ಜಲಸಮಾವೇಶ ನಿರ್ಧಾರಗಳು: ಕಾರ್ಯರೂಪಕ್ಕೆ ಬರಬೇಕು !

Kannada News

18-08-2017

ವಿಜಯಪುರ: ಜಲ ಸಮಾವೇಶದಲ್ಲಿ ಕೈಗೊಂಡ ನಿರ್ಧಾರಗಳು ನೀತಿ ಆಯೋಗದಲ್ಲಿ ಚರ್ಚೆ ಆಗುವುದರ ಜೊತೆಗೆ ಸರಿಯಾಗಿ ಕಾರ್ಯರೂಪಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ. ನಗರದ ಬಿ.ಎಲ್‍.ಡಿ.ಇ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾದ ಬರ ಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜಯಪುರದ ಜಲಸಮಾವೇಶ ಐತಿಹಾಸಿಕವಾಗಿದ್ದು ಹಿಂದೆಂದೂ ಈ ಪ್ರಮಾಣದ ಸಮಾವೇಶ ನೋಡಿರಲಿಲ್ಲ ಎಂದ ಅವರು, ನೀರು ಮನುಷ್ಯನಿಗೆ ಅತ್ಯಗತ್ಯ, ಅಮೂಲ್ಯ ಸಂಪತ್ತು ಅದನ್ನು ಎಚ್ಚರಿಕೆಯಿಂದ ಬಳಸಬೇಕು. ಎಂದು ಹೇಳಿದರು.

ಅರಣ್ಯ ಸಂಪತ್ತನ್ನು ಕಾಪಾಡುವುದರ ಮೂಲಕ ಪ್ರಕೃತಿ ಸಮತೋಲನ ಕಾಯ್ದುಕೊಳ್ಳಬೇಕು. ಲಭ್ಯ ನೀರನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ದೊರೆಯುವಂತೆ ಮಾಡಬೇಕು. ಆಧುನಿಕ ಜಲ ತಂತ್ರಜ್ಞಾನ ಬಳಸಿಕೊಳ್ಳಬೇಕು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಕೇವಲ 34% ನಷ್ಟು ಮಾತ್ರ ನೀರಾವರಿ ಹೊಂದಿದೆ. ಮಳೆಯಾಧಾರಿತ ವ್ಯವಸಾಯವೇ ಹೆಚ್ಚಾಗಿದೆ. ಪ್ರಕೃತಿ ಸಮತೋಲನಕ್ಕೆ ಮೂರನೇ ಒಂದರಷ್ಟು ಅರಣ್ಯ ಸಂಪತ್ತುವಿರಬೇಕು.  ಮಳೆಯ ಕೊರತೆಯಿಂದ ಹೆಚ್ಚು ಬೊರವೆಲ್ ಕೊರೆದು ಅಂತರ್ಜಲ ಮಟ್ಟ ಕುಸಿದಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಕೆರೆಗಳನ್ನು ಡಿನೋಟಿಫಿಕೇಶನ್ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಡಿನೋಟಿಫಿಕೇಶನ್ ಮಾಡುವುದು ಇಲ್ಲ. ಬೆಂಗಳೂರಿನಲ್ಲಿ ಪೋಲಾಗುವ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 2,500 ಕೋಟಿ ರೂ. ಖರ್ಚಾಗಿದೆ ಎಂದು ಹೇಳಿದರು.

ದೇಶದಲ್ಲಿ ಮೊದಲ ಬಾರಿ ಕೃಷಿ ಹೊಂಡ ಯೋಜನೆ ಆರಂಭಿಸಿದ್ದು ನಮ್ಮ ಸರ್ಕಾರ. ರಾಜ್ಯ ಕಳೆದ 16 ವರ್ಷಗಳಲ್ಲಿ 13 ವರ್ಷ ಬರಕ್ಕೆ ತುತ್ತಾಗಿದೆ. ಅದರಲ್ಲೂ 7 ವರ್ಷದಿಂದ ಭೀಕರ ಬರಗಾಲ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮ ಸರ್ಕಾರ ನೀರಾವರಿಗೆ ಹೆಚ್ಚಿನ ಒತ್ತು ನೀಡಿದೆ. ರಾಜ್ಯದ ಜನತೆಗೆ ಕುಡಿಯುವ ನೀರು, ರೈತರ ಬೆಳೆಗಳಿಗೆ ನೀರು ಒದಗಿಸುವ ಯೋಜನೆಗಳೆ ಮುಖ್ಯವಾಗಿ ರೂಪಿತವಾಗಿವೆ ಎಂದು ಹೇಳಿದರು. ರಾಜ್ಯ ಸರ್ಕಾರ ಪ್ರತಿ ರೈತನಿಗೆ 50 ಸಾವಿರ ರೂ.ದಂತೆ ಇದುವರೆಗೆ 8165 ಕೋಟಿ ರೂ.ಗಳಷ್ಟು ರೈತರ ಸಾಲ ಮನ್ನಾ ಮಾಡಿದೆ. ಬಾಕಿ 42 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಪ್ರವಾಹ ಮತ್ತು ಬರಗಾಲದಂತಹ ಪ್ರಕೃತಿ ವಿಕೋಪಗಳನ್ನು ಎದುರಿಸಲು ನೀರಿನ ಸಾಮರ್ಥ್ಯಾನುಸಾರ ಸೂಕ್ತ ಬಳಕೆಗೆ ದಾರಿ ಕಂಡುಕೊಳ್ಳಬೇಕು ಎಂದು ಹೇಳಿದರು. ವಿಜಯಪುರದ ಭೂತನಾಳ ಕೆರೆ ಯೋಜನೆ ಪೂರ್ಣಗೊಳಿಸಲು ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು  ಭರವಸೆ ನೀಡಿದರು.  ಪ್ರಾಸ್ತಾವಿಕವಾಗಿ ರಾಜೇಂದ್ರ ಸಿಂಗ್ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ವಿಜಯಪುರ ಘೋಷಣೆ-2017 ಓದಿದ ಅವರು, ಧ್ಯೇಯೋದ್ದೇಶಗಳನ್ನು ಸಾಧಿಸಲು ದೇಶಾದ್ಯಂತ 21 ನದಿ ಸಂಸತ್ತನ್ನು  ರಚಿಸಲಾಗಿದೆ ಎಂದು ಹೇಳಿದರು.

ದೇಶದ 101 ನದಿಗಳ ನೀರು ತುಂಬಿದ ಕಳಶವನ್ನು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಕೃಷ್ಣಾ ನದಿ ನೀರು ತುಂಬಿದ ಕಳಶವನ್ನು ರಾಜೇಂದ್ರಸಿಂಗ್ ಅವರಿಗೆ ಹಸ್ತಾಂತರಿಸಲಾಯಿತು. ವಾಟರ್ ಬಾಡಿಸ್ ಆಫ್ ವಿಜಯಪುರ ಕೃತಿ ಬಿಡುಗಡೆಗೊಳಿಸಲಾಯಿತು. ಹಾಗೂ ಕರ್ನಾಟಕ ಅಂಚೆ ಇಲಾಖೆಯಿಂದ ಜಲವೇ ಸಂಪತ್ತು ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಅಂತರರಾಷ್ಟ್ರೀಯ ಕ್ರೀಕೆಟ್ ಪಟು ರಾಜೇಶ್ವರಿ ಗಾಯಕವಾಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಮಮದಾಪುರ ವೀರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು. ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ್ ಅಧ್ಯಕ್ಷತೆ ವಹಿಸಿದ್ದರು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಿವಾನಂದ ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಮೇಟಿ, ಮಹಾನಗರ ಪಾಲಿಕೆ ಮಹಾಪೌರ ಶ್ರೀಮತಿ ಸಂಗೀತಾ ಪೋಳ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಬಸನಗೌಡ ಪಾಟೀಲ, ಛತ್ತಿಸಗಡದ ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ.ವರ್ಮಾ, ಧಾರವಾಡದ ಪಿಎಂಜಿ ವೀಣಾ ಶ್ರೀನಿವಾಸನ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಿ.ಪಿ.ಬಿರಾದಾರ, ಇತರರು ಉಪಸ್ಥಿತರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ