ಎಚ್ಚರ: ಮಹಿಳೆಯರ ಒಳ ಉಡುಪು ಧರಿಸಿ ಕಿರುಕುಳ ನೀಡ್ತಾನೆ !

Kannada News

08-08-2017

ಬೆಂಗಳೂರು: ಮಹಿಳೆಯರ ಒಳ ಉಡುಪು ಧರಿಸಿ ನೈಸ್ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸೈಕೋಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಮಹಿಳೆಯರ ಒಳ ಉಡುಪು ಧರಿಸಿ, ಲಿಪ್ ಸ್ಟಿಕ್ ಹಾಕಿರುವ ಸೈಕೋ ಕೆಲ ದಿನಗಳಿಂದ ನೈಸ್ ರಸ್ತೆಗಳಲ್ಲಿ ಸಂಚರಿಸುವ ಒಂಟಿ ಮಹಿಳೆಯರು, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲದೇ ಸೈಕೋನ ಕಿರುಕುಳ ಯತ್ನದಿಂದ ಪಾರಾಗಿ ಬಂದಿರುವ ಮಿಸಸ್ ಇಂಡಿಯಾ ಸ್ಪರ್ಧಿ ರಾಜಶ್ರೀ ಅವರು ಫೇಸ್‍ ಬುಕ್‍ ನಲ್ಲಿ ಕೃತ್ಯವನ್ನು ಬರೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಬನ್ನೇರುಘಟ್ಟ ಪೊಲೀಸರು ಕಾಮುಕನಿಗಾಗಿ ಹುಡುಕಾಟ ನಡೆಸಿದ್ದಾರೆ.  ಫೇಸ್‍ ಬುಕ್‍ ನಲ್ಲಿ ರಾಜಶ್ರೀ ನೈಸ್ ರಸ್ತೆ, ನಗರದ ಹೊರವಲಯದ ರಸ್ತೆಗಳಲ್ಲಿ ಪ್ರಯಾಣಿಸುವವರಿಗೆ ಎಚ್ಚರದಿಂದಿರಲು ಸೂಚಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಬುರುವುದು ವಿಳಂಬವಾಗಿರುವುದಕ್ಕೆ ರಾಜಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ: ಪತಿಯೊಂದಿಗೆ ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಪ್ರಯಾಣಿಸುತ್ತಿದ್ದಾಗ ನೈಸ್ ರಸ್ತೆಯಲ್ಲಿ ನಮ್ಮ ಮೋಟಾರು ಗಾಡಿ ಕೆಟ್ಟು ಹೋಯಿತು. ಹೀಗಾಗಿ ಹಿಂದೆ ಬರುತ್ತಿದ್ದ ಚಾಲಕನ ಬಳಿ ಲಿಫ್ಟ್ ಕೇಳಿದ ನನ್ನ ಪತಿ ಮೆಕ್ಯಾನಿಕ್ ನನ್ನು ಕರೆತರಲು ತೆರಳಿದರು. ಆದರೆ ಇದೇ ಸಂದರ್ಭದಲ್ಲಿ ಅಲ್ಲಿದ್ದ ಸೈಕೋನಂತೆ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬ ನನ್ನ ಮೇಲೆ ದಾಳಿ ಮಾಡಿದ. ಆತ ಮಹಿಳೆಯರ ಒಳುಡುಪು ಧರಿಸಿದ್ದು, ನನ್ನ ಸಮೀಪ ಬರುತ್ತಿದ್ದಂತೆಯೇ ಆತ ತನ್ನ ಶರ್ಟ್ ಕಳಚಿ ನನ್ನನ್ನು ತನ್ನ ಬಳಿ ಎಳೆದುಕೊಂಡ. ಮಹಿಳೆಯರಂತೆ ಮೇಕಪ್ ಮಾಡಿಕೊಂಡಿದ್ದ ಆತ ತನ್ನ ತುಟಿಗಳಿಗೆ ಲಿಪ್‍ಸ್ಟಿಕ್ ಹಚ್ಚಿಕೊಂಡಿದ್ದ, ಆದರೆ ಆತ ಮಂಗಳ ಮುಖಿಯಾಗಿರಲಿಲ್ಲ. ಆತನ ವಿಚಿತ್ರವರ್ತನೆ ಕಂಡು ಯಾರಾದರೂ ನನ್ನ ಸಹಾಯಕ್ಕೆ ಬರಲಿ ಎಂದು ಕಿರುಚಲಾರಂಭಿಸಿದೆ.

ರಸ್ತೆ ನಿರ್ಜನ ಹಾಗೂ ಖಾಲಿಯಾಗಿರುವುದರಿಂದ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ವಾಹನಗಳೆಲ್ಲವೂ ಅತ್ಯಂತ ವೇಗವಾಗಿ ಸಾಗುತ್ತಿದ್ದವು. ಹೀಗಾಗಿ ನನ್ನ ಕೂಗು ಯಾರಿಗೂ ಕೇಳಿಸಲಿಲ್ಲ ಅಲ್ಲದೆ ಅಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯಲಿಲ್ಲ. ಆ ಸಂದರ್ಭದಲ್ಲಿ ನಾನು ಪೊಲೀಸರನ್ನು ಕರೆಯುವುದಾಗಿ ಬೆದರಿಸಿದೆ ಇದನ್ನು ಕೇಳಿದ ತಟಸ್ಥನಾಗಿ ನಿಂತ ಆತ ಗಾಬರಿಗೊಂಡವನಂತೆ ನನ್ನನ್ನು ದಿಟ್ಟಿಸುತ್ತಿದ್ದ. ಮೊಬೈಲ್ ತೆಗೆದ ನಾನು ಆತನ ಫೋಟೋ ಕ್ಲಿಕ್ಕಿಸಲು ಅನುವಾದೆ ಇದನ್ನು ಕಂಡ ಆತ ಅಲ್ಲಿಂದ ಓಡಿ ಹೋದ. ಬಿಳಿ ಹೆಲ್ಮೆಟ್ ಧರಿಸಿದ್ದ ಆತ ಓರ್ವ ಸೈಕೋ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಹೀಗೆ ಓಡಾಡಲು ಬಿಟ್ಟರೆ ಅಪಾಯ ತಪ್ಪಿದ್ದಲ್ಲ. ಇಂತಹ ಕೆಟ್ಟ ಪರಿಸ್ಥಿತಿ ಈ ರಸ್ತೆಯಲ್ಲಿ ಓಡಾಡುವ ಯಾವುದೇ ವ್ಯಕ್ತಿಗೂ ಎದುರಾಗಬಹುದು ಹೀಗಾಗಿ ಇದನ್ನು ಕಡೆಗಣಿಸದಿರಿ.

ಘಟನೆ ನಡೆದಾಗ ನೈಸ್ ರಸ್ತೆಯಲ್ಲಿರುವ ಫಲಕದಲ್ಲಿ ಸೂಚಿಸಿದ ಸಹಾಯವಾಣಿಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ಯಾರೊಬ್ಬರೂ ಸರಿಯಾಗಿ ಸ್ಪಂದಿಸಲಿಲ್ಲ. ಎರಡು ತಾಸಿಗೂ ಹೆಚ್ಚಿನ ಸಮಯ ನಾನು ಸಹಾಯದ ನಿರೀಕ್ಷೆಯಿಂದ ಅಲ್ಲಿ ಕಾಯುತ್ತಿದ್ದೆ ಆದರೂ ಅಧಿಕಾರಿಗಳಿಂದ ಯಾವುದೇ ಸಹಾಯ ಸಿಗಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ