ನಾಳೆ ದೇಶಾದ್ಯಂತ ಬ್ಯಾಂಕ್ ಮುಷ್ಕರ !

Kannada News

21-08-2017

ನವದೆಹಲಿ: ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಉದ್ಯೋಗಿಗಳು ಮಂಗಳವಾರ ಒಂದು ದಿನದ ಮುಷ್ಕರ ನಡೆಸಲಿದ್ದು, ದೇಶದಾದ್ಯಂತ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆ ಒದಗುವ ನಿರೀಕ್ಷೆ ಇದೆ.

ಒಂಬತ್ತು ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಆಶ್ರಯದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.  10 ಲಕ್ಷದಷ್ಟು ಬ್ಯಾಂಕ್‌ ಉದ್ಯೋಗಿಗಳು ವೇದಿಕೆಯ ಸದಸ್ಯರಾಗಿದ್ದಾರೆ. ಬ್ಯಾಂಕ್‌ಗಳ  ಖಾಸಗೀಕರಣ ಯತ್ನ ವಿರೋಧಿಸಿ ಮತ್ತು ಇತರ ಬೇಡಿಕೆಗಳಿಗೆ ಒತ್ತಾಯಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಖಾಸಗಿ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಚೆಕ್‌ ಕ್ಲಿಯರನ್ಸ್‌ ವಿಳಂಬವಾಗಬಹುದು. ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ ಗಳು ಶೇ 75ರಷ್ಟು ಬ್ಯಾಂಕಿಂಗ್‌ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿವೆ. ‘ಮುಖ್ಯ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಮಾತುಕತೆ ವಿಫಲವಾಗಿರುವುದರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ’ ಎಂದು ‘ಎಐಬಿಒಸಿ’ ‍ಪ್ರಧಾನ ಕಾರ್ಯದರ್ಶಿ ಡಿ. ಟಿ.ಫ್ರಾಂಕೊ ತಿಳಿಸಿದ್ದಾರೆ.

’ಉದ್ದಿಮೆ ಸಂಸ್ಥೆಗಳ ವಸೂಲಾಗದ ಸಾಲ (ಎನ್‌ಪಿಎ) ವಜಾ ಮಾಡುವ ನೀತಿ ಕೈಬಿಡಬೇಕು, ಉದ್ದೇಶಪೂರ್ವಕ ಸುಸ್ತಿದಾರರಾಗುವುದನ್ನು ಕ್ರಿಮಿನಲ್‌ ಅಪರಾಧ ಎಂದು ಘೋಷಿಸಬೇಕು, ಎನ್‌ಪಿಎ ವಸೂಲಾತಿಗೆ ಸಂಸತ್‌ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಬೇಕು ಎನ್ನುವುದು ನಮ್ಮ ಇತರ ಬೇಡಿಕೆಗಳಾಗಿವೆ’ ಎಂದು ‘ಎಐಬಿಇಎ’ ಪ್ರಧಾನ ಕಾರ್ಯದರ್ಶಿ ಸಿ. ಎಚ್‌. ವೆಂಕಟಾಚಲಂ ತಿಳಿಸಿದ್ದಾರೆ. ‘ಎನ್‌ಪಿಎ ಹೊರೆಯನ್ನು ವಿವಿಧ ಶುಲ್ಕಗಳ ಹೆಚ್ಚಳದ ನೆಪದಲ್ಲಿ ಗ್ರಾಹಕರ ಮೇಲೆ ವಿಧಿಸಬಾರದು’ ಎಂದೂ ಸಲಹೆ ನೀಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ