ಸಿದ್ದರಾಮಯ್ಯ ಅಂತ್ಯತ ಭ್ರಷ್ಟ ಸಿಎಂ..?

Kannada News

18-08-2017

ಬೆಂಗಳೂರು: ಆದಾಯ ತೆರಿಗೆ ದಾಳಿಯಲ್ಲಿ ಕೋಟ್ಯಾಂತರ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿರುವ, ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಆನಂದ್‍ ರಾವ್ ವೃತ್ತದ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಸೇರಿದ ಸಾವಿರಾರು ಮಂದಿ ಮುಖಂಡರು, ಕಾರ್ಯಕರ್ತರು ಅಲ್ಲಿಂದ ಫ್ರೀಡಂ ಪಾರ್ಕ್ ವರಗೆ ಮೆರವಣಿಗೆ ನಡೆಸಿ ಸಮಾವೇಶಗೊಂಡರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರು ತನ್ನ ಬಡುಕ್ಕೆ ಎಲ್ಲಿ ಪೆಟ್ಟು ಬೀಳುತ್ತದೋ ಎಂದು ಹೆದರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ  ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.

ಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲ್ಲಿದ್ದು ಸಿದ್ದರಾಮಯ್ಯ ಅವರ ಎಲ್ಲ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಿ ಆತನನ್ನು ಸೆಂಟ್ರೆಲ್ ಜೈಲಿಗೆ ಕಳುಹಿಸದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ ಎಂದು ಗುಡುಗಿದರು.

ಕಳೆದ ನಾಲ್ಕೂವರೆ ವರ್ಷಗಳಿಂದ ಹಲವಾರು ಭ್ರಷ್ಟಾಚಾರ ನಡೆಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮನೆಗೆ ಕಳುಹಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇಲ್ಲಿಗೆ ಬರಬೇಕಾಗಿಲ್ಲ. ರಾಜ್ಯದ ಆರೂವರೆ ಕೋಟಿ ಜನರೇ ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ತಮ್ಮ ಭಾಷಣದುದ್ದಕ್ಕೂ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಹತ್ತು ವರ್ಷಗಳ ಹಿಂದೆ ಬಡವರ ಬದುಕು ಹಸನಾಗಲು ಮಾಡಿದ ಡಿನೋಟಿಫೈ ವಿಚಾರವನ್ನೇ ಮುಂದಿಟ್ಟುಕೊಂಡು ಹಗೆ ಸಾಧಿಸಲು ಹೊರಟರೆ ನಿಮ್ಮನ್ನು ಬಿಡುವುದಿಲ್ಲ. ಇಂತಹ ನೂರು ಕೇಸುಗಳನ್ನು ಹಾಕಿದರೂ ನಿನ್ನನ್ನು ಕೆಳಗಿಳಿಸುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಎಸಿಬಿಯಲ್ಲಿ ಎಫ್‍.ಐ.ಆರ್ ಹಾಕಿದರೇ ಹೋರಾಟ ನಿಲ್ಲಿಸುತ್ತಾರೆ ಎಂದು ಭ್ರಮೆ ಪಡಬೇಡ ಎಂದು ವಾಗ್ದಾಳಿ ನಡೆಸಿದರು.

ಸ್ವಾತಂತ್ರ್ಯ ಬಂದ ನಂತರ ರಾಜ್ಯ ಕಂಡ ಅಂತ್ಯತ ಭ್ರಷ್ಟ ಮುಖ್ಯಮಂತ್ರಿ  ಸಿದ್ದರಾಮಯ್ಯ ಎಂದು ತರಾಟೆಗೆ ತೆಗೆದುಕೊಂಡ ಅವರು  ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಮಗ ನಡೆಸಿದ ಮರಳು ದಂಧೆ, ಶಾಸಕ ಮುನಿರತ್ನ ಅವರ ಕಟ್ಟಡವೊಂದರಲ್ಲಿ ಸಾವಿರಾರು ಕಡತಗಳಿಗೆ ಏನು ಉತ್ತರ ಕೊಟ್ಟಿದ್ದೀಯಾ. ನಗರದಲ್ಲಿ ಮಳೆ ಬಂದು ಜನ ಸಾಯುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಎಂದು ಸಿದ್ಧರಾಮಯ್ಯ ಮೋಜು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕೇಂದ್ರದಿಂದ ಬಿಡುಗಡೆಯಾದ 2900 ಕೋಟಿ ರೂ.ಅನುದಾನವನ್ನು ಏನಾಯಿತು ಎಂದು ಪ್ರಶ್ನಿಸಿದರೆ, ಅದನ್ನು ಕೇಳಲು ಅವರ್ಯಾರು ಎಂದು ಪ್ರಶ್ನೆ ಮಾಡುತ್ತೀಯಾ, ದೇಶದ ಯಾವುದೇ ಪ್ರಜೆ ಇಂತಹ ಪ್ರಶ್ನೆ ಕೇಳಬಹುದು. ಲೂಟಿ ಮಾಡಲು ನಿನ್ನನ್ನು ಮುಖ್ಯಮಂತ್ರಿಯಾಗಿ  ಜನತೆ ಆಯ್ಕೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ರಾಜ್ಯದುದ್ದಕ್ಕೂ ಪ್ರವಾಸ ನಡೆಸಿ ಅಧಿಕಾರದಿಂದ ಕೆಳಗಿಳಿಸುತ್ತೇನೆ ಎಂದು ಹೇಳಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರನ್ನು ಕಳಂಕಿತ ಎಂದು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಷ್ಠರ ಒತ್ತಡಕ್ಕೆ ಮಣಿದು ಎರಡನೇ ಬಾರಿ ಸೇರಿಸಿಕೊಂಡರು. ಈಗ ಡಿಕೆಶಿ ಕಳಂಕಿತ ಎಂದು ಸಾಬೀತಾಗಿದೆ. ಅವರನ್ನು ಸಚಿವ ಸಂಪುಟದಿಂದ ಕಿತ್ತುಹಾಕಬೇಕು ಎಂದು ಒತ್ತಾಯಿಸಿದರು.

ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ಮೂಲಕ ಅವರ ಶಾಸಕ ಸ್ಥಾನ ರದ್ದುಪಡಿಸಲು ಆಗ್ರಹಿಸುವುದಾಗಿ ಹೇಳಿದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರರಾವ್ ಮಾತನಾಡಿ, ಭ್ರಷ್ಟ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜೈಲಿಗೆ ಹೋಗುವವರೆಗೂ ಹೋರಾಟ ನಿಲ್ಲದು ಎಂದು ಗುಡುಗಿದರು. ಬಿಜೆಪಿ, ಆರ್‍ಎಸ್‍ಎಸ್ ವಿರೋಧ ಮಾತ್ರವಲ್ಲದೆ, ಕಾರ್ಯಕರ್ತರನ್ನು ಹತ್ಯೆ ನಡೆಸುವ ಕೆಲಸ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ. ಇದನ್ನು ಸಹಿಸಲು ಆಗುವುದಿಲ್ಲ ಎಂದು ಹೇಳಿದರು.

ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಎಸಿಬಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಸಿಬಿ ಪೊಲೀಸರೆ ನೀವು ಸತ್ಯವಂತರಾಗಿದ್ದರೆ ವಾಚ್ ಹಗರಣ, ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ವಿರುದ್ದದ್ಧ ಪ್ರಕರಣ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರಣೆ ಮತ್ತಿತರ ದೂರುಗಳ ವಿರುದ್ಧ ಎಪ್‍.ಐ.ಆರ್ ದಾಖಲಿಸುವ ತಾಕತ್ತು ತೋರಬೇಕು ಎಂದು ಆಗ್ರಹಿಸಿದರು.

ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಕೆ.ಹೆಚ್. ಈಶ್ವರಪ್ಪ ಮಾತನಾಡಿ, ಇದೊಂದು ಕಳ್ಳರ ಸರ್ಕಾರ. ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೊಳಿ ಅವರ ಮನೆಯಲ್ಲಿ ಎಷ್ಟು ಹಣ ದೊರಕಿತು. ಸಧ್ಯದಲ್ಲೇ ಆದಾಯ ತೆರಿಗೆ ಮೂಲಕ ಜಾರಿ ನಿರ್ದೇಶನಾಲಯವು ಕ್ರಮ ಕೈಗೊಂಡು ಡಿಕೆಶಿ ಅವರನ್ನು ಜೈಲಿಗೆ ತಳ್ಳುತ್ತದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಶಾಸಕರಾದ ಸಿ.ಟಿ. ರವಿ, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಬಚ್ಚೇಗೌಡ ಮತ್ತಿತರರು ಪಾಲ್ಗೊಂಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ