ಅಘೋಷಿತ ಆಸ್ತಿ: ದಾಖಲೆ ಸಲ್ಲಿಸಿದ ಡಿಕೆಶಿ !

Kannada News

10-08-2017

ಬೆಂಗಳೂರು: ಐಟಿ ದಾಳಿಯ ವೇಳೆ ಅಪಾರ ಪ್ರಮಾಣದ ಅಘೋಷಿತ ಆಸ್ತಿ-ಪಾಸ್ತಿ ದೊರೆತಿರುವ ಸಂಬಂಧ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಇಂದು ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಹಾಜರಾಗಿ ದಾಖಲೆ ಪತ್ರಗಳನ್ನು ಸಲ್ಲಿಸಿದರು. ಆದಾಯ ತೆರಿಗೆ ಇಲಾಖೆ ಬಯಸಿದ್ದ ಕೆಲವು ಕಾಗದ ಪತ್ರ ಹಾಗೂ ದಾಖಲೆ ಪತ್ರಗಳನ್ನು ಸಲ್ಲಿಸಲು ನಾನಾಗಿಯೇ ಆಗಮಿಸಿದ್ದೇನೆ. ನನಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ಸಮನ್ಸ್ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಸದ ಡಿ.ಕೆ. ಸುರೇಶ್, ಜ್ಯೋತಿಷಿ ದ್ವಾರಕಾನಾಥ್ ಸೇರಿದಂತೆ, ದಾಳಿಗೆ ಒಳಗಾಗಿದ್ದ ಹಲವರು ವಿಚಾರಣೆಗೆ ಹಾಜರಾಗಿದ್ದರು.ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಬಾರಿಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆ ತಮಗೆ ಯಾವುದೇ ಸಮನ್ಸ್ ಜಾರಿ ಮಾಡಿಲ್ಲ. ಕೆಲವು ಕಾಗದ ಪತ್ರಗಳು ಹಾಗೂ ದಾಖಲೆಗಳನ್ನು ಸಲ್ಲಿಸುವುದಿತ್ತು. ಹಾಗಾಗಿ ಬಂದಿದ್ದೇನೆ ಎಂದರು. ಇಲಾಖೆಯ ಅಧಿಕಾರಿಗಳು ನನ್ನ ಯಾವುದೇ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಬೇರೆಯವರ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೋ, ಇಲ್ಲವೋ ಅದು ತಮಗೆ ತಿಳಿದಿಲ್ಲ. ನನಗೆ ಹಾಸ್ಟೆಲ್ ಗೆ ಒಂದು, ವಿದ್ಯಾಸಂಸ್ಥೆಗೆ ಒಂದು, ಶಾಸಕರಿಗೆ ಬರುವ ಸಂಬಳಕ್ಕೆ ಇನ್ನೊಂದು ಖಾತೆ, ವೈಯಕ್ತಿಕ ಖಾತೆ ಹೀಗೆ ಬೇರೆ ಬೇರೆ ಖಾತೆಗಳಿವೆ, ಅವುಗಳಲ್ಲಿ ಯಾವುದನ್ನೂ ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಹೇಳಿದರು.

ಗುಜರಾತ್‍ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ ನೀಡಿದ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಕೇಂದ್ರ ಸರ್ಕಾರ, ಕೆಂಗಣ್ಣು ಬೀರಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜಕಾರಣಕ್ಕೆ ಬಂದ ಆರಂಭದ ದಿನದಿಂದಲೂ ವಿರೋಧವನ್ನು ಎದುರಿಸಿಕೊಂಡು ಬಂದಿರುವವನು ನಾನು. ಹೀಗಾಗಿ ಕೆಂಗಣ್ಣಿಗೆ ಗುರಿಯಾಗುವುದು ನನಗೆ ಹೊಸದೇನೂ ಅಲ್ಲ ಎಂದರು. ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಹಮದ್ ಪಟೇಲ್ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ, ಎಲ್ಲಾ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ನನಗೆ ಅದೇ ದೊಡ್ಡ ಉಡುಗೊರೆ. ಹೀಗಾಗಿ ಬೇರೆ ಉಡುಗೊರೆ ಬೇಡ. ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಖುಷಿಯಾಗಿದ್ದಾರೆ, ಅಷ್ಟೇ ಸಾಕು ಎಂದರು.

ಭಾರತ ಬಿಟ್ಟು ತೊಲಗಿ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ಮಧ್ಯೆ ಭಿನ್ನಾಭಿಪ್ರಾಯವಿದೆ, ಎನ್ನುವ ರೀತಿಯಲ್ಲಿ ಮಾಧ್ಯಮಗಳು ಬಿಂಬಿಸಿವೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಕ್ಕೆ ಈ ತಿಂಗಳ 12 ರಂದು ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಆದಿ ಚುಂಚನಗಿರಿ ಮಠಾಧ್ಯಕ್ಷರನ್ನು ಭೇಟಿ ಮಾಡುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಅವರನ್ನು ಭೇಟಿ ಮಾಡುವುದು - ಬಿಡುವುದು ಅವರ ಭಕ್ತರಿಗೆ ಸೇರಿದ ವಿಷಯ. ಅಲ್ಲಿಗೆ ಹೋದ ಮೇಲೆ ರಾಜಕೀಯ ಮಾಡುವುದಿಲ್ಲ ಎಂದು ಭಾವಿಸಿದ್ದೇನೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ