ಖಾಸಗಿ ಬಸ್ಸುಗಳ ಮೇಲೆ ಹೆಚ್ಚಿನ ನಿಗಾ !

Kannada News

11-08-2017

ಬೆಂಗಳೂರು: ಸಾರ್ವತ್ರಿಕ ರಜೆಯ ಅವಧಿಯಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ಸುಲಿಗೆ ಮಾಡುವ ಖಾಸಗಿ ಬಸ್ಸುಗಳ ಮೇಲೆ ನಿಗಾ ಇಡುವಂತೆ ರಾಜ್ಯ ಸರ್ಕಾರ ಸಾರಿಗೆ ಅಧಿಕಾರಿಗಳಿಗೆ ಆದೇಶಿಸಿದೆ. ಕಾಂಟ್ರಾಕ್ಟ್ ಕ್ಯಾರೇಜ್ ಹೆಸರಿನಲ್ಲಿ ಅನುಮತಿ ಪಡೆದರೂ ನಿಗದಿತ ಮಾರ್ಗದಲ್ಲಿ ಪ್ರಯಾಣಿಸದೆ ರಾಜ್ಯದ ಬೇರೆ ಬೇರೆ ಸ್ಥಳಗಳಿಗೆ ಬಸ್ಸುಗಳ ಸಂಚಾರ ಮಾಡುತ್ತಿರುವ, ಪ್ರಯಾಣಿಕರಿಂದ ಎರಡು ಮೂರು ಪಟ್ಟು ದರ, ವಸೂಲು ಮಾಡುವ ಖಾಸಗಿ ಸಾರಿಗೆ ಸಂಸ್ಥೆಗಳ ಮೇಲೆ ನಿಗಾ ಇಡುವಂತೆ ಸರ್ಕಾರ ಸೂಚನೆ ನೀಡಿದೆ.

ಸುದ್ದಿಗಾರರ ಜತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡಿ, ರಜೆಯ ಅವಧಿಯ ಪ್ರಯಾಣಕ್ಕೆ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲು ಮಾಡುವವರ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ ಎಂದರು. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿಯಾಗಿ 500 ಬಸ್ಸುಗಳು ಸಂಚರಿಸಲಿವೆ ಎಂದು ನುಡಿದರು. ನಾವು ಹೆಚ್ಚುವರಿಯಾಗಿ ಬಸ್ಸುಗಳ ಸಂಚಾರವನ್ನು ಆರಂಭಿಸುವುದರ ಜತೆಗೆ ಖಾಸಗಿಯವರ ಕುರಿತು ಬಂದ ದೂರುಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನೆಗೆ ಉತ್ತರಿಸಿದರು.

ಅಂದ ಹಾಗೆ ಮೂಲಗಳ ಪ್ರಕಾರ,ರಜೆಯ ಸಂದರ್ಭದಲ್ಲಿ ಬಹುತೇಕ ಖಾಸಗಿ ಬಸ್ಸುಗಳ ಸಂಚಾರ ದರ ದುಪ್ಪಟ್ಟು, ಮೂರು ಪಟ್ಟು ಹೆಚ್ಚಾಗುವುದು ಹಲವು ವರ್ಷಗಳಿಂದ ನಡೆಯುತ್ತಿದ್ದು ಶ್ರಾವಣ ಮಾಸ ಆರಂಭವಾದ ಹಿನ್ನೆಲೆಯಲ್ಲಿ ಹಬ್ಬ ಹರಿದಿನಗಳ ಸಂಖ್ಯೆಯೂ ಹೆಚ್ಚು.ಈ ಸಂದರ್ಭವನ್ನು ನೋಡಿ ರಾಜ್ಯದ ನಾನಾ ಭಾಗಗಳಿಗೆ ದುಬಾರಿ ದರದಲ್ಲಿ ಟಿಕೇಟ್ ಶುಲ್ಕವನ್ನು ವಸೂಲು ಮಾಡುವ ಹಲವು ಖಾಸಗಿಯವರು 100 ರೂ ಟಿಕೇಟ್‍ಗೆ 300,400 ರೂಪಾಯಿ ವಸೂಲು ಮಾಡುತ್ತಿದ್ದಾರೆ. 500 ರೂ. ಶುಲ್ಕ ವಿಧಿಸಬೇಕಾದ ಜಾಗದಲ್ಲಿ, 1000, 1500 ರೂ ಗಳನ್ನು, ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವವರ ಮಾಲೀಕತ್ವದ ಸಾರಿಗೆ ಸಂಸ್ಥೆಗಳೇ ವಸೂಲು ಮಾಡುತ್ತಿದ್ದು ಇದರ ವಿಷಯದಲ್ಲಿ ಸರ್ಕಾರಕ್ಕೇ ಆಶ್ಚರ್ಯವಾಗಿದೆ.

ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾಗುವುದು ಹೇಗೆ?ಅದಕ್ಕಾಗಿ ಹೇಗೆ ಶ್ರಮಿಸಬೇಕು?ಯಾವ ಮಟ್ಟದ ತ್ಯಾಗ ಮಾಡಬೇಕು? ಎಂದು ಪುಂಖಾನುಪುಂಖವಾಗಿ ಹೇಳುವ ವ್ಯಕ್ತಿಗಳ ಮಾಲೀಕತ್ವದ ಹಲವು ಸಾರಿಗೆ ಸಂಸ್ಥೆಗಳು ಪ್ರಯಾಣಿಕರನ್ನು ನಿರ್ದಾಕ್ಷಿಣ್ಯವಾಗಿ ದೋಚುತ್ತಿವೆ. ಈ ದೋಚುವಿಕೆಗೆ ಕಡಿವಾಣ ಹಾಕಲು ಹೋದರೆ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಹಾಹಾಕಾರ ಎಬ್ಬಿಸುವಂತಹ ಚಟುವಟಿಕೆಗಳಲ್ಲಿ ಇಂತಹವರು ಪರೋಕ್ಷವಾಗಿ ಭಾಗಿಯಾಗುತ್ತಿದ್ದು ಈ ಬೆಳವಣಿಗೆಯನ್ನೂ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ