ನೋಟು ರದ್ದತಿ ಎಡವಟ್ಟು..!

Kannada News

12-08-2017 1096

2016ರ ನವೆಂಬರ್ ತಿಂಗಳ 8ರಂದು ಕೇಂದ್ರ ಸಚಿವ ಸಂಪುಟ ಸಭೆ ಮುಗಿಸಿ ಹೊರಬಂದ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಇಂದು ರಾತ್ರಿ ಹನ್ನೆರಡು ಗಂಟೆಯ ನಂತರ ಹಳೆಯ ಐದುನೂರು ಮತ್ತು ಒಂದು ಸಾವಿರ ರೂಪಾಯಿಗಳು ಮೌಲ್ಯಕಳೆದುಕೊಳ್ಳುತ್ತವೆ, ಅವೆಲ್ಲಾ ಕೇವಲ ಕಾಗದ ಚೂರುಗಳಾಗಿಬಿಡುತ್ತವೆ ಎಂದು ಘೋಷಿಸಿದ್ದರು. ಮೋದಿ ಅವರ ಭಾಷಣ ಮುಗಿಯುವ ಮುನ್ನವೇ ಎಟಿಎಮ್ ಗಳ ಮುಂದೆ ಉದ್ದದ ಕ್ಯೂಗಳಿದ್ದವು. ಮನೆಯಲ್ಲಿ ದೊಡ್ಡ ಮೊತ್ತದ ನಗದು ಶೇಖರಿಸಿಟ್ಟಿದ್ದವರು, ಸಾಧ್ಯವಾದಷ್ಟೂ ದುಡ್ಡನ್ನು ಚೀಲಗಳಲ್ಲಿ ತುಂಬಿಕೊಂಡು, ಒಡವೆ ಅಂಗಡಿಗಳಿಗೆ ನುಗ್ಗಿದ್ದರು. ಅಂದು ಮಧ್ಯರಾತ್ರಿಯವರೆಗೂ ಭರ್ಜರಿ ವ್ಯಾಪಾರ ನಡೆದಿತ್ತು. ಮನೆಯಲ್ಲಿದ್ದ ಸಾಮಾನ್ಯ ಜನರು, ನಾಳೆ ಬೆಳಗ್ಗೆ ಖರ್ಚಿಗೆ ಏನು ಮಾಡುವುದು? ಸಾವಿರ ರೂಪಾಯಿಯ ಇದೊಂದು ನೋಟನ್ನು ಬಿಟ್ಟರೆ, ನೂರು, ಐವತ್ತರ ಒಂದು ನೋಟೂ ಇಲ್ಲವಲ್ಲಾ ಎಂದು ಚಿಂತೆ ಮಾಡುತ್ತಲೇ ಬೆಳಕು ಹರಿಸಿದರು. ಮರುದಿನ ಶುರುವಾಯಿತು ನೋಡಿ, ಎಲ್ಲಾ ಬ್ಯಾಂಕುಗಳ ಮುಂದೆಯೂ ನೋಟು ಬದಲಾಯಿಸಲು ಮೈಲುಗಟ್ಟಲೆ ಕ್ಯೂಗಳು, ನೂಕಾಟಗಳು, ಜಗಳಗಳು. ಸುಮಾರು ಮೂರು ತಿಂಗಳವರೆಗೂ ದೇಶದಲ್ಲಿ ಎಲ್ಲಿ ನೋಡಿದರೂ  ಇದೇ ಕತೆ, ಅದೇ ಮಾತು. ಪ್ರಧಾನಿ ಮೋದಿ ಅವರು ಕಪ್ಪು ಹಣ ಇರುವ ಕುಳಗಳನ್ನು ಬಲಿ ಹಾಕಲು ಹೀಗೆ ಮಾಡಿದ್ದಾರೆ, ಭಯೋತ್ಪಾದಕರ ಚಟುವಟಿಕೆಗೆ ಕಡಿವಾಣ ಹಾಕಲು ಇಂಥ ಕ್ರಮ ಕೈಗೊಂಡಿದ್ದಾರೆ, ನಕಲಿ ನೋಟು ತಯಾರಿಕೆ ಜಾಲಕ್ಕೆ ಫುಲ್ ಸ್ಟಾಪ್ ಹಾಕುವ ಸಲುವಾಗಿ ಇಂಥ ಪ್ಲಾನ್ ಮಾಡಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿದ್ದವು.

ಇದೇ ವೇಳೆ, ಯಾರೋ ಏನೋ ಮಾಡಿದರೂಂತ, ನಮಗೆ ಯಾಕೆ ಈ ಶಿಕ್ಷೆ, ನಾವೇನು ಪಾಪ ಮಾಡಿದ್ವು ಇಂಥ ಕಿರಿಕಿರಿ, ಇಂಥ ಹಿಂಸೆ ಅನುಭವಿಸುವುದಕ್ಕೆ ಎಂದು, ಜನಸಾಮಾನ್ಯರು ಶಾಪ ಹಾಕಲು ಶುರು ಮಾಡಿದ್ದರು. ಹಳೆಯ ನೋಟು ಬದಲಿಸಲು ಕ್ಯೂನಲ್ಲಿ ನಿಂತವರಲ್ಲಿ ಕೆಲವರು ಹೃದಯಾಘಾತಕ್ಕೊಳಗಾಗಿ ಸತ್ತರೆ, ಮತ್ತೆ ಕೆಲವರು ತಳ್ಳಾಟ ನೂಕಾಟದಿಂದಲೂ ಸತ್ತಿರಬಹುದು. ಇದೇ ವೇಳೆ ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರವೇ ನಿಂತು ಹೋಯಿತು, ರಿಯಲ್ ಎಸ್ಟೇಟ್ ವಹಿವಾಟು ಕುಸಿದುಬಿತ್ತು, ಒಟ್ಟಿನಲ್ಲಿ ದೇಶದ ಆರ್ಥಿಕತೆಯೇ ಮಕಾಡೆ ಮಲಗಿದಂತಾಯಿತು.  ಇಷ್ಟಾದರೂ ದೇಶದ ಜನ ಕಾಯುತ್ತಲೇ ಇದ್ದರು, ಪ್ರಧಾನಿ ಮೋದಿ ಅವರು ಮಾಡಿದ ಈ ಕೆಲಸದಿಂದ, ದೊಡ್ಡ ದೊಡ್ಡ ದುಡ್ಡುಗಳ್ಳರು ಸಿಕ್ಕಿ ಬೀಳುತ್ತಾರೆ, ದೇಶಕ್ಕೆ ಭಾರಿ ಲಾಭ ಆಗುತ್ತದೆ ಎಂದೆಲ್ಲಾ ಯೋಚನೆ ಮಾಡುತ್ತಲೇ, ನೋಟು ರದ್ದತಿಯಿಂದ ಆದಂಥ ಎಲ್ಲಾ ಅನಾನುಕೂಲಗಳನ್ನು ಸಹಿಸುತ್ತಲೇ ಬಂದರು.  

ಆದರೆ, ಇದೀಗ ನೋಟು ರದ್ದತಿಯಿಂದ ದೇಶಕ್ಕೆ ಆದ ಲಾಭ ಏನು ಅನ್ನುವುದರ ಫಲಿತಾಂಶ ಹೊರಬಿದ್ದಿದೆ.  ನೋಟು ರದ್ದತಿಯಿಂದ ಆದ ಪರಿಣಾಮಗಳ ಬಗ್ಗೆ ಪರಿಶೀಲನೆ ಮಾಡಿದ ಸಂಸದೀಯ ಸಮಿತಿ, ತನ್ನ ವರದಿ ಸಲ್ಲಿಸಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ವರದಿ ಮಂಡನೆ ಸಾಧ್ಯತೆ ಇದೆ. ಈ ವರದಿಯಲ್ಲಿ ಏನಿದೆ ಅನ್ನುವುದರ ಬಗ್ಗೆ ಒಂದೇ ಸಾಲಿನಲ್ಲಿ ಹೇಳುವುದಾದರೆ, ಪ್ರಧಾನಿ ಮೋದಿ ಅವರು, ಅತಿ ರಹಸ್ಯದ ರೀತಿಯಲ್ಲಿ ಕೈಗೊಂಡ ನೋಟು ರದ್ದತಿ ನಿರ್ಧಾರ ‘ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ’.

‘ನೋಟು ರದ್ದತಿ ಅನ್ನುವುದು, ಪ್ರಧಾನಿ ಮೋದಿ ಅವರು ಮಾಡಿದ ಒಂದು ದೊಡ್ಡ ಪ್ರಮಾದ. ಅದರಿಂದ, ಕೇಂದ್ರಸರ್ಕಾರ ಸಾಧಿಸಬೇಕೆಂದು ಹೊರಟಿದ್ದ ಒಂದೇ ಒಂದು ಉದ್ದೇಶವೂ ಈಡೇರಿಲ್ಲ’ ಅನ್ನುವುದು ಈ ವರದಿಯ ಪ್ರಮುಖಾಂಶವಾಗಿದೆ ಎಂದು, ಸಂಶೋಧನಾತ್ಮಕ ವರದಿಗಳು ಮತ್ತು ಕುಟುಕು ಕಾರ್ಯಾಚರಣೆಗಳಿಗೆ ಹೆಸರಾಗಿರುವ Tehelka ಪತ್ರಿಕೆ ವರದಿ ಮಾಡಿದೆ.

ನೋಟು ರದ್ದತಿ ಪ್ರಕ್ರಿಯೆ ಬಳಿಕ, ಯಾವುದೇ ದೊಡ್ಡ ಮಟ್ಟದ ಕಪ್ಪುಹಣ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಕೇವಲ ಸುಮಾರು 4,172 ಕೋಟಿ ರೂಪಾಯಿಗಳಷ್ಟು ಅನುಮಾನಾಸ್ಪದ ಹಣ ಪತ್ತೆಯಾಗಿದ್ದು, ಅದು ಕಪ್ಪುಹಣ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ ಅಷ್ಟೇ. ಆದರೆ, ಪ್ರಧಾನಿ ಮೋದಿ ಅವರು, ಸುಮಾರು ಐದರಿಂದ ಏಳುಲಕ್ಷ ಕೋಟಿ ರೂಪಾಯಿಗಳಷ್ಟು ಕಪ್ಪುಹಣ ಪತ್ತೆಯಾಗಬಹುದು ಎಂಬ ಮಾತುಗಳನ್ನಾಡಿದ್ದರು.

ಇದೇ ವರದಿಯಲ್ಲಿ ಹೇಳುವಂತೆ, ನೋಟು ರದ್ದತಿಯಿಂದ ಭಯೋತ್ಪಾದಕರಿಗೆ ಸಿಗುತ್ತಿದ್ದ ಹಣದಲ್ಲಿ ಯಾವುದೇ ಕೊರತೆ ಆಗಿಲ್ಲ, ಅಥವ ಕೇಂದ್ರ ಹಣಕಾಸು ಇಲಾಖೆಯವರು ಹೇಳಿಕೊಳ್ಳುತ್ತಿದ್ದ ರೀತಿಯಲ್ಲಿ, ದೇಶದಲ್ಲಿ ನಗದು ರಹಿತ ವ್ಯವಹಾರ ನಡೆಸುವ ಸಮಾಜವಾಗಲಿ ಅಥವ ಕಡಿಮೆ ನಗದು ಬಳಸುವ ಸಮಾಜವಾಗಲಿ ಸೃಷ್ಟಿಯಾಗಲಿಲ್ಲ.  ಇದೀಗ, ದೇಶದ ಜನರು 2016ರ ನವೆಂಬರ್ 8ಕ್ಕಿಂತ ಮುಂಚೆ ಇದ್ದ ನಗದು ವ್ಯವಹಾರಗಳ ಮಟ್ಟಕ್ಕೇ ವಾಪಸ್ ಬಂದಿದ್ದಾರೆ ಎಂದು, ಸಂಸದೀಯ ಸಮಿತಿಯ ವರದಿ ಹೇಳುತ್ತದಂತೆ.

ಇನ್ನೂ ಮುಂದುವರಿದಂತೆ, ‘ನೋಟು ರದ್ದತಿ ಕ್ರಮದಿಂದ ಅಸಂಘಟಿತ ವಲಯ ನೆಲಕಚ್ಚಿತು ಮತ್ತು ಲಕ್ಷಾಂತರ ಸಣ್ಣ ಕೈಗಾರಿಕೆಗಳು ಕೊನೆಯುಸಿರೆಳೆದವು’ ಎಂಬ ಮಾಹಿತಿ ವರದಿಯಲ್ಲಿದೆಯಂತೆ.

ಬಿಜೆಪಿಯ ಕಾರ್ಮಿಕ ಒಕ್ಕೂಟವಾಗಿರುವ ಭಾರತೀಯ ಮಜ್ದೂರ್ ಸಂಘ ಹೇಳುವಂತೆ, ನೋಟು ರದ್ದತಿಯಿಂದ ಸುಮಾರು ನಾಲ್ಕು ಕೋಟಿ ಉದ್ಯೋಗಗಳು ನಷ್ಟವಾಗಿದ್ದು, ಮೂರು ಲಕ್ಷಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಮುಚ್ಚಿಹೋದವಂತೆ. ಮೋದಿ ಸರ್ಕಾರದ ನೋಟು ರದ್ದತಿ ಕ್ರಮವನ್ನು ಪ್ರಶ್ನಿಸಿರುವ  ಸಂಸದೀಯ ಸಮಿತಿ ವರದಿ, ಇದು ಯಾವುದೇ ಮುಂದಾಲೋಚನೆ ಮತ್ತು ಸೂಕ್ತ ತಯಾರಿಯೇ ಇಲ್ಲದೆ ಕೈಗೊಂಡ ನಿರ್ಧಾರ ಎಂದು ಟೀಕಿಸಿದೆ.

ಹೊಸದಾಗಿ ಚಲಾವಣೆಗೆ ತಂದ 2 ಸಾವಿರ ರೂಪಾಯಿ ನೋಟಿನ ಆಕಾರ, ಹಳೆಯ ಎಟಿಎಮ್ ಯಂತ್ರಗಳಲ್ಲಿ ವಿತರಿಸಲು ಸಾಧ್ಯವಾಗದ ರೀತಿಯಲ್ಲಿತ್ತು, ಈ ಬಗ್ಗೆ ಮೊದಲೇ ಯೋಚಿಸಬೇಕಿತ್ತು ತಾನೇ? ಇದರ ಜೊತೆಗೆ, ಯಾವುದೇ ಸಣ್ಣ ಮೌಲ್ಯದ ನೋಟನ್ನು ಚಲಾವಣೆಗೆ ತರದೆ, ಏಕ್‌ ದಮ್ ದೊಡ್ಡ ನೋಟು ಜಾರಿಗೆ ತಂದಿದ್ದರಿಂದಲೂ ಕೂಡ, ಜನರು ಚಿಲ್ಲರೆ ಸಿಗದೆ ಕಷ್ಟ ಅನುಭವಿಸಿದರು. ಸಾಕಷ್ಟು ಸಂಖ್ಯೆಯ ಹೊಸ ನೋಟುಗಳು ಮುದ್ರಣ ಆಗದೇ ಇದ್ದ ಕಾರಣದಿಂದ ಬ್ಯಾಂಕುಗಳಲ್ಲಿ ಮತ್ತು ಎಟಿಎಮ್ ಗಳಲ್ಲಿ ಭಾರಿ ಜನಜಂಗುಳಿ ಉಂಟಾಯಿತು. ಇಷ್ಟು ಮಾತ್ರವಲ್ಲದೆ, ಇವತ್ತಿಗೂ ದೇಶದ ಗ್ರಾಮಾಂತರ ಪ್ರದೇಶದ ಬಹುತೇಕ ಎಟಿಎಮ್ ಗಳು ಖಾಲಿ ಖಾಲಿಯಾಗೇ ಇವೆ ಎಂಬ ಬಗ್ಗೆ ಸಂಸದೀಯ ಸಮಿತಿ ವರದಿ ಉಲ್ಲೇಖಿಸಿದೆಯಂತೆ.

ನೋಟು ರದ್ದತಿ ನಂತರ, ಹೆಚ್ಚೂಕಮ್ಮಿ ಪ್ರತಿದಿನವೂ ನಿಯಮ ಬದಲಾವಣೆ, ಹೊಸ ನಿಯಮ ಜಾರಿ ನಡೆದೇ ಇತ್ತು, ದೇಶದ ಜನರನ್ನು ಭಾರಿ ಗೊಂದಲ ಮತ್ತು ಕಿರಿಕಿರಿಗೆ ಸಿಲುಕಿಸಿದ ದಿನನಿತ್ಯದ ಬದಲಾವಣೆಗಳು, ಮೋದಿ ಸರ್ಕಾರ, ಸರಿಯಾದ ರೀತಿಯಲ್ಲಿ ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ ಅನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತವೆ.

ನೋಟು ರದ್ದತಿ ತೀರ್ಮಾನದ ದೊಡ್ಡ ವೈಫಲ್ಯದಿಂದ ಆಗಿರುವ ಸಮಸ್ಯೆಗಳ ಬಗ್ಗೆ ಬೆರಗುಗೊಳಿಸುವ ಸತ್ಯ ಬಹಿರಂಗಪಡಿಸುವ ಸಂಸದೀಯ ಸಮಿತಿ ವರದಿ,  ಮೋದಿ ಸರ್ಕಾರ, ಆರೋಗ್ಯ, ಶಿಕ್ಷಣ ಮತ್ತಿತರ ಪ್ರಮುಖ ವಲಯಗಳ ಖರ್ಚುವೆಚ್ಚವನ್ನು ಕಡಿತಗೊಳಿಸುವ ಮೂಲಕ, ತನ್ನ ಸೋಲನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸಿದೆ ಅನ್ನುತ್ತದೆ. ಶಿಕ್ಷಣ ವಲಯದ ಅನುದಾನದಲ್ಲಿ ಭಾರಿ ಕಡಿತದಿಂದ ವಿದ್ಯಾರ್ಥಿಗಳು ಪಾವತಿ ಮಾಡಬೇಕಾದ ಶುಲ್ಕಗಳು ಹೆಚ್ಚಿದ್ದು, ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆಯಂತೆ.

ಇದೇ ವೇಳೆ ತೆರಿಗೆಗಳನ್ನು ಏರಿಸಿದ್ದು, PPF ಅಂದರೆ, ಸಾರ್ವಜನಿಕ ಭವಿಷ್ಯ ನಿಧಿ ಮತ್ತಿತರ ಜನಸಾಮಾನ್ಯರ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನೂ ಸಾಕಷ್ಟು ಇಳಿಕೆ ಮಾಡಲಾಗಿದೆ. ಇದರಿಂದ ಮಧ್ಯಮವರ್ಗದವರು ಮತ್ತು ಕಾರ್ಮಿಕ ವರ್ಗದ ಜನರಿಗೆ ನಷ್ಟವಾಗಿದೆ.  

ದೇಶದಲ್ಲಿ ಆಗುತ್ತಿರುವ ಇಷ್ಟೆಲ್ಲಾ ಅನಾಹುತಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು?

ನೋಟು ರದ್ದತಿ ಹಿನ್ನೆಲೆ, ಸರ್ಕಾರದ ಜಾಹೀರಾತುಗಳಿಗೆ, ಹೊಸ ನೋಟುಗಳ ಸಾಗಣೆ, ವಿತರಣೆಗೆ,  ಹೆಚ್ಚುವರಿ ಅವಧಿ ಕೆಲಸ ಮಾಡಿದ ಬ್ಯಾಂಕ್ ಉದ್ಯೋಗಿಗಳಿಗೆ ಕೊಡಬೇಕಾದ ಹೆಚ್ಚುವರಿ ಭತ್ಯೆಗೆ, ಹಣ ಎಲ್ಲಿಂದ ಬರುತ್ತದೆ. ಇದಕ್ಕೆಲ್ಲಾ ವೆಚ್ಚವಾದ ಸುಮಾರು 30 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಯಾರು ಕೊಡುತ್ತಾರೆ ಎಂಬ ಪ್ರಶ್ನೆಗಳು ಇಲ್ಲಿ ಉದ್ಭವವಾಗುತ್ತವೆ.

ನೋಟು ರದ್ದತಿ ನಂತರದ ದಿನಗಳಲ್ಲಿ, ಕ್ಯೂ ನಿಂತಾಗ ಅನಾರೋಗ್ಯಕ್ಕೊಳಗಾಗಿ ಸತ್ತವರು, ನೋಟು ಬದಲಾವಣೆ ಆಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡವರು ಸೇರಿದಂತೆ, ಸುಮಾರು 180 ಜನರ ಸಾವಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು?

ಇವೆಲ್ಲಾ ಪ್ರಶ್ನೆಗಳಿಗೂ ಪ್ರಧಾನಿ ನರೇದ್ರ ಮೋದಿ ಅವರು, ಜನರ ನ್ಯಾಯಾಲಯದಲ್ಲಿ ಉತ್ತರ ಕೊಡುತ್ತಾರಾ? ಅಥವ ಏಕ ವ್ಯಕ್ತಿ ಸರ್ಕಾರದ ಮನಸೋ ಇಚ್ಛೆ ನಿರ್ಧಾರಗಳಿಗೆ ಸಿಲುಕಿಕೊಂಡ ಭಾರತದ ಪ್ರಜಾತಂತ್ರ ವ್ಯವಸ್ಥೆ, ಉಸಿರುಗಟ್ಟಿ ಒದ್ದಾಡುವುದು ಮುಂದುವರೆಯುತ್ತಲೇ ಹೋಗುತ್ತದಾ ಅನ್ನುವುದಕ್ಕೆ ಉತ್ತರ ಹುಡುಕಬೇಕಾಗಿದೆ.

ನೋಟು ರದ್ದತಿ ನಿರ್ಧಾರದಿಂದ, ಭಾರತದ ಆರ್ಥಿಕತೆಗೆ ಅಡೆತಡೆ ಉಂಟುಮಾಡಿದರೂ ಕೂಡ, ಅತೀವ ರಾಷ್ಟ್ರಪ್ರೇಮದ ಜೋರು ಸದ್ದಿನ ಅಲೆಯಲ್ಲಿ ನರೇಂದ್ರ ಮೋದಿ ಅವರು ಪಾರಾಗಿಬಿಡುತ್ತಾರಾ? ಮತ್ತು ಯಾರಾದರೂ ಮೋದಿ ಅವರನ್ನು ಪ್ರಶ್ನೆ ಮಾಡಿದಲ್ಲಿ ಅಂಥವರೆಲ್ಲರೂ ರಾಷ್ಟ್ರವಿರೋಧಿಗಳಾಗಿ ಬಿಡುತ್ತಾರ? ಎಂಬ ಪ್ರಶ್ನೆಗಳೂ ಇಲ್ಲಿ ಉದ್ಭವವಾಗುತ್ತವೆ.  ಇಷ್ಟಾದರೂ ದೇಶದಲ್ಲಿ ಪ್ರಧಾನಿ ಮೋದಿಗೆ ಇನ್ನೂ ಬೆಂಬಲ ವ್ಯಕ್ತವಾಗುತ್ತಿದೆ ಅನ್ನುವುದೇ ಒಂದು ಸೋಜಿಗ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಇದೇ ವೇಳೆ, ನೋಟು ರದ್ದತಿಯಿಂದ ಆದ ಸಮಸ್ಯೆಗಳು ಮತ್ತು ಕಷ್ಟ ನಷ್ಟಗಳನ್ನು ಎತ್ತಿ ತೋರಿಸುವ ಸಂಸದೀಯ ಸಮಿತಿ ವರದಿ, ದೇಶದ ಜನತೆಯ ಗಮನಕ್ಕೆ ಬರದೇ ಇರುವ ಹಾಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ