ಕುಡಿದ ಮತ್ತಿನಲ್ಲಿ ಅತ್ಯಾಚಾರಕ್ಕೆ ಯತ್ನ !

Kannada News

11-08-2017

ಬೆಂಗಳೂರು: ನಗರದಲ್ಲಿ ಮತ್ತೊಂದು ಅತ್ಯಾಚಾರ ಯತ್ನ ನಡೆಸಿದ್ದು, ಅತ್ಯಾಚಾರಕ್ಕೆ ಕಾಮುಕರಿಂದ ತಪ್ಪಿಸಿಕೊಂಡ ಯುವತಿ, ಅವರಲ್ಲಿ ಇಬ್ಬರನ್ನು ಪೊಲೀಸರಿಗೆ ಹಿಡಿದುಕೊಡುವಲ್ಲಿ ಯಶಸ್ವಿಯಾಗಿರುವ ಘಟನೆ ಯಶವಂತಪುರದ ರೈಲು ನಿಲ್ದಾಣದ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಯುವತಿ ಕಾಮುಕರಿಂದ ಪಾರಾಗಿದ್ದು ಆಕೆಯ ನೆರವಿನಿಂದ ಪೊಲೀಸರು, ಯಶವಂತಪುರದ ಬಿ.ಕೆ ನಗರದ ಆಟೋಚಾಲಕ ಫಯಾಜ್ (30) ಹಾಗೂ ಜುಬೇರ್ (25) ಬಂಧಿಸಿ,ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಎಂ.ಕೆ ನಗರದ ಸುಲ್ತಾನ್ (20)ಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಸೋದರ ಸಂಬಂಧಿ ರಾಜು ಜತೆ ಬಂದಿದ್ದ 19 ವರ್ಷ ವಯಸ್ಸಿನ ಯುವತಿಯು, ಸಂಬಂಧಿಕರ ಮನೆಗೆ ಹೋಗಿ ರಾತ್ರಿ 12ರ ವೇಳೆ ಯಶವಂತಪುರ ಬಸ್ ನಿಲ್ದಾಣಕ್ಕೆ ಬಂದಿದ್ದು, ಆ ಸಮಯದಲ್ಲಿ ಊರಿಗೆ ಹೋಗಲು ಬಸ್ ದೊರೆಯದ ಕಾರಣ ರೈಲ್ವೆ ನಿಲ್ದಾಣಕ್ಕೆ ರಾಜು ಜತೆ ನಡೆದು ಹೋಗುತ್ತಿದ್ದಳು.

ಯಶವಂತಪುರ ರೈಲ್ವೆ ಕೆಳಸೇತುವೆಯ ಬಳಿ ಈ ಇಬ್ಬರೂ ನಡೆದು ಹೋಗುತ್ತಿದ್ದುದ್ದನ್ನು ಗಮನಿಸಿ ಕುಡಿದ ಮತ್ತಿನಲ್ಲಿದ್ದ ಆರೋಪಿಗಳಾದ ಫಯಾಜ್, ಜುಬೇರ್ ಹಾಗೂ ಸುಲ್ತಾನ್ ಅವರ ಬಳಿ ಹೋಗಿದ್ದಾರೆ. ಎಲ್ಲಿಗೆ ಹೋಗಬೇಕು ಎಂದು ವಿಚಾರಿಸುವ ನೆಪ ಮಾಡಿ ಫಯಾಜ್ ಹಾಗೂ ಜುಬೇರ್, ರಾಜುನನ್ನು ಬಸ್ ಹೋಗುವ ಸ್ಥಳ ತೋರಿಸುವುದಾಗಿ ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದು, ಅವರು ಬರುವವರೆಗೆ ಕಾಯಬೇಕೆಂದು ಅಲ್ಲೇ ಇದ್ದ ಸುಲ್ತಾನ್ ಯುವತಿಯನ್ನು ಪಕ್ಕದ ಹೊಯ್ಸಳ ಟ್ರಾವೆಲ್ಸ್ ಕಚೇರಿ ಬಳಿ ಕರೆದುಕೊಂಡು ಹೋಗಿದ್ದಾನೆ.

ಕಚೇರಿಯ ರೋಲಿಂಗ್ ಶೆಟ್ಟರ್ ಬಳಿ ಯುವತಿಯ ಕೈಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ ಕೂಡಲೇ ಆಕ್ರೋಶಗೊಂಡ ಯುವತಿ ಆತನನ್ನು ತಳ್ಳಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಸುಲ್ತಾನ್ ಅಲ್ಲೇ ಕುಸಿದುಬಿದ್ದಿದ್ದು, ರಕ್ಷಣೆ ಯುವತಿಯು ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ಅದೇ ಮಾರ್ಗವಾಗಿ ಗಸ್ತು ತಿರುಗುತ್ತಿದ್ದ ಹೊಯ್ಸಳ ಪೊಲೀಸರು ಆಗಮಿಸಿದ್ದಾರೆ. ಪೊಲೀಸರನ್ನು ನೋಡಿದ ಸುಲ್ತಾನ್ ಕತ್ತಲಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಯುವತಿಯನ್ನು ರಕ್ಷಿಸಿ ವಿಚಾರಿಸಿದಾಗ ರಾಜುನನ್ನು ಕರೆದುಕೊಂಡು ಹೋಗಿದ್ದ ಇಬ್ಬರ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಫಯಾಜ್ ಹಾಗೂ ಜುಬೇರ್‍ ನನ್ನು ಬಂಧಿಸಿದ್ದಾರೆ. ಪರಾರಿಯಾದ ಸುಲ್ತಾನ್ ಗಾಗಿ ಶೋಧ ನಡೆಸಲಾಗಿದೆ.

ಫಯಾಜ್ ಆಟೋ ಚಾಲಕನಾಗಿದ್ದು, ಜುಬೇರ್ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಇದೇ ಮೊದಲ ಬಾರಿಗೆ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ. ತಲೆಮರೆಸಿಕೊಂಡಿರುವ ಆರೋಪಿ ಸುಲ್ತಾನ್ ಕೂಲಿ ಕೆಲಸ ಮಾಡುತ್ತಿದ್ದ. ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಅರ್ಧಗಂಟೆಯ ಒಳಗೆ ಬಂಧಿಸಿದ ಯಶವಂತಪುರ ಪೊಲೀಸರಿಗೆ ಡಿ.ಸಿ.ಪಿ ಚೇತನ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ