ಬೋಫೋರ್ಸ್ ಹಗರಣ ಮರು ತನಿಖೆ..?

Kannada News

11-08-2017

ನವದೆಹಲಿ: ದಶಕಗಳ ಹಿಂದೆ ಭಾರತದ ರಾಜಕೀಯ ವಲಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದ, ಬೋಫೋರ್ಸ್ ಫಿರಂಗಿ ಹಗರಣವನ್ನು ಮತ್ತೆ ತನಿಖೆಗೊಳಪಡಿಸುವುದಾಗಿ ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ಹೇಳಿದೆ. ಈ ಕುರಿತಂತೆ ತನಗೆ ಸೂಚನೆ ನೀಡಿದ್ದ ಸಂಸದೀಯ ಸಮಿತಿಗೆ ಮರು ತನಿಖೆ ಕುರಿತು ಸ್ಪಷ್ಟನೆ ನೀಡಿದೆ. ಕಳೆದ ಜುಲೈನಲ್ಲಿ ಕೆಲವು ಸಂಸದರನ್ನೊಳಗೊಂಡ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬೋಫೋರ್ಸ್ ಹಗರಣವನ್ನು ಪುನಃ ತನಿಖೆ ನಡೆಸುವಂತೆ ಸಿಬಿಐಗೆ ತಾಕೀತು ಮಾಡಿತ್ತು.  ವರ್ಷಗಳ ಹಿಂದೆ, ಬೋಫೋರ್ಸ್ ಹಗರಣದಲ್ಲಿ ಯಾವುದೇ ತನಿಖೆ ನಡೆಸದಂತೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವಂತೆಯೂ ಸಮಿತಿ ಸೂಚಿಸಿತ್ತು. ಆ ಸೂಚನೆಯೀಗ ಕಾರ್ಯಗತಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ, ತಾನು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಸಿಬಿಐ ತಿಳಿಸಿದೆ.

ಬೋಫೋರ್ಸ್ ಫಿರಂಗಿ ಖರೀದಿಯಲ್ಲಿ ಆಗಿನ ಕಾಲದಲ್ಲೇ ಒಟ್ಟು 64 ಕೋಟಿಯಷ್ಟು ಲಂಚ ಹರಿದಾಡಿದೆ ಎಂಬ ಆರೋಪಗಳಿವೆ. ಇದರ ತನಿಖೆ ನಡೆಸಿದ್ದ ಸಿಬಿಐ 1999ರ ಅಕ್ಟೋಬರ್ 22ರಂದು  ತನ್ನ ಮೊದಲ ಆರೋಪ ಪಟ್ಟಿ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್, 2011ರಲ್ಲಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಕ್ವಟ್ರೋಖಿಯ ಹೆಸರನ್ನು ಪ್ರಕರಣದಿಂದ ಕೈಬಿಟ್ಟಿತ್ತು. ಇದೀಗ ಬೋಫೋರ್ಸ್ ಹಗರಣ ಸುಪ್ರೀಂ ಅಂಗಳಕ್ಕೆ ಬರಲಿದ್ದೂ, ಮುಂದೇನಾಗುತ್ತದೋ ಕಾದು ನೋಡಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ