ಡೆತ್ ನೋಟ್ ಬರೆದು, ಜಿಲ್ಲಾಧಿಕಾರಿ ಆತ್ಮಹತ್ಯೆ !

11-08-2017 545
ಪಾಟ್ನಾ: ಬಿಹಾರದ ಬಕ್ಸಾರ್ ನ ಜಿಲ್ಲಾಧಿಕಾರಿಯಾಗಿ(ಜಿಲ್ಲಾ ದಂಡಾಧಿಕಾರಿ) ಇತ್ತೀಚಿಗಷ್ಟೇ ಅಧಿಕಾರ ವಹಿಸಿಕೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಮುಖೇಶ್ ಪಾಂಡೆ (32)ಅವರ ಮೃತದೇಹ ಉತ್ತರಪ್ರದೇಶದ ಘಾಜಿಯಾಬಾದ್ ರೈಲು ನಿಲ್ದಾಣದ ಬಳಿ ಪತ್ತೆಯಾಗಿದೆ. ಮುಖೇಶ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು, ಮೃತದೇಹದ ಬಳಿ ಡೆತ್ ನೋಟ್, ಪರ್ಸ್, ಗುರುತಿನ ಚೀಟಿ ಪತ್ತೆಯಾಗಿವೆ. ನಾನು ಮುಖೇಶ್ ಪಾಂಡೆ. ಐಎಎಸ್ ಅಧಿಕಾರಿ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ. ನನ್ನ ಸಾವಿನ ನಂತರ ನನ್ನ ಕುಟುಂಬದವರಿಗೆ ತಿಳಿಸಿ ಎಂದು ಅವರು ಡೆತ್ ನೋಟ್ನಲ್ಲಿ ದೂರವಾಣಿ ಸಂಖ್ಯೆಗಳನ್ನೂ ಬರೆದಿದ್ದಾರೆ. ಅಲ್ಲದೇ ಬಂಧು-ಮಿತ್ರರಿಗೆ ತಾವು ಸಾವಿಗೆ ಶರಣಾಗುತ್ತಿರುವುದಾಗಿ ವಾಟ್ಸ್ ಆ್ಯಪ್ ಸಂದೇಶದಲ್ಲಿ ತಿಳಿಸಿದ್ದಾರೆ.
ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಜಿಲ್ಲಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು, ಘಾಜಿಯಾಬಾದ್ ಪೊಲೀಸ್ ಅಧಿಕಾರಿ ಸೋಮವೀರ್ ಸಿಂಗ್ ತಿಳಿಸಿದ್ದಾರೆ. ಘಾಜಿಯಾಬಾದ್ ನಲ್ಲಿ ಸಂಬಂಧಿಕರನ್ನು ಭೇಟಿ ಮಾಡಲು ಬುಧವಾರ ಅವರು ಬಕ್ಸಾರ್ ನಿಂದ ಅಲ್ಲಿಗೆ ತೆರಳಿದ್ದರು. ಘಾಜಿಯಾಬಾದ್ ನ, ಲೀಲಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಅವರ ಮೊಬೈಲ್ ಫೋನ್ ಹೋಟೆಲ್ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ