ಬುರ್ಖಾ ಧರಿಸಿ ಶಾಪಿಂಗ್ ಮಾಡುತ್ತಿದ್ದರಾ ಶಶಿಕಲಾ..?

Kannada News

21-08-2017

ಬೆಂಗಳೂರು: ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ರಾಜಾರೋಷವಾಗಿ ಜೈಲಿನಿಂದ ಹೊರ ಹೋಗಿ ಬರುತ್ತಿರುವ ದೃಶ್ಯಗಳು ಬಯಲಾಗಿದೆ.

ಕೈದಿಗಳ ಸಮವಸ್ತ್ರವಿಲ್ಲದೇ ಸಾಮಾನ್ಯ ಉಡುಪಿನಲ್ಲಿ ಶಶಿಕಲಾ ಜೈಲಿನಲ್ಲಿ ಬಿಂದಾಸ್ ಆಗಿ ಓಡಾಡುತ್ತಿರುವುದೂ ಅಲ್ಲದೆ  ಜೈಲಿನ ಮುಖ್ಯದ್ವಾರದಿಂದ, ಗೆಳತಿ ಇಳವರಸಿ ಜೊತೆ ಹೊರಗೆ ಹೋಗಿ ಬಂದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಪತ್ತೆಯಾಗಿರುವುದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಈ ದೃಶ್ಯಾವಳಿಯ  ಸಿಡಿಯನ್ನು  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಸಲ್ಲಿಸಲಾಗಿದೆ. ಶಶಿಕಲಾ ಜೈಲಿನಲ್ಲೂ ಅತಿಗಣ್ಯರ ಸೌಲಭ್ಯ ಪಡೆಯುತ್ತಿರುವುದಕ್ಕೇ ಸಿಸಿಟಿವಿ ದೃಶ್ಯ ಸಾಕ್ಷಿ ಒದಗಿಸಿದಂತಿದೆ. ಕಾರಾಗೃಹ ಇಲಾಖೆಯ ಡಿಐಜಿ ಆಗಿದ್ದ ಡಿ. ರೂಪಾ ಕೇಂದ್ರ ಕಾರಾಗೃಹದಲ್ಲಿ ಶಶಿಕಲಾ ಹಾಗೂ ಮತ್ತಿತರರು ಗಣ್ಯರ ಸೌಲಭ್ಯ ನೀಡಿರುವ ವರದಿಗೆ ಇದು ಪುಷ್ಠಿ ನೀಡಿದಂತಾಗಿದೆ.

ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತೀತ್ಯ ನೀಡಲಾಗುತ್ತಿದೆ, ಎನ್ನುವ ವಿಷಯ ಕಾರಾಗೃಹ ಇಲಾಖೆಯಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳ ವಾಕ್ಸಮರಕ್ಕೆ ವೇದಿಕೆಯಾಗಿತ್ತು, ಇದರಿಂದ ಮುಜುಗರಕ್ಕೆ ಒಳಗಾದ ರಾಜ್ಯ ಸರ್ಕಾರ, ಇಬ್ಬರು ಅಧಿಕಾರಿಗಳನ್ನು ಎತ್ತಂಗಡಿ ಮಾಡಿ, ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿತ್ತು.

ಜುಲೈ 31 ರಂದು ಎಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ಹಾಲಿ ರಸ್ತೆ ಮತ್ತು ಸುರಕ್ಷತೆ ವಿಭಾಗದ ಆಯುಕ್ತೆಯಾಗಿರುವ ಡಿ.ರೂಪಾ ಜೈಲಿನ ಅಕ್ರಮಗಳ ಬಗ್ಗೆ  ಎಸಿಬಿಗೆ ಸಿಡಿ ಸೇರಿದಂತೆ 74 ದಾಖಲೆಗಳನ್ನು ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶಶಿಕಲಾ ಮತ್ತು ಇಳವರಸಿ ಸಾಮಾನ್ಯ ಧಿರಿಸಿನಲ್ಲಿ ಜೈಲಿನಿಂದ ಹೊರಗೆ ಹೋಗಿ ಒಳ ಬರುತ್ತಿರುವ ದೃಶ್ಯ ದಾಖಲಾಗಿದ್ದು, ಅದನ್ನು ಭ್ರಷ್ಟಾಚಾರ ನಿಗ್ರಹ ದಳ ಮತ್ತು ವಿಚಾರಣೆ ನಡೆಸುತ್ತಿರುವ ವಿನಯ್ ಕುಮಾರ್ ನೇತೃತ್ವದ ಆಯೋಗಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಡಿ. ರೂಪಾ ಸಲ್ಲಿಸಿದ್ದಾರೆ. ಶಶಿಕಲಾ ಮತ್ತು ಇಳವರಸಿ ಹೊರಗಡೆಯಿಂದ ಬ್ಯಾಗ್ ಹಿಡಿದುಕೊಂಡು ಬರುವಾಗ ಪುರುಷ ಭದ್ರತಾ ಸಿಬ್ಬಂದಿ ಅವರೊಂದಿಗೆ ಒಳಗೆ ಬರುತ್ತಿರುವ ಸಿಸಿಟಿವಿಯ ದೃಶ್ಯಾವಳಿಗಳನ್ನು ಎಸಿಬಿ ಅಧಿಕಾರಿಗಳಿಗೆ ದಾಖಲೆ ಸಮೇತ ಸಲ್ಲಿಸಿರುವುದಾಗಿ ಡಿ. ರೂಪಾ ಖಚಿತಪಡಿಸಿದ್ದಾರೆ.

ಮಹಿಳಾ ಕೈದಿಗಳಿರುವ ಬ್ಯಾರಕ್  ನಲ್ಲಿ ಪುರುಷ ಭದ್ರತಾ ಸಿಬ್ಬಂದಿಗೆ ಅವಕಾಶವಿಲ್ಲ. ಹಾಗಿದ್ದರೂ ಅವರ ಬ್ಯಾರಕ್ ಬಳಿ ಪುರುಷ ಭದ್ರತಾ ಸಿಬ್ಬಂದಿಯನ್ನು ನಿಯೋಜನೆಗೆ ನೇಮಿಸಿಕೊಳ್ಳಲಾಗಿದೆ. ಇದರ ಜೊತೆಗೆ ಶಶಿಕಲಾ ಅವರನ್ನು ಭೇಟಿ ಮಾಡಲು ಬರುವವರಿಗೆ ಪ್ರತ್ಯೇಕ ಕೊಠಡಿ ಸೇರಿದಂತೆ, ಇನ್ನಿತರ ವಿಶೇಷ ಸೌಲಭ್ಯ ಕಲ್ಪಿಸಿರುವುದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದಕ್ಕೆ ತಾಜಾ ನಿದರ್ಶನವಾಗಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಮತ್ತು ಇಳವರಸಿ ಬುರ್ಖಾ ಧರಿಸಿ ಎಂ.ಜಿ. ರಸ್ತೆಯಲ್ಲಿ ಶಾಂಪಿಂಗ್ ಮಾಡಿರುವ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

ಜೈಲಿನ ಅಧಿಕಾರಿಗಳೇ ಶಶಿಕಲಾ ಮತ್ತು ಇಳವರಸಿಗೆ ಹೊರಗೆ ಹೋಗಲು ಅವಕಾಶ ನೀಡಿದ್ದಾರೆ ಎನ್ನುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ನಡೆಯಲಿದೆ ಎನ್ನುವ ಆರೋಪಗಳಿಗೆ ಪುಷ್ಠಿ ನೀಡಿದಂತಾಗಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ