ಕೊಲೆ ಆರೋಪಿಗಳ ಬಂಧನ !

Kannada News

07-08-2017

ಬೆಂಗಳೂರು: ಕುಡಿದ ಅಮಲಿನಲ್ಲಿ ಕಾರಿನ ಗಾಜುಗಳು ಬಾಗಿಲನ್ನು ಕಲ್ಲಿನಿಂದ ಹೊಡೆದು ಹಾನಿಗೊಳಿಸಿ, ಅದರ ರಿಪೇರಿಗೆ ಹಣ ಕೊಡಲು ನಿರಾಕರಿಸಿದ ಹಣ್ಣಿನ ವ್ಯಾಪಾರಿ ರಹಮತ್ ಉಲ್ಲಾನನ್ನು ಆತನ ಹುಟ್ಟುಹಬ್ಬದಂದೇ ಕೊಲೆಗೈದ ಮೂವರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಹರಿ ನಗರದ ಜಬೀ ಉಲ್ಲಾ ಅಲಿಯಾಸ್ ಜಬೀ (37) ತನ್ವೀರ್ ಪಾಷ ಅಲಿಯಾಸ್ ತನ್ನು (28), ಅಂಜನಪುರದ ನವೀನ (27) ಬಂಧಿತರಾಗಿದ್ದು  ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಹರಿನಗರದ ಪ್ರವೀಣ್‍ ಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ. ಕಳೆದ 8 ದಿನಗಳ ಹಿಂದೆ ಹರಿನಗರದ ತನ್ನ ಅಣ್ಣನ ಗುಜುರಿ ಅಂಗಡಿ ಬಳಿ ನಿಲ್ಲಿಸಿದ್ದ ಆರೋಪಿ ಜಬೀಯ ವೆರ್ನಾ ಕಾರಿನ, ಗಾಜುಗಳು ಹಾಗೂ ಬಾಗಿಲನ್ನು ಕುಡಿದ ಅಮಲಿನಲ್ಲಿದ್ದ ರಹಮತ್ ಉಲ್ಲಾ ಸೈಜುಗಲ್ಲಿನಿಂದ ಹೊಡೆದು ಸಂಪೂರ್ಣ ಹಾನಿಗೊಳಿಸಿದ್ದ.

ಇದನ್ನು ತಿಳಿದ ಜಬೀ ಉಲ್ಲಾ, ರಹಮತ್ ಗೆ ಕಾರು ರಿಪೇರಿ ಮಾಡಿಸಿಕೊಡುವಂತೆ ಕೇಳಿದ್ದು ಇಬ್ಬರ ನಡುವೆ ಈ ವಿಚಾರವಾಗಿ ಜಗಳ ನಡೆದಾಗ ಹಿರಿಯರು ರಾಜೀ ಪಂಚಾಯಿತಿ ಮಾಡಿ ಕಾರು ರಿಪೇರಿ ಮಾಡಿಸಿಕೊಡುವಂತೆ ರಹಮತ್ ಉಲ್ಲಾನಿಗೆ ಹೇಳಿದ್ದರು. ವಾರ ಕಳೆದರೂ ರಿಪೇರಿ ಮಾಡಿಸಿಕೊಡದೇ ಒಂದಲ್ಲ ಒಂದು ಸಬೂಬು ಹೇಳುತ್ತಿದ್ದ, ರಹಮತ್ ಉಲ್ಲಾ ವರ್ತನೆಯಿಂದ ಬೇಸತ್ತ ಜಬೀ ಜಗಳ ಮಾಡಿದ್ದು, ಕೊನೆಗೆ ರಹಮತ್ ಕಾರು ರಿಪೇರಿ ಮಾಡಿಸಿಕೊಂಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದಾನೆ.

ಇದರಿಂದ ಆಕ್ರೋಶ ಗೊಂಡ ಜಬೀ ಉಳಿದ ಆರೋಪಿಗಳ ಜೊತೆ ಸೇರಿ ಕಳೆದ ಆಗಸ್ಟ್ 4 ರಂದು ರಾತ್ರಿ 9.30ರ ವೇಳೆ ಅವಲಹಳ್ಳಿ ಬಿಡಿಎ ಲೇಔಟ್ ಬಳಿ ಸ್ನೇಹಿತರ ಜೊತೆ ಕುಡಿಯುತ್ತ ಹುಟ್ಟುಹಬ್ಬ ಪಾರ್ಟಿ ಮಾಡಿಕೊಳ್ಳುತ್ತಿದ್ದ ರಹಮತ್ ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಪೊಲೀಸ್ ಇನ್ಸ್ ಪೆಕ್ಟರ್ ರಾಮಪ್ಪ ಗುತ್ತೇರ್ ಮತ್ತವರ ಸಿಬ್ಬಂದಿ ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ