ಡಿಕೆಶಿ ರಾಜೀನಾಮೆಗೆ ಶೆಟ್ಟರ್ ಆಗ್ರಹ !

Kannada News

07-08-2017 243

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಹಿನ್ನಲೆಯಲ್ಲಿ, ಅಕ್ರಮ ಆಸ್ತಿಗಳಿಕೆ ಆರೋಪವನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಎದುರಿಸುತ್ತಿದ್ದು, ಅವರು ಆರೋಪ ಮುಕ್ತರಾಗುವವರೆಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ದಾಳಿ ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲವೆಂಬ ಬಿಜೆಪಿ ಹೈಕಮಾಂಡ್ ಅಸಮಾಧಾನ ವಿಚಾರವನ್ನು ತಳ್ಳಿಹಾಕಿದರು. ಐಟಿ ದಾಳಿ ಆಗುತ್ತಿದ್ದಂತೆ ಸಚಿವ ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿದ್ದೇವೆ. ಪಕ್ಷದ ಕಾರ್ಯಕಾರಿಣಿಯಲ್ಲೂ ಐಟಿ ದಾಳಿ ಬಗ್ಗೆ ಚರ್ಚೆಯಾಗಿದೆ. ಬರುವ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಪಕ್ಷದ ಯಾವ ನಾಯಕರೂ ಡಿಕೆಶಿ ಬಗ್ಗೆ ಮೃದುಧೋರಣೆ ಅನುಸರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ. ತಪ್ಪು ಮಾಡದೇ ಇದ್ದಲ್ಲಿ ಸಚಿವರಿಗೇಕೆ ಐಟಿ ಭಯ. ಕೆಲ ಸಚಿವರು ಐಟಿ ದಾಳಿಗೂ ಮೊದಲೇ ಆತಂಕಪಡುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಹಲವು ಸಚಿವರು ತಪ್ಪು ಮಾಡಿರುವ ಅನುಮಾನ ಮೂಡುತ್ತಿದೆ. ಆರೋಪ ಮುಕ್ತರಾಗುವರೆಗೂ ಡಿ.ಕೆ. ಶಿವಕುಮಾರ್ ಸಚಿವ ಸ್ಥಾನದಲ್ಲಿ ಮುಂದುವರೆಯಬಾರದು. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶೆಟ್ಟರ್‌‌ ಆಗ್ರಹಿಸಿದರು.

ಇನ್ನು ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಮಹಾಸಭಾ ರಚನೆ ವಿಷಯ ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ. ಸಮುದಾಯದ ಎಲ್ಲರೂ ಒಂದೆಡೆ ಕುಳಿತು ಅಂತಿಮ‌ ತೀರ್ಮಾನ ತೆಗೆದುಕೊಳ್ಳಬೇಕು. ಯಾರೂ ಕೂಡ ಸಮುದಾಯಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳಬಾರದು ಎಂದರು. ಎಲ್ಲಾ ಮಠಾಧೀಶರ ಜೊತೆ ಈ ಬಗ್ಗೆ ಮೊದಲು ಮುಕ್ತ ಚರ್ಚೆ ನಡೆಯಬೇಕು. ಈ ನಿಟ್ಟಿನಲ್ಲಿ ನಾನೂ ಹಾಗೂ ಸೋಮಣ್ಣ ಮಠಾಧೀಶರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಇಷ್ಟು ದಿನ ಇಲ್ಲದ ವಿವಾದ ಚುನಾವಣೆ ಸಮಯದಲ್ಲಿ ಏಕೆ? ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಶೆಟ್ಟರ್ ಆರೋಪಿಸಿದರು.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ