ಸೈಕೋಸೊಮ್ಯಾಟಿಕ್

Kannada News

12-08-2017

ಸೈಕೋಸೊಮ್ಯಾಟಿಕ್  (psychosomatic) ಎಂಬುದು ಸರಳ ಭಾಷೆಯಲ್ಲಿ ಮನೋದೈಹಿಕ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಪ್ರಕ್ರಿಯೆ. ಇದು ಅನೇಕ ದೈಹಿಕ ಅನುಕೂಲ ಅನಾನುಕೂಲತೆಗಳಿಗೆ ಸುಸ್ಥಿತಿ- ದುಃಸ್ಥಿತಿಗಳಿಗೆ ಕಾರಣ ಎಂಬುದು ಇತ್ತೀಚಿನ ದಶಕಗಳಲ್ಲಿ ದೃಢಪಟ್ಟಿರತಕ್ಕಂತಹ ವೈಜ್ಞಾನಿಕ ಸತ್ಯ. ಮನಶ್ಶಾಸ್ತ್ರದ ಪಿತಾಮಹ ಪ್ರಾಯ್ಡ್‍ ನ ಕಾಲದಿಂದಲೂ ಪಾಶ್ಚಾತ್ಯ ವೈಜ್ಞಾನಿಕ ಸಮೂಹಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತ ಬಂದಿದೆ. ವಿಶೇಷವಾಗಿ ಭಾರತದಲ್ಲಿ ಭಾರತೀಯ ಪರಂಪರೆಯಲ್ಲಿ ಭಾರತೀಯ ಆಧ್ಯಾತ್ಮ ವಿಜ್ಞಾನದಲ್ಲಿ, ಮನಸ್ಸು ದೇಹದ ಮೇಲೆ ಬೀರುವ ಪ್ರಭಾವವನ್ನು ಅನಾದಿ ಕಾಲದಿಂದಲೂ ಕಂಡುಕೊಂಡಾಗಿದೆ ಮಾತ್ರವಲ್ಲದೆ ದೃಢಪಡಿಸಿಯೂ ಆಗಿದೆ.

ಯಾವುದೇ ಖಾಯಿಲೆಯನ್ನೂ ಯಾವುದೇ ಔಷಧಿಯೂ ಗುಣಪಡಿಸಲು ಸಾಧ್ಯವಿಲ್ಲ ಆದರೆ ಔಷಧಿಗಳು ಗುಣವಾಗುವ ಪ್ರಕ್ರಿಯೆಯನ್ನು ವ್ಯವಸ್ಥಿತಗೊಳಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಕೆಲವೊಮ್ಮೆ ವೈದ್ಯವಿಜ್ಞಾನದಲ್ಲಿ ಅದ್ಭುತ ನಡೆದಿರುವ ಸಂದರ್ಭಗಳಿವೆ. ಪವಾಡಪುರುಷರ ಅನುಗ್ರಹದಿಂದ, ದೈವಕೃಪೆಯಿಂದ ಜನರ ಖಾಯಿಲೆಗಳು ಗುಣವಾಗಿರುವ ಉದಾಹರಣೆಗಳು ಅಸಂಖ್ಯಾತ. ಹಾಗಾದರೆ ಔಷಧಿಗಳು ಗುಣಪಡಿಸಲಾಗದಂಥದ್ದನ್ನು ಪವಾಡಪುರುಷರು ಮತ್ತು ದೇವರು ಹೇಗೆ ಮಾಡಲು ಸಾಧ್ಯವಾಯಿತು ಎಂಬ ಪ್ರಶ್ನೆ ಏಳುವುದಂತೂ ಸಹಜ. ಪ್ರತಿಯೊಂದು ಕಾಯಿಲೆಗೂ ಪ್ರಾಯಶಃ ಈಗಾಗಲೇ ಗುಣಪಡಿಸುವ ಪ್ರೇರಕ ಔಷಧಿಗಳನ್ನು ಅಥವ ಗುಣವಾಗಿಸುವ ವ್ಯವಸ್ಥೆಯನ್ನು ಏರ್ಪಡಿಸುವ ಔಷಧಿಗಳನ್ನು ಅಥವ ಗುಣವಾಗುವ ಒಂದು ಸ್ಥಿತಿಯನ್ನು ನಿರ್ಮಿಸುವ ಔಷಧಿಗಳನ್ನೂ ಕಂಡುಹಿಡಿದಾಗಿದೆ. ಆದರೆ ಗುಣವಾಗಿಸುವುದು ಮಾತ್ರ ದೇಹವೊಂದೇ. ಗಾಯವಾದಾಗ ಔಷಧಿ ತೆಗೆದುಕೊಂಡಾಕ್ಷಣ ಅದು ಗಾಯವನ್ನು ಗುಣಪಡಿಸುವುದಿಲ್ಲ. ಗಾಯವನ್ನು ಗುಣಪಡಿಸುವುದು ದೇಹವೇ. ಹಾಗಾದರೆ ಔಷಧಿಗೇನು ಕೆಲಸ? ಔಷಧಿ ಗಾಯ ಗುಣಪಡಿಸುವಿಕೆಯನ್ನು ತಡೆಯುವಂತಹ ಅನೇಕ ಬಾಹ್ಯ ಪ್ರಭಾವಗಳನ್ನು, ಕೀಟಾಣುಗಳನ್ನೂ, ಸೋಂಕು ಉಂಟುಮಾಡುವ ಅಥವ ಉಲ್ಬಣಗೊಳಿಸುವ ಅಂಶಗಳನ್ನೂ ತಡೆಯುತ್ತದೆ. ಆಗ ದೇಹ ನಿರಾತಂಕವಾಗಿ ಗಾಯವನ್ನು ಗುಣಪಡಿಸಿಕೊಳ್ಳಲು ಔಷಧಿಗಳು ಸಹಾಯ ಮಾಡಿದಂತಾಗುತ್ತದೆ. ಅಂದರೆ ಕೊನೆಗೂ ಗುಣಪಡಿಸುವುದು ದೇಹವೇ. ಆದರೆ ದೇಹಕ್ಕೆ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆಯೇ, ಇಲ್ಲವೇ ಎಂದು ತಿಳಿದುಕೊಳ್ಳಬೇಕಾಗುತ್ತದೆ.

ಒಂದು ಕಾಯಿಲೆಯ ಸಂದರ್ಭದಲ್ಲಿ ಅದು ಗುಣವಾಗಬೇಕಾದರೆ ದೇಹ ಪೂರಕವಾಗಿರುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಅಂದರೆ ಗಾಯ ಗುಣಮಾಡುವ ಪ್ರಕ್ರಿಯೆಯಲ್ಲಿ ಅದು ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಪುನರ್ವಿನ್ಯಾಸ, ಪುನಾರಚನೆ ಮತ್ತು ಪುನಶ್ಚೇತನಗೊಳಿಸಬೇಕಾಗುತ್ತದೆ. ತಾಂತ್ರಿಕವಾಗಿ ಒಂದು ಮಟ್ಟದ `ರಿ-ಎಂಜಿನಿಯರಿಂಗ್’ ಮಾಡಬೇಕಾಗುತ್ತದೆ. ಆದರೆ ಕೆಲವೊಂದು ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಯಾವುದೇ ಔಷಧಿ ಅಥವ ಶಸ್ತ್ರಚಿಕಿತ್ಸೆಯೂ ಒಂದು ಕಾಯಿಲೆಯನ್ನು ಗುಣಪಡಿಸಲು ಸಹಾಯಕವಾಗದಂತಹ ಸಂದರ್ಭದಲ್ಲಿ ದೇಹ ಗುಣಪಡಿಸುವ ಪ್ರಯತ್ನವನ್ನು ಕೈ ಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ವೈದ್ಯರೂ ಕೂಡ ಅಸಹಾಯಕರಾಗಿಬಿಡುತ್ತಾರೆ. ಅಂತಹ ವಿಶೇಷ ಪರಿಸ್ಥಿತಿಗಳಲ್ಲಿ ಜನ ದೇವರ ಅಥವ ಪವಾಡಪುರುಷರ ಮೊರೆ ಹೋಗುತ್ತಾರೆ. ಆಗ ಕೆಲವೊಮ್ಮೆ ಆಶ್ಚರ್ಯಕರ ರೀತಿಯಲ್ಲಿ ಗುಣಹೊಂದಿಬಿಡುತ್ತಾರೆ. ಅದು ಹೇಗೆ ಸಾಧ್ಯ?

ಖಾಯಿಲೆ ಎನ್ನುವುದು ಒಂದು ಭೌತಿಕ ಬದಲಾವಣೆ. ಆದರೆ ಅದೊಂದು ಜೀವಭೌತಿಕ ವೈಪರೀತ್ಯ. ಅಲ್ಲಿ ಜೀವವೂ ಇದೆ, ಬದಲಾವಣೆಯೂ ಇದೆ. ಯಾವುದೇ ಒಂದು ಜೈವಿಕ ಕ್ರಿಯೆಗೆ ಒಂದೋ ನಮ್ಮ ವಂಶವಾಹಿಗಳ ಅಥವ ನಿಸರ್ಗದ ಅಥವ ಪರಿಸರದ ಸೂಚಕಗಳ ಮತ್ತು ಪ್ರೇರಕಗಳಿಂದಾಗುತ್ತದೆ. ಇವೆಲ್ಲವನ್ನೂ ಮೀರಿ ಇಚ್ಛಾ ಶಕ್ತಿಯಿಂದ ಮಾನವ ತನ್ನ ದೇಹದ ಕ್ಷಮತೆಯನ್ನು ಅಸಾಧಾರಣವಾಗಿ, ಕೆಲವೊಮ್ಮೆ ಅತ್ಯದ್ಭುತವಾಗಿ ಹೆಚ್ಚಿಸಿಕೊಂಡಿರುವ ಉದಾಹರಣೆಗಳಿವೆ. ತುರ್ತು ಪರಿಸ್ಥಿತಿಗಳಲ್ಲಿ ದೇಹ ನಮಗರಿವಿಲ್ಲದಂತೆ ಅತಿಮಾನುಷ ಶಕ್ತಿಗಳನ್ನು ವ್ಯಕ್ತಪಡಿಸಿರುವ ನಿದರ್ಶನಗಳಿವೆ. ನೋವು, ದಣಿವು, ನಿದ್ದೆಯ ಅರಿವಿಲ್ಲದಂತೆ ದೇಹ ಕೆಲಸ ಮಾಡಿರುವ ದೃಷ್ಟಾಂತಗಳಿವೆ. ಆದ್ದರಿಂದ ನಮಗರಿವಿರತಕ್ಕಂತಹ ದೇಹದ ಮೇಲೆ ಪರಿಸ್ಥಿತಿಗಳು ಯಾವ ರೀತಿ ಪ್ರಭಾವ ಬೀರುತ್ತವೆ ಎಂಬುದು ಈಗಾಗಲೇ ಮಾನವ ಸ್ಪಷ್ಟವಾಗಿ ಅರಿತುಕೊಂಡಿರುವ ಒಂದು ಸತ್ಯ.

ಏನೆಲ್ಲ ಅದ್ಭುತಗಳನ್ನು ತೋರಿಸಲು ಸಮರ್ಥವಾಗಿರುವ ಈ ದೇಹಕ್ಕೆ ಒಂದು ಯಃಕಶ್ಚಿತ್ ಖಾಯಿಲೆಯನ್ನು ಗುಣಪಡಿಸಿಕೊಳ್ಳಲು ಆಗುವುದಿಲ್ಲವೆ? ತನ್ನ ರಚನೆಯ ಬಗ್ಗೆ ಅರಿವು ಮತ್ತು ತನ್ನೊಳಗೆ ಆಗುತ್ತಿರುವ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅದಕ್ಕಿಲ್ಲವೆ?

ಆಶ್ಚರ್ಯಕರ ವಿಷಯವೆಂದರೆ ದೇಹಕ್ಕೆ ತನ್ನ ಬಗೆಗೆ ಇರುವಷ್ಟು ಅರಿವು ಯಾವ ವೈದ್ಯನಿಗೂ ಪ್ರಾಯಶಃ ಇಲ್ಲವೇನೋ. ಕಾರಣ ಪ್ರತಿಯೊಂದು ದೇಹದ ಆಂತರಿಕ ಚಟುವಟಿಕೆಗಳನ್ನು ನಿಯಂತ್ರಿಸುವಂತಹ ವ್ಯವಸ್ಥೆಯೊಂದು ಎಲ್ಲ ಅವಶ್ಯಕತೆ, ಬದಲಾವಣೆಗಳನ್ನು ಗಮನದಲ್ಲಿರಿಸಿಕೊಂಡೇ ತನ್ನ ಕಾರ್ಯವನ್ನು ನಿರಂತರ ನಡೆಸುತ್ತಿರುತ್ತದೆ. ಉದಾಹರಣೆಗೆ ಹೊಟ್ಟೆಯಲ್ಲಿ ಅಜೀರ್ಣವಾದರೆ ಅದು ತಲೆನೋವಿನ ಮೂಲಕ ತೋರ್ಪಟ್ಟರೆ, ಹೊಟ್ಟೆಗೂ ತಲೆಗೂ ಏನು ಸಂಬಂಧ ಎನ್ನುವುದಕ್ಕಿಂತ ಹೆಚ್ಚಾಗಿ ದೇಹದ ಪ್ರತಿ ಅಂಗಗಳಿಗೂ ಇರತಕ್ಕಂತಹ ಪರಸ್ಪರ ಸಂಬಂಧಗಳ ಅದ್ಭುತ ಜಾಲದ ಪ್ರದರ್ಶನವೆನ್ನುವುದು ನಿರೂಪಿತವಾದಂತೆ. ಕೆಲವೊಮ್ಮೆ ಅನುವಂಶೀಯ ಅಥವ ಆಂತರಿಕ ವೈಪರೀತ್ಯ ಅಥವ ಬಾಹ್ಯ ಜೀವ ವಿರೋಧಿ ಕಾರಕಗಳಿಂದ ಏರ್ಪಡುವ ಯಾವುದೇ ಅನಾರೋಗ್ಯ ಅಥವ ವಿಷಮ ಬದಲಾವಣೆಯನ್ನು ಸರಿಪಡಿಸಲು ದೇಹ ತನ್ನ ಸ್ವಾಭಾವಿಕ, ಸಾಧಾರಣ ಮತ್ತು ಅವಶ್ಯಕ ಪ್ರಯತ್ನವನ್ನು ಮಾಡಿದರೂ ಆ ಕಾರಕಗಳ ಪ್ರಭಾವದ ತೀವ್ರತೆಯ ಆಧಾರದ ಮೇಲೆ ವೈದ್ಯ ಮತ್ತು ಔಷಧೀಯ ಸಹಾಯದೊಂದಿಗೆ ದೇಹ ಇನ್ನೂ ಪ್ರಬಲವಾದಂತಹ ರಿಪೇರಿ ಕೆಲಸವನ್ನು ಮಾಡಬಹುದು. ಆದರೆ ದೈಹಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ ಎನ್ನಬಹುದಾದಂತಹ ದೇಹಾತೀತ ಆಯಾಮ ಮನಸ್ಸು, ದೇಹಕ್ಕೆ ಪೂರಕವಾಗಿ ಕೆಲಸ ಮಾಡಿದರೆ ಆ ಆರೋಗ್ಯಪೂರಕ ದೈಹಿಕ ವ್ಯವಸ್ಥೆಯನ್ನು ಇನ್ನೂ ಪ್ರಬಲವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಕ್ಷಮತೆಯನ್ನು ಹೆಚ್ಚಿಸಿ ಕೆಲಸ ಮಾಡಿಸುವಲ್ಲಿ ಸಹಾಯ ಮಾಡುತ್ತದೆ.

ಮನಸ್ಸನ್ನು ಸ್ಪಷ್ಟವಾಗಿ ನಾವು ಅರಿತುಕೊಳ್ಳಲು, ಅಳೆಯಲು, ನಿಯಂತ್ರಿಸಲು ಸಾಧ್ಯವಾಗದಿದ್ದರೂ, ನಮ್ಮ ಆಸೆ, ಅನಿಸಿಕೆ ಮತ್ತು ಇಚ್ಛಾಶಕ್ತಿಯ ಮೂಲಕ ಮನಸ್ಸಿಗೆ ಒಂದು ರೀತಿಯ ಅಮೂರ್ತತೆಯ ಮೂರ್ತ ರೂಪವನ್ನು ಕೊಟ್ಟು ಅದರಿಂದ ನಮ್ಮ ದೇಹದ ಪೂರಕ ಕೆಲಸವನ್ನು ಮಾಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ನಿಮಗೆ ಅತಿಯಾದ ನಿದ್ದೆ ಬಂದಿದೆ ಎಂದಿಟ್ಟುಕೊಳ್ಳೋಣ. ಇನ್ನೇನು ಕೈ ಕಾಲು ಅಲ್ಲಾಡಿಸಲು, ಕಣ್ಣು ತೆರೆಯಲೂ ಆಗದಷ್ಟು ನಿತ್ರಾಣವಾಗಿ ನಿದ್ರೆ ಆವರಿಸಿರುವಂಥ ಪರಿಸ್ಥಿತಿ ಎಂದಿಟ್ಟುಕೊಳ್ಳೋಣ. ಯಾರೇ ಕರೆದರೂ ಏಳಲಾಗದಂತಹ ದೌರ್ಬಲ್ಯಕ್ಕೆ ನಿದ್ದೆಯಿಂದ ದೇಹ ಒಳಗಾಗಿದೆ ಎಂದಿಟ್ಟುಕೊಳ್ಳೋಣ. ಏನೇ ಮಾಡಿದರೂ ನಿದ್ದೆ ಮಾಡದ ಹೊರತು ದೇಹಕ್ಕೆ ಪುನಶ್ಚೇತನ ಸಾಧ್ಯವಾಗುವುದಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ ಎಂದಿಟ್ಟುಕೊಳ್ಳೋಣ. ಆಗ ಆ ವ್ಯಕ್ತಿಗೆ ಆತನ ಅತ್ಯಂತ ಪ್ರಿಯ ವ್ಯಕ್ತಿಗೆ ಉಂಟಾಗಿರುವ ಆಘಾತಕಾರಿ ಪರಿಸ್ಥಿತಿಯ ಬಗ್ಗೆ ತುರ್ತು ಸಂದೇಶವನ್ನು ನೀಡಿದಾಗ ತಕ್ಷಣ ಆ ದೇಹದಲ್ಲಿ ಚೇತರಿಕೆ ಮೂಡಿ, ಸಂಪೂರ್ಣ ಎಚ್ಚರಿಕೆಯಾಗಿ ವ್ಯಕ್ತಿ ಯಾವುದೇ ಕಾರ್ಯಕ್ಕೆ ಸಿದ್ಧನಾಗುವುದು ಹೇಗೆ ಸಾಧ್ಯ? ನಿದ್ದೆಯ ಅವಶ್ಯಕತೆಯನ್ನು ತಕ್ಷಣವೇ ಗಂಟೆಗಟ್ಟಲೆ ಮುಂದೂಡಲಾಗುವುದು ಹೇಗೆ ಸಾಧ್ಯ? ಆ ಅದ್ಭುತ ಶಕ್ತಿ ಯಾವುದು? ಎಂಬ ಚಕಿತದೊಂದಿಗೆ ಹುಡುಕಿದರೆ ಕಾಣುವಂತಹ ವಿಸ್ಮಯಕಾರಿ ಜೀವಭೌತಿಕ ಶಕ್ತಿಯೇ ಆ ಮನೋದೈಹಿಕ ಪ್ರಕ್ರಿಯೆ. ನಮ್ಮ ಅನೇಕ ನೆಗೆಟಿವ್ ಅನ್ನಿಸಿಕೆಗಳು, ಭಾವನೆಗಳು ನಮ್ಮ ಮನಸ್ಸನ್ನು ಕುಗ್ಗಿಸಿ, ನಮ್ಮ ದೇಹವನ್ನು ನಿತ್ರಾಣಗೊಳಿಸಿ, ನಮ್ಮನ್ನು ನಿರಾಸಕ್ತರನ್ನಾಗಿಸಿ, ನಮ್ಮೊಳಗಿನ ಆರೋಗ್ಯ ಕ್ಷಮತೆಯನ್ನು ತಗ್ಗಿಸಿ ನಮ್ಮನ್ನು ಖಾಯಿಲೆ ಪೀಡಿತರನ್ನಾಗಿಸುವ ಸಾಧ್ಯತೆ ಇರುವುದರಿಂದ ಅದಕ್ಕೆ ತದ್ವಿರುದ್ಧವಾಗಿರತಕ್ಕಂತಹ ಪಾಸಿಟಿವ್ ಅನ್ನಿಸಿಕೆಗಳು, ಉಲ್ಲಾಸಕಾರಿ ಮನಸ್ಥಿತಿ, ಹಿತಾನುಭವಗಳು, ಸದಿಚ್ಛೆಗಳು, ಭವಿಷ್ಯದ ಬಗೆಗಿನ ಸಕಾರಾತ್ಮಕ ಚಿಂತನೆಗಳು ನಮ್ಮನ್ನು ಹೆಚ್ಚು ಆರೋಗ್ಯವಂತರನ್ನಾಗಿ ಮಾಡುವಲ್ಲಿ ಮತ್ತು ಅನಾರೋಗ್ಯದ ಸಂದರ್ಭದಲ್ಲೂ ನಮ್ಮ ಮನಸ್ಸು ದೇಹವನ್ನು ಗುಣಪಡಿಸುವಲ್ಲಿ ಸಹಾಯಕವಾಗುತ್ತದೆ.

ಆದ್ದರಿಂದ ಖಾಯಿಲೆ ಬಂದಾಗ ವೈದ್ಯರಲ್ಲಿಗೆ ಹೋದಾಕ್ಷಣ ಗುಣವಾಗುತ್ತದೆ ಎನ್ನುವುದರೊಂದಿಗೆ ನಿಮ್ಮ ಮನಸ್ಸಿನಲ್ಲಿಯೂ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಂಡು- ಎಂದರೆ ದ್ವೇಷ, ಅಸೂಯೆ, ಸಿಟ್ಟು, ಜಿಗುಪ್ಸೆ, ವೈರಾಗ್ಯ, - ಇವುಗಳನ್ನೆಲ್ಲ ನಿರ್ಮೂಲನೆ ಮಾಡಿ, ಮನುಷ್ಯ ಸಮಾಜಮುಖಿ, ಪ್ರಪಂಚಮುಖಿ, ಸುಖಮುಖಿ ಮತ್ತು ಭವಿಷ್ಯಮುಖಿ ಆಗಿ ದೇಹದಲ್ಲಿ ಆರೋಗ್ಯಕಾರಕ ಅಂಶಗಳು ಹೆಚ್ಚಾಗಿ ಬದುಕಿನ ದೀರ್ಘತೆ ಹೆಚ್ಚಾಗಲು ಸಾಧ್ಯ.  ಧನಾತ್ಮಕ ಗುಣಗಳಾದ ಪ್ರೀತಿ, ಬಾಂಧವ್ಯ, ಖುಷಿ, ಅಭಿಲಾಷೆ ಮುಂತಾದವುಗಳನ್ನು ಮನಸ್ಸಿನಲ್ಲೇ ಮನೆ ಮಾಡಿಸಿ ಅನ್ನಿಸಿಕೆ, ಆಸೆ ಮತ್ತು ಇಚ್ಛಾಶಕ್ತಿಗಳ ಮೂಲಕ ಮನಸ್ಸನ್ನು ಖಾಯಿಲೆಯ ಕಡೆಗೆ ಕೇಂದ್ರೀಕರಿಸಿ ಅದನ್ನು ಗುಣಪಡಿಸುವಂತೆ ಶರೀರಕ್ಕೆ ಬೆಂಬಲ ನೀಡಿ ಗುಣ ಹೊಂದಿದರೆ ಯಾವುದೇ ಅತಿಮಾನುಷ ಶಕ್ತಿ ಇರಬಹುದೆಂಬ ಗುರುವಿನ ಪ್ರಭಾವದಂತೆ ನಿಮ್ಮೊಳಗೇ ನೀವು ಯಾರ ಸಹಾಯವೂ ಇಲ್ಲದೆ ಮನೋಭೌತಿಕ ಅದ್ಭುತ ಶಕ್ತಿಯ ಪವಾಡವನ್ನು ಅನುಭವಿಸಬಹುದು.

 

 ಒಂದು ಕಮೆಂಟನ್ನು ಹಾಕಿ

ಇತ್ತೀಚಿನ ಸುದ್ದಿ

View more...


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ