ಗಸ್ತು ವ್ಯವಸ್ಥೆ ಇನ್ನಷ್ಟು ಚುರುಕುಗೊಳಿಸಿ !

Kannada News

17-08-2017 187

ಬೆಂಗಳೂರು: ನಗರದಲ್ಲಿನ ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿ ಗೊಳಿಸಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರೂಪಕ್ ಕುಮಾರ್ ದತ್ತಾ ಅವರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಕರೆದು ಪರಾಮರ್ಶೆ ನಡೆಸಿದರು.

ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ, ಸೀಮಂತ್ ಕುಮಾರ್ ಸಿಂಗ್, ಸತೀಶ್ ಕುಮಾರ್ ಸೇರಿದಂತೆ ನಗರದ ಎಲ್ಲ ಡಿಸಿಪಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ನಗರದಲ್ಲಿನ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಿ ಕಾನೂನು ಸುವ್ಯವಸ್ಥೆ, ಕಾಪಾಡಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ದತ್ತಾ ಅವರು ಸೂಚಿಸಿದರು. ನಗರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ನಗರದಲ್ಲಿ ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವುದರಿಂದ ಕಳ್ಳತನ, ಸುಲಿಗೆ, ಸರ ಅಪಹರಣ ಇನ್ನಿತರ ಅಪರಾಧ ಕೃತ್ಯಗಳನ್ನು ಹತ್ತಿಕ್ಕಬಹುದು. ಅಲ್ಲದೆ ರೌಡಿ ಚಟುವಟಿಕೆಗಳು, ಪುಂಡರ ಹಾವಳಿಗಳನ್ನು ತಡೆಯಬಹುದು ಎಂದು ಹೇಳಿದರು.

ಡಿ.ಸಿ.ಪಿ.ಗಳಿಂದ ವಲಯವಾರು ಅಪರಾಧ ಪ್ರಕರಣಗಳ ಮಾಹಿತಿ ಪಡೆದ ಡಿಜಿಪಿ, ಗಸ್ತು ವ್ಯವಸ್ಥೆಯನ್ನು ಬಲಗೊಳಿಸಿ ನಮ್ಮ 100 ದೂರವಾಣಿಗೆ ಬರುವ ಕರೆಗಳ ಸ್ಥಳಕ್ಕೆ ಕೇವಲ 5 ನಿಮಿಷಗಳೊಳಗೆ ತೆರಳುವಂತೆ ಸೂಚಿಸಿದರು. ನಗರದಲ್ಲಿನ ಕಾನೂನು ಸುವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಚುನಾವಣೆಗಳು ಸಮೀಪಿಸುತ್ತಿರುವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಎಲ್ಲ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.




ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ