ಅಧಿಕಾರಿಗಳೊಂದಿಗೆ ಕಾಮಗಾರಿ ಪರಿಶೀಲನೆ !

Kannada News

05-08-2017

ಬೆಂಗಳೂರು: ನಗರ ಪ್ರದಕ್ಷಿಣೆ ಅಂಗವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಮತ್ತು ಅಧಿಕಾರಿಗಳ ತಂಡದೊಂದಿಗೆ ನಗರದಾದ್ಯಂತ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.  ಗೃಹ ಕಚೇರಿ ಕೃಷ್ಣಾದಿಂದ ಹೊರಟ ಮುಖ್ಯಮಂತ್ರಿಗಳು ಮೊದಲಿಗೆ ಚರ್ಚ್ ಸ್ಟ್ರೀಟ್‍ನಲ್ಲಿ ನಡೆಯುತ್ತಿರುವ ಟೆಂಡರ್‍ಶ್ಯೂರ್ ಕಾಮಗಾರಿಯನ್ನು ಪರಿಶೀಲಿಸಿದರು.

ಈ ವೇಳೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೆ, ನಕ್ಷೆಯ ಪರಿಶೀಲನೆ ಕೈಗೊಂಡರು. ಸಚಿವ ಕೆ.ಜೆ.ಜಾರ್ಜ್ ಕಾಮಗಾರಿ ವಿಳಂಬ ಕುರಿತಂತೆ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಚರ್ಚ್‍ಸ್ಟ್ರೀಟ್ ಫುಟ್‍ಪಾತ್‍ನ್ನು ಗ್ರಾನೈಟ್ ಬಳಸಿ ನಿರ್ಮಿಸುತ್ತಿರುವುದನ್ನು ಪರಿಶೀಲಿಸಿದ ವೇಳೆ ಅಲ್ಲಿನ ಅಧಿಕಾರಿಗಳು ನಮ್ಮ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ಅಲಂಕಾರಿಕವಾಗಿ ಚಿತ್ರ ಬಿಡಿಸಿರುವ ಗ್ರಾನೈಟ್ ಗಳನ್ನು ಫುಟ್‍ಪಾತ್‍ಗೆ ಅಳವಡಿಸಲಾಗುತ್ತಿದೆ. ಮೂರು ಮೀಟರ್ ಅಗಲದ ಫುಟ್‍ ಪಾತ್ ನಿರ್ಮಾಣ ಮಾಡುತ್ತಿದ್ದು, ಈ ಕಾಮಗಾರಿಯಿಂದ ನಗರ ಮತ್ತಷ್ಟು ಸುಂದರವಾಗಿ ಕಾಣಲು ಸಾಧ್ಯವಾಗಲಿದೆ ಎಂದು ವಿವರಣೆ ನೀಡಿದರು.

ಎಲ್ಲವನ್ನೂ ವೀಕ್ಷಿಸಿದ ಮುಖ್ಯಮಂತ್ರಿಗಳು ಅಕ್ಟೋಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಎಚ್ಚರಿಕೆ ನೀಡಿದರು.  ಅಲ್ಲಿಂದ ಬ್ರಿಗೇಡ್ ರಸ್ತೆಗೆ ತೆರಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಿಜ್ವಾನ್ ಅರ್ಷದ್ ಹಾಗೂ ಎನ್.ಎ.ಹ್ಯಾರೀಸ್ ಅವರೊಂದಿಗೆ ಮಾತನಾಡುತ್ತಾ ಹಿಂದೆ ರಾಮಕೃಷ್ಣ ಹೆಗಡೆಯವರು ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಯುವಕರನ್ನು ಸೆಳೆಯುವ ಸ್ಥಳ ಎಂದೇ ಹೇಳುತ್ತಿದ್ದರು. ಆದರೆ ನಾನೆಂದು ಇಲ್ಲಿಗೆ ಬಂದಿರಲಿಲ್ಲ. ಇದೇ ಮೊದಲು ಎಂದು ನುಡಿದರು.

ನಗರ ಪ್ರದಕ್ಷಿಣೆ ಅಂಗವಾಗಿ ಚರ್ಚ್ ಸ್ಟ್ರೀಟ್‍ಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರನ್ನು ಮಾತನಾಡಿಸಿ ಅವರ ಕಷ್ಟಸುಖ ವಿಚಾರಿಸಿದ ಪ್ರಸಂಗ ನಡೆಯಿತು. ಫುಟ್‍ ಪಾತ್ ಕಾಮಗಾರಿ ವೀಕ್ಷಿಸುತ್ತಿದ್ದ ಸಿದ್ದರಾಮಯ್ಯ ಅವರು ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ನೀವು ಯಾವ ಊರಿನವರು ಎಂದು ಪ್ರಶ್ನಿಸಿದಾಗ ವೆಂಕಟಮ್ಮ ಮತ್ತು ಶಿವಮ್ಮ, ತಾವು ಬಳ್ಳಾರಿ ಹಾಗೂ ರಾಯಚೂರಿನಿಂದ ಬಂದಿದ್ದೇವೆ ಎಂದು ಉತ್ತರಿಸಿದರು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಯವರಾ…. ಎಂದು ನಗುತ್ತಾ, ಇಲ್ಲಿಗೇಕೆ ಬಂದಿರಿ ಎಂದು ಮರುಪ್ರಶ್ನಿಸಿದಾಗ ಕೆಲಸ ಹುಡುಕಿಕೊಂಡು ಬಂದಿದ್ದೇವೆ ಎನ್ನುತ್ತಿದ್ದಂತೆ ಅಲ್ಲೇ ನಿಮಗೆ 7 ಕೆ.ಜಿ ಅಕ್ಕಿ ಸಿಗುತ್ತಿತ್ತು. ಕೆಲಸ ಮಾಡಿಕೊಂಡು ಬದುಕಬಹುದಲ್ಲವೇ ಎಂದಾಗ ಅಕ್ಕಿ ಕೊಡ್ತೀರಾ, ಆದ್ರೆ ಬೇರೆ ಖರ್ಚಿಗೇನು ಮಾಡೋದು. ಅದಕ್ಕೆ ಕೂಲಿ ಮಾಡುತ್ತಿದ್ದೇವೆ ಎಂದರು.

ಇಲ್ಲಿ ಎಷ್ಟು ಕೊಡ್ತಾರೆ, ಎಲ್ಲಿ ಉಳಿದುಕೊಂಡಿದ್ದೀರಾ ಎಂದಾಗ ಜೋಡಿಗೆ ದಿನಕ್ಕೆ 600 ರೂ. ಕೂಲಿ ಕೊಡ್ತಾರೆ. ಇಲ್ಲೇ ಬಸ್ ಸ್ಟಾಪ್ ನಲ್ಲಿ ತಂಗಿದ್ದೇವೆ. ನೀರು, ಶೌಚಾಲಯ ವ್ಯವಸ್ಥೆ ಏನೇನೂ ಇಲ್ಲ ಎಂದು ತಮ್ಮ ಸಮಸ್ಯೆಯನ್ನು ತೆರೆದಿಟ್ಟರು.  ಎಲ್ಲವನ್ನೂ ಆಲಿಸಿದ ಮುಖ್ಯಮಂತ್ರಿ ನಗುತ್ತಾ, ಮುಂದೆ ಹೆಜ್ಜೆ ಹಾಕಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ