ರಕ್ತದ ಮಡುವಿನಲ್ಲಿದ್ದರೂ ನೆರವಿಗೆ ಬಾರದ ಜನ !

Kannada News

21-08-2017

ಬೆಂಗಳೂರು: ನಗರದ ರೇಸ್ ಕೋರ್ಸ್ ಬಳಿ ದುಷ್ಕರ್ಮಿಗಳಿಂದ ಭೀಕರ ದಾಳಿಗೆ ಒಳಗಾಗಿ, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಸ್ಥಳೀಯರು ನೆರವಿಗೆ ಧಾವಿಸದೆ ಅಮಾನವೀಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಹೃದಯಭಾಗವಾಗಿರುವ ರೇಸ್ ಕೋರ್ಸ್ ರಸ್ತೆಯಲ್ಲಿ ಕಳೆದ ಶುಕ್ರವಾರ 18ರಂದು ರಾತ್ರಿ 9ರ ವೇಳೆ ಶಿಕ್ಷಾ ಐಎಎಸ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸತೀಶ್. ಪಿ (24) ಎಂಬವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿಗೊಳಗಾಗಿರುವ ಸತೀಶ್ ಅವರು ಆಂಧ್ರಪ್ರದೇಶದ ಚಿತ್ತೂರಿಗೆ ಹೋಗಲು ಮಿನಿ ಬಸ್ ವೊಂದರಲ್ಲಿ ಆನಂದ್ ರಾವ್ ಸರ್ಕಲ್‍ಗೆ ಬಂದು ಇಳಿದಿದ್ದಾರೆ. ಅಲ್ಲಿಂದ ಚಿತ್ತೂರಿನ ಬಸ್ಸಿಗೆ ಹೋಗುವ ಸಲುವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸತೀಶ್ ಅವರನ್ನು ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ.

ಸತೀಶ್ ಅವರು ಕಾರಿನಲ್ಲಿ ಬಂದಿರಬಹುದು ಎಂದು ತಿಳಿದಿದ್ದ ದುಷ್ಕರ್ಮಿಗಳು ಕಾರನ್ನು ಹತ್ತುವಂತೆ ಸತೀಶ್ ಅವರಿಗೆ ಸೂಚಿಸಿದ್ದಾರೆ. ಈ ವೇಳೆ ಸತೀಶ್ ಅವರು ತಮ್ಮ ಬಳಿ ಕಾರಿಲ್ಲ ಎಂದು ಹೇಳಿದ್ದಾರೆ. ಇದನ್ನು ನಂಬದ ದುಷ್ಕರ್ಮಿಗಳು ಸುಳ್ಳು ಹೇಳುತ್ತಿದ್ದಾನೆಂದು ತಿಳಿದು ಸ್ಥಳದಲ್ಲಿದ್ದ ಆಟೋಮೊಬೈಲ್ ಶೋರೂಂವೊಂದರ ಬಳಿ ಕರೆದೊಯ್ಡು ಮನಬಂದಂತೆ ಟೈಲ್ಸ್‍ ನಿಂದ ಹೊಡೆದು ಅವರ ಮೇಲೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.

ಗಂಟೆಗಳ ಕಾಲ ಸತೀಶ್ ಅವರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ, ಸ್ಥಳದಲ್ಲಿಯೇ ಓಡಾಡುತ್ತಿದ್ದ ಜನರು ನೆರವಿಗೆ ಧಾವಿಸಿಲ್ಲ. ಸ್ವಲ್ಪ ಸಮಯದ ಬಳಿಕ ಕೆಲವರು ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ಜಯನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ಸತೀಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ. ದಾಳಿಕೋರರು ಗೊತ್ತಿಲ್ಲ ಎಂದು ಸತೀಶ್ ಹೇಳುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಮಾನವೀಯತೆ ಮರೆತ ಜನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ