ಇದೆಂಥಾ ಗೌರವ...?

Kannada News

08-08-2017

ಚಂದನವನ ಎಂದು ಕರೆಯಲ್ಪಡುವ ಕನ್ನಡ ಚಿತ್ರರಂಗದಲ್ಲಿ ಮಿನುಗಿ ಮರೆಯಾದ ತಾರೆಗಳಾದ ಡಾ.ರಾಜ್ ಮತ್ತು ವಿಷ್ಣುವರ್ಧನ್ ಅವರ ನಡವಳಿಕೆಗಳು ಸಮಾಜಕ್ಕೆ ಅನುಕರಣೀಯವಾಗಿದ್ದವು. ಅವರ ನಡೆನುಡಿಗಾಗಿಯೇ ಜನತೆ ಅವರನ್ನು ಗೌರವಿಸುತ್ತಿದ್ದರು. ಈಗಿನ ಕೆಲವು ನಟರು, ಹಿಂದಿನ ಕಾಲದ ದೊಡ್ಡ ನಟರಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟರಲ್ಲಿ, ಹಿಂದಿನವರಿಗಿದ್ದ ಯಾವುದೇ ರೀತಿಯ ಆದರ್ಶ ಮತ್ತು ಬದ್ಧತೆಗಳು ಕಾಣಸಿಗುವುದಿಲ್ಲ. ಆದರೆ, ಇವರುಗಳು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬ ಏಕೈಕ ಕಾರಣಕ್ಕಾಗಿ, ಎಲ್ಲರೂ ತಮ್ಮನ್ನು ಗೌರವಿಸಬೇಕು ಎಂದು ನಿರೀಕ್ಷಿಸುತ್ತಾರೆ. ಇತ್ತೀಚೆಗೆ ನಟಿ ರಷ್ಮಿಕಾ ಮಂದಣ್ಣ, ಯಾವುದೋ ಟಿವಿ ಶೋ ಒಂದರಲ್ಲಿ ನಟ ಯಶ್ ಅವರನ್ನು ಶೋ ಆಫ್ ಎಂದು ಹೇಳಿದ್ದಕ್ಕೆ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ಸಂಜನಾ ಅವರು ನಟ ದರ್ಶನ್ ಅವರನ್ನು  ಬಿಲ್ಡ್ ಅಪ್ ಮಾಡ್ತಾರೆ ಅಂದಿದ್ದಕ್ಕೆ, ಆ ನಟರಿಬ್ಬರ ಅಭಿಮಾನಿಗಳು ಈ ಇಬ್ಬರೂ ನಟಿಯರ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಅವರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಅನ್ನುವವರೆಗೆ ಹೋಗಿದ್ದರು. ಆದರೆ, ಈ ಇಬ್ಬರೂ ನಟಿಯರು ಯಾವುದೇ ದುರುದ್ದೇಶವಿಲ್ಲದೆ, ಸಹಜವಾಗಿ ಮಾತನಾಡಿದ್ದರು ಅಷ್ಟೇ.  ಅದನ್ನೇ ದೊಡ್ಡದಾಗಿ ಬೆಳೆಸುವ ಈ ರೀತಿಯ ನಡವಳಿಕೆಗಳು, ಕನ್ನಡ ಚಿತ್ರರಂಗದಲ್ಲಿ ಪ್ರಜಾಪ್ರಭುತ್ವದ ಕೊರತೆ ಇರುವುದನ್ನು ತೋರಿಸಿಕೊಡುತ್ತದೆ. ತಮ್ಮ ಅನುಯಾಯಿಗಳ ಮೂಲಕ ಬಲವಂತವಾಗಿ ಗೌರವ ಪಡೆಯುವ ಈ ಬೆಳವಣಿಗೆ, ಸಮಾಜದಲ್ಲಿ ಹೊಸ ಊಳಿಗ ಮಾನ್ಯ ಪದ್ಧತಿಗೆ ಕಾರಣವಾಗುತ್ತದೆ. ಸಿನಿಮಾ ಪತ್ರಕರ್ತರೂ ಕೂಡ ಇವರ ಆರ್ಭಟಕ್ಕೆ ಬೆದರಿ ಸುಮ್ಮನಿರುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಚಿತ್ರರಂಗಕ್ಕೆ ಬಂದೊದಗಿರುವ ಇಂಥ ದುರ್ಗತಿಯನ್ನು, ಪ್ರಬುಧ್ಧ ಕನ್ನಡಿಗರು ಇನ್ನೂ ಎಷ್ಟು ದಿನ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ.


ಸಂಬಂಧಿತ ಟ್ಯಾಗ್ಗಳು

ಇದೆಂಥಾ ಗೌರವ...? ಇದೆಂಥಾ ಗೌರವ...?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ