ಹಿಂದಿ ಯಾಕೆ…?

Kannada News

22-08-2017 1177

ಕಳೆದ ವಾರ ಹಿಂದಿ ಭಾಷೆ ಅದರ ಇತಿಹಾಸ, ಸಾಹಿತ್ಯ, ವ್ಯಾಪಕತೆ ಮತ್ತು ಮಹತ್ವದ ಬಗ್ಗೆ ಸ್ಪೆಷಲ್ ರಿಪೋರ್ಟರ್ ನಲ್ಲಿ ವಿಶೇಷ ವರದಿ ಪ್ರಸಾರವಾಗಿತ್ತು. ಇವತ್ತಿನ ಸ್ಪೆಷಲ್ ರಿಪೋರ್ಟರ್ ನಲ್ಲಿ, ಹಿಂದಿ ನಿಜವಾಗಲೂ ನಮ್ಮ ರಾಷ್ಟ್ರ ಭಾಷೆಯೇ? ಕರ್ನಾಟಕ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲು ಯಾವೆಲ್ಲಾ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ? ಈ ರೀತಿಯ ಪ್ರಯತ್ನಗಳು ಎಷ್ಟರ ಮಟ್ಟಿಗೆ ಸರಿ? ಮತ್ತು ಇದನ್ನು ತಡೆಯಲು ಕನ್ನಡಿಗರಾಗಿ ನಾವು ಏನು ಮಾಡಬೇಕು? ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ಒಂದು ವಿಶೇಷ ವರದಿ.

ಇತ್ತೀಚೆಗೆ ಹಿಂದಿ ಭಾಷೆ ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿ ಹಿಂದಿ ಬಳಕೆ ವಿರುದ್ಧ ಕನ್ನಡಿಗರು ಅಭಿಯಾನ ಆರಂಭಿಸಿ, ಒಂದು ಮಟ್ಟಿಗಿನ ಗೆಲುವು ಸಾಧಿಸಿದ ನಂತರವಂತೂ, ನಮ್ಮ ಮೇಲೆ ಅನಗತ್ಯವಾಗಿ ಹಿಂದಿ ಹೇರಿಕೆ ಆಗುತ್ತಿದೆ ಅನ್ನುವ ವಿಚಾರದ ಬಗ್ಗೆ ಹೆಚ್ಚು ಜಾಗೃತಿ ಮೂಡಿದೆ.

ಎಲ್ಲಕ್ಕಿಂತ ಮೊದಲು, ಕೆಲವರು ಹೇಳುವ ಹಾಗೆ, ಈ ಹಿಂದಿ ಭಾಷೆ ಅನ್ನುವುದೇನಾದರೂ ನಮ್ಮ ರಾಷ್ಟ್ರ ಭಾಷೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ. ಹಿಂದಿ ಭಾಷೆ, ಭಾರತದ ರಾಷ್ಟ್ರಭಾಷೆ ಅಲ್ಲ. ನಮ್ಮ ಸಂವಿಧಾನ ಯಾವುದೇ ಒಂದು ಭಾಷೆಗೆ ಭಾರತದ ರಾಷ್ಟ್ರಭಾಷೆ ಎಂಬ ಸ್ಥಾನಮಾನ ನೀಡಿಲ್ಲ, ಆದ್ದರಿಂದ ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ. ಇಂಗ್ಲಿಷ್ ಜೊತೆಗೆ ಹಿಂದಿ ಭಾಷೆಯೂ ಕೂಡ ಕೇಂದ್ರ ಸರ್ಕಾರದ ಆಡಳಿತ ಭಾಷೆ. ಯಾರಾದರೂ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದ್ದರೆ ಅದು ಸುಳ್ಳು, ಅಥವ ಅವರ ತಪ್ಪು ತಿಳುವಳಿಕೆ. ಇಲ್ಲೂ ಕೂಡ, ಕೆಲವರು ಆಡಳಿತ ಭಾಷೆ ಮತ್ತು ರಾಷ್ಚ್ರಭಾಷೆ ಅನ್ನುವುದನ್ನು ಎರಡೂ ಒಂದೇ ಎಂಬಂತೆ ಬಳಸಿ ಗೊಂದಲ ಸೃಷ್ಟಿಸುತ್ತಾರೆ. ಆದರೆ, ಅವೆರಡೂ ಬೇರೆ ಬೇರೆಯೇ ಹೊರತು ಒಂದೇ ಅಲ್ಲ. ಆಡಳಿತ ಭಾಷೆಯೆಂದರೆ ಕೇಂದ್ರ ಸರ್ಕಾರದವರು ತಮ್ಮ ಎಲ್ಲಾ ವ್ಯವಹಾರಗಳಲ್ಲಿ ಬಳಸುವ ಭಾಷೆ. ಆದರೆ ರಾಷ್ಟ್ರ ಭಾಷೆಯೆಂದರೆ ಒಂದು ದೇಶದ ರಾಷ್ಟ್ರೀಯತೆಯನ್ನು, ದೇಶದ ಜನರನ್ನು, ಸಂಸ್ಕೃತಿಯನ್ನು ಮತ್ತು ಇತಿಹಾಸವನ್ನೂ ಬಿಂಬಿಸುವ ಭಾಷೆ.

ಜರ್ಮನ್ ಭಾಷೆ, ಜರ್ಮನ್ನರ ರಾಷ್ಟ್ರ ಭಾಷೆ, ಜಪಾನೀಸ್, ಜಪಾನಿಯರ ರಾಷ್ಟ್ರ ಭಾಷೆ, ಆದರೆ ಭಾರತದ ವಿಷಯಕ್ಕೆ ಬಂದಾಗ, ಈ ದೇಶದ ಜನರನ್ನು, ಸಂಸ್ಕೃತಿಯನ್ನು, ಇತಿಹಾಸವನ್ನು ಪೂರ್ತಿಯಾಗಿ ಬಿಂಬಿಸುವ ಯಾವ ಭಾಷೆಯೂ ಇಲ್ಲ ಹಾಗೂ ಇರಲಿಲ್ಲ. ಹಾಗಾಗಿ, ಭಾರತಕ್ಕೆ ಒಂದೇ ರಾಷ್ಟ್ರ ಭಾಷೆ ಅನ್ನುವುದು ಇಲ್ಲ. ಭಾರತ ದೇಶ, ಭಾಷಾವಾರು ಪ್ರಾಂತ್ಯಗಳ ಒಂದು ಒಕ್ಕೂಟ.

ಇಂಥ ದೇಶದಲ್ಲಿ ಒಂದು ಭಾಷೆಗೆ ರಾಷ್ಟ್ರಭಾಷೆ ಎಂಬ ಮಾನ್ಯತೆ ನೀಡುವುದು ಸಾಧ್ಯವಿಲ್ಲ. ಏಕೆಂದರೆ ಆ ರೀತಿ ಮಾಡುವುದು, ದೇಶದ ವೈವಿಧ್ಯತೆಗೆ ಧಕ್ಕೆ ಆಗಬಹುದು ಮತ್ತು ರಾಷ್ಟ್ರಭಾಷೆ ಅನ್ನಿಸಿಕೊಳ್ಳದ ಭಾಷೆಗಳ ಅಳಿವಿಗೆ ಕಾರಣವಾಗಬಲ್ಲದು. ಕೇಂದ್ರಸರ್ಕಾರ ತನ್ನ ಅಧಿಕೃತ ಭಾಷೆಗಳಾಗಿ ಇಂಗ್ಲಿಷ್ ಮತ್ತು ಹಿಂದಿ ಎರಡನ್ನೂ ಬಳಸುತ್ತದೆ. ರಾಜ್ಯಸರ್ಕಾರಗಳು, ತಮ್ಮ ತಮ್ಮ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಬಳಸುತ್ತಿವೆ. ಹೀಗಿರುವಾಗ, ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರ ಭಾಷೆಯ ಸ್ಥಾನ ತುಂಬುತ್ತದೆ ಅನ್ನಬಹುದು.

ಭಾರತದಲ್ಲಿ ಸುಮಾರು ಶೇ.40ರಷ್ಟು ಜನರು ಹಿಂದಿ ಮಾತನಾಡುತ್ತಾರೆ. ಅತಿ ಹೆಚ್ಚಿನ ಜನಸಂಖ್ಯೆಯ ಜನರು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಭಾಷೆ ಹಿಂದಿ, ಹಾಗಾಗಿ ಹಿಂದಿ ಏಕೆ ರಾಷ್ಟ್ರಭಾಷೆಯಾಗಬಾರದು ಎಂದು ಕೆಲವರು ಕೇಳುತ್ತಾರೆ. ಆದರೆ, ಹಿಂದಿ ಅನ್ನುವುದಕ್ಕೆ ರಾಷ್ಟ್ರ ಭಾಷೆ ಎಂಬ ಮನ್ನಣೆ ದೊರೆತರೆ, ಇತರೆ ಭಾಷೆಗಳನ್ನು ಕಡೆಗಣಿಸಿದಂತಾಗುತ್ತದೆ.

ಈಗಾಗಲೇ ಹಿಂದಿ ಹೇರಿಕೆಯ ಹೊರೆಯಿಂದಾಗಿ ಉದ್ಯೋಗ, ಶಿಕ್ಷಣ, ಆಡಳಿತ, ರಾಜಕಾರಣ, ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲೂ ಹಿಂದಿಯೇತರ ಪ್ರದೇಶಗಳ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆ ಬಗ್ಗೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಹೀಗಿರುವಾಗ, ಯಾವುದೇ ಒಂದು ಭಾಷೆ ರಾಷ್ಟ್ರಭಾಷೆಯಾಗುವುದು ಭಾರತದಂತಹ ಹಲವು ಭಾಷೆಗಳ ದೇಶದ ಜನರಿಗೆ ಎಂದಿಗೂ ಒಪ್ಪಿಗೆಯಾಗುವುದಿಲ್ಲ.

ಆದರೆ, ಹಿಂದಿನಿಂದಲೂ ಕೇಂದ್ರಸರ್ಕಾರದವರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುವ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದಾರೆ.

ಆಡಳಿತ ಭಾಷೆಯ ಬಗ್ಗೆ ಭಾರತದ ಸಂವಿಧಾನ ಏನು ಹೇಳುತ್ತದೆ ಎಂದು ನೋಡುವುದಾದರೆ, ನಮ್ಮ ಸಂವಿಧಾನದ 17ನೇ ಅಧ್ಯಾಯದ 343ನೇ ವಿಧಿಯಿಂದ 351ನೇ ವಿಧಿಯವರೆಗೆ ಭಾರತದ ಆಡಳಿತ ಭಾಷೆ ಬಗ್ಗೆ ಬರೆಯಲಾಗಿದೆ. ಹಿಂದಿಯನ್ನು ಭಾರತದ ಆಡಳಿತ ಭಾಷೆಯೆಂದು ಘೋಷಿಸಿರುವುದರ ಜೊತೆಗೆ, ಹಿಂದಿಯ ಪ್ರಚಾರಕ್ಕಾಗಿ ದುಡಿಯಬೇಕಾದದ್ದು ಭಾರತ ಸರ್ಕಾರದ ಕರ್ತವ್ಯ ಎಂದು ಹೇಳಲಾಗಿದೆ. It has been the policy of the Government of India that Progressive use of Hindi in the official work may be ensured through Persuasion, incentive and Goodwill.   ಭಾರತ ಸರ್ಕಾರದವರು ಮನವೊಲಿಕೆ, ಪ್ರೋತ್ಸಾಹ ಮತ್ತು ವಿಶ್ವಾಸದ ಮೂಲಕ ತಮ್ಮ ಎಲ್ಲಾ ಅಧಿಕೃತ ಕೆಲಸ ಕಾರ್ಯಗಳಲ್ಲಿ, ಹಿಂದಿ ಬಳಕೆಯನ್ನು ಹೆಚ್ಚುಗೊಳಿಸಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ.

ಈ ಮೇಲಿನ ವಾಕ್ಯದಲ್ಲಿ ಬಳಸಿರುವ ಮಾತುಗಳನ್ನು, ಎಲ್ಲೂ ಕೂಡ ತಪ್ಪು ಎಂದು ಹೇಳಲು ಆಸ್ಪದವೇ ಇಲ್ಲದ ಹಾಗೆ ತುಂಬಾ ಚಾಣಾಕ್ಷ ರೀತಿಯಲ್ಲಿ ಬಳಸಲಾಗಿದೆ. ಇಲ್ಲಿ ಮನವೊಲಿಕೆ ಅನ್ನುವುದು, ಬರುಬರುತ್ತಾ ಒತ್ತಾಯದ ಸ್ವರೂಪ ಪಡೆದಿದ್ದರೆ, ಪ್ರೋತ್ಸಾಹ ಅನ್ನುವುದು, ಆಮಿಶದ ಸ್ವರೂಪ ಪಡೆದಿದೆ. ಪ್ರತಿವರ್ಷ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ  ಹಿಂದಿ ದಿನಾಚರಣೆಗಳು, ಹಿಂದಿ ಪಾಕ್ಷಿಕಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಅವುಗಳಲ್ಲಿ ಭಾಗವಹಿಸಿದವರಿಗೆ ಬಹುಮಾನಗಳನ್ನು ನೀಡುವ ಮೂಲಕ, ಹಿಂದಿ ಬೆಳವಣಿಗೆಗೆ ಇಂಬು ನೀಡಲಾಗುತ್ತದೆ. ಹಿಂದಿ ಭಾಷಿಕ ನೌಕರರು ಹಿಂದಿಯೇತರ ಪ್ರದೇಶಗಳಿಗೆ ವರ್ಗಾವಣೆಗೆ ಒಪ್ಪಿದರೆ, ಅವರಿಗೆ ವಿಶೇಷ ಭತ್ಯೆಯನ್ನೂ ನೀಡಲಾಗುತ್ತದಂತೆ.

ನಮ್ಮಲ್ಲಿ ಒಗ್ಗಟ್ಟಿಲ್ಲದೇ ಇದ್ದಿದ್ದರಿಂದಲೇ ಹಿಂದೆ, ನಮ್ಮ ದೇಶ ಇತರೆಯವರ ಅಧೀನಕ್ಕೆ ಒಳಪಡಲು ಕಾರಣ ಅನ್ನುವುದು ಎಲ್ಲರೂ ಒಪ್ಪಿಕೊಂಡ ವಿಚಾರ. ಸ್ವಾತಂತ್ರ್ಯ ಹೋರಾಟದ ವೇಳೆ, ಹಿಂದಿಯೇ ಪ್ರಮುಖ ಸಂಪರ್ಕ ಭಾಷೆಯಾಗಿತ್ತು, ಮುಂದಕ್ಕೂ ಅದೇ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಲು ದೇಶಕ್ಕೆ ಹಿಂದಿ ಅಗತ್ಯ, ಹೀಗಾಗಿ ಹಿಂದಿಯನ್ನೇ ರಾಷ್ಟ್ರಭಾಷೆಯಾಗಿಸಬೇಕು ಅನ್ನುವ ಚಿಂತನೆಗಳು, ಗಾಂಧೀಜಿ ಸೇರಿದಂತೆ ಹಲವು ಮುಖಂಡರಲ್ಲಿ ಇತ್ತು. ಭಾರತದಲ್ಲಿ ಒಗ್ಗಟ್ಟು ಸಾಧಿಸಲು ಪ್ರತಿಯೊಬ್ಬ ಭಾರತೀಯನೂ ಹಿಂದಿ ಕಲಿತು ಅದರಲ್ಲೇ ವ್ಯವಹರಿಸಬೇಕು, ಅದರಿಂದ ಒಗ್ಗಟ್ಟು ಹೆಚ್ಚಾಗುತ್ತದೆ, ದೇಶ ಪ್ರೇಮ ಹೆಚ್ಚಾಗುತ್ತದೆ. ಪ್ರತಿಯೊಂದು ದೇಶಕ್ಕೂ ಒಂದು ರಾಷ್ಟ್ರ ಭಾಷೆ ಇದ್ದಂತೆ ಭಾರತಕ್ಕೂ ರಾಷ್ಟ್ರಭಾಷೆಯಾಗಿ ಹಿಂದಿ ಇರಬೇಕು ಎಂಬ ನಿಲುವುಗಳಿದ್ದವು. ಆದರೆ, ಈ ನಿಲುವನ್ನು ಹಿಂದಿಯೇತರ ಪ್ರದೇಶಗಳ ಮುಖಂಡರು ವಿರೋಧಿಸಿದರು. ಹಿಂದಿ ಭಾಷೆಗೆ ಅಗ್ರಸ್ಥಾನ ನೀಡಿದರೆ, ಇತರ ಭಾಷೆಯವರ ಸ್ವಾತಂತ್ರ್ಯಕ್ಕೆ ಮಾರಕವಾಗುತ್ತದೆ ಎಂಬ ಪ್ರಬಲ ವಿರೋಧ ವ್ಯಕ್ತವಾಯಿತು. ಇಷ್ಟೆಲ್ಲಾ ಆದ ನಂತರ, ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಘೋಷಿಸುವುದನ್ನು ಕೈಬಿಟ್ಟು, ಭಾರತ ಸರ್ಕಾರದ ಆಡಳಿತ ಭಾಷೆ ಎಂದು ಕರೆಯಲಾಯಿತು.  ವಿಚಾರ ಇಷ್ಟು ಸ್ಪಷ್ಟವಾಗಿದ್ದರೂ ಕೂಡ, ಒಂದು ಕಡೆ, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳಿವೆ ಎಂದು ಹೇಳುತ್ತಾ ಮತ್ತೊಂದು ಕಡೆ, ಹಿಂದಿಯಂಥ ಒಂದು ಭಾಷೆ ಗೊತ್ತಿರುವ ಜನರಿಗೆ, ದೇಶದ ಯಾವ ಮೂಲೆಗೆ ಹೋದರೂ ತೊಂದರೆಯಾಗದಂಥ ವ್ಯವಸ್ಥೆ ಕಟ್ಟಿಕೊಡಲು ಹೊರಡುವ ಕೇಂದ್ರಸರ್ಕಾರದ ಕ್ರಮಗಳು ವಿರೋಧಾಭಾಸದಿಂದ ಕೂಡಿವೆ. ಉತ್ತರ ಭಾರತದಿಂದ ಬೆಂಗಳೂರಿಗೆ ಬರುವವರಿಗೆ ಅನುಕೂಲವಾಗಲೆಂದು, ಇಲ್ಲಿ ಹಿಂದಿ ಬಳಕೆ ಮಾಡಬೇಕು ಅನ್ನುವಂತೆಯೇ,

ದೆಹಲಿಗೆ ಬರುವ ಕನ್ನಡಿಗರಿಗೆ ಮತ್ತು ಇತರ ಭಾಷಿಕರಿಗೆ ಅಲ್ಲಿನ ರೈಲು ನಿಲ್ದಾಣದಲ್ಲಿ, ಮೆಟ್ರೊ ಸ್ಟೇಷನ್ ಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಅಥವ ಇತರೆ ಭಾಷೆಗಳಲ್ಲಿ ಮಾಹಿತಿ ನೀಡುತ್ತಾರೆಯೇ? ಹೀಗಾಗಿ, ತ್ರಿಭಾಷಾ ಸೂತ್ರದ ಸೋಗಿನಲ್ಲಿ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಗೆ ಅವಕಾಶ ಮಾಡಿಕೊಡುವ ಕೇಂದ್ರಸರ್ಕಾರದ ನೀತಿ ಎಷ್ಟರ ಮಟ್ಟಿಗೆ ಸರಿ ಅನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ.

ತ್ರಿಭಾಷಾ ಸೂತ್ರ ಅನ್ನುವುದು ಆಡಳಿತಕ್ಕಾಗಿ ರೂಪಿಸಿದ ಸೂತ್ರ ಅಲ್ಲವೇ ಅಲ್ಲ, ಅದು ಶಾಲಾ ಹಂತದಲ್ಲಿ ಮೂರು ಭಾಷೆಗಳನ್ನು ಕಲಿಸಲು ಉತ್ತೇಜನ ನೀಡಲೆಂದು ಹಮ್ಮಿಕೊಳ್ಳಲಾದ ಸೂತ್ರ. ಅದರಂತೆ, ದಕ್ಷಿಣ ಭಾರತದಲ್ಲಿ ಅಲ್ಲಿನ ಸ್ಥಳೀಯ ಭಾಷೆ, ಇಂಗ್ಲಿಷ್ ಜೊತೆ ಉತ್ತರದ ಭಾಷೆಯೊಂದನ್ನು ಕಲಿಸುವ ವ್ಯವಸ್ಥೆ ಇರಬೇಕು ಹಾಗೂ ಉತ್ತರ ಭಾರತದಲ್ಲಿ ಅಲ್ಲಿನ ಸ್ಥಳೀಯ ಭಾಷೆ, ಇಂಗ್ಲಿಷ್ ಜೊತೆ ದಕ್ಷಿಣದ ಒಂದು ಭಾಷೆಯನ್ನು ಕಲಿಸಬೇಕು ಅನ್ನುವ ಸೂತ್ರ ಎಂಬಂತೆ ಬಿಂಬಿಸಲಾಗಿತ್ತು. ಆದರೆ, ದಕ್ಷಿಣದಲ್ಲಿ ಹಿಂದಿಯೊಂದನ್ನೇ ಕಲಿಸಲು ಮುಂದಾದದ್ದು, ಹಿಂದಿ ಹೇರಿಕೆಯ ಒಂದು ಭಾಗವೆಂದೇ ನೋಡಬೇಕು. ಅಷ್ಟಲ್ಲದೆ, ಉತ್ತರದ ರಾಜ್ಯಗಳಲ್ಲಿ ದಕ್ಷಿಣದ ಯಾವುದೇ ಭಾಷೆಯನ್ನು ಕಲಿಸದೇ ಕೇವಲ ಇಂಗ್ಲಿಷ್ ಮತ್ತು ಹಿಂದಿಯನ್ನು ಮಾತ್ರ ಇರಿಸಿಕೊಂಡು ಅಲ್ಲಿನ ಮಕ್ಕಳ ಕಲಿಕೆಯ ಹೊರೆ ಕಡಿಮೆ ಮಾಡಲಾಗಿದೆ. ಇದರ ಜೊತೆಗೆ, ಈ ತ್ರಿಭಾಷಾ ಸೂತ್ರವನ್ನೇ ಅಸ್ತ್ರವಾಗಿಸಿಕೊಂಡು ಆಡಳಿತದ ಎಲ್ಲ ಹಂತದಲ್ಲೂ ಹಿಂದಿ ಹೇರುತ್ತಿರುವ ಕೇಂದ್ರಸರ್ಕಾರ, ನಾಗರಿಕ ಸೇವೆಗಳಾದ ಅಂಚೆ, ಬ್ಯಾಂಕು, ವಿಮೆ, ರೈಲು, ವಿಮಾನ ಸೇವೆ, ರಾಷ್ಟ್ರೀಯ ಹೆದ್ದಾರಿ, ಹೀಗೆ ಎಲ್ಲಾ ಕಡೆ ಹಿಂದಿಯನ್ನು ಕಡ್ಡಾಯವಾಗಿ ಬಳಸುವ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ.

ರಾಜಭಾಷಾ ಆಯೋಗ ಅನ್ನುವ ಸಮಾನತೆ ವಿರೋಧಿ ಸಂಸ್ಥೆ ಮೂಲಕ ಹಿಂದಿ ಪಾಕ್ಷಿಕದ ಹೆಸರಿನಲ್ಲಿ ದೇಶದೆಲ್ಲೆಡೆ ಹಿಂದಿ ಹರಡುವ ಪ್ರಯತ್ನಕ್ಕೆ ತೆರಿಗೆದಾರರ ಹಣ ವ್ಯಯ ಮಾಡುತ್ತಿದೆ. ಇನ್ನೊಂದೆಡೆ, ಸರ್ಕಾರಿ ಒಡೆತನದ ದೂರದರ್ಶನ ಮತ್ತು ಆಕಾಶವಾಣಿಯಲ್ಲೂ ಕಡ್ಡಾಯ ಹಿಂದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ. ಇವೆಲ್ಲದರ ಜೊತೆಗೆ, ಕೇಂದ್ರಸರ್ಕಾರದ ಯಾವುದೇ ಉದ್ಯೋಗಕ್ಕೆ ಪಡೆಯಲು ಹಿಂದಿ ಗೊತ್ತಿರಲೇಬೇಕು ಅನ್ನುವ ಶರತ್ತುಗಳ ಮೂಲಕ, ಹಿಂದಿಯೇತರರನ್ನು ಕೇಂದ್ರ ಸರ್ಕಾರಿ ಉದ್ಯೋಗಗಳಿಂದ ದೂರವಿಡುವ ಕೆಲಸ ಮಾಡುತ್ತಿದೆ.

ಇದರ ಜೊತೆಗೆ, ಹಿಂದಿ ಏಕೆ ಬೇಕು ಎಂದು ಪ್ರಶ್ನಿಸುವವರ ದೇಶ ಪ್ರೇಮವನ್ನೇ ಸಂಶಯಿಸುವಂಥ ನಡವಳಿಕೆಗಳೂ ಕಂಡುಬರುತ್ತವೆ. ಕೇಂದ್ರ ಸರ್ಕಾರವಾಗಲಿ, ರಾಷ್ಟ್ರೀಯ ಪಕ್ಷಗಳ ನಾಯಕರೇ ಆಗಲಿ, ಯಾರೇ ಆಗಿರಲಿ, ಇಂಥದ್ದೆಲ್ಲವನ್ನೂ ನಿಲ್ಲಿಸಬೇಕು.

ಹಿಂದಿ ಬಳಕೆಯಿಂದಲೇ ದೇಶದ ಒಗ್ಗಟ್ಟು ಸಾಧ್ಯ ಅನ್ನುವ ಜೊಳ್ಳು ನಂಬಿಕೆಗಳನ್ನು ಕೈ ಬಿಟ್ಟು, ದೇಶದ ಎಲ್ಲಾ ಭಾಷೆಗಳನ್ನೂ ಸಮಾನವಾಗಿ  ಕಾಣುವಂಥ ಮನೋಭಾವ ಬೆಳೆಸಿಕೊಳ್ಳಬೇಕು.

ಆಯಾ ರಾಜ್ಯಗಳಲ್ಲಿ ಅವರವರ ಭಾಷೆಯನ್ನು ಬಳಕೆ ಮಾಡಬೇಕು, ರಾಜ್ಯ ರಾಜ್ಯಗಳ ನಡುವಿನ ಸಂಪರ್ಕಕ್ಕೆ ಯಾವ ಭಾಷೆ ಬಳಸಬೇಕು ಅನ್ನುವ ಆಯ್ಕೆಯನ್ನು ಆಯಾ ರಾಜ್ಯಗಳ ನಿರ್ಧಾರಕ್ಕೆ ಬಿಟ್ಟುಬಿಡಬೇಕು. ಕೇಂದ್ರದ ಜೊತೆ ಸಂಪರ್ಕಕ್ಕೆ ಸ್ಥಳೀಯ ಭಾಷೆ ಜೊತೆಗೆ ಇಂಗ್ಲಿಷ್ ಬೇಕಿದ್ದರೆ ಬಳಸಬಹುದು.

ಭಾರತದ ಭಾಷಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಭಾಷೆಗಳೂ ಉಳಿದು ಬೆಳೆಯುವ ರೀತಿಯಲ್ಲಿ ಭಾಷಾ ನೀತಿ ರೂಪಿಸುವುದು ಅಸಾಧ್ಯವೇನಲ್ಲ. ಅದಕ್ಕೆ ಬೇಕಿರುವುದು, ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ಕಲ್ಪಿಸಬೇಕು ಅನ್ನುವ ತಿಳುವಳಿಕೆಯೇ ಹೊರತು, ನೆಪ ಹೇಳುವ ಮನಸ್ಥಿತಿಯಲ್ಲ.

ಸ್ವಂತ ಇಚ್ಚೆಯಿಂದ ಯಾರೂ ಯಾವ ಭಾಷೆಯನ್ನೂ ಕಲಿಯುವುದು ಸಹ ತಪ್ಪಲ್ಲ, ಅದಕ್ಕೆ ಎಲ್ಲ ಅವಕಾಶಗಳು, ಎಲ್ಲರಿಗೂ ಮುಕ್ತವಾಗಿರಬೇಕು. ಆದರೆ ಸರ್ಕಾರವೇ ಮುಂದೆ ನಿಂತು ಒಂದು ಭಾಷೆಗೆ ಹೆಚ್ಚಿನ ಮನ್ನಣೆ ಕೊಟ್ಟು ಉಳಿದವನ್ನು ಎರಡನೆಯ ದರ್ಜೆಗೆ ಇಳಿಸುವುದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಲಾಗದು.

ಹಲವಾರು ರೀತಿಗಳಲ್ಲಿ ಹಿಂದಿ ಹೇರಿಕೆ ಆಗುತ್ತಿರುವುದನ್ನು ನಿಲ್ಲಿಸಲು ಏನು ಮಾಡಬೇಕು ಎಂದು ಯೋಚಿಸಿದರೆ ಅದಕ್ಕೂ ಸಾಕಷ್ಟು ಪರಿಹಾರಗಳು ಸಿಗುತ್ತವೆ. ಹಿಂದಿ ಭಾಷೆಗೆ ಮಾತ್ರ ಆದ್ಯತೆ ಕೊಡುತ್ತಿರುವ ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತಂದು, ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳಿಗೆ ಕೇಂದ್ರಸರ್ಕಾರದ ಆಡಳಿತ ಭಾಷೆ ಸ್ಥಾನಮಾನ ನೀಡುವ ಮೂಲಕ, ಭಾಷಾ ಸಮಾನತೆಗೆ ಒತ್ತು ನೀಡಬೇಕು. ಆಯಾ ರಾಜ್ಯದ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಕೋರ್ಟು, ಕಚೇರಿಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಗೆ ಮೊದಲ ಸ್ಥಾನ ಸಿಗುವಂತೆ  ನೋಡಿಕೊಳ್ಳಬೇಕು.

ಇನ್ನು, ಕರ್ನಾಟಕದಲ್ಲಿ ಹಿಂದಿ ವಿರೋಧಿಸಿ ನಡೆದಿರುವ ಹೋರಾಟಗಳನ್ನು ನೋಡುವುದಾದರೆ, ದೇಶ ಸ್ವಾತಂತ್ರ್ಯಗಳಿಸಿದ ಹೊಸದರಲ್ಲೇ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಚಳವಳಿಗಳನ್ನು ನಡೆಸಲಾಗಿತ್ತು. ಇದಾದ ನಂತರ, ತೊಂಬತ್ತರ ದಶಕದವರೆಗೂ ಅಷ್ಟಾಗಿ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಕೂಗು ಎದ್ದಿರಲಿಲ್ಲ. ಆದರೆ, ಭಾರತದಲ್ಲಿ ಖಾಸಗೀಕರಣ, ಸುಧಾರಣೆ ಮತ್ತು ಜಾಗತೀಕರಣದ ದಿನಗಳು ಆರಂಭವಾದ ಮೇಲೆ, ಕರ್ನಾಟಕದಲ್ಲಿ ಉದ್ಯೋಗವಕಾಶಗಳು ಹೆಚ್ಚಾದವು. ರಾಜ್ಯಕ್ಕೆ ಅನಿಯಂತ್ರಿತವಾಗಿ ಹಿಂದಿ ಭಾಷಿಕರ ವಲಸೆ ಶುರುವಾಯಿತು.

ಆ ನಂತರದ ದಿನಗಳಲ್ಲಿ, ಬೆಂಗಳೂರಿನ ಮನಸ್ಸು, ಆತ್ಮ ಮತ್ತು ದೇಹಗಳೆಲ್ಲವೂ ಆಗಿದ್ದ ಕನ್ನಡ ಭಾಷೆಯ ಸ್ಥಾನವನ್ನೇ ಹಿಂದಿ, ಇಂಗ್ಲಿಷ್ ಮತ್ತು ಇತರ ಭಾಷೆಗಳು ಕಿತ್ತುಕೊಳ್ಳುವ ಪರಿಸ್ಥಿತಿ ಉಂಟಾಯಿತು. ಇದನ್ನು ಮನಗಂಡ ಕನ್ನಡಿಗರು, ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಮತ್ತು ಅನ್ಯಭಾಷೆಗಳ ಪ್ರಾಬಲ್ಯದ ವಿರುದ್ಧ ಗಟ್ಟಿದನಿಯಲ್ಲಿ ಪ್ರತಿಭಟಿಸಲು ಆರಂಭಿಸಿದ್ದಾರೆ. ಹಲವಾರು ಕನ್ನಡ ಪರ ಸಂಘಟನೆಗಳು, ಬರಹಗಾರರು, ಜನಸಾಮಾನ್ಯರು ಅಂತರ್ಜಾಲದ ಮೂಲಕ, ಪತ್ರಿಕೆಗಳು ಮತ್ತು ಟಿವಿ ಚಾನಲ್‌ಗಳ ಮೂಲಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗ್ರತಿ ಮೂಡಿಸುತ್ತಿದ್ದಾರೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ, ಬನವಾಸಿ ಬಳಗದಂಥ ಸಂಸ್ಥೆಗಳು ಹಿಂದಿ ಹೇರಿಕೆ ವಿರೋಧಿಸಿ ನಿರಂತರ ಹೋರಾಟ ನಡೆಸುತ್ತಿವೆ.  ಸಾವಿರಾರು ವರ್ಷದ ಇತಿಹಾಸವಿರುವ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾಗಿರುವ ಕನ್ನಡ ಭಾಷೆಯನ್ನು ತನ್ನ ರಾಜ್ಯಭಾಷೆಯಾಗಿ ಹೊಂದಿರುವ ಕರ್ನಾಟಕದ ಮೇಲೆ, ಭಾರತದ ಭಾಷೆಗಳಲ್ಲೇ ತೀರಾ ಇತ್ತೀಚಿನದಾಗಿರುವ, ಹಿಂದಿ ಭಾಷೆಯನ್ನು ದೇಶ ಪ್ರೇಮದ ಹೆಸರಿನಲ್ಲಿ ಹೇರುವುದು ಸರಿಯಲ್ಲ.  ಆದ್ದರಿಂದ, ದೇಶದ ಎಲ್ಲ ಭಾಷೆಗಳನ್ನು ಮಾತನಾಡುವ ಜನರಿಗೂ ಒಪ್ಪುವಂತಹ ಒಂದು ಭಾಷಾ ನೀತಿಯನ್ನು ಕೇಂದ್ರಸರ್ಕಾರ ರೂಪಿಸಬೇಕು.

ಇತ್ತೀಚೆಗೆ ಸರಕು ಮತ್ತು ಸೇವಾ ತೆರಿದೆ ಜಿಎಸ್‌ಟಿ ಜಾರಿ ವೇಳೆ ಕೋ ಆಪರೇಟಿವ್ ಫೆಡರಲಿಸಮ್ ಅಂದರೆ, ಪರಸ್ಪರ ಸಹಕಾರಿ ತತ್ವ ಆಧರಿಸಿದ ಒಕ್ಕೂಟ ವ್ಯವಸ್ಥೆಯ ಬಗ್ಗೆ, ನಮ್ಮ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅದೇ ರೀತಿಯ ಸಹಕಾರ, ಭಾಷೆಯ ವಿಚಾರಕ್ಕೂ ಅನ್ವಯವಾಗುತ್ತದೆ ಅನ್ನುವುದನ್ನು ಕೇಂದ್ರಸರ್ಕಾರ ಅರ್ಥಮಾಡಿಕೊಳ್ಳಬೇಕು. ಹಿಂದಿಯೇತರ ರಾಜ್ಯಗಳ ಮೇಲೆ ಯಾವುದೇ ರೂಪದಲ್ಲಿ, ಯಾವುದೇ ನೆಪದಲ್ಲಿ ಹಿಂದಿ ಭಾಷೆಯನ್ನು ಹೇರುವಂಥ ಮನೋಭಾವದಿಂದ ಹೊರಬರಬೇಕು. ಆಗ ಮಾತ್ರ, ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆ ಅನ್ನುವುದನ್ನು ಉಳಿಸಿಕೊಂಡು, ಸಮಗ್ರತೆಯನ್ನು ಕಾಪಾಡಿಕೊಂಡು, ಜಗತ್ತಿನ ಅತ್ಯಂತ ಪ್ರಬಲ ಮತ್ತು ಪ್ರಭಾವಿ ದೇಶವಾಗಿ ಬೆಳೆಯಲು ಸಾಧ್ಯ.ಸಂಬಂಧಿತ ಟ್ಯಾಗ್ಗಳು

ಹಿಂದಿ ಯಾಕೆ…? ಹಿಂದಿ ಯಾಕೆ…?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ