ಭಾರೀ ಮಳೆಗೆ ನೊರೆ ಸಮಸ್ಯೆ ಉಲ್ಬಣ !

Kannada News

16-08-2017

ಬೆಂಗಳೂರು: ನಗರದಲ್ಲಿ ಎರಡು ದಿನ ಸುರಿದ ಭಾರಿ ಮಳೆಯಿಂದಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ಮತ್ತೆ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರು ವಾಹನ ಸವಾರರು ಪರದಾಡುವಂತಾಗಿದೆ.

ಎರಡು ಕೆರೆಗಳ ಸುತ್ತ ಮುತ್ತ 20 ರಿಂದ 25 ಅಡಿ ಎತ್ತರದ ಮೆಶ್‍ಗಳನ್ನು ಪಾಲಿಕೆ ಅಳವಡಿಸಿದೆಯಾದರೂ, ಇದನ್ನೂ ಮೀರಿ ನೊರೆ ಉಕ್ಕಿ ರಸ್ತೆಯತ್ತ ಹಾರಿ ಬರುತ್ತಿದ್ದು ಕೆರೆಯ ಅಕ್ಕಪಕ್ಕದ ನಿವಾಸಿಗಳು ನೊರೆಯಿಂದ ಬೇಸತ್ತು ಹೋಗಿದ್ದಾರೆ. ನಗರದಲ್ಲಿ ಮಳೆ ಬಂದಾಗೆಲ್ಲಾ ಕಲುಶಿತ ನೀರಿನಿಂದಾಗಿ ವರ್ತೂರು, ಬೆಳ್ಳಂದೂರು ಕೆರೆಗಳಲ್ಲಿ ನೊರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಕಳೆದ ಎರಡು ದಿನ ಸುರಿದ ಮಳೆಗೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಎರಡೂ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿದೆ.

ಕನಿಷ್ಠ 7-10 ಅಡಿ ಎತ್ತರದವರೆಗೂ ನೊರೆ ಹಾರಾಡುತ್ತಿದ್ದು, ನೊರೆ ಕೆರೆಯ ಆಚೆ ಬರದಿರಲಿ ಎಂದು ಕೆರೆ ಹಾಗೂ ರಸ್ತೆ ನಡುವೆ 25 ಅಡಿ ಎತ್ತರದ ಮೆಶ್ ಹಾಕಲಾಗಿದೆ. ಅದನ್ನೂ ಮೀರಿ ನೊರೆ ಬರುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ನೊರೆಯಿಂದಾಗಿ ಜನರಿಗೆ ಓಡಾಡುವುದು ಕಷ್ಟವಾಗಿದೆ. ಬೆಳ್ಳಂದೂರು ಕೆರೆಯ ಯಮಲೂರು ಕೋಡಿ ಸುತ್ತಮುತ್ತ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಕಾಡುತ್ತಿದೆ.

ಜನ, ವಾಹನ ಸವಾರರು ಇತ್ತ ಸುಳಿಯಲು ಭಯಪಡುತ್ತಿದ್ದಾರೆ. ಇನ್ನೊಂದೆಡೆ ಸುತ್ತಲಿನ ನಿವಾಸಿಗಳು, ಕಿಟಕಿ, ಬಾಗಿಲು ಹಾಕಿ ಎರಡು ದಿನದಿಂದ ಹಾಗೇ ಕಾಲ ಕಳೆಯುವ ಸ್ಥಿತಿ ಎದುರಾಗಿದೆ. ಇನ್ನು ಚಂದ್ರ ಬಡಾವಣೆಯ ಕಮರ್ ನಗರದಲ್ಲಿ ಮಳೆಯಿಂದಾದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಎರಡು ದಿನ ಸುರಿದ ಮಳೆಯಿಂದ ಮನೆಗಳಲ್ಲಿ ತುಂಬಿರುವ ನೀರನ್ನು ಹೊರಹಾಕುವ ಕಾರ್ಯದಲ್ಲಿ ಜನ ನಿರತರಾಗಿದ್ದಾರೆ. ಮೊನ್ನೆ, ನಿನ್ನೆ ಸುರಿದ ಮಳೆ ಈ ಭಾಗದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜನ ಕೊಳಚೆ ನೀರನ್ನು ಮನೆಯಾಚೆ ಹಾಕಿ ಸುಸ್ತಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ