ವಿಜಯಪುರದಲ್ಲಿ ರಾಷ್ಟ್ರೀಯ ಜಲ ಸಮಾವೇಶ !

Kannada News

09-08-2017

ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ಜಲಕ್ರಾಂತಿ ಮಾಡುವ ಉದ್ದೇಶದೊಂದಿಗೆ ಈ ತಿಂಗಳ 16 ರಿಂದ 18 ರವರೆಗೆ ವಿಜಯಪುರದಲ್ಲಿ ರಾಷ್ಟ್ರೀಯ ಜಲಸಮಾವೇಶ ನಡೆಯಲಿದೆ ಎಂದು ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಲತಜ್ಞ, ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಈ ವಿಷಯ ತಿಳಿಸಿದರು.

ರಾಜೇಂದ್ರ ಸಿಂಗ್ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ದೇಶದಲ್ಲಿ ಮಳೆಯ ಚಕ್ರವೇ ಬದಲಾಗಿದ್ದು ಇದರಿಂದಾಗಿ ನಾವು ಅಕಾಲದಲ್ಲಿ ಬರಗಾಲ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಳೆಯ ಚಕ್ರ ಬದಲಾಗಿದೆ. ಆದರೆ ರೈತರ ಕೃಷಿ ಚಕ್ರ ಬದಲಾಗಿಲ್ಲ. ಹೀಗಾಗಿ ಅವರು ನಿರಂತರ ನಷ್ಟ ಅನುಭವಿಸುತ್ತಿದ್ದಾರೆ. ಇದು ಮುಂದುವರಿಯುತ್ತಲೇ ಇದೆ. ಈ ನಡುವೆ ಕಳೆದ ಇಪ್ಪತ್ತು ವರ್ಷಗಳಿಂದ ನಾವು ನದಿ ಜೋಡಣೆಯ ವಿಷಯವನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಅದಕ್ಕೂ ಮುನ್ನ ನಮ್ಮ ರಾಜರುಗಳ ಕಾಲದಲ್ಲಿ ಕೆರೆ, ಕಟ್ಟೆಗಳನ್ನು ಹೇಗೆ ಭರ್ತಿ ಮಾಡುತ್ತಿದ್ದರು? ಮಳೆ ಆಧರಿತ ಪ್ರದೇಶಗಳಲ್ಲೂ ಲಕ್ಷಾಂತರ ಮಂದಿಗೆ ಹೇಗೆ ಕುಡಿಯಲು, ಕೃಷಿ ಮಾಡಲು ನೀರು ಒದಗಿಸುತ್ತಿದ್ದರು ಎಂಬುದನ್ನು ನೋಡಬೇಕಿದೆ ಎಂದರು.

ವಾಸ್ತವವಾಗಿ ನಾವು ದೆಹಲಿಯಲ್ಲಿ ರಾಷ್ಟ್ರೀಯ ಜಲಸಮಾವೇಶ ಮಾಡಲು ತೀರ್ಮಾನಿಸಿದ್ದೆವು. ಆದರೆ ಕರ್ನಾಟಕದ ವಿಜಯಪುರದಲ್ಲಿದ್ದ ನೀರು ಪೂರೈಕೆಯ ವ್ಯವಸ್ಥೆಯನ್ನು ನೋಡಿದ ಮೇಲೆ ಅಲ್ಲಿಯೇ ಈ ಸಮಾವೇಶ ನಡೆಸಬೇಕೆಂದು ತೀರ್ಮಾನಿಸಿದೆವು. ಮಳೆ ಆಧರಿತ ಪ್ರದೇಶವಾಗಿದ್ದರೂ ಅಂದಿನ ಕಾಲದಲ್ಲೇ ಆದಿಲ್ ಷಾಹಿಗಳು ಹತ್ತು ಲಕ್ಷ ಜನರಿಗೆ ನೀರು ಪೂರೈಕೆ ಮಾಡುವ ವ್ಯವಸ್ಥಿತ ಜಾಲ ಹೊಂದಿದ್ದರು ಎಂಬುದು ಸಣ್ಣ ವಿಷಯವಲ್ಲ. ನಾವೀಗ ಅಂತಹ ವ್ಯವಸ್ಥೆಯ ಕಡೆ ನೋಡಬೇಕಾಗಿದೆ ಎಂದು ಹೇಳಿದರು.

ದೊಡ್ಡ-ದೊಡ್ಡವರಿಗಾಗಿ, ದೊಡ್ಡ-ದೊಡ್ಡ ಯೋಜನೆಗಳು ಜಾರಿಯಾಗುತ್ತವೆ. ಆದರೆ ಸಣ್ಣ- ಸಣ್ಣವರಿಗಾಗಿ ಸಣ್ಣ-ಸಣ್ಣ ಯೋಜನೆಗಳು ಜಾರಿಯಾಗುತ್ತವೆ. ಆದರೆ ಅವು ಪರಿಣಾಮಕಾರಿಯಾಗಿರುತ್ತವೆ ಎಂಬುದಕ್ಕೆ ಬಿಜಾಪುರವೇ ಉದಾಹರಣೆ.

ಇದೇ ಕಾರಣಕ್ಕಾಗಿ ವಿಜಯಪುರದಲ್ಲಿ ರಾಷ್ಟ್ರೀಯ ಜಲಸಮಾವೇಶವನ್ನು ನಡೆಸುತ್ತಿದ್ದು ಮಧ್ಯಪ್ರದೇಶದ ಶಿವರಾಜ್‍ಸಿಂಗ್ ಚೌಹಾಣ್ ಅವರಿಂದ ಹಿಡಿದು ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ತನಕ ನೂರಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಲಿದ್ದಾರೆ. ನೀರಿಗಾಗಿ ದೇಶಾದ್ಯಂತ ಕೆಲಸ ಮಾಡಿದ ರಾಜಕೀಯ ನಾಯಕರು, ಜಲತಜ್ಞರು, ತಾಂತ್ರಿಕ ಪರಿಣಿತರು ಸೇರಿದಂತೆ ಎಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಿ ತಮ್ಮ ತಮ್ಮ ಅನುಭವಗಳನ್ನು ಹೇಳಲಿದ್ದಾರೆ. ಆದರೆ ಯಾರೂ ತಮ್ಮ ಪ್ರಬಂಧವನ್ನು ಮಂಡಿಸುವುದಿಲ್ಲ. ಪ್ರಬಂಧ ಮಂಡಿಸುವುದು ಅರ್ಥಹೀನ ಎಂದರು.

ಶಿವರಾಜ್ ಸಿಂಗ್ ಚೌಹಾಣ್ ಅವರು ನರ್ಮದಾ ನದಿ ವ್ಯಾಪ್ತಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಯಂತ್ರಗಳಿಂದ ಗಣಿಗಾರಿಕೆ ಮಾಡಬಾರದು. ಹೆಣ್ಣು ಮಕ್ಕಳು ಮಾತ್ರ ಕೈಯ್ಯಾರೆ ಗಣಿಗಾರಿಕೆ ಮಾಡಬೇಕು ಎಂಬ ನಿಯಮ ತಂದಿದ್ದಾರೆ. ಇದೇ ರೀತಿ ಕರ್ನಾಟಕದ ಮುಖ್ಯಮಂತ್ರಿಗಳೂ ಈ ವಿಷಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ.

ಆದರೂ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಭಾಗಗಳೂ ಬರಗಾಲ ಇಲ್ಲವೇ ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತವೆ. ಹೀಗಾಗಿ ವ್ಯವಸ್ಥೆಯನ್ನು ಬರಗಾಲ ಹಾಗೂ ಪ್ರವಾಹ ಪೀಡಿತ ಸ್ಥಿತಿಯಿಂದ ಮುಕ್ತಗೊಳಿಸುವುದು ಹೇಗೆ? ಎಂಬ ಕುರಿತು ಸಮಾವೇಶ ಚರ್ಚಿಸಲಿದೆ ಎಂದರು.

ಕರ್ನಾಟಕದ ರಾಜಧಾನಿ ಬೆಂಗಳೂರು ದೇಶದ ಮುದ್ದಿನ ಮಗನಂತಾಗಿ ಹೋಗಿದೆ. ಮುದ್ದಿನ ಮಗನ ಮೇಲೆ ಅಕ್ಕರೆ ಜಾಸ್ತಿ. ಹೀಗಾಗಿ ಮುದ್ದು ಹಲವು ಅಪಾಯಗಳನ್ನು ತಂದೊಡ್ಡುತ್ತದೆ. ಹೀಗಾಗಿ ಬರೀ ಕಾವೇರಿಯಲ್ಲ, ರಾಜ್ಯದಲ್ಲಿರುವ ಎಲ್ಲ ನದಿಗಳ ನೀರನ್ನು ತಂದು ಪೂರೈಕೆ ಮಾಡಿದರೂ ಬೆಂಗಳೂರನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದರ ಬದಲು ಜನರಲ್ಲಿ ಅರಿವು ಮೂಡಿಸಬೇಕು. ನೀರಿನ ಬಳಕೆಯ ಕುರಿತು, ಹವಾಮಾನ ವೈಪರೀತ್ಯದ ಕುರಿತು ಜಾಗೃತಿ ಮೂಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಬಿಜಾಪುರದ ಆದಿಲ್ ಷಾಹಿ ದೊರೆಗಳ ಕಾಲದಲ್ಲಿ ಇದ್ದ ಕೆರೆಗಳು ಹಾಗೂ ಬಾವಿಯಿಂದ ವಿಜಯನಗರದ ಲಕ್ಷಾಂತರ ಮಂದಿಗೆ ನೀರು ಪೂರೈಸಲಾಗುತ್ತಿತ್ತು ಎಂಬ ವಿವರವನ್ನು ಗಮನಿಸಿದ ಮೇಲೆ ರಾಜೇಂದ್ರ ಸಿಂಗ್ ಅವರು ಅಲ್ಲಿಯೇ ರಾಷ್ಟ್ರೀಯ ಜಲಸಮಾವೇಶ ಮಾಡಲು ತೀರ್ಮಾನಿಸಿದರು ಎಂದರು.

ಈ ಸಮಾವೇಶದ ಮೂಲಕ ನಾವು ಭಾರೀ ನೀರಾವರಿಯ ಕುರಿತಾಗಿಯಷ್ಟೇ ಅಲ್ಲ,ಸಣ್ಣ ನೀರಾವರಿಯ ಕಡೆಗೂ ಗಮನ ಹರಿಸಬೇಕಾದ ಸಂದೇಶವನ್ನು ರವಾನಿಸಲು ಬಯಸುತ್ತೇವೆ ಎಂದರು. ಈ ಸಮಾವೇಶದ ಮೂಲಕ ಕೇವಲ ಕರ್ನಾಟಕವಲ್ಲ, ದೇಶ ಹಾಗೂ ಜಗತ್ತಿನಲ್ಲಿ ಜಲಕ್ರಾಂತಿಯಾಗಬೇಕಾದ ಅಗತ್ಯದ ಕುರಿತು ಸಂದೇಶ ರವಾನಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ವಿವರ ನೀಡಿದರು.

ಇಡೀ ದೇಶದಲ್ಲೇ ಹನಿ ನೀರಾವರಿ ಪದ್ಧತಿಯನ್ನು ಯಶಸ್ವಿಯಾಗಿ ಅಳವಡಿಸಿದ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಇದೇ ರೀತಿ ಸೂಕ್ಷ್ಮ ನೀರಾವರಿಯ ಮೂಲಕ ನೀರಿನ ಬಳಕೆಯನ್ನು ನಿಯಂತ್ರಿಸುವುದು ಸೇರಿದಂತೆ ಹಲವು ಪ್ರಮುಖ ಅಂಶಗಳ ಕುರಿತು ರಾಷ್ಟ್ರೀಯ ಜಲಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ