ವೀರಶೈವರೇ ಬೇರೆ, ಲಿಂಗಾಯತರೇ ಬೇರೆ..?

Kannada News

10-08-2017

ಬೆಂಗಳೂರು: ವೀರಶೈವ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂಬ ಪ್ರತಿಪಾದನೆಯ ನಡುವೆಯೇ ವೀರಶೈವ ಬೇರೆ, ಲಿಂಗಾಯತ ಬೇರೆ, ಲಿಂಗಾಯತವನ್ನು ಸ್ವತಂತ್ರ ಧರ್ಮವಾಗಿ ಘೋಷಿಸಬೇಕು ಎಂಬ ಹಕ್ಕೊತ್ತಾಯವನ್ನು ಬಸವಾದಿ ಶರಣರ ಪರಂಪರೆಯಲ್ಲಿ ಅರಳಿರುವ ವಿರಕ್ತ ಮಠಾಧೀಶರುಗಳು ಮಂಡಿಸಿದ್ದಾರೆ.

ನಗರದಲ್ಲಿಂದು ನಡೆದ ಲಿಂಗಾಯತ ಪ್ರತ್ಯೇಕ ಧರ್ಮ ಸಮಾಲೋಚನಾ ಸಭೆಯಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂಬ ಒತ್ತಾಯ ಮೂಡಿ ಬಂದಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಎಂದು ಪರಿಗಣಿಸುವುದು ಸರಿಯಲ್ಲ. ವೀರಶೈವರೇ ಬೇರೆ, ಲಿಂಗಾಯತರೇ ಬೇರೆ, ಸ್ವತಂತ್ರ ಧರ್ಮದ ಮಾನ್ಯತೆ ಲಿಂಗಾಯತರಿಗೆ ಸಿಗಬೇಕು. ಅದಕ್ಕೆ ವೀರಶೈವ ಪದಜೋಡಣೆ ಬೇಡ ಎಂಬ ತೀರ್ಮಾನಕ್ಕೂ ಹರಗುರು ಚರಮೂರ್ತಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬಹುದು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಲಿಂಗಾಯತ ಪ್ರತ್ಯೇಕ ಧರ್ಮ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದ ಲಿಂಗಾಯತ ಸಮಾಜದ ಮುಖಂಡರುಗಳು, ವಿರಕ್ತ ಪರಂಪರೆಯ ಮಠಾಧೀಶಕರುಗಳು ಲಿಂಗಾಯತ ಧರ್ಮ ಬೇಡಿಕೆ ಇಂದು ನಿನ್ನೆಯದಲ್ಲ ಹಲವು ವರ್ಷಗಳಿಂದ ಇದೆ. ಸೂಕ್ತ ವೇದಿಕೆ ರಚನೆಯಾಗಿರಲಿಲ್ಲ. ಈಗ ಒಂದು ವೇದಿಕೆ ರೂಪುಗೊಂಡಿದೆ. ಅದರಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎಂಬ ಸ್ಪಷ್ಟ ನಿಲುವನ್ನು ಪ್ರತಿಪಾದಿಸಿದರು.

ವೀರಶೈವ ಲಿಂಗಾಯತ ಜಾತಿಯ ಉಪ ಪಂಗಡ, ಲಿಂಗಾಯತ ಧರ್ಮದ ಸ್ಥಾಪಕರು ಬಸವಣ್ಣನವರು. ನಾವೆಲ್ಲ ಬಸವಣ್ಣನವರ ಅನುಯಾಯಿಗಳು. ಹಾಗಾಗಿ, ಸರ್ವರನ್ನು ಒಳಗೊಂಡ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗಲೇಬೇಕು ಎಂಬ ಒತ್ತಾಯವನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರುಗಳು ಮಾಡಿದರು.

ಇಂದಿನ ಸಭೆಯಲ್ಲಿ ನಾಡಿನ ಬಹುತೇಕ ವಿರಕ್ತ ಪರಂಪರೆಯ ಮಠಾಧೀಶರುಗಳು ಪಾಲ್ಗೊಂಡಿದ್ದರು. ಹಳೇ ಮೈಸೂರು ಭಾಗದಲ್ಲಿ ಅತ್ಯಂತ ಪ್ರಬಲವಾಗಿರುವ ಸಿದ್ದಗಂಗಾ ಹಾಗೂ ಸುತ್ತೂರು ಶ್ರೀಗಳು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದ ಮಠಾಧೀಶರ ಪೈಕಿ ಉತ್ತರ ಕರ್ನಾಟಕದ ಬಸವಾದಿ ಶರಣರ ವಿರಕ್ತ ಮಠಗಳ ಶ್ರೀಗಳೇ ಹೆಚ್ಚಿದ್ದರು.

ಇಂದಿನ ಈ ಸಭೆಯಲ್ಲಿ ಪಕ್ಷಾತೀತವಾಗಿ ಹಲವು ರಾಜಕೀಯ ಮುಖಂಡರು ಪಾಲ್ಗೊಂಡಿದ್ದು, ಸಭೆಯ ತೀರ್ಮಾನಗಳಿಗೆ ಅವರೂ ಸಹ ಒಕ್ಕೊರಲಿನ ಬೆಂಬಲ ನೀಡಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಸಾಂವಿಧಾನಿಕ ಚೌಕಟ್ಟಿನಲ್ಲಿ ಯಾವುದೇ ರೀತಿ ಕ್ರಮಗಳಾಗಬೇಕು. ಈಗಿನ ರೀತಿಯಲ್ಲಿ ಮಾನ್ಯತೆ ದೊರಕಿಸಲು ಸಾಧ್ಯವೇ? ಇಲ್ಲವೇ? ಎಂಬ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಹಲವು ಮಾಹಿತಿಗಳನ್ನು ನೀಡಿದರು.

ಈ ಸಭೆಯಲ್ಲಿ ಸ್ವಾಗತ ಭಾಷಣ ಮಾ‌ಡಿದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಈ ಸಭೆ ಯಾರ ವಿರುದ್ಧವೂ ಅಲ್ಲ, ಇದು ರಾಜಕೀಯ ಸಭೆಯೂ ಅಲ್ಲ, ನಮ್ಮ ಸಮಾಜದ ಹಿತಕ್ಕಾಗಿ ಆಯೋಜಿಸಿರುವ ಸಭೆ. ಇದು ಸಮಾಜದ ಬದುಕಿನ ಪ್ರಶ್ನೆ ಲಿಂಗಾಯತ ಸಮಾಜದ ಬದುಕಿನ ಬಗ್ಗೆ ಗಟ್ಟಿ ನಿರ್ಧಾರವನ್ನು ಕೈಗೊಳ್ಳಲು ಈ ಸಭೆ ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಬಸವಣ್ಣನವರ ತತ್ವಗಳನ್ನು ಪಾಲಿಸುವವರು ನಾವು, ಬಸವಣ್ಣನವರ ಪರ ಇರುವವರು ಒಳ ಬರಬಹುದು. ಬಸವಣ್ಣನವರ ವಿರೋಧವಿರುವವರು ಹೊರಗೆ ಹೋಗಬಹುದು ಎಂದು ಅವರು ಹೇಳಿದಾಗ ಸಭೆಯಲ್ಲಿ ದೊಡ್ಡ ಕರತಾಡನವೇ ಆಯಿತು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು. ವೀರಶೈವ ಲಿಂಗಾಯತ ಧರ್ಮಕ್ಕೆ ಅಲ್ಲ, ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ನಾಡಿನ ಬಸವಾದಿ ಶರಣರ, ಮಠಾಧೀಶರ ನಿಲುವಿನಿಂದ ಅಖಿಲ ಭಾರತ ವೀರಶೈವ ಮಹಾಸಭಾ ಇಬ್ಭಾಗದ ಹಾದಿಗೆ ಬಂದು ನಿಂತಂತಾಗಿದೆ. ವೀರಶೈವ ಹಾಗೂ ಲಿಂಗಾಯತರು ಒಂದೆ. ವೀರಶೈವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎಂಬುದು ಅಖಿಲ ಭಾರತ ವೀರಶೈವ ಮಹಾಸಭಾದ ನಿಲುವಾಗಿದೆ.

ಇದಕ್ಕೆ ಪ್ರತಿಯಾಗಿ ಇಂದು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು. ವೀರಶೈವಕ್ಕೆ ಅಲ್ಲ ಎಂಬ ನಿಲುವು ವ್ಯಕ್ತವಾಗಿದೆ. ಹಾಗಾಗಿ, ಅಖಿಲ ಭಾರತ ವೀರಶೈವ ಮಹಾಸಭಾಗೆ ಸಡ್ಡು ಹೊಡೆದು ಲಿಂಗಾಯತ ಮಹಾಸಭಾವನ್ನು ರಚನೆ ಮಾಡುವ ಪ್ರಸ್ತಾಪಗಳು ಕೇಳಿ ಬಂದಿವೆ.

ಇಂದಿನ ಸಭೆಯಲ್ಲಿ ಇಳಕಲ್ಲಿನ ಮಹಂತಪ್ಪ ಅಪ್ಪಗಳ್, ಗದುಗಿನ ತೋಂಟದ ಮಠದ ಸಿದ್ದಲಿಂಗ ಸ್ವಾಮೀಜಿಗಳು, ಚಿತ್ರದುರ್ಗದ ಮರುಘಾ ಮಠದ ಡಾ. ಶಿವಮೂರ್ತಿ ಶರಣರು, ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ದರಾಮ ಸ್ವಾಮಿಗಳು, ಬಾಲ್ಕಿಯ ಹಿರೇಮಠದ ಬಸವಲಿಂಗ ಪಟ್ಟದೇವರು, ಧಾರವಾಡದ ಮುರುಘ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಕೂಡಲಸಂಗಮದ ಪಂಚಮಸಾಲಿ ಮಠದ ಬಸವಮೃತ್ಯುಂಜಯ ಸ್ವಾಮೀಜಿಗಳು, ಬೇಲಿಮಠದ ಶಿವರುದ್ರ ಸ್ವಾಮೀಜಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ವೀರಮಠಾಧೀಶರುಗಳು ಪಾಲ್ಗೊಂಡಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ