‘ಹಿರಿಯ’ರ ಸಮಸ್ಯೆ…! ಸಣ್ಣದಂತೂ ಅಲ್ಲ ಸ್ವಾಮಿ...

Kannada News

22-08-2017

ಜನಸಂಖ್ಯಾ ಸ್ಫೋಟದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ನಮ್ಮ ದೇಶದಲ್ಲಿ, ತುಂಬಾ ಹಿಂದೆ ಮಕ್ಕಳಿರಲಿ ಮನೆ ತುಂಬಾ ಎಂಬ ಮಾತಿತ್ತು, ಆನಂತರ ಎಪ್ಪತ್ತರ ದಶಕದಲ್ಲಿ ಎರಡು ಬೇಕು ಮೂರು ಸಾಕು ಅನ್ನುವಂತಾಯಿತು. ತೊಂಭತ್ತರ ದಶಕದಲ್ಲಿ, ಆರತಿಗೊಬ್ಬಳು ಮಗಳು ಕೀರುತಿಗೊಬ್ಬ ಮಗ ಅನ್ನುವ ಮಾತು ಕೇಳಿಬಂದರೆ, ಇತ್ತೀಚಿನ ದಶಕದಲ್ಲಿ ಮನೆಗೊಂದು ಮಗು ಸಾಕು, ಅನ್ನುವಂಥ ಸ್ವಾಗತಾರ್ಹ ನಿರ್ಧಾರಗಳು ಹೆಚ್ಚಾಗಿವೆ. ಹೀಗಾಗಿ ದೇಶದ ಜನಸಂಖ್ಯೆಯ ಬೆಳವಣಿಗೆ ವೇಗ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ. ಇದು ಒಂದು ರೀತಿಯ ಬೆಳವಣಿಗೆಯಾದರೆ, ಇದರ ಇನ್ನೊಂದು ಮುಖವೂ ಇದೀಗ ಸ್ಪಷ್ಟವಾಗಿ ಕಂಡುಬರುತ್ತಿದೆ. ಒಂದು ಕಡೆ ಜನನ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದ್ದರೆ, ಮತ್ತೊಂದು ಕಡೆ ಮರಣ ಪ್ರಮಾಣವೂ ಕಡಿಮೆಯಾಗುತ್ತಾ ಬರುತ್ತಿದೆ. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳ ಜನರ, ಸರಾಸರಿ ಆಯುಷ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಅಂದರೆ, ಹೆಚ್ಚು ಹೆಚ್ಚು ಜನರು ದೀರ್ಘಕಾಲದವರೆಗೆ ಬದುಕುತ್ತಿದ್ದಾರೆ.  ಉತ್ತಮ ಆರೋಗ್ಯ ವ್ಯವಸ್ಥೆ ಮತ್ತು ಆರೈಕೆಗಳು ಇದಕ್ಕೆ ಕಾರಣವಾಗಿರಬಹುದು.

ನಮ್ಮ ದೇಶ ಅಥವ ಬೇರೆ ಯಾವುದೇ ದೇಶದ ನಾಗರಿಕರಲ್ಲಿ, ಹಿರಿಯ ವಯಸ್ಸಿನ ಜನರ ಸಂಖ್ಯೆ ಹೆಚ್ಚಾಗುವ ವಿಚಾರ,  ಒಂದು ರೀತಿಯಲ್ಲಿ ಸಮಾಧಾನಕರ. ಆದರೆ, ಮತ್ತೊಂದು ರೀತಿಯಲ್ಲಿ, ಇದು ತನ್ನದೇ ಆದ ಸವಾಲುಗಳನ್ನು ತಂದೊಡ್ಡುತ್ತಿದೆ. ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದು, ಸಮಾಜದ ಮೇಲೆ, ಆರ್ಥಿಕ ವ್ಯವಸ್ಥೆಯ ಮೇಲೆ, ಜೀವನ ನಡೆಸಲು ಮನೆಗಳ ಲಭ್ಯತೆ ಮೇಲೆ, ಕೌಟುಂಬಿಕ ವ್ಯವಸ್ಥೆ ಮೇಲೆ ಮತ್ತು ಆರೋಗ್ಯ ಸೇವೆಗಳ ಮೇಲೂ ಪ್ರಭಾವ ಬೀರುತ್ತಿದೆ.

ಈವರೆಗಿನ ಮಾನವನ ಇತಿಹಾಸದ ಹೆಚ್ಚಿನ ಅವಧಿಯಲ್ಲಿ, ಕಡಿಮೆ ವಯಸ್ಸಿನ ಸಂಖ್ಯೆಯ ಜನರೇ ಹೆಚ್ಚಾಗಿರುತ್ತಿದ್ದರು. ಕಳೆದ ಶತಮಾನದಲ್ಲಿ 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ಸಂಖ್ಯೆ ಶೇಕಡ ಐದರಷ್ಟಿದ್ದರೆ, ಇವತ್ತಿನ 21ನೇ ಶತಮಾನದಲ್ಲಿ 65 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಹೆಚ್ಚೂಕಮ್ಮಿ ಜಗತ್ತಿನ ಜನಸಂಖ್ಯೆಯ ಕಾಲುಭಾಗದಷ್ಟಿದ್ದಾರೆ.

ಜಿ 20 ಗುಂಪಿನ ದೇಶಗಳು ಎಂದು ಕರೆಯುವ ಜಪಾನ್, ದಕ್ಷಿಣ ಕೊರಿಯ , ಇಟಲಿ, ಬ್ರೆಜಿಲ್, ಮೆಕ್ಸಿಕೊ, ಜರ್ಮನಿ, ಟರ್ಕಿ, ಚೀನಾ, ಫ್ರಾನ್ಸ್, ಕೆನಡ, ಬ್ರಿಟನ್, ಆಸ್ಟ್ರೇಲಿಯ, ಅರ್ಜೆಂಟಿನ, ಸೌದಿ ಅರೇಬಿಯ, ಅಮೆರಿಕ, ಭಾರತ, ರಷ್ಯಾ, ಇಂಡೋನೇಷಿಯ ಮತ್ತು ದಕ್ಷಿಣ ಆಫ್ರಿಕ ದೇಶಗಳ ಒಟ್ಟಾರೆ ಜನಸಂಖ್ಯೆ ಜಗತ್ತಿನ ಜನಸಂಖ್ಯೆಯ ಶೇ.60 ರಷ್ಟಿದೆ.

ಈ ದೇಶಗಳಲ್ಲಿ ಹಿರಿಯ ನಾಗರಿಕರ ಅಂದರೆ ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಶತಮಾನದ ಕೊನೆಯಹೊತ್ತಿಗೆ ಚೀನಾ, ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ವಯಸ್ಸಾದ ಜನರೇ ಇರಲಿದ್ದಾರಂತೆ.

ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗದವರು ಕೊಡುವ ಮಾಹಿತಿಯಂತೆ ಭಾರತದಲ್ಲಿ 2 ಸಾವಿರದನೇ ಇಸವಿಯಲ್ಲಿ ಅರವತ್ತೈದು ವರ್ಷಕ್ಕೂ ಹೆಚ್ಚು ವಯಸ್ಸಾದವರ ಸಂಖ್ಯೆ ಶೇ. ಐದಕ್ಕಿಂತ ಕಡಿಮೆ ಇತ್ತು, ಆದರೆ, 2100ರ ವೇಳೆಗೆ ಈ ಪ್ರಮಾಣ ದೇಶದ ಜನಸಂಖ್ಯೆಯ ಶೇ 30ರಷ್ಟನ್ನು ತಲುಪಬಹುದು.

ಹೆಚ್ಚು ವಯೋಮಾನದ ನಾಗರಿಕರಲ್ಲಿ, ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿರುವುದು ಈ ಬೆಳವಣಿಗೆಯ ಮತ್ತೊಂದು ವಿಶೇಷ. ತಮ್ಮ ಪತಿ ಅಥವ ಜೊತೆಗಾರನನ್ನು ಕಳೆದುಕೊಂಡು ಒಂಟಿಯಾಗುವ ಇಳಿ ವಯಸ್ಸಿನ ಮಹಿಳೆಯರಿಗೆ ಹೆಚ್ಚಿನ ಕಾಳಜಿ ಮತ್ತು ಸಹಾಯ ಬೇಕಾಗುತ್ತದೆ. ಜಪಾನ್, ಪೊರ್ಚುಗಲ್, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯ ದೇಶಗಳಲ್ಲಿ 65ಕ್ಕಿಂತ ಹೆಚ್ಚು ವಯಸ್ಸಾದವರ ಸಂಖ್ಯೆ, ಮುಂದಿನ ಕೆಲವೇ ವರ್ಷಗಳಲ್ಲಿ ಶೇ 40ರಷ್ಟನ್ನೂ ಮೀರಿ ಮುಂದಕ್ಕೆ ಹೋಗಲಿದೆಯಂತೆ.

ಈ ರೀತಿಯಲ್ಲಿ ವಯಸ್ಸಾದವರ ಸಂಖ್ಯೆ ಏರುತ್ತಿರುವುದರ ಜೊತೆಜೊತೆಗೆ ಮತ್ತೊಂದು ಪ್ರಮುಖ ಬೆಳವಣಿಗೆಯೂ ಜಗತ್ತಿನಲ್ಲಿ ನಡೆದಿದೆ. ಈಗಷ್ಟೇ ಹುಟ್ಟಿದ ಮಗುವಿನಿಂದ ಹಿಡಿದು, ಹದಿನಾಲ್ಕು ವರ್ಷ ವಯಸ್ಸಿನ ವರೆಗಿನ ಮಕ್ಕಳ ಸಂಖ್ಯೆ 65ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ಸಂಖ್ಯೆಗಿಂತ ಕಡಿಮೆ ಆಗುತ್ತಿದೆ. ಇಟಲಿ, ಕೆನಡಾ, ಫ್ರಾನ್ಸ್, ಜರ್ಮನಿ, ಗ್ರೀಸ್, ಜಪಾನ್, ಸ್ಪೇನ್ ಮತ್ತು ಬ್ರಿಟನ್‌ಗಳಲ್ಲಿ ಈಗಾಗಲೇ ಇಂಥ ಪರಿಸ್ಥಿತಿ ಇದೆ. 2075ರ ವೇಳೆಗೆ ಇಡೀ ಜಗತ್ತಿನಲ್ಲಿ ಮಕ್ಕಳ ಜನಸಂಖ್ಯೆಗಿಂತಲೂ ವಯಸ್ಸಾದವರ ಜನಸಂಖ್ಯೆಯೇ ಹೆಚ್ಚಿಗೆ ಇರಲಿದೆ.

ಮರಣ ಹೊಂದುವವರ ಪ್ರಮಾಣ ಇಳಿ ಮುಖವಾಗುತ್ತಿರುವುದು ಮತ್ತು ಸರಾಸರಿ ಆಯುಷ್ಯ ಹೆಚ್ಚಾಗುತ್ತಿರುವುದರಿಂದ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ವೇಳೆ, ಜನನದ ಪ್ರಮಾಣ ಕಡಿಮೆಯಾಗುತ್ತಾ ಬರುತ್ತದೆ. ಇದರಿಂದ ದೇಶದ ಸಮಾಜವೇ ವಯಸ್ಸಾದವರ ಸಮಾಜವಾಗಿ ಬದಲಾಗಬಹುದು. ಚೀನಾ ದೇಶದಲ್ಲಿ ಈಗಾಗಲೇ ಇಂಥ ಒಂದು ಪರಿಸ್ಥಿತಿ ಬಂದಿದೆಯಂತೆ.

ಇಂಥ ಒಂದು ಸನ್ನಿವೇಶ, ಭಾರತವೂ ಸೇರಿದಂತೆ ಹಲವು ದೇಶಗಳ ಆರ್ಥಿಕತೆಯ ಮೇಲೂ ದೊಡ್ಡ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ವಯಸ್ಸಾದವರಿಗೆ ಪಿಂಚಿಣಿ, ಆರೋಗ್ಯ ಸೇವೆ, ಸುರಕ್ಷತೆ ಒದಗಿಸಲು ಸರ್ಕಾರಗಳು ಹೆಚ್ಚಿನ ಹಣ ವಿನಿಯೋಗಿಸಬೇಕಾಗಿ ಬರುತ್ತದೆ.

ದುಡಿಯಲು ಆಗದವರನ್ನು ಸಾಕುವುದಕ್ಕಾಗಿ, ದುಡಿಯುವವರು ಹೆಚ್ಚು ಶ್ರಮ ಪಡಬೇಕಾದ ಪರಿಸ್ಥಿತಿ ಉದ್ಭವ ಆಗುತ್ತದೆ. ವಯೋವೃದ್ಧರ ಸಂಖ್ಯೆ ಹೆಚ್ಚುವುದರ ಜೊತೆಗೆ, ಯುವ ಕೆಲಸಗಾರರ ಸಂಖ್ಯೆ ಕಡಿಮೆಯಾಗುವುದರಿಂದ, ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಜಗತ್ತಿನಲ್ಲಿ ಹೊಸ ಆವಿಷ್ಕಾರಗಳ ಸಂಖ್ಯೆಯೂ ಕಡಿಮೆಯಾಗಿ, ದೇಶಗಳ ಪ್ರಗತಿಗೆ ಮಾರಕವಾಗಬಹುದು.

ಹಿಂದೆ, ಅಪ್ಪ ಅಮ್ಮ, ತಾತ ಅಜ್ಜಿ ಹೀಗೆ ಎಲ್ಲರೂ ಒಂದೇ ಕುಟುಂಬದ ವ್ಯವಸ್ಥೆಯ ಅಡಿಯಲ್ಲಿ ಬದುಕು ನಡೆಸುತ್ತಿದ್ದರು . ಆದರೆ ಇತ್ತೀಚಿನ ವರ್ಷಗಳಲ್ಲಿ ಇದೆಲ್ಲವೂ ಕಡಿಮೆಯಾಗುತ್ತಾ ಬಂದಿದೆ. ಬಹುತೇಕರು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಇದರಿಂದ ದೇಶದಲ್ಲಿ ಮನೆಗಳ ಕೊರತೆಯೂ ಉಂಟಾಗಬಹುದು.

ಹಾಗೆ ನೋಡಿದರೆ, ಯಾವುದೇ ಒಂದು ದೇಶದಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚಾಗಿದೆ ಅನ್ನುವುದು, ಆ ದೇಶದ ಸಮಾಜ ಮತ್ತು ಸರ್ಕಾರಗಳು ಉತ್ತಮವಾಗಿವೆ ಎಂಬುದನ್ನು ತೋರಿಸುತ್ತವೆ. ಆದರೆ, ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುವುದು ಸರ್ಕಾರಗಳಿಗೆ, ಸಮಾಜಕ್ಕೆ, ಸಂಘಸಂಸ್ಥೆಗಳಿಗೆ ಹಲವು ಸವಾಲುಗಳನ್ನೂ ತಂದೊಡ್ಡುತ್ತದೆ. ಈ ಸವಾಲುಗಳು ಹಲವು ಅವಕಾಶಗಳನ್ನೂ ಸೃಷ್ಟಿಸುತ್ತವೆ. ಹೀಗಾಗಿ, ಭಾರತವೂ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ ಸರ್ಕಾರಗಳು ಮತ್ತು ನಾಗರಿಕ ಸಮಾಜ, ಇಂಥದ್ದೊಂದು ವಿಶಿಷ್ಟ ಬದಲಾವಣೆ ಬಗ್ಗೆ ಈಗಿನಿಂದಲೇ ಎಚ್ಚರವಹಿಸಬೇಕಾಗಿದೆ,  ಸಿದ್ಧಗೊಳ್ಳಬೇಕಾಗಿದೆ.

ಸಮಾಜದಲ್ಲಿನ ಈ ರೀತಿಯ ಒಂದು ಬದಲಾವಣೆ ಅಥವ ರೂಪಾಂತರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ.  ಹಿರಿಯ ನಾಗರಿಕರೂ ಕೂಡ ಬಹುಕಾಲ ಸಕ್ರಿಯವಾಗಿರಲು ಸಾಧ್ಯವಿರುವಂಥ ವ್ಯವಸ್ಥೆಯನ್ನು ರೂಪಿಸಿ, ಅವರ ಅನುಭವದ ಲಾಭ ಪಡೆಯಬೇಕಾಗಿದೆ.  ಹಾಗೆ ಮಾಡಿದರೆ ಮಾತ್ರ, ನಮ್ಮ ಸಮಾಜ ಸಫಲ ಸಮಾಜವಾಗಿ ರೂಪುಗೊಂಡು, ದೇಶದ ಏಳಿಗೆಗೆ ಕಾರಣವಾಗುತ್ತದೆ. ಆದರೆ, ಇಂಥದ್ದೊಂದು ಬೆಳವಣಿಗೆಯ ಸಾಧ್ಯತೆಯನ್ನೇ ಮನಗಾಣದೆ ನಿರ್ಲಕ್ಷ್ಯ ಮಾಡಿದಲ್ಲಿ ಅದರ ಗಂಭೀರ ಪರಿಣಾಮಗಳನ್ನೂ ಇಡೀ ದೇಶ ಮತ್ತು ಜಗತ್ತು  ಎದುರಿಸಬೇಕಾಗುತ್ತದೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ