ಗಣೇಶ ಹಬ್ಬ: ಗುಪ್ತದಳದಿಂದ ಸರ್ಕಾರಕ್ಕೆ ಎಚ್ಚರಿಕೆ !

Kannada News

11-08-2017

ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ರಾಜ್ಯದ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೋಮುದಂಗೆಗಳು ನಡೆಯುವ ಸಾಧ್ಯತೆಯಿದೆ ಎಂದು ಗುಪ್ತದಳ ಸರ್ಕಾರವನ್ನು ಎಚ್ಚರಿಸಿದೆ. ಮೈಸೂರು, ಕೊಡಗು, ಶಿವಮೊಗ್ಗ, ಬೆಳಗಾಂ, ಗುಲ್ಬರ್ಗ, ಬಿಜಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೋಮುದಂಗೆಗಳು ಭುಗಿಲೇಳಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂತಹ ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಶಕ್ತಿಗಳು ಸಕ್ರಿಯವಾಗಿದ್ದು, ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅದು ಹೇಳಿದೆ. ಕೆಲವೇ ಸ್ಥಳಗಳಲ್ಲಿ ಕೋಮುದಂಗೆಗಳು ನಡೆದರೂ ಅದು ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ ಕೋಮುದಂಗೆಗಳಿಗೆ ಪ್ರಚೋದನೆ ನೀಡುವ ಶಕ್ತಿಗಳ ಮೇಲೆ ಈಗಿನಿಂದಲೇ ನಿಗಾ ಇಡಬೇಕು ಎಂದು ಗುಪ್ತದಳ ಹೇಳಿದೆ.

ಗುಪ್ತಚರದಳ ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಸರ್ಕಾರ ಗೃಹ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸುವುದಲ್ಲದೆ ಸ್ಥಳೀಯ ಪರಿಸ್ಥಿತಿಗನುಗುಣವಾಗಿ ತೀರ್ಮಾನಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೂ ಆದೇಶಿಸಿದೆ.

ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಬಹುಬೇಗನೆ ಕೋಮು ದಂಗೆಗಳು ಶುರುವಾಗಬಹುದು, ಮತ್ತು ಸಣ್ಣ ಸಣ್ಣ ನೆಪಗಳನ್ನು ಬಳಸಿಕೊಂಡು ಇವನ್ನು ವಿಸ್ತರಿಸಬಹುದು ಎಂದು ಗುಪ್ತದಳ ಹೇಳಿದ್ದು, ಇದೇ ಕಾರಣಕ್ಕಾಗಿ ಸರ್ಕಾರ ಗಣೇಶ ಹಬ್ಬದ ಸಂದರ್ಭವನ್ನು ಕಟ್ಟೆಚ್ಚರದಿಂದ ಗಮನಿಸಲು ತೀರ್ಮಾನಿಸಿದೆ. ದಂಗೆಗಳಿಗೆ ಪ್ರಚೋದನೆ ನೀಡುವ ಶಕ್ತಿಗಳ ಮೇಲೆ ಕಣ್ಣಿಡಿ ಎಂದು ಈಗಾಗಲೇ ಸೂಚನೆ ನೀಡಲಾಗಿದ್ದು, ಅದೇ ಕಾಲಕ್ಕೆ ಹೆಚ್ಚು ಕಡಿಮೆಯಾದರೆ ಪರಿಸ್ಥಿತಿಯನ್ನು ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಮಾಡುವವರು ಹೊಣೆ ಹೊರಬೇಕಾಗುತ್ತದೆ ಎಂದು ಮುಂಚಿತವಾಗಿ ತಿಳಿಸಲು ಸೂಚನೆ ನೀಡಲಾಗಿದೆ.

ಮೂಲಗಳ ಪ್ರಕಾರ,ಈಗಾಗಲೇ ಗುಪ್ತದಳದ ಮಾಹಿತಿಯ ಹಿನ್ನೆಲೆಯಲ್ಲಿ ಸರ್ಕಾರ ಹಲವು ಬಿಗಿಕ್ರಮಗಳನ್ನು ಕೈಗೊಂಡಿದ್ದು ಈ ಕ್ರಮಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು, ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಗಳ ಹಿನ್ನೆಲೆಯನ್ನು ಸೈಬರ್ ಕ್ರೈಂ ವಿಭಾಗದ ಪೋಲೀಸರು ಗಮನಿಸುತ್ತಿದ್ದಾರೆ ಎಂದು ಮೂಲಗಳು ವಿವರಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ