ಮನಸೇ ಓ ಮನಸೇ...

Kannada News

12-08-2017

`ಮನವೊಂದು ಮರ್ಕಟ’ ಎಂದು ಪ್ರಾಜ್ಞರು ಹೇಳಿದ್ದಾರೆ. ಇದನ್ನು `ಮನಸ್ಸೊಂದು ನಮ್ಮೊಳಗಿರುವ ಮಂಗ’ ಎಂಬ ಸರಳ ಅರ್ಥದೊಂದಿಗೆ ನಮ್ಮದೇ ಮನಸ್ಸನ್ನು ಪರಿಚಯ ಮಾಡಿಕೊಳ್ಳಬಹುದು; ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳುತ್ತ ನಮ್ಮ ಭಾವನೆಗಳ ಮೂಲವನ್ನು ಹುಡುಕುತ್ತ ನಮ್ಮ ರಾಗ ದ್ವೇಷಗಳ ಸಾರವನ್ನು ಅರಸುತ್ತ ನಮ್ಮನ್ನು ನಾವು ತಿಳಿದುಕೊಳ್ಳುವ ಪ್ರಯತ್ನದ ಕಡೆ ಮೊದಲ ಹೆಜ್ಜೆಯನ್ನು ಹಾಕಬಹುದೇನೋ.

ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಇಡೀ ಮಾನವ ಜಗತ್ತಿನ ಆಗುಹೋಗುಗಳಿಗೆ ಮನಸ್ಸು ಕಾರಣವಾಗಿದ್ದರೂ ಮನಸ್ಸೆಂಬುದು ಹೇಗಿದೆ? ಅದರ ಭೌತಿಕ ಗುಣಗಳೇನು? ಅದು ಎಲ್ಲಿದೆ? ಯಾವ ಆಯಾಮದಲ್ಲಿ ವ್ಯಕ್ತವಾಗಿದೆ? ಅದರ ಇತಿ ಮಿತಿಗಳೇನು? ಅದು ಹುಟ್ಟುವಾಗ ಎಲ್ಲಿಂದ ಬರುತ್ತದೆ, ಸತ್ತ ಮೇಲೆ ಎಲ್ಲಿಗೆ ಹೋಗುತ್ತದೆ? ಎಂಬುದನ್ನು ಇಂದಿನವರೆಗೂ ಯಾವುದೇ ಮಾನವ ಸಾಧ್ಯ ಪ್ರಯೋಗಗಳಿಂದಾಗಲೀ, ಪ್ರಯತ್ನಗಳಿಂದಾಗಲೀ ದೃಢಪಡಿಸಲಾಗಿಲ್ಲ. ಜ್ಯೋತಿಷದಲಿ ಚಂದ್ರ ಮನಸ್ಸಿಗೆ ಕಾರಕನೆಂದರೂ ಆಸ್ತಿಕತೆಯಲ್ಲಿ ಭಗವಂತನೇ ಮನಸ್ಸನ್ನು ನಿಯಂತ್ರಿಸುವವನೆಂದರೂ ಮನಶ್ಶಾಸ್ತ್ರದಲ್ಲಿ, ಭಾವನೆ- ಅನುಭವಗಳೊಂದಿಗೆ ಮನುಷ್ಯನ ಅನೇಕ ಅಮೂರ್ತ ಆಯಾಮಗಳ ಸಮ್ಮಿಲನದ ಒಂದು ಅಭಿವ್ಯಕ್ತಿ ಮನಸ್ಸು ಎಂದರೂ ಭೌತಿಕವಾಗಿ ದೇಹದಲ್ಲಿ ನಡೆಯುವ ಅನೇಕ ವಿದ್ಯುನ್ಮಾನ ಮತ್ತು ರಸಾಯನ ಕ್ರಿಯೆಗಳ ಫಲಿತಾಂಶವೇ ಮನಸ್ಸು ಎಂದರೂ, ಇಂದಿನವರೆಗೆ ನಿಖರವಾಗಿ ಮನಸ್ಸು ಎಂದರೆ ಇದೇ ಎಂದು ಯಾರಿಗೂ ಹೇಳಲು ಸಾಧ್ಯವಾಗಿಲ್ಲ. ಅದರೂ ಹುಟ್ಟಿನಿಂದ ಸಾವಿನವರೆಗೆ ವ್ಯಕ್ತಿತ್ವದಿಂದ ಹಿಡಿದು ನಮ್ಮ ಜಗತ್ತನ್ನೇ ಆವರಿಸಿಕೊಳ್ಳುವ ಮನಸ್ಸು, ನಮ್ಮ ಅಸ್ತಿತ್ವದ ರೂಪವನ್ನೇ ನಿರ್ಧರಿಸುವ ಮನಸ್ಸು, ನಮ್ಮ ಸಂಬಂಧಗಳ ಜಾಲವನ್ನೇ ಸೃಷ್ಟಿಸುವ ಮನಸ್ಸು, ನಮ್ಮ ಜೀವನದ ಹಂದರವೇ ಆಗಿದ್ದರೂ ನಮಗೆ ಅಪರಿಚಿತವಾಗೇ ಉಳಿದಿರುವುದು ಒಂದು ದೊಡ್ಡ ವಿಪರ್ಯಾಸ.

ಒಂದು ವ್ಯಾಖ್ಯಾನದ ಪ್ರಕಾರ ಈ ಮನುಷ್ಯ ಜಗತ್ತನ್ನು ಮನಸ್ಸೇ ಸೃಷ್ಟಿಸಿದ್ದರೂ ನಾವು ಕಾಣುವ ರೂಪಗಳಿಗೆ, ಕೇಳುವ ಶಬ್ದಗಳಿಗೆ, ಅನುಭವಿಸುವ ವಿಷಯಗಳಿಗೆ, ಆಸ್ವಾದಿಸುವ ರಸಗಳಿಗೆಲ್ಲ ಮನಸ್ಸೇ ಅರ್ಥವನ್ನು ಕೊಟ್ಟಿದ್ದರೂ ಇವತ್ತಿನತನಕ ನಿರ್ದಿಷ್ಟವಾಗಿ ಮನಸ್ಸು ಎಲ್ಲಿದೆ, ಅದರ ಮೂಲ ಯಾವುದು ಮತ್ತು ಅದರ ಸಾಮರ್ಥ್ಯವೇನೆಂದು ಸಂಪೂರ್ಣವಾಗಿ ಯಾವ ಮನುಷ್ಯನಿಗೂ ಅರಿತುಕೊಳ್ಳಲು ಸಾಧ್ಯವಾಗಿಲ್ಲ.

ಅನಾದಿಕಾಲದಿಂದಲೂ ಮನಸ್ಸನ್ನು ಅರಿಯುವ ಪ್ರಯತ್ನವನ್ನು ಮಾಡಿಕೊಂಡು ಬಂದಿರುವ ಮನುಜ ಮನಸ್ಸನ್ನು ಅರ್ಥಮಾಡಿಕೊಳ್ಳಲಾಗದಿದ್ದರೂ ಅದನ್ನು ನಿಗ್ರಹಿಸುವ, ನಿಯಂತ್ರಿಸುವ,  ಸಾಮರ್ಥ್ಯವನ್ನು ಪಡೆಯಲು ಹೆಣಗಾಡಿರುವುದೇ ಮಾನವ ಕುಲದ ಆಧ್ಯಾತ್ಮಿಕ ಇತಿಹಾಸದ ಸಾರ. ವೇದ-ಉಪನಿಷತ್ತುಗಳಿಂದ ಆರಂಭಿಸಿ ಮಂಕುತಿಮ್ಮನ ಕಗ್ಗದವರೆಗೆ ಮನಸ್ಸಿನ ಬಗ್ಗೆ ಸಾಕಷ್ಟು ವಿವರಣೆಗಳಿವೆ. ಮಾನವನ ಸ್ಥಾನವನ್ನು ನಿರ್ಧರಿಸುವುದೇ ಆತನ ಮನಸ್ಸು ಮತ್ತು ಮನಸ್ಸಿನ ಗುಣಗಳ ಆಧಾರದ ಮೇಲೆ ಎಂಬಷ್ಟು ಮನಸ್ಸಿಗೆ ಪ್ರಾಶಸ್ತ್ಯವನ್ನು ನೀಡಲಾಗಿದೆ.

ಈ ದೇಹಕ್ಕೆ ಪಂಚಭೂತಗಳೊಂದಿಗೆ ಮಾತ್ರ ಸಂಬಂಧವಿದ್ದರೆ ಮನಸ್ಸಿಗೆ ವಿಶ್ವದೊಂದಿಗೇ ಸಂಬಂಧವಿರುವಂಥ ಆಧ್ಯಾತ್ಮಿಕ ಸತ್ಯವನ್ನು ಪ್ರತಿಪಾದಿಸಲಾಗಿದೆ. ಮಾನವ ದೇವರೊಂದಿಗೆ ಸಂಬಂಧ ಬೆಳೆಸುವುದು ಮನಸ್ಸಿನ ಮೂಲಕ ಮಾತ್ರ ಸಾಧ್ಯ ಎಂಬುದು ನಮ್ಮ ಪುರಾಣ ಮತ್ತು ಆಧ್ಯಾತ್ಮಿಕ ಪರಂಪರೆಯ ತಿರುಳು. ನಿಯಂತ್ರಣದಲ್ಲಿರದ ಮನಸ್ಸು ವ್ಯಕ್ತಿತ್ವ ಮತ್ತು ಜೀವನಕ್ಕೆ ಎಷ್ಟು ಮಾರಕ ಎಂಬ ವಿಷಯಗಳನ್ನು ಸತತವಾಗಿ ಪ್ರತಿಪಾದಿಸಿಕೊಂಡು ಬಂದಿರುವಂಥ ಮಾನವ ಕುಲ ಮನಸ್ಸನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವ, ಸದಾಚಾರದ ಇತಿಮಿತಿಗಳೊಳಗೇ ನಿಯಂತ್ರಿಸಿ ಇಡುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತ ಬಂದಿದೆ.

ಮಾನವನೆಂದರೆ ಆತನ ಮನಸ್ಸು; ಮನಸ್ಸೆಂದರೆ ಆತನ ಜಗತ್ತು ಎಂದು ವಿವರಿಸುವಷ್ಟು ಮನಸ್ಸು ಮಾನವನ ಅಸ್ತಿತ್ವದೊಂದಿಗೆ ಬೆಸೆದುಕೊಂಡಿದೆ. ಧರ್ಮ-ಅಧರ್ಮ, ಸತ್ಯ-ಅಸತ್ಯ, ಪ್ರೀತಿ-ದ್ವೇಷ, ಆಸೆ-ನಿರಾಸೆ, ದುರಾಸೆ, ಸುಖ-ದುಃಖ.. ಎಲ್ಲಾ ಭಾವನೆಗಳ, ಸ್ಥಿತಿಗಳ, ಉತ್ಕಟತೆಗಳ ಆಗರವಾಗಿರುವ ಮನಸ್ಸು ಆತನ ಪರಿಸ್ಥಿತಿ, ಗತಿಗಳ ನಿರ್ಧಾರಕವಾಗಿದೆ. ಮನಸ್ಸು ಬಾಹ್ಯ ಲೋಕದ ಸಂಬಂಧಗಳ ಮಾಧ್ಯಮ ಮಾತ್ರವಲ್ಲದೇ ಆತ್ಮದಿಂದ ಆರಂಭಿಸಿ ಭೌತಿಕ ವ್ಯಕ್ತಿತ್ವದವರೆಗೆ ಎಲ್ಲ ಅಂಶಗಳನ್ನೂ ಆಕ್ರಮಿಸಿಕೊಂಡಿದೆ. ಮನುಷ್ಯನ ದೇಹದ ಮೇಲೆ ಆತನ ಮನಸ್ಸಿನ ಪ್ರಭಾವದ ಬಗ್ಗೆ ಆಧ್ಯಾತ್ಮಿಕವಾಗಿ  ಪ್ರಸ್ತಾಪವಿದ್ದರೂ ಬಹಳ ವರ್ಷಗಳ ಕಾಲ ವೈದ್ಯರು ಅನುಮಾನಿಸಿದ್ದರೂ ಈಗಂತೂ ಅದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಮನಸ್ಸಿನ ಸಹಕಾರವಿಲ್ಲದೇ ಯಾವುದೇ ಖಾಯಿಲೆಯನ್ನು ಗುಣಪಡಿಸುವುದು ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲ ವೈದ್ಯರೂ ತಿಳಿದುಕೊಂಡಾಗಿದೆ. ಆರೋಗ್ಯಕ್ಕೆ ಪೂರಕವಾದಂತಹ ಮನಸ್ಥಿತಿಯನ್ನು ನಿರ್ಮಿಸಿಕೊಳ್ಳದಿದ್ದರೆ ಎಂತಹ ಔಷಧಿಯೂ ಫಲಿಸುವುದಿಲ್ಲ ಎಂಬ ಸತ್ಯವನ್ನು ಎಲ್ಲರೂ ಮನಗಂಡಾಗಿದೆ. ಎಂತಹ ಮಾರಣಾಂತಿಕ ಖಾಯಿಲೆಯಲ್ಲೂ ಮನಸ್ಸಿನ ಪ್ರಭಾವ ಮತ್ತು ಶಕ್ತಿಯ ಕರಾಮತ್ತು ಸಾಬೀತಾಗಿದೆ. ಒಬ್ಬ ವ್ಯಕ್ತಿಯ ಇಚ್ಛಾಶಕ್ತಿ ಆತನ ಮನಸ್ಸಿನೊಂದಿಗೆ ಇಟ್ಟುಕೊಂಡಿರುವ ಸಂಬಂಧದ ಆಧಾರದ ಮೇಲೆ ಆತನ ವ್ಯಕ್ತಿತ್ವ, ಆರೋಗ್ಯ, ಜೀವನ ಸ್ಥಿತಿ ಮತ್ತು ಜಗತ್ತೇ ನಿರ್ಧಾರಿತವಾಗುತ್ತದೆ. ಮನಸ್ಸನ್ನು ಅರಿತೇ ಮನಸ್ಸಿನೊಂದಿಗೆ ಸಂಬಂಧವನ್ನು ಬೆಳೆಸುವ ಅವಶ್ಯಕತೆ ಇಲ್ಲ. ಆದರೆ ಮನಸ್ಸಿನೊಂದಿಗೆ ಸಂಬಂಧ ಬೆಳೆಸಿ ಮನಸ್ಸಿನಿಂದ ಲಾಭವನ್ನು ಪಡೆದುಕೊಂಡು ಸುಖಜೀವನವನ್ನು ಅನುಭವಿಸುವುದಂತೂ ಸತ್ಯ. ಮನಸ್ಸು ಪೂರಕವಾಗಿದ್ದರೆ, ಮನಸ್ಸು ಹಿಡಿತದಲ್ಲಿದ್ದರೆ, ಮನಸ್ಸು ನಮ್ಮ ಜೀವನವನ್ನು ಸುಸೂತ್ರವಾಗಿಸುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದರೆ ಅಶಾಂತಿ, ಅತಂತ್ರಗಳಿಂದ ಮುಕ್ತವಾಗಿ ನೈರ್ಮಲ್ಯಯುತವಾಗಿ ಸ್ಥಿತವಾಗಿದ್ದರೆ ಅದೇ ಸುಖ ಜೀವನದ ತಳಹದಿಯಾಗುತ್ತದೆ. ಆರೋಗ್ಯದ ಮೂಲ ಚಿಲುಮೆಯಾಗುತ್ತದೆ. ಆದ್ದರಿಂದ ದೇಹದ ಆರೋಗ್ಯಕ್ಕಿಂತ ಮೊದಲು ಮನಸ್ಸಿನ ಆರೋಗ್ಯದ ಕಡೆ ಮೊದಲು ಗಮನವಹಿಸಿ.

 

 

 

 

 

 


ಸಂಬಂಧಿತ ಟ್ಯಾಗ್ಗಳು

ಮನಸೇ ಮನಸೇ... ಮನಸೇ...


ಒಂದು ಕಮೆಂಟನ್ನು ಹಾಕಿ

ಇತ್ತೀಚಿನ ಸುದ್ದಿ

View more...


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ