ಮಳೆಗೆ ಬೆಚ್ಚಿಬಿದ್ದ ಜನತೆ !

16-08-2017
ಬೆಂಗಳೂರು: ನಗರದಲ್ಲಿ ಕಳೆದೆರಡು ದಿನಗಳಿಂದ ಸುರಿದ ಭಾರಿಯಿಂದ ನೀರು ತುಂಬಿ ತಗ್ಗು ಪ್ರದೇಶಗಳ ಜನರ ಅನುಭವಿಸುತ್ತಿರುವ ಪಾಡು ಹೇಳ ತೀರದಾಗಿದೆ. ಮನೆಗೆ ತುಂಬಿದ ನೀರನ್ನು ಹೊರಹಾಕಿ ಸ್ವಚ್ಚ ಗೊಳಿಸುವಷ್ಟರಲ್ಲಿ ಮತ್ತೆ ಮಳೆ ಬಂದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಸದ್ಯಕ್ಕೆ ಮಳೆ ನಿಂತರೂ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ಸಾಧ್ಯವಾಗದೇ ವಾಹನ ಸಂಚಾರ ಕೆಲವೆಡೆ ದುಸ್ತರವಾಗಿದೆ. ಮಳೆಯಿಂದ ಉಂಟಾಗಿರುವ ಜನರ ಸಮಸ್ಯೆಗಳಿಗೆ ತೆರೆ ಬಿದ್ದಿಲ್ಲ, ರಾತ್ರಿಯ ವೇಳೆಗೆ ನದಿಯಂತೆ ಹರಿಯುತ್ತಿದ್ದ ರಸ್ತೆಗಳು ಸಾಮಾನ್ಯ ಸ್ಥಿತಿಗೆ ಮರಳಿದರೂ ರಸ್ತೆ ಸಂಪೂರ್ಣ ಹಾಳಾಗಿದೆ.
ಹೆಚ್.ಎಸ್.ಆರ್ ಲೇಔಟ್ನ ಕೆಲ ತಗ್ಗು ಪ್ರದೇಶದ ಮನೆಗಳಲ್ಲಿ ಮಳೆಗೆ, ಗೃಹೋಪಯೋಗಿ ವಸ್ತುಗಳನ್ನು ಹೊರಹಾಕಿ, ಮತ್ತೊಮ್ಮೆ ಮಳೆ ಬಂದು ಮನೆಗೆ ನೀರು ನುಗ್ಗದಂತೆ ಸಿಮೆಂಟ್ ಮೂಟೆಗಳನ್ನು ಮನೆಯ ಬಾಗಿಲಿಗೆ ಅಡ್ಡ ಇಟ್ಟು ಮನೆಗಳನ್ನು ಶುಚಿಗೊಳಿಸಿದ್ದಾರೆ. ಆದರೂ ಗಬ್ಬುನಾರುತ್ತಿದ್ದ ಚರಂಡಿ ನೀರು ಮನೆ ನುಗ್ಗಿದ್ದರಿಂದ ಇನ್ನಿಲ್ಲದ ಪಾಡು ಅನುಭವಿಸಿದ್ದಾರೆ.
ಕೋರಮಂಗಲದ ಲೇಔಟ್ ನಲ್ಲಿ ಅಪಾರ್ಟ್ಮೆಂಟ್ ಗಳಿಗೆ ನುಗ್ಗಿದ್ದ ನೀರನ್ನು ಅಗ್ನಿಶಾಮಕದಳದಿಂದ ಹೊರಹಾಕಲಾಗಿದ್ದರೆ, ಕೋರಮಂಗಲದ ಬಿಎಂಟಿಸಿ ಬಸ್ ನಿಲ್ದಾಣದ ಒಳಗೆ ನಿಂತಿದ್ದ ನೀರನ್ನು ಹೊರಹಾಕಲಾಗಿದೆ. ರಾತ್ರಿಯಿಡೀ ನೀರನ್ನ ಹೊರತೆಗೆಯುವ ಕೆಲಸ ನಡೆದರೂ ಬಸ್ ನಿಲ್ದಾಣದ ಒಳಗಿನ ನೀರು ಮಾತ್ರ ಕಡಿಮೆಯಾಗಿಲ್ಲ. ಮತ್ತೆ ಬೆಳಗಿನಿಂದ ಬಿಎಂಟಿಸಿ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ನೀರನ್ನ ತೆಗೆಯುವ ಕೆಲಸ ಮಾಡಿದ್ದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ನೀರನ್ನು ಹೊರತೆಗೆದಿದ್ದಾರೆ.
ಚಂದ್ರಾಲೇಔಟ್ ಭಾಗದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಮಳೆ ಮುಂದುವರಿಯುತ್ತದೆ ಎನ್ನುವ ಮುನ್ಸೂಚನೆ ನೀಡಿರುವುದರಿಂದ ಬೆಂಗಳೂರಿಗರು ಭಯ ಪಡುವಂತಾಗಿದೆ.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಗದಗದಲ್ಲಿ ಆಶ್ಲೇಷ ಮಳೆಗೆ ಭೂಮಿ ತಂಪಾಗಿದೆ. ಹವಾಮಾನ ಇಲಾಖೆ ಪ್ರಕಾರ ಗದಗ ಸುತ್ತಮುತ್ತ 12 ಮಿಲಿ ಮೀಟರ್ ನಷ್ಟುಮಳೆಯಾಗಿದೆ. ಬೆಳದಡಿ ಗ್ರಾಮದ ಕೆಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮಳೆ ಬಂದಿರುವುಕ್ಕೆ ಖುಷಿ ಪಟ್ಟ ಕೆಲವರು ಮಳೆಯಲ್ಲೇ ನೆನೆದು ಖುಷಿ ಮಾಡಿದ್ದಾರೆ.
ಹಾಸನದ ಹಲವೆಡೆ ಸುರಿದ ತುಂತುರು ಮಳೆಗೆ ಜೋಳ, ರಾಗಿ, ಆಲೂಗಡ್ಡೆಯಂತಹ ಬೆಳೆ ಬೆಳೆದ ರೈತಾಪಿ ವರ್ಗಕ್ಕೆ ನೆಮ್ಮದಿ ತಂದಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಹಾವೇರಿ ಜನ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದು ಸುರಿದ ಮಳೆ ಕೊಂಚ ನಿರಾಳ ತಂದಿದೆ.
ಒಂದು ಕಮೆಂಟನ್ನು ಹಾಕಿ