ಕೆರೆ-ಕಟ್ಟೆಗಳಿಗೆ ನೀರು: ಬತ್ತ ಬೆಳೆಯುಂತಿಲ್ಲ ..?

Kannada News

09-08-2017

ಬೆಂಗಳೂರು: ಕಾವೇರಿ ಜಲಾನಯನ ಪಾತ್ರದ ಕೆರೆಗಳಿಗೆ ಗುರುವಾರದಿಂದಲೇ ನೀರು ಹರಿಸಲು ನಿರ್ಧರಿಸಲಾಗಿದ್ದು ಅದೇ ಕಾಲಕ್ಕೆ ಯಾವ ಕಾರಣಕ್ಕೂ ಭತ್ತ ಬೆಳೆಯದಂತೆ ಸೂಚಿಸಲು ಇಂದಿಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ.

ಮಂಡ್ಯ ಜಿಲ್ಲೆಯ ಸಂಸದರು, ಶಾಸಕರು, ಸಚಿವರು ಹಾಗೂ ಅಧಿಕಾರಿಗಳ ಜತೆ ಗೃಹ ಕಛೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯ ನಂತರ ಈ ತೀರ್ಮಾನವನ್ನು ಪ್ರಕಟಿಸಲಾಗಿದೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಗುರುವಾರದಿಂದಲೇ ಕಾವೇರಿ ಜಲಾಯನದ ಪಾತ್ರದ ಕೆರೆ, ಕಟ್ಟೆಗಳಿಗೆ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ನೀರು ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಕಾವೇರಿ ಜಲಾನಯನ ಪಾತ್ರದ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ,ಕಳೆದ ವರ್ಷದ ಪರಿಸ್ಥಿತಿ ಹಾಗೂ ಈ ವರ್ಷದ ಪರಿಸ್ಥಿತಿಯ ಕುರಿತ ಸಮಗ್ರ ವಿವರ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಭೇಧವಿಲ್ಲದೆ ಸರ್ವಾನುಮತದಿಂದ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು ಮೊದಲನೆಯ ನಿರ್ಣಯದ ಪ್ರಕಾರ ಕಾವೇರಿ ಜಲಾನಯನ ಪಾತ್ರದ ಕೆರೆ, ಕಟ್ಟೆಗಳಿಗೆ ಆಗಸ್ಟ್ ಹತ್ತರ ಗುರುವಾರದಿಂದಲೇ ನೀರು ಭರ್ತಿ ಮಾಡಲಾಗುವುದು ಎಂದರು.

ಎರಡನೆಯ ನಿರ್ಣಯದ ಪ್ರಕಾರ,ಯಾವ ಕಾರಣಕ್ಕೂ ಕಾವೇರಿ ನದಿ ಪಾತ್ರದಲ್ಲಿ ರೈತರು ಭತ್ತ ಬೆಳೆಯಕೂಡದು. ಯಾಕೆಂದರೆ ಒಮ್ಮೆ ಭತ್ತ ಬೆಳೆಯಲು ಮಡಿ ಹಾಕಿದರೆಂದರೆ ನಾಲ್ಕೈದು ಬಾರಿ ನೀರು ಹರಿಸಬೇಕಾಗುತ್ತದೆ. ಆದರೆ ಅಷ್ಟು ಪ್ರಮಾಣದ ನೀರನ್ನು ರೈತರಿಗೆ ಒದಗಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರೈತರೇ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಇವತ್ತು ಕಾವೇರಿ ಜಲಾನಯನ ಪಾತ್ರದ ನಾಲ್ಕು ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕೇವಲ ನಲವತ್ತೈದು ಟಿಎಂಸಿ ನೀರು. ಕಳೆದ ವರ್ಷ ಇದೇ ಅವಧಿಯಲ್ಲಿ 53 ಟಿಎಂಸಿ ನೀರು ಇತ್ತು.

ಆದರೆ ಭತ್ತ, ಕಬ್ಬು,ಇತರೆ ಬೆಳೆಗಳೂ ಸೇರಿದಂತೆ ಒಟ್ಟು ಎಂಟು ಲಕ್ಷ ಎಕರೆಗೂ ಹೆಚ್ಚು ಪ್ರದೇಶಕ್ಕೆ ಕೃಷಿಗೆ ನೀರು ಒದಗಿಸಬೇಕು.ಇದಕ್ಕಾಗಿ ತೊಂಭತ್ತೈದು ಟಿಎಂಸಿ ನೀರು ಬೇಕು. ಅದೇ ರೀತಿ ಮೈಸೂರು, ಮಂಡ್ಯ, ಬೆಂಗಳೂರು ಮತ್ತಿತರ ಹಳ್ಳಿಗಳಿಗೆ ತಿಂಗಳಿಗೆ 2.8 ಟಿಎಂಸಿಯಂತೆ ಒಟ್ಟು ಮೂವತ್ತು ಟಿಎಂಸಿ ನೀರನ್ನು ಪೂರೈಸಬೇಕು.ಅಂದರೆ ನಮ್ಮ ಸಧ್ಯದ ಬೇಡಿಕೆ ಪ್ರಮಾಣವೇ ನೂರಿಪ್ಪತ್ತೈದು ಟಿಎಂಸಿ ಎಂದು ಅವರು ಹೇಳಿದರು.

ವಾಸ್ತವವಾಗಿ ಈ ವರ್ಷ ಇದುವರೆಗೆ ಕಾವೇರಿ ನದಿ ಪಾತ್ರದಲ್ಲಿ ಹರಿದು ಬಂದಿರುವ ನೀರಿನ ಪ್ರಮಾಣ 60 ಟಿಎಂಸಿ ಮಾತ್ರ. ಇದರಲ್ಲಿ ಸಧ್ಯ ನಾವೇ ಅನುಸರಿಸುತ್ತಿರುವ ಸಂಕಷ್ಟ ಸೂತ್ರದ ಪ್ರಕಾರ ತಮಿಳ್ನಾಡಿಗೆ 27 ಟಿಎಂಸಿ ನೀರು ಒದಗಿಸಬೇಕಿತ್ತು. ಆದರೆ ನಾವು 12 ಟಿಎಂಸಿ ನೀರು ಮಾತ್ರ ಒದಗಿಸಿದ್ದೇವೆ ಎಂದರು.

ಮುಂದೆ ಮಳೆ ಚೆನ್ನಾಗಿ ಆದರೆ ತಮಿಳುನಾಡಿಗೆ ನೀರು ಕೊಡಲು ನಮ್ಮ ಯಾವ ಅಭ್ಯಂತರವೂ ಇಲ್ಲ. ಆಗಸ್ಟ್ 10 ರ ಗುರುವಾರದಿಂದ ಉತ್ತಮ ಮಳೆ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಾವೂ ಆಶಾಭಾವನೆ ಹೊಂದಿದ್ದೇವೆ ಎಂದರು. ಜೂನ್ ಹಾಗೂ ಜುಲೈ ತಿಂಗಳ ಒಳಗೆ ನಮಗೆ ಶೇಕಡಾ 60 ರಷ್ಟು ಪ್ರಮಾಣದ ಮಳೆ ಬರಬೇಕಿತ್ತು. ಆದರೆ ಬರಲಿಲ್ಲ. ಈಗ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬಾಕಿ ಉಳಿದ ಶೇಕಡಾ 40 ರಷ್ಟು ಪ್ರಮಾಣದ ಮಳೆ ಬರಬಹುದು ಎಂದು ನಿರೀಕ್ಷಿಸಿದ್ದೇವೆ ಎಂದರು. ಹೀಗಾಗಿ ನಿರೀಕ್ಷಿತ ಪ್ರಮಾಣದ ಮಳೆ ಬಂದರೆ ಪುನ: ಕಾಲ ಕಾಲಕ್ಕೆ ಕೃಷಿಗೆ ನೀರು ಒದಗಿಸುವುದು ಸೇರಿದಂತೆ ಎಲ್ಲ ವಿಷಯಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳುತ್ತಿರುತ್ತೇವೆ ಎಂದರು.

ಈ ಹಿಂದೆ 1892 ಹಾಗೂ 1924 ರಲ್ಲಿ ಕಾವೇರಿ ನೀದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಆದ ಒಪ್ಪಂದ ಸರಿಯಾಗಿಲ್ಲ. ಅದು ಬ್ರಿಟಿಷರ ಕಾಲದಲ್ಲಿ ಆದ ಒಪ್ಪಂದ. ಊಳಿಗಮಾನ್ಯ ಪದ್ಧತಿ ಇದ್ದ ಕಾಲದಲ್ಲಿ ಆದ ಒಪ್ಪಂದ. ಹೀಗಾಗಿ ಹಲವು ಪ್ರಭಾವಗಳು ಈ ಒಪ್ಪಂದದಲ್ಲಿ ಕೆಲಸ ಮಾಡಿರುತ್ತವೆ. ಹೀಗಾಗಿ ಆ ಒಪ್ಪಂದಗಳನ್ನು ರದ್ದು ಮಾಡಬೇಕು ಎಂದು ಸವೋಚ್ಚ ನ್ಯಾಯಾಲಯದಲ್ಲಿ ನಾವು ವಾದಿಸಿದ್ದೇವೆ ಎಂದರು. ನಮ್ಮ ವಾದವನ್ನು ಸಮರ್ಪಕವಾಗಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಮಂಡಿಸಿದ್ದೇವೆ. ಆಗಸ್ಟ್ 9 ರಿಂದ ತಮಿಳುನಾಡು ತನ್ನ ವಾದವನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಮಂಡಿಸಲಿದ್ದು, ಆನಂತರ ನಾವು ಮತ್ತೆ ನಮ್ಮ ವಾದವನ್ನು ಮುಂದುವರಿಸುತ್ತೇವೆ ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ