ಮಚ್ಚಿನಿಂದ ಕೊಚ್ಚಿ ರೌಡಿ ಕೊಲೆ !

Kannada News

22-08-2017

ಬೆಂಗಳೂರು: ತಲಘಟ್ಟಪುರದ 100 ಅಡಿ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ಸಹಚರರೊಂದಿಗೆ ಕಾರಿನಲ್ಲಿ ಬರುತ್ತಿದ್ದ, ಕುಖ್ಯಾತ ರೌಡಿ ರಘು ಅಲಿಯಾಸ್ ಟ್ಯಾಬ್ಲೆಟ್ ರಘುನನ್ನು ಎದುರಾಳಿ ಗುಂಪಿನ ಐವರ ಗ್ಯಾಂಗ್ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ, ಅಡ್ಡಬಂದ ಮತ್ತೊಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಕುಮಾರಸ್ವಾಮಿ ಲೇಔಟ್‍ನ ಕಾಶಿ ನಗರದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಟ್ಯಾಬ್ಲೆಟ್ ರಘು(30)ಕೊಲೆಯಾದವರು. ಗಾಯಗೊಂಡಿರುವ ಆತನ ಸಹಚರ ಮಧುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾತ್ರಿ 12.30ರ ವೇಳೆ ರಘು ಮತ್ತು ಮಧು ಸೇರಿ ಇನ್ನಿತರ ನಾಲ್ವರೊಂದಿಗೆ ಸೇರಿ ಮಂಡ್ಯದ ದೇವಾಲಯಕ್ಕೆ ಹೋಗಿ ವಾಪಸ್ ಆಗುತ್ತಿದ್ದಾಗ ತಲಘಟ್ಟಪುರದ 100 ಅಡಿ ರಸ್ತೆಯಲ್ಲಿ ಎದುರಾಳಿ ಗ್ಯಾಂಗ್ ವಜ್ರ ಅಲಿಯಾಸ್ ವಜ್ರೇಶ್ ಸೇರಿ ಐದಾರು ಮಂದಿಯ ಗ್ಯಾಂಗ್ ಕಾರಿನಲ್ಲಿ ಎದುರಿನಿಂದ ಬಂದು ಅಡ್ಡಗಟ್ಟಿದ್ದಾರೆ.

ಕಾರಿನಿಂದ ಇಳಿದ ಟ್ಯಾಬ್ಲೆಟ್ ರಘುವಿನ ಹೊಟ್ಟೆ, ಕಾಲು, ತಲೆ, ಇನ್ನಿತರ ಭಾಗಗಳಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಅಡ್ಡಬಂದ ಮಧು ಮೇಲೂ ಹಲ್ಲೆ ನಡೆಸಿದ್ದಾರೆ. ರಘು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ಆತನ ಜೊತೆಗಿದ್ದ ಇನ್ನೂ ಮೂವರು ಪರಾರಿಯಾಗಿದ್ದಾರೆ. ಸದ್ಯ ಮಧು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆಗೆ ಯತ್ನ, ಡಕಾಯಿತಿ ಸೇರಿದಂತೆ, 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಟ್ಯಾಬ್ಲೆಟ್ ರಘು, ಕುಮಾರ ಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಅವರು ತಿಳಿಸಿದ್ದಾರೆ.

ತಲಘಟ್ಟಪುರ, ಸಾತನೂರು, ಕುಮಾರ ಸ್ವಾಮಿ ಲೇಔಟ್, ಇನ್ನಿತರ ಕಡೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, 3 - 4 ವರ್ಷಗಳಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದ ಈತ ಒಂದು ವರ್ಷದ ಹಿಂದೆ ವಿವಾಹವಾಗಿ ಕಾಶಿನಗರದಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಣಕಾಸಿನ ವಿಚಾರದಲ್ಲಿ ಸಹಚರನಾಗಿದ್ದ ವಜ್ರ ಅಲಿಯಾಸ್ ವಜ್ರೇಶ್ ಜೊತೆಗೆ ಇತ್ತೀಚೆಗೆ ಜಗಳ ಮಾಡಿಕೊಂಡು ಬೇರೆಯಾಗಿದ್ದ. ಜಗಳದಿಂದ ಕುದಿಯುತ್ತಿದ್ದ ವಜ್ರ ಸಹಚರರ ಜೊತೆ ಸೇರಿ ರಘುನನ್ನು ಕೊಲೆ ಮಾಡಿದ್ದಾನೆ. ಮುಂಜಾಗ್ರತಾ ಕ್ರಮವಾಗಿ ಈ ಎರಡೂ ಗ್ಯಾಂಗ್‍ ನ ಮೇಲೆ ಕಣ್ಣಿಟ್ಟಿದ್ದರೂ ಕೃತ್ಯ ನಡೆದುಹೋಗಿದೆ. ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿ ವಜ್ರ ಮತ್ತು ಆತನ ಗ್ಯಾಂಗ್‍ ಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಟ್ಯಾಬ್ಲೆಟ್ ರಘುವನ್ನು ಕೊಲೆಗೈದು ಪರಾರಿಯಾಗಿರುವ ವಜ್ರ ಮತ್ತವನ ಗ್ಯಾಂಗ್ ಪತ್ತೆಗಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ