ಕಾಲೇಜು ಸ್ಥಳಾಂತರಕ್ಕೆ ಭಾರೀ ವಿರೋಧ !

Kannada News

17-08-2017 225

1ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಸ್ಥಳಾಂತರ ವಿರೋಧಿಸಿ ಕೆ.ಆರ್.ವೃತ್ತದಲ್ಲಿರುವ ಯುವಿಸಿಇ ಕಟ್ಟಡದ  ಮುಂಭಾಗ ಗುರುವಾರ ಎಐಡಿಎಸ್‍ಒ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಯುವಿಸಿಇ ಅಲುಮಿನಿ ಅಸೋಸಿಯೇಷನ್, ವಿಷನ್ ಯುವಿಸಿಇ, ಯುವಿಸಿಇ ಸೆಂಟೆನರಿ ಫೌಂಡೇಷನ್ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಜ್ಞಾನಿಗಳು, ಇತಿಹಾಸತಜ್ಞರು ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರುಗಳು ನೂರು ವರ್ಷಗಳ ಇತಿಹಾಸವಿರುವ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಸ್ಥಳಾಂತರವನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ಬಳಿಕ ಯುವಿಸಿಇ ಅಲುಮಿನಿ ಸಭಾಂಗಣದಲ್ಲಿ ಶಿಕ್ಷಣ ತಜ್ಞರ ಮತ್ತು ವಿದ್ಯಾರ್ಥಿಗಳ ಸಭೆ ನಡೆಸಲಾಯಿತು. ವಿಜ್ಞಾನಿ ಪದ್ಮ ವಿಭೂಷಣ ಪುರಸ್ಕೃತ ಪ್ರೋ.ರೊದ್ದಂ ನರಸಿಂಹ, ಇತಿಹಾಸತಜ್ಞ ಪ್ರೋ.ಎಸ್.ಷಟ್ಟರ್, ಬೆಂಗಳೂರು ವಿವಿ ನಿವೃತ್ತ ಉಪಕುಲಪತಿ ಪ್ರೋ.ಕೆ.ಚಿದಾನಂದಗೌಡ ಸೇರಿ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಕಾಲೇಜು ಸ್ಥಳಾಂತರ ಬಗ್ಗೆ ಚರ್ಚೆ ನಡೆಸಿದರು.

ಇದಕ್ಕೂ ಮೊದಲು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಲುಮಿನಿ ಅಸೋಸಿಯೆಷನ್ ಅಧ್ಯಕ್ಷ ವಾಸುದೇವ ಮೂರ್ತಿ, ದೇಶದ ಮೊದಲ ಹತ್ತು ಕಾಲೇಜುಗಳಲ್ಲಿ ಯುವಿಸಿಇ ಒಂದಾಗಿದ್ದು, ಕರ್ನಾಟಕದ ಮೊದಲ ಎಂಜಿನಿಯರಿಂಗ್ ಕಾಲೇಜಾಗಿದೆ. ಇಂತಹ ಐತಿಹಾಸಿಕ ಮಹತ್ವ ಪಡೆದಿರುವ ಕಾಲೇಜನ್ನು ಮತ್ತಷ್ಟು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬೇಕಿರುವ ಸರ್ಕಾರ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‍ ಗೆ ಸ್ಥಳಾಂತರಿಸಲು ಮುಂದಾಗಿರುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು. ದೇಶದಲ್ಲಿ ಕೆಲವೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಅಂತಹ ಕಾಲೇಜುಗಳಲ್ಲಿ ಒಂದಾಗಿರುವ ಯುವಿಸಿಇ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿರಬೇಕು. ಇದನ್ನು ಜ್ಞಾನ ಭಾರತಿಗೆ ಸ್ಥಳಾಂತರಿಸಿದರೆ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಸಹಜವಾಗಿಯೆ ಮುಂದಿನ ದಿನಗಳಲ್ಲಿ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

1917ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ಮಹಾರಾಜರಿಂದ ಭೂಮಿಯನ್ನು ಪಡೆದು ಸಂಸ್ಥೆಯನ್ನು ಆರಂಭಿಸಿದ್ದರು. ಶಿಕ್ಷಣಕ್ಕಾಗಿಯೇ ಈ ಭೂಮಿಯನ್ನು ಉಪಯೋಗಿಸಬೇಕು ಎಂಬ ಶರತ್ತನ್ನು ಮಹಾರಾಜರು ವಿಧಿಸಿದ್ದರು ಎನ್ನಲಾಗುತ್ತದೆ. ಅಂತಹ ಭೂಮಿಯನ್ನು ಇಂದು ಸರ್ಕಾರ ಬೇರಾವುದು ಖಾಸಗಿ ಹಿತಾಸಕ್ತಿಗಾಗಿ ಸ್ಥಳಾಂತರ ಮಾಡಲು ಬಯಸುತ್ತಿದೆ ಎಂದು ದೂರಿದರು.

ಕೆ.ಆರ್.ವೃತ್ತದಲ್ಲಿನ ಯುವಿಸಿಇ ಕಾಲೇಜುನ್ನು ಸರ್ಕಾರ ಮುಚ್ಚಬಾರದು, ಸ್ಥಳಾಂತರಿಸಲೂ ಬಾರದು. ಅದೇರೀತಿ, ಈ ಕಾಲೇಜಿಗೆ ಮೂಲಭೂತ ಸೌಲಭ್ಯವನ್ನು ಸಮರೋಪಾದಿಯಲ್ಲಿ ಉತ್ತಮಗೊಳಿಸಿ ಬೋಧಕ ಮತ್ತು ಬೋಧಕರೇತರ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಗಳ ಪ್ರಮುಖರಾದ ಮುನಿಯಪ್ಪ, ಸತೀಶ್ ಕೆ.ಜಿ.ಅಜಯ್ ಕಾಮತ್, ಐಶ್ವರ್ಯಾ ಸೇರಿ ಪ್ರಮುಖರಿದ್ದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ