ಪಾಕ್ ಪ್ರಚೋದಿತ ದಾಳಿಗೆ ದಿಟ್ಟ ಉತ್ತರ !

Kannada News

16-08-2017

ಜಮ್ಮು: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನದ ಕ್ಯಾತೆ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೇನಾ ಮುಂಚೂಣಿ ನೆಲೆಗಳು ಮತ್ತು ನಾಗರಿಕರ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ಮತ್ತೆ ಗುಂಡು ಮತ್ತು ಶೇಲ್ ದಾಳಿ ನಡೆಸಿದ್ದಾರೆ. ಈ ಅಪ್ರಚೋದಿತ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿವೆ.

ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಇಂದು ಮುಂಜಾನೆ 5.34ರಲ್ಲಿ ಸಣ್ಣ ಶಸ್ತ್ರಾಸ್ತ್ರಗಳು, ಸ್ವಯಂಚಾಲಿತ ಬಂದೂಕುಗಳು ಮತ್ತು ಮಾರ್ಟರ್‍ ಗಳಿಂದ ಪಾಕಿಸ್ತಾನಿ ಸೇನೆ ಅಪ್ರಚೋದಿತ ಮತ್ತು ಮನಸೋ ಇಚ್ಛೆ ದಾಳಿ ನಡೆಸಿತು. ಇದರಿಂದಾಗಿ ಭಾರತೀಯ ಯೋಧರು ಪ್ರಬಲವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದರು ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ.

ಇನ್ನು ಶ್ರೀನಗರದಲ್ಲಿ, ಜಮ್ಮು-ಕಾಶ್ಮೀರದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಪ್ರತ್ಯೇಕತಾವಾದಿಗಳು ಪಾಕಿಸ್ತಾನದಿಂದ ಹಣಕಾಸು ನೆರವು ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂದು ಮತ್ತೆ 12 ಕಡೆ ದಾಳಿ ಮಾಡಿದೆ. ಭಯೋತ್ಪಾದನೆಗೆ ಹಣ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಶ್ರೀನಗರ, ಬಾರಾಮುಲ್ಲಾ ಮತ್ತು ಹಂದ್ವಾರ್‌ ಸೇರಿದಂತೆ 12 ಕಡೆ ದಾಳಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 24ರಂದು 7 ಆರೋಪಿಗಳನ್ನು ಎನ್‌ಐಎ ವಶಕ್ಕೆ ಪಡೆದಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ