.

ಇದೇ ಕಾರಣಕ್ಕಾಗಿ ಸದರಿ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯನವರು ಗೃಹ ಇಲಾಖೆಗೆ ಸೂಚನೆ ನೀಡಿದ್ದು, ಕಾಲೇಜು ಪಿ.ಜಿ.ಗಳ ಹಾವಳಿಯನ್ನು ತಡೆಗಟ್ಟುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪಿ.ಜಿ.ಗಳ ಮಾಲೀಕರ ಸಭೆ ನಡೆಸಿ ತಮ್ಮ ತಮ್ಮ ಪಿ.ಜಿ.ಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಆದೇಶಿಸಿ, ಇಲ್ಲವೇ ಶಿಕ್ಷೆ ಎದುರಿಸಲು ಸಿದ್ಧರಾಗಿ ಎಂದು ಸ್ಪಷ್ಟವಾಗಿ ಹೇಳುವಂತೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲು ಗೃಹ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಪಿ.ಜಿಗಳ ಪೊಲೀಸರ ನಿಗಾ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ