ಕೈ-ಗೆ ಸೆಡ್ಡು ಹೊಡೆಯಲು ‘ಷಾ’ ರಣತಂತ್ರ !

Kannada News

11-08-2017 440

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಕೈಗೊಳ್ಳಬೇಕಾದ ಕಾರ್ಯತಂತ್ರ ಹಾಗೂ ರಣತಂತ್ರ ರೂಪಿಸಲು ಬಿಜೆಪಿಯ ಚಾಣಕ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಬಹುದಿನಗಳ ನಂತರ ಕರ್ನಾಟಕಕ್ಕೆ ಅಮಿತ್ ಷಾ ಮೂರು ದಿನಗಳ ಪ್ರವಾಸ ಕೈಗೊಳ್ಳುತ್ತಿರುವುದು ಕಮಲ ಪಾಳೆಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.

ನಾಳೆ 10.40ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ನಿರ್ಮಲಾ ಸೀತಾರಾಮನ್, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಆರ್.ಅಶೋಕ್, ಅರವಿಂದ್ ಲಿಂಬಾವಳಿ ಸೇರಿದಂತೆ ಮತ್ತಿತರರು ಬರ ಮಾಡಿಕೊಳ್ಳಲಿದ್ದಾರೆ.

ಬಳಿಕ ಟೋಲ್‍ ಗೇಟ್ ಬಳಿ ಅಮಿತ್ ಷಾ ಅವರನ್ನು ಪದಾಧಿಕಾರಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಲಿದ್ದಾರೆ. ನಂತರ 11 ಗಂಟೆಗೆ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು, 1 ಗಂಟೆಗೆ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ. ಕಳೆದ ಹಲವು ತಿಂಗಳಿನಿಂದ ಆಂತರಿಕ ಕಚ್ಚಾಟದಿಂದಲೇ ನಲುಗಿದ್ದ ಬಿಜೆಪಿಗೆ ಅಮಿತ್ ಷಾ ಆಗಮಿಸುತ್ತಿರುವುದು ಕಮಲ ಪಾಳೆಯದಲ್ಲಿ ಹೊಸ ಹುರುಪು ಸೃಷ್ಟಿಸಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ