ನಗರದಲ್ಲಿ ಮತ್ತೆ ಸದ್ದು ಮಾಡಿದ ಬ್ಲಾಕ್ ಪಲ್ಸರ್ !

Kannada News

05-08-2017

ಬೆಂಗಳೂರು:  ಹೆಬ್ಬಾಳದ ಆನಂದ ನಗರದಲ್ಲಿ ಹತ್ತಿರದ ಮನೆಯಲ್ಲಿ ಮಹಿಳೆಯೊಬ್ಬರು ಅರಿಶಿನ-ಕುಂಕುಮ ತೆಗೆದುಕೊಂಡು ನಡೆದು ಬರುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ ಸರ ಕಸಿದರೆ, ಇದಕ್ಕೂ ಕೇವಲ 15 ನಿಮಿಷಗಳ ಮುನ್ನ ಸಂಜಯ್‍ ನಗರದ ಕೆಇಬಿ ಲೇಔಟ್‍ನಲ್ಲಿ ಮಹಿಳೆಯ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಎರಡೂ ಕಡೆಗಳಲ್ಲಿ ಶುಕ್ರವಾರ ರಾತ್ರಿ ಕೇವಲ ಅರ್ಧಗಂಟೆಯೊಳಗೆ ಈ ಕೃತ್ಯ ನಡೆಸಿರುವ ದುಷ್ಕರ್ಮಿಗಳು ಕಪ್ಪು ಬಣ್ಣದ ಪಲ್ಸರ್ ಬೈಕ್ ಉಪಯೋಗಿಸಿದ್ದು ಮಹಿಳೆಯರು ಮನೆಯಿಂದ ಹೊರಗೆ ಒಂಟಿಯಾಗಿ ಒಡಾಡುವುದು ಕಷ್ಟವಾಗಿ ಹೋಗಿದೆ.

ಆನಂದ್‍ ನಗರದ ಎಸ್‍ಬಿಐ ಲೇಔಟ್‍ ನ 4ನೇ ಮುಖ್ಯರಸ್ತೆಯಲ್ಲಿ ಸುಜಾತಾ ಖೇಣಿ ಅವರು ರಾತ್ರಿ 7.30ರ ವೇಳೆ ಹತ್ತಿರದ ಮನೆಯಲ್ಲಿ ಅರಿಶಿನ-ಕುಂಕುಮ ತೆಗೆದುಕೊಂಡು ನಡೆದು ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ 70 ಗ್ರಾಂ ತೂಕದ ಮಾಂಗಲ್ಯಸರವನ್ನು ಕಸಿದಿದ್ದಾರೆ. ಸುಜಾತಾ ಅವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ದುಷ್ಕರ್ಮಿಗಳ ಪಾಲಾಗಿದೆ. ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ದುಷ್ಕರ್ಮಿಗಳು ಬಂದಿದ್ದರು ಎಂದು ಸುಜಾತಾ ಹೆಬ್ಬಾಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅದಕ್ಕೂ ಮುನ್ನ ರಾತ್ರಿ 7.15ರ ವೇಳೆ ಸಂಜಯ್‍ ನಗರದ ಕೆಇಬಿ ಲೇಔಟ್‍ನಲ್ಲಿ ಸ್ನೇಹಿತರ ಮನೆ ಮುಂದೆ ನಡೆದು ಹೋಗುತ್ತಿದ್ದ ಜೈಕುಮಾರಿ ಎಂಬ ಮಹಳೆಯ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಜೈಕುಮಾರಿ ಅವರಿಗೆ ಸರ ಕಸಿದ ಶಾಕ್‍ನಲ್ಲಿ ದುಷ್ಕರ್ಮಿಗಳು ಯಾವ ಬೈಕ್‍ನಲ್ಲಿ ಬಂದರು ಹೇಗಿದ್ದರು ಎಂಬುದು ಗೊತ್ತಾಗಿಲ್ಲ. ಆದರೆ, ಇವೆರಡೂ ಕೃತ್ಯಗಳನ್ನು ಇಬ್ಬರೇ ಮಾಡಿರುವ ಶಂಕೆಯಿದೆ.ಸಂಜಯ್ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ