ರೌಡಿಗಳಿಗೆ ಸಿಸಿಬಿ ಖಡಕ್ ಎಚ್ಚರಿಕೆ !

Kannada News

18-08-2017

ಬೆಂಗಳೂರು: ಕೊಲೆ, ಕೊಲೆ ಯತ್ನ,ಸುಲಿಗೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 36 ಮಂದಿ ರೌಡಿಗಳನ್ನು ಸಿಸಿಬಿ ಕೇಂದ್ರ ಕಚೇರಿಗೆ, ಕರೆತಂದ ಸಿಸಿಬಿ ಪೊಲೀಸರು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನಗರದ ವಿವಿಧ ಪ್ರದೇಶಗಳಲ್ಲಿ ಚಟುವಟಿಕೆ ನಡೆಸುತ್ತಿದ್ದ ಕೊಲೆ, ಕೊಲೆ ಯತ್ನ ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಗಳ ಪಟ್ಟಿ ಮಾಡಿರುವ ಸಿಸಿಬಿ ಪೊಲೀಸರು ಮುಂಜಾನೆಯಿಂದಲೇ , ಮನೆಗಳ ಮೇಲೆ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಒಬ್ಬೊಬ್ಬರಾಗಿ ರೌಡಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರ ಪೂರ್ವಾಪರಗಳು, ವಾಸಿಸುತ್ತಿರುವ ಸ್ಥಳ, ಮಾಡುತ್ತಿರುವ ಉದ್ಯೋಗ, ಬಳಸುತ್ತಿರುವ ದೂರವಾಣಿ ಸಂಖ್ಯೆಗಳು, ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ರೌಡಿಗಳಿಗೆ ಯಾವುದೇ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಗುಂಪು ಕಟ್ಟಿಕೊಂಡು ಪುಂಡಾಟಿಕೆ ನಡೆಸುವುದಾಗಲಿ, ರೌಡಿ ಚಟುವಟಿಕೆಗಳನ್ನು ಮುಂದುವರೆಸುವುದಾಗಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ರೌಡಿ ಚಟುವಟಿಕೆಗಳನ್ನು ಬಿಟ್ಟು ಉತ್ತಮ ಜೀವನ ನಡೆಸಿದರೆ ಅಂತಹವರ ಹೆಸರನ್ನು ರೌಡಿ ಪಟ್ಟಿಯಿಂದ ಕೈಬಿಡುವ ಬಗ್ಗೆಯೂ ಅಲ್ಲದೆ, ರಕ್ಷಣೆ ನೀಡುವ ಬಗ್ಗೆಯೂ ಭರವಸೆ ನೀಡಲಾಗಿದೆ. ಬರುವ ಚುನಾವಣೆ ಹಿನ್ನೆಲೆಯಲ್ಲಿ ರೌಡಿಗಳ ಪೆರೇಡ್ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ