ಮದನ್ ಪಟೇಲ್ ಗೆ ಜೀವ ಬೆದರಿಕೆ..?

Kannada News

08-08-2017

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿ ಇರುವಂತೆಯೇ ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಕಚ್ಚಾಟ ಆರಂಭವಾಗಿದೆ. ಟಿಕೆಟ್‍ಗಾಗಿ ನಡೆಯುತ್ತಿರುವ ಪೈಪೋಟಿ  ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ನಗರದ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‍ ಗಾಗಿ ಕಾಂಗ್ರೆಸ್‍ ನಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟ ಬಹಿರಂಗಗೊಂಡಿದ್ದು, ಇಬ್ಬರು ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಫ್ಲೆಕ್ಸ್ ಬ್ಯಾನರ್‍ ಗಳನ್ನು ಹರಿದುಹಾಕಿದ ವಿಷಯ ಮಾತ್ರ. ಆದರೆ ಅದನ್ನೇ ನೆಪವಾಗಿಸಿಕೊಂಡು 2013 ರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪಿ. ರಮೇಶ್ ಹಾಗೂ ಕೆಪಿಸಿಸಿ ನೂತನ ಕಾರ್ಯದರ್ಶಿ ಹಾಗೂ ನಟ ಮದನ್ ಪಟೇಲ್ ನಡುವೆ ಮಾತಿನ ವಾಗ್ವಾದ ಏರ್ಪಟ್ಟಿದೆ.

ಸಿ.ವಿ.ರಾಮನ್ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾದ ಡಾ.ಜಿ.ಪರಮೇಶ್ವರ್ ಅವರಿಗೆ ಹಾಗೂ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಮದನ್ ಪಟೇಲ್ ಅವರಿಗೆ ಅಭಿನಂದನೆಗಳು ಎನ್ನುವ ಫ್ಲೆಕ್ಸ್ ಬ್ಯಾನರ್‍ ಗಳನ್ನು ಹಾಕಲಾಗಿತ್ತು. ಆದರೆ, ರಾತ್ರೋರಾತ್ರಿ ಫ್ಲೆಕ್ಸ್ ಮತ್ತು ಬ್ಯಾನರ್‍ ಗಳನ್ನು ಹರಿದು ವಿರೂಪಗೊಳಿಸಲಾಗಿದೆ.

ಇದು ಉಭಯ ಮುಖಂಡರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಮಾತನಾಡಲು ದೂರವಾಣಿ ಕರೆ ಮಾಡಿದಾಗ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡದಂತೆ ಮದನ್ ಪಟೇಲ್‍ ಗೆ, ರಮೇಶ್ ದೂರವಾಣಿ ಮೂಲಕವೇ ತಾಕೀತು ಮಾಡಿದ್ದಾರೆ. ಕಷ್ಟಪಟ್ಟು ಮನೆ ಮಠ ಬಿಟ್ಟು ಪಕ್ಷ ಕಟ್ಟಿದ್ದೇನೆ, ಕೋಟಿಗಟ್ಟಲೆ ಹಣ ಸುರಿದಿದ್ದೇನೆ. ಅಡುಗೆ ಆದ ಬಳಿಕ ಬಡಿಸಲು ಬಂದಂತೆ ಈಗ ನೀನು ಬರಬೇಡ ಎಂದು ಮದನ್ ಪಟೇಲ್‍ಗೆ ರಮೇಶ್ ಧಮ್ಕಿ ಹಾಕಿದ್ದಾರೆ.

ಪಕ್ಷ ನಿನಗೆ ಟಿಕೆಟ್ ಕೊಟ್ಟರೆ ನಿನಗೆ ಸಹಾಯ ಮಾಡುತ್ತೇನೆ. ಆದರೆ ನಾನೂ ಈ ಕ್ಷೇತ್ರದ ಆಕಾಂಕ್ಷಿ ಎನ್ನುವ ಮಾತನ್ನು ಮದನ್ ಪಟೇಲ್ ಹೇಳುತ್ತಿದ್ದಂತೆ ಕಿಡಿಕಾರಿದ ರಮೇಶ್ ಇದು ನನ್ನ ಕ್ಷೇತ್ರ. ಇಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ. ಯಾರಿಗೆ ಹೇಳುತ್ತಿಯೋ ಹೇಳಿಕೋ,ರಾಜ್ಯದ ಯಾವುದೇ ಅಭ್ಯರ್ಥಿ ನಾನೇ ಎಂದು ಯಾರೂ ಬ್ಯಾನರ್ ಹಾಕಿಲ್ಲ. ಆದರೆ ಇಲ್ಲಿ ನಾನು ಹಾಕಿಕೊಂಡಿದ್ದೇನೆ, ನನಗೆ ನಿನ್ನ ಸಹಾಯವೂ ಬೇಡ, ಯಾರ ಸಹಾಯವೂ ಬೇಡ. ಜನರೇ ನನಗೆ ಸಹಾಯ ಮಾಡುತ್ತಾರೆ ಎಂದು ಏರುಧನಿಯಲ್ಲಿ ತಿರುಗೇಟು ನೀಡಿದ್ದಾರೆ. ಇಲ್ಲಿ ಬಂದು ಪಕ್ಷವನ್ನು ಹಾಳು ಮಾಡಬೇಡ ಬೇರೆ ಕ್ಷೇತ್ರಗಳಿವೆ. ಅಲ್ಲಿಗೆ ಹೋಗು ಎಂದು ಸಲಹೆ ನೀಡಿದ್ದಾರೆ.

ಈ ದೂರವಾಣಿ ಸಂಭಾಷಣೆ ಬಳಿಕ ಮದನ್ ಪಟೇಲ್ ನಗರ ಪೊಲೀಸ್ ಆಯಕ್ತರಿಗೆ ಪ್ರಾಣ ಬೆದರಿಕೆ ಸಂಬಂಧ ದೂರು ನೀಡಿದ್ದಾರೆ. ಸಿ.ವಿ. ರಾಮನ್ ನಗರದ ಕಾಂಗ್ರೆಸ್ ಮುಖಂಡ ಪಿ.ರಮೇಶ್ ಟಿಕೆಟ್ ವಿಷಯವಾಗಿ ದೂರವಾಣಿ ಮೂಲಕ ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ನನಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್ ಬ್ಯಾನರ್‍ ಗಳನ್ನು ಹರಿದುಹಾಕಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ