ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ !

Kannada News

09-08-2017

ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ತಲೆ ಎತ್ತಿದ್ದು ನಾಲ್ಕು ಕಡೆ ಸರ ಅಪಹರಣ ನಡೆದಿದ್ದು, ರಾಜರಾಜೇಶ್ವರಿ ನಗರ, ಚಂದ್ರಾ ಲೇಔಟ್, ಆರ್.ಎಂ.ಸಿ ಯಾರ್ಡ್ ಹಾಗೂ ಆರ್.ಟಿ ನಗರ ಸೇರಿ ನಾಲ್ಕು ಕಡೆಗಳಲ್ಲಿ ಸರಗಳ್ಳರು ಕೈ ಚಳಕ ತೋರಿದ್ದಾರೆ

ರಾಜರಾಜೇಶ್ವರಿ ನಗರ: ರಾಜರಾಜೇಶ್ವರಿ ನಗರದ ರಾಘವೇಂದ್ರ ಮಠದ ಬಳಿ ಬುಧವಾರ  ಬೆಳಿಗ್ಗೆ 6.45ರ ವೇಳೆ ಮನೆ ಸಮೀಪವೇ ಇದ್ದ ಯೋಗ ಶಾಲೆಗೆ ಹೋಗುತ್ತಿದ್ದ ಮಹಿಳೆಯನ್ನು ಬೈಕ್‍ ನಲ್ಲಿ ಹಿಂಬಾಲಿಸಿದ ಇಬ್ಬರು ಸರಗಳ್ಳರು 70 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ. ರಾಘವೇಂದ್ರ ಮಠ ಸಮೀಪದ ನಿವಾಸಿ ಶಾಕುಂತಲಾ ರಾಮಣ್ಣ ಎಂಬುವರು ಇಂದು ಬೆಳಗಿನ ಜಾವ 6.15ರಲ್ಲಿ ಮನೆ ಸಮೀಪವೇ ಇದ್ದ ಯೋಗ ಶಾಲೆಗೆ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬೈಕ್‍ನಲ್ಲಿ ಬಂದ ಸರಗಳ್ಳರು ಮಾಂಗಲ್ಯಸರ ಕಸಿದು  ಪರಾರಿಯಾಗಿದ್ದಾರೆ.

ಚಂದ್ರಾ ಲೇಔಟ್: ಚಂದ್ರಾ ಲೇಔಟ್ ಬಳಿ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಬೈಕ್‍ ನಲ್ಲಿ ಹಿಂಬಾಲಿಸಿದ ಸರಗಳ್ಳರು 20 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ. ಮಾನಸ ನಗರ ನಿವಾಸಿ ಗೌರಮ್ಮ (45) ಎಂಬುವರು ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದಾರೆ. ಮಂಗಳವಾರ  ರಾತ್ರಿ 8 ಗಂಟೆಯಲ್ಲಿ ಮನೆಗೆ ಹೋಗುತ್ತಿದ್ದಾಗ ಮನೆಗೆ ಸ್ವಲ್ಪ ದೂರವಿದ್ದಂತೆ ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಸರಗಳ್ಳರು ಸರ ಎಗರಿಸಿದ್ದಾರೆ.

ಆರ್.ಎಂ.ಸಿ.ಯಾರ್ಡ್: ಆರ್.ಎಂ.ಸಿ ಯಾರ್ಡ್ ಬಳಿ ಬಸ್ ಇಳಿದು ಮಂಗಳವಾರ  ರಾತ್ರಿ 9.15ರಲ್ಲಿ ಮನೆಗೆ ನಡೆದು ಹೋಗುತ್ತಿದ್ದ ರಾಘವೇಂದ್ರ ಲೇಔಟ್ ನಿವಾಸಿ ಜಯಲಕ್ಷ್ಮಮ್ಮ ಎಂಬುವರನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಕಳ್ಳರು ಇವರ ಕೊರಳಿಗೆ ಕೈ ಹಾಕಿ 55 ಗ್ರಾಂ ಸರ ಎಗರಿಸಿದ್ದಾರೆ.

ಆರ್.ಟಿ ನಗರ: ಆರ್.ಟಿ ನಗರದ ಬಳಿ ಶಾಲೆಯಿಂದ ಮಗುವನ್ನು ಕರೆದುಕೊಂಡು ಮನೆ ಬಳಿ ಬರುತ್ತಿದ್ದ ಮಹಿಳೆಯನ್ನು, ಹಿಂಬಾಲಿಸಿ ಬೈಕ್‍ ನಲ್ಲಿ ಬಂದ ಇಬ್ಬರು ಕಳ್ಳರು ಇವರ ಕೊರಳಲ್ಲಿದ್ದ 45 ಗ್ರಾಂ ಸರ ಎಗರಿಸಿದ್ದಾರೆ. ಗಿಡ್ಡಪ್ಪ ಬ್ಲಾಕ್ ನಿವಾಸಿ ಸವಿತಾ ಎಂಬುವರು ಮಂಗಳವಾರ ಮಧ್ಯಾಹ್ನ 3 ಗಂಟೆಯಲ್ಲಿ ಶಾಲೆಯಿಂದ ಮಗುವನ್ನು ಕರೆದುಕೊಂಡು ಮನೆ ಬಳಿ ಬರುತ್ತಿದ್ದಂತೆ ಸರಗಳ್ಳರು ಸರ ಎಗರಿಸಿ ಪರಾರಿಯಾಗಿದ್ದಾರೆ. ಈ ನಾಲ್ಕೂ ಪ್ರಕರಣಗಳನ್ನು ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ಸರಗಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ