ಹಿಂದಿ ಹಿನ್ನೆಲೆ..!

Kannada News

12-08-2017

ಇತ್ತೀಚೆಗೆ ಹಿಂದಿ ಭಾಷೆ ಅನ್ನುವುದು ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಅದು ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿ ಹಿಂದಿ ಬಳಕೆಗೆ ವ್ಯಕ್ತವಾದ ವಿರೋಧ ಆಗಿರಬಹುದು ಅಥವ ಸರ್ಕಾರಿ ಬ್ಯಾಂಕು ಮತ್ತು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವ ಅಧಿಕಾರಿಗಳ ಕಿರಿಕಿರಿ ಇರಬಹುದು, ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಮುದ್ರಣವಾಗಿದ್ದರ ಬಗ್ಗೆ ಇರಬಹುದು ಅಥವ ಕೇಂದ್ರ ಸರ್ಕಾರ ಹಿಂದಿ ಬಳಕೆ ಬಗ್ಗೆ ತೋರುತ್ತಿರುವ ಅತಿ ಉತ್ಸಾಹವೇ ಇರಬಹುದು, ಒಟ್ಟಿನಲ್ಲಿ ಕನ್ನಡಿಗರಲ್ಲಿ ಮತ್ತು ಒಂದುಮಟ್ಟಿಗೆ ಇಡೀ ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಹಿಂದಿ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.

ಈ ಸಂದರ್ಭದಲ್ಲಿ ಹಿಂದಿ ಭಾಷೆ, ಅದರ ಇತಿಹಾಸ, ಸಾಹಿತ್ಯ, ವ್ಯಾಪಕತೆ ಮತ್ತು ಮಹತ್ವದ ಬಗ್ಗೆ ಸ್ಪೆಷಲ್ ರಿಪೋರ್ಟರ್ ನಿಂದ ಒಂದು ವಿಶೇಷ ವರದಿ.

ಭಾರತ ಹಲವು ಭಾಷೆಗಳ ದೇಶ. ಭಾರತದ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ, ಒಟ್ಟಾರೆ 22 ಅಧಿಕೃತ ಭಾಷೆಗಳಿವೆ. ಇವಲ್ಲದೆ ದೇಶದಲ್ಲಿ 1600ಕ್ಕೂ ಹೆಚ್ಚು ಉಪಭಾಷೆಗಳಿವೆ. ಭಾರತದ ಸಂವಿಧಾನ ಯಾವುದೇ ಭಾಷೆಯನ್ನು ಭಾರತದ ರಾಷ್ಟ್ರಭಾಷೆ ಎಂದು ಗುರುತಿಸಿಲ್ಲ, ಹೀಗಾಗಿ ಹಿಂದಿ, ಭಾರತದ ರಾಷ್ಟ್ರ ಭಾಷೆಯಲ್ಲ. ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಇಲ್ಲ. ಈ ಬಗ್ಗೆ ಸರಿಯಾಗಿ ಗೊತ್ತಿಲ್ಲದ ಕೆಲವರು ಅದನ್ನು ಹಿಂದಿಯನ್ನು ರಾಷ್ಟ್ರಭಾಷೆ ಎಂದು ತಪ್ಪಾಗಿ ಹೇಳುತ್ತಾರೆ. ಹಿಂದಿ ಭಾಷೆ, ಇಂಗ್ಲಿಷ್ ಜೊತೆಗೆ ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆ. ಆಡಳಿತ ಭಾಷೆಯೆಂದರೆ, ಸರ್ಕಾರ ತನ್ನ ವ್ಯವಹಾರಗಳಲ್ಲಿ ಬಳಸುವ ಭಾಷೆ. ರಾಷ್ಟ್ರಭಾಷೆಯೆಂದರೆ, ಅದು ಒಂದು ದೇಶದ ರಾಷ್ಟ್ರೀಯತೆಯನ್ನೇ ಬಿಂಬಿಸುವ ಭಾಷೆ.

ಹಿಂದಿ, ಆಧುನಿಕ ಇಂಡೋ ಆರ್ಯನ್ ಭಾಷೆ. ಹಿಂದಿ ಅನ್ನುವುದು ನೇರವಾಗಿ ಸಂಸ್ಕೃತದಿಂದಲೇ ಹುಟ್ಟಿದ ಭಾಷೆ. ಸಂಸ್ಕೃತ ಭಾಷೆ, ಇವತ್ತು ಭಾರತದಲ್ಲಿ ಅಸ್ತಿತ್ವದಲ್ಲಿರುವ ಹಲವು ಭಾಷೆಗಳ ಉದಯಕ್ಕೆ ಕಾರಣವಾಗಿದೆ. ಹಿಂದಿಯನ್ನು ಜಗತ್ತಿನ ಲಿಪಿ ವ್ಯವಸ್ಥೆಯಲ್ಲೇ ಅತ್ಯಂತ ವೈಜ್ಞಾನಿಕವಾದದ್ದು ಎಂದು ಹೇಳಲಾಗುವ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಹಿಂದಿ ಭಾಷೆಗೆ, ಸಾಕಷ್ಟು ಆಧುನಿಕ ಚರಿತ್ರೆಯೂ ಇದೆ.

ಭಾರತದ ವಾಯುವ್ಯ ಭಾಗದಲ್ಲಿ ನೆಲೆಸಿದ್ದ ಆರ್ಯನ್ನರು ಬಳಸುತ್ತಿದ್ದ ಈ ಭಾಷೆ, ಸಂಸ್ಕೃತ ಮೂಲದಿಂದ ಉತ್ಪತ್ತಿಯಾಗಿ ಪ್ರಾಕೃತ ಮತ್ತು ಅಪಭ್ರಂಶಗಳಾಗಿ ಹಲವಾರು ಹಂತಗಳಲ್ಲಿ ವಿಕಸನ ಹೊಂದುತ್ತಾ ಬಂದಿದೆ. ಹಿಂದಿ ಭಾಷೆ, ಒಂದು ಫೊನೆಟಿಕ್ ಭಾಷೆ, ಅಂದರೆ ಹೇಗೆ ಬರೆಯುತ್ತೇವೋ ಅದೇ ರೀತಿಯಲ್ಲಿ ಮಾತನಾಡಬಹುದಾದ ಅಥವ ಓದಬಹುದಾದ ಭಾಷೆ. ಯುರೋಪಿಯನ್ ಭಾಷೆಗಳಂತೆ ಎಡದಿಂದ ಬಲಕ್ಕೆ ಬರೆಯುವ ಭಾಷೆ.  ಹಿಂದಿ ಅನ್ನುವುದು ಪರ್ಶಿಯನ್ ಪದ ಹಿಂದ್ ಅನ್ನುವುದರಿಂದ ಹುಟ್ಟಿದೆಯಂತೆ. ಹಿಂದ್ ಅಂದರೆ ಸಿಂಧೂ ನದಿಯ ದೇಶ ಎಂದು ಅರ್ಥ.

ಕ್ರಿಸ್ತಶಕ ಏಳನೇ ಶತಮಾನದಲ್ಲಿ ಹಿಂದಿ ಭಾಷೆ, ಸಂಸ್ಕೃತದ ಅಪಭ್ರಂಶ ಅಂದರೆ, ಶಿಷ್ಟ ಭಾಷೆಯ ಸ್ವರೂಪಕ್ಕೆ ಭಿನ್ನವಾದ ರೀತಿಯ ಭಾಷೆಯಾಗಿ ರೂಪುಗೊಳ್ಳುತ್ತಾ ಹೋಯಿತು. ಕ್ರಿಸ್ತಶಕ 4ನೇ ಶತಮಾನದಲ್ಲಿ ಕಾಳಿದಾಸನ ವಿಕ್ರಮೋರ್ವಶೀಯದಲ್ಲಿ ಅಪಭ್ರಂಶ ಕಾಣಿಸಿಕೊಂಡಿತು. ನಂತರ ಐದನೇ ಶತಮಾನದ ಮಧ್ಯಭಾಗದಲ್ಲಿ ಧರಾಸೇನನ ವಲ್ಲಭಿ ಶಾಸನದಲ್ಲೂ ಅಪಭ್ರಂಶ ಸಾಹಿತ್ಯ ಕಂಡುಬರುತ್ತದೆ. ಏಳನೇ ಶತಮಾನದಲ್ಲಿ ಉದ್ಯೋತನ್ ಸೂರಿಯ ಕುವಲಯಮಾಲದಲ್ಲಿ ಹಿಂದಿ ಭಾಷೆಯ ಪ್ರಸ್ತಾಪ ಇದೆ.

ಹತ್ತನೇ ಶತಮಾನದ ಸುಮಾರಿಗೆ ಹಿಂದಿ ಭಾಷೆ, ಒಂದು ಸೂಕ್ತ ಮತ್ತು ಸ್ಥಿರವಾದ ರೂಪ ಪಡೆದಿತ್ತು. ಹಿಂದಿಯ ಉಪಭಾಷೆಗಳಲ್ಲಿ ಬ್ರಜ್ ಭಾಷೆ ತುಂಬಾ ಜನಪ್ರಿಯವಾಗಿತ್ತು, ಆನಂತರ, ಅದರ ಸ್ಥಾನವನ್ನು ಖಡೀಬೋಲಿ ಆಕ್ರಮಿಸಿಕೊಂಡಿತ್ತು. ಕ್ರಿಸ್ತಶಕ ಏಳುನೂರ ಅರವತ್ತೊಂಬತ್ತರಲ್ಲಿ  ಸಿದ್ಧ ಸರಹ್ಪಾದ ನೆಂಬ ಸಂತ, ಸಿದ್ಧ ದೋಹ ಕೋಶ ರಚಿಸುತ್ತಾನೆ, ಇವನನ್ನು ಮೊದಲ ಹಿಂದಿ ಕವಿ ಎಂದು ಕರೆಯಲಾಗುತ್ತದೆ. ಕ್ರಿ.ಶ 933ರಲ್ಲಿ ರಚನೆಯಾದ ದೇವಸೇನನ ‘ಶ್ರಾವಕಾಚಾರವನ್ನು’ ಹಿಂದಿಯ ಮೊದಲ ಪುಸ್ತಕವೆಂದು ಹೇಳಲಾಗುತ್ತದೆ. ಕ್ರಿಸ್ತಶಕ ಹನ್ನೊಂದು ಮತ್ತು ಹನ್ನೆರಡನೇ ಶತಮಾನದ ನಡುವೆ ಹೇಮಚಂದ್ರನು ಅಪಭ್ರಂಶ ವ್ಯಾಕರಣದ ಬಗ್ಗೆ ಬರೆದಿದ್ದಾನೆ. ಆನಂತರ ಕ್ರಮೇಣವಾಗಿ ಅಪಭ್ರಂಶ ಕಡಿಮೆಯಾಗಿ ಆಧುನಿಕ ಹಿಂದಿ ಬೆಳೆದು ಬಂತು. ಕ್ರಿಸ್ತಶಕ 1283ರಲ್ಲಿ ಖುಸ್ರೋನ ಪಹೇಲಿಗಳು ಮತ್ತು ಮುಖಾರಿಗಳಲ್ಲಿ ಹಿಂದವಿ ಅನ್ನುವ ಪದ ಬಳಕೆ ಕಂಡುಬರುತ್ತದೆ. ಕ್ರಿ.ಶ 1398 ರಿಂದ 1518ರ ನಡುವೆ ಕಬೀರ್ ದಾಸರ ಹಿಂದಿ ಕೃತಿಗಳು ನಿರ್ಗುಣ ಭಕ್ತಿ ಸಾರುತ್ತವೆ. ಕ್ರಿ.ಶ 1370ರಲ್ಲಿ ಅಸಾಹತನ ಹಂಸಾವಳಿ, ಪ್ರೇಮ ಕಾವ್ಯ ಅಭಿವ್ಯಕ್ತಿಗೊಳಿಸುತ್ತದೆ. ನಂತರ ಹದಿನಾಲ್ಕನೇ ಶತಮಾನದ ಮಧ್ಯಭಾಗದಲ್ಲಿ ಸಂತ ರಮಾನಂದರ ಸಗುಣ ಭಕ್ತಿ ಪರಂಪರೆ ಆರಂಭವಾದರೆ, ಕ್ರಿಸ್ತಶಕ 1580ರ ಸುಮಾರಿನಲ್ಲಿ ಪ್ರಾಚೀನ ದಖಿನಿಯಲ್ಲಿ ಕಲ್ಮಿತುಲ್ ಹಕಾಯತ್ ಕಾವ್ಯವನ್ನು ಬುರ್ಹಾನುದ್ದೀನ್ ಜಾನಮ್ ಬರೆಯುತ್ತಾನೆ.

ಕ್ರಿ.ಶ 1585ರಲ್ಲಿ ನಭದಾಸನ ಭಕ್ತಮಾಲ ಕೃತಿ ಹೊರಬರುತ್ತದೆ. ಕ್ರಿ.ಶ 1601ರಲ್ಲಿ ಬನಾರಸಿ ದಾಸನ ‘ಅರ್ಧ ಕಥಾನಕ’, ಹಿಂದಿಯಲ್ಲಿ ಬರೆದ ಮೊದಲ ಆತ್ಮಕಥೆ ಅನ್ನಿಸಿಕೊಳ್ಳುತ್ತದೆ. ಕ್ರಿಸ್ತಶಕ 1604ರಲ್ಲಿ ಗುರು ಅರ್ಜುನ್ ದೇವರ ಆದಿ ಗ್ರಂಥ, ಹಲವು ಕವಿಗಳ ಕೃತಿಗಳ ಸಂಪಾದನ ಗ್ರಂಥವಾಗಿ ಪ್ರಕಟವಾಗುತ್ತದೆ. ಸುಮಾರು ಹದಿನೈದು ಹದಿನಾರನೇ ಶತಮಾನದಲ್ಲಿ ತುಳಸಿದಾಸರು ಹಿಂದಿಯಲ್ಲಿ ರಾಮಚರಿತ ಮಾನಸ ಬರೆಯುತ್ತಾರೆ.

ಮೊಘಲರು ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ದೆಹಲಿ ಮತ್ತು ಮೀರತ್ ಪ್ರದೇಶದಲ್ಲಿ ಹಿಂದೂಸ್ತಾನಿ ಭಾಷೆ ಬಳಕೆ ಆರಂಭವಾಗುತ್ತದೆ. ಇದು, ಮುಸ್ಲಿಂ ಆಡಳಿತಗಾರರ ಏಕಸ್ವಾಮ್ಯಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಆಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಅಮೀರ್ ಖುಸ್ರೊ, ಕಬೀರ್, ದಾದು, ಅಕ್ಬರನ ಆಸ್ಥಾನ ಕವಿ ರಹೀಮ್ ಕಾಲದಲ್ಲಿ ಹಿಂದಿಯ ಜನಪ್ರಿಯತೆ ಹೆಚ್ಚಾಗುತ್ತದೆ.

ಆನಂತರ ಬ್ರಿಟಿಷರ ಆಡಳಿತ ಕಾಲದಲ್ಲಿ, ಒಂದೇ ರೀತಿಯಾಗಿದ್ದ ಹಲವು ಉಪಭಾಷೆಗಳನ್ನು ಒಗ್ಗೂಡಿಸಿ ಅದನ್ನು ಹಿಂದೂಸ್ತಾನಿ ಎಂದು ಕರೆಯಲಾಯಿತು. ಹಿಂದೂಸ್ತಾನಿ ಭಾಷೆಯಾಗಿ ಬೆಳೆದ ಹಿಂದಿ, ದೇಶದ ಅಧಿಕೃತ ಭಾಷೆ ಆಗಿತ್ತು. ಕ್ರಿಸ್ತಶಕ 1796ರಲ್ಲಿ ಮೊದಲ ಬಾರಿ ದೇವನಾಗರಿ ಲಿಪಿಯಲ್ಲಿ ಹಿಂದಿ ಭಾಷೆಯ ಅಚ್ಚುಮೊಳೆ ಆಧಾರಿತ ಮುದ್ರಣ ಆರಂಭವಾಯಿತು. ಕೊಲ್ಕತ್ತಾದಿಂದ ಜಾನ್ ಗಿಲ್ಕ್ರಿಸ್ಟ್ ನ “Grammar of the Hindoostanee Language” ಪ್ರಕಟವಾಯಿತು. 1805ರಲ್ಲಿ ಲಲ್ಲೂ ಲಾಲ್ ಅವರ ಪ್ರೇಮ್ ಸಾಗರ್ ಕೃತಿಯನ್ನು ಕೊಲ್ಕತ್ತಾದ ಫೋರ್ಟ್ ವಿಲಿಯಮ್ ಕಾಲೇಜಿನವರು ಪ್ರಕಟಿಸಿದರು.

ಕ್ರಿಸ್ತಶಕ 1826ರಲ್ಲಿ ‘ಉದಂತ ಮಾರ್ತಾಂಡ’ ಎಂಬ ಹೆಸರಿನ ಹಿಂದಿ ವಾರ ಪತ್ರಿಕೆ ಕೊಲ್ಕತ್ತಾದಲ್ಲಿ ಆರಂಭವಾಯಿತು. 1839 ರಿಂದ 1847ರ ನಡುವೆ Garcin de Tassy ಅನ್ನುವವರು " History of Hindi Literature&quot" ಎಂಬ ಗ್ರಂಥವನ್ನು ಫ್ರೆಂಚ್ ಭಾಷೆಯಲ್ಲಿ ರಚಿಸುತ್ತಾರೆ.

1854ರಲ್ಲಿ ಕೊಲ್ಕತ್ತಾದಿಂದಲೇ ‘ಸಮಾಚಾರ್ ಸುಧಾವರ್ಷನ್’ ಎಂಬ ಹಿಂದಿ ದಿನಪತ್ರಿಕೆ ಆರಂಭವಾಗುತ್ತದೆ. 1873ರಲ್ಲಿ ಮಹೇಂದ್ರ ಭಟ್ಟಾಚಾರ್ಯರ ‘ಪದಾರ್ಥ ವಿಜ್ಞಾನ’ ಎಂಬ ರಸಾಯನ ಶಾಸ್ತ್ರದ ಪುಸ್ತಕ, ಹಿಂದಿಯಲ್ಲಿ ಮುದ್ರಣವಾಗುತ್ತದೆ. ‘ಜೈ ಜಗದೀಶ್ ಹರೇ’ ಎಂಬ ಪ್ರಖ್ಯಾತ ಗೀತೆಯನ್ನು ಬರೆದ ಕವಿ ಶ್ರದ್ಧಾರಾಮ್ ಫಿಲ್ಲೌರಿ ಅವರ ಭಾಗ್ಯವತಿ ಕಾದಂಬರಿ ಪ್ರಕಟವಾಗುತ್ತದೆ. 1886ರಿಂದ ಆಧುನಿಕ ಹಿಂದಿ ಸಾಹಿತ್ಯದಲ್ಲಿ ಭರತೇಂದು ಯುಗ ಆರಂಭವಾಗುತ್ತದೆ. 1900ರಿಂದ ದ್ವಿವೇದಿ ಯುಗ ಆರಂಭ. 1913ರಲ್ಲಿ ದಾದಾ ಸಾಹೇಬ್ ಫಾಲ್ಕೆ ಅವರು, ಮೊದಲ ಹಿಂದಿ ಚಿತ್ರ ‘ರಾಜಾ ಹರಿಶ್ಚಂದ್ರ’ವನ್ನು ನಿರ್ಮಿಸುತ್ತಾರೆ.

1918 ರಿಂದ 1938 ವರೆಗಿನ ಹಿಂದಿಯನ್ನು ಛಾಯಾವಾದದ ಕಾಲ ಎಂದು ಕರೆಯುತ್ತಾರೆ. 1918ರಲ್ಲಿ ಮಹಾತ್ಮ ಗಾಂಧಿಯವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸ್ಥಾಪಿಸುತ್ತಾರೆ.  1929ರಲ್ಲಿ ರಾಮಚಂದ್ರ ಶುಕ್ಲ ಅವರ " History of Hindi Literature" ಪ್ರಕಟವಾಗುತ್ತದೆ. 1930ರ ಸುಮಾರಿನಲ್ಲಿ ಶೈಲೇಂದ್ರ ಮೆಹ್ತಾ ಅವರು ಹಿಂದಿ ಟೈಪ್ ರೈಟರ್ ಗಳನ್ನು ತಯಾರಿಸುತ್ತಾರೆ. 1931ರಲ್ಲಿ ಮೊದಲ ಹಿಂದಿ ವಾಕ್ ಚಿತ್ರ ‘ಆಲಮ್ ಆರ’ ತೆರೆಕಾಣುತ್ತದೆ.

ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರ, ಹಿಂದಿಯ ವ್ಯಾಕರಣವನ್ನು ಪ್ರಮಾಣೀಕರಿಸಿ ಮಾನಕ್ ಹಿಂದಿಯಾಗಿ ರೂಪಿಸಿತು. ಪ್ರತಿವರ್ಷ ಸೆಪ್ಟಂಬರ್ 14ನ್ನು ದೇಶಾದ್ಯಂತ ಹಿಂದಿ ದಿವಸವೆಂದು ಆಚರಿಸಲಾಗುತ್ತದೆ. 1949ರ ಈ ದಿನ, ಹಿಂದಿಯನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆ ಎಂದು ಘೋಷಿಸಿದ ದಿವಸ.  ಭಾರತ ಮತ್ತು ಪಾಕಿಸ್ತಾನಗಳು ಪ್ರತ್ಯೇಕ ರಾಷ್ಟ್ರಗಳಾದಾಗ, ಹಿಂದಿ ಮತ್ತು ಉರ್ದು ಭಾಷೆಗಳು ಅಧಿಕೃತವಾದವು. ಆದರೆ, ಈ ಹಿಂದಿ ಮತ್ತು ಉರ್ದು ಎರಡೂ ಭಾಷೆಗಳೂ ಕೂಡ ಹಿಂದೂಸ್ತಾನಿ ಎಂದು ಕರೆಯಲ್ಪಡುವ ಭಾಷೆಯೇ. ಇವೆರಡರ ನಡುವೆ ಕೇವಲ ರಾಜಕೀಯ ವ್ಯತ್ಯಾಸ ಉಂಟೇ ಹೊರತು ಬೇರೆ ಹೆಚ್ಚೇನೂ ಇಲ್ಲ. ಹಿಂದಿ ಭಾಷೆ ದೇವನಾಗರಿ ಲಿಪಿ ಬಳಸಿದರೆ, ಉರ್ದು ಭಾಷೆ ಪರ್ಷಿಯನ್ ಲಿಪಿಯನ್ನು ಬಳಸುತ್ತದೆ. ಮಾರ್ವಾಡಿ, ಬುಂದೇಲಿ, ಕನೂಜಿ, ಬಾಘೇಲಿ, ಔಧ್, ಭೋಜ್ಪುರಿ ಇತ್ಯಾದಿಗಳು ಹಿಂದಿಯ ಉಪಭಾಷೆಗಳಾಗಿವೆ. ಪಂಜಾಬಿ ಮತ್ತು ಮೈಥಿಲಿ ಭಾಷೆಗಳನ್ನು ಕೆಲವೊಮ್ಮೆ ಸ್ವತಂತ್ರ ಭಾಷೆಗಳು ಎಂದರೆ ಮತ್ತೆ ಕೆಲವೊಮ್ಮೆ ಹಿಂದಿಯ ಉಪಭಾಷೆಗಳು ಎಂದು ಕರೆಯಲಾಗುತ್ತದೆ.

ಹಿಂದಿ ಭಾಷೆಯನ್ನು ಹಿಂದವಿ, ಹಿಂದೂಸ್ತಾನಿ ಮತ್ತು ಖಡೀಬೋಲಿ ಎಂದೂ ಕೂಡ ಕರೆಯಲಾಗುತ್ತದೆ. ಖಡೀಬೋಲಿ ಅಂದರೆ ಶಿಷ್ಟ ಹಿಂದಿ ಭಾಷೆ ಎಂದು ಅರ್ಥ. ಹಿಂದಿ ಭಾಷೆಯ ಮೇಲೆ ದ್ರಾವಿಡ ಭಾಷೆಗಳು, ಪಾರ್ಸಿ, ತುರ್ಕಿ, ಅರಬ್ಬಿ, ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆಗಳ ಪ್ರಭಾವ ಆಗಿದೆ.

1965ರಲ್ಲಿ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಆರಂಭವಾದ ನಂತರ, ಈವರೆಗೆ ಹಿಂದಿಯ ಹತ್ತು ಜನ ಸಾಹಿತಿಗಳಿಗೆ ‘ಜ್ಞಾನ ಪೀಠ’ ಪ್ರಶಸ್ತಿಗಳು ಸಂದಿವೆ.  ಹಿಂದಿ ಒಂದು ಭಾವ ಪೂರ್ಣ ಅಭಿವ್ಯಕ್ತಿಯ ಭಾಷೆ. ಕಾವ್ಯ ಮತ್ತು ಗೀತೆಗಳಲ್ಲಿ ಸರಳ ಹಿಂದಿ ಶಬ್ದಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ. ನಿಖರ ಮತ್ತು ತಾರ್ಕಿಕ ವಾದ ಮಂಡನೆಗೂ ಹಿಂದಿ ಸಮರ್ಥವಾಗಿದೆ. 1997ರ ಒಂದು ಸಮೀಕ್ಷೆ ಪ್ರಕಾರ ಭಾರತದ ಜನಸಂಖ್ಯೆಯ ಶೇ 66ರಷ್ಟು ಜನರು ಹಿಂದಿ ಭಾಷೆಯಲ್ಲಿ ಮಾತನಾಡಬಲ್ಲರು.  ಹಿಂದಿ ಭಾಷೆ, ದೆಹಲಿ, ಹರಿಯಾಣ, ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಛತ್ತೀಸ್ ಘಡ, ಜಾರ್ಖಂಡ್ ಮತ್ತು ರಾಜಸ್ಥಾನಗಳ ಅಧಿಕೃತ ಭಾಷೆ.

ಮುಂಬೈ, ಹೈದರಾಬಾದ್, ಬೆಂಗಳೂರು, ಕೊಲ್ಕತ್ತಾಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಹಿಂದಿ ಮಾತನಾಡುವವರಿದ್ದಾರೆ. ಅಮೆರಿಕದಲ್ಲಿ ಸುಮಾರು ಒಂದು ಲಕ್ಷ ಹಿಂದಿ ಭಾಷಿಕರಿದ್ದಾರೆ, ಮಾರಿಷಿಯಸ್ ದೇಶದಲ್ಲಿ ಏಳು ಲಕ್ಷ, ದಕ್ಷಿಣ ಆಫ್ರಿಕದಲ್ಲಿ ಸುಮಾರು 9 ಲಕ್ಷ, ಯೆಮನ್ ದೇಶದಲ್ಲಿ ಒಂದೂವರೆ ಲಕ್ಷ, ನ್ಯೂಜಿಲೆಂಡ್ ನಲ್ಲಿ 20 ಸಾವಿರ, ಜರ್ಮನಿಯಲ್ಲಿ ಮೂವತ್ತು ಸಾವಿರ, ನೇಪಾಳದಲ್ಲಿ ಎಂಬತ್ತು ಲಕ್ಷ ಜನರು ಹಿಂದಿ ಮಾತನಾಡುತ್ತಾರೆ. ಸುರಿನಾಮ್, ಫಿಜಿ, ಟ್ರಿನಿಡಾಡ್ ಮತ್ತು ಟೊಬ್ಯಾಗೊದಲ್ಲೂ ಹಿಂದಿ ಭಾಷೆ ಬಳಸುತ್ತಾರೆ. ಬಾಲಿವುಡ್ಡಿನಲ್ಲಿ ಬಳಸುವ ಹಿಂದಿಯನ್ನು ಬಂಬೈಯ್ಯಾ ಹಿಂದಿ ಅಥವ ‘ಬಾಂಬೆ ಬಾತ್’ ಅನ್ನುತ್ತಾರೆ, ಅದು ಮರಾಠಿ ಭಾಷೆಯ ಗಾಢ ಪ್ರಭಾವ ಹೊಂದಿದೆ. ಬಂಬೈಯ್ಯಾ ಹಿಂದಿ ಅಥವ ಮುಂಬೈ ಹಿಂದಿ ಅನ್ನುವುದು ನಾನಾ ಭಾಷೆಗಳ ಮಿಶ್ರಣವಾಗಿದೆ. ಚೀನಾದ Mandarin ಭಾಷೆಯನ್ನು ಐವತ್ತೇಳು ಕೋಟಿ ಮೂಲಭಾಷಿಕರು ಮತ್ತು ಒಟ್ಟಾರೆಯಾಗಿ ನೂರಮುವತ್ತು ಕೋಟಿ ಜನರು ಮಾತನಾಡಿದರೆ, ಹಿಂದಿಯಲ್ಲಿ ಸುಮಾರು 57 ಕೋಟಿ ಮೂಲಭಾಷಿಕರಿದ್ದು, ಇಡೀ ಜಗತ್ತಿನಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಸುಮಾರು 97 ಕೋಟಿ ಎಂದು ಹೇಳಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕ್ರಾಂತಿಯಿಂದ ಜಾಗತಿಕ ಮಾರುಕಟ್ಟೆಗೆ ಭಾರತೀಯರ ಪ್ರವೇಶ ಆಗುತ್ತಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಹಿಂದಿ ಭಾಷೆ ಹಬ್ಬುತ್ತಿದೆ.  ಇವತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಮೂಲವಾಗಿರುವ ಆರೆಸ್ಸೆಸ್‌ ಅಥವ ರಾಷ್ಟ್ರೀಯ ಸ್ವಯಂ ಸೇವಾ ಸಂಘದವರಿಗೂ ಹಿಂದಿ ಬಗ್ಗೆ ಅಪಾರ ಮಮತೆ. ಆರೆಸ್ಸೆಸ್ ನವರು ಹಿಂದಿ ಭಾಷೆ, ಇಡೀ ದೇಶವನ್ನು ಒಗ್ಗೂಡಿಸುವ ಭಾಷೆ ಎಂದು ಬಣ್ಣಿಸುತ್ತಾರೆ. ಹಿಂದಿ ಭಾರತದ ಶಕ್ತಿ ಎಂದು ಹೇಳುತ್ತಾರೆ. ಮಹಾತ್ಮಗಾಂಧಿಯವರೂ ಕೂಡ, ಹಿಂದಿಯನ್ನು ಭಾರತದ ರಾಷ್ಟ್ರಭಾಷೆಯಾಗಿ ಮಾಡಬೇಕು ಎಂಬ ಅಭಿಪ್ರಾಯ ಹೊಂದಿದ್ದರಂತೆ. ಅವರೂ ಕೂಡ ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುತ್ತದೆ ಎಂಬ ಅಭಿಪ್ರಾಯ ಹೊಂದಿದ್ದರಂತೆ. ಭಾರತದ ಎಲ್ಲಾ ಭಾಗಗಳಿಂದ ಭಾರತೀಯ ಸೇನೆ ಸೇರುವ ಯೋಧರಿಗೆ ಮಾತನಾಡುವ ಮಟ್ಟಿಗೆ ಹಿಂದಿ ಕಲಿಸಲಾಗುತ್ತದೆ. ಜಗತ್ತಿನ ಇತರೆ ಭಾಗಗಳಲ್ಲಿ ನೆಲೆಸಿರುವ ಭಾರತೀಯರಿಗೂ ಹಿಂದಿ ಒಂದು ಲಿಂಕ್ ಭಾಷೆ ಆಗಿದೆ. ಒಟ್ಟಿನಲ್ಲಿ ಭಾರತದ ಪ್ರಮುಖ ಭಾಷೆಗಳಲ್ಲಿ ತೀರಾ ಇತ್ತೀಚಿನದಾಗಿದ್ದರೂ ಕೂಡ, ಹಿಂದಿ ಭಾಷೆ ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ. ಹಿಂದಿ ಒಂದು ಭಾಷೆಯಾಗಿ ಬೆಳೆಯುವುದಕ್ಕೆ ಯಾರದೇ ಆಕ್ಷೇಪಣೆಯಿಲ್ಲ, ಆದರೆ ಅದರಿಂದ, ಹಿಂದಿಯೇತರ ಭಾಷೆಗಳ ಅಸ್ತಿತ್ವಕ್ಕೆ ಧಕ್ಕೆ ಆಗಬಾರದು ಅಷ್ಟೇ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಹಿಂದಿಯನ್ನು ಮಾತನಾಡಲು ಕಲಿಯುವುದು...?
  • Sharanayya hiremath
  • Singer
ಸುದ್ದಿಗಾಗಿ
  • ಸರೋಜ ಎಂ.ಎಸ್
  • ಉಪನ್ಯಾಸಕಿ
ಒಂದು ಉತ್ತಮ ಮಾಹಿತಿಯನ್ನು ತಿಳಿದು ಕೊಂಡಿದ್ದೆನೇ ಹಿಂದಿ ಆಡಳಿತ ಭಾಷೆ ಅಲ್ಲ ಅನ್ನೂದು ಅರ್ಥ ಆಗಿರುತ್ತದೆ ಹಿಂದಿ ಮಾತಾನಾಡಲು ಬೇಕಾಗೀರುವoದ್ದು ಅಷ್ಟೆ
  • ಗುರುಮೂರ್ತಿ
  • ಉಪನ್ಯಾಸಕ
ಒಂದು ಉತ್ತಮ ಮಾಹಿತಿಯನ್ನು ತಿಳಿದು ಕೊಂಡಿದ್ದೆನೇ ಹಿಂದಿ ಆಡಳಿತ ಭಾಷೆ ಅಲ್ಲ ಅನ್ನೂದು ಅರ್ಥ ಆಗಿರುತ್ತದೆ ಹಿಂದಿ ಮಾತಾನಾಡಲು ಬೇಕಾಗೀರುವoದ್ದು ಅಷ್ಟೆ
  • ಗುರುಮೂರ್ತಿ
  • ಉಪನ್ಯಾಸಕ