ವೀರಶೈವ v/s ಲಿಂಗಾಯತ v/s ಹಿಂದೂ

Kannada News

05-08-2017

ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಈ ವಿಚಾರ ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ರಾಜಕೀಯ ಮುಖಂಡರು, ಮುಖ್ಯಮಂತ್ರಿಗಳು, ಮಂತ್ರಿಗಳು, ಮಠಾಧಿಪತಿಗಳು, ಚಿಂತಕರು, ಬರಹಗಾರರು, ಜನ ಸಾಮಾನ್ಯರು ಎಲ್ಲರೂ ಈ ಬಗ್ಗೆಯೇ  ಮಾತನಾಡುತ್ತಿದ್ದಾರೆ. ಹೌದು, ನಾವು ಮಾತನಾಡುತ್ತಿರುವುದು ಪ್ರತ್ಯೇಕ ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ರಾಜ್ಯದಲ್ಲಿ ನಡೆಯುತ್ತಿರುವ ವಾದ-ವಿವಾದಗಳ ಬಗ್ಗೆ.

ಧರ್ಮ ಅನ್ನುವುದರ ಬಗ್ಗೆ, ಯಾವ ಕಾರಣಗಳಿಗಾಗಿ ರಾಜ್ಯದಲ್ಲಿ ಈ ರೀತಿಯ ಚರ್ಚೆಗಳು ನಡೆಯುತ್ತಿವೆ? ಈ ವೀರಶೈವ-ಲಿಂಗಾಯತ ಅನ್ನುವುದು ಒಂದೇ  ನಾಣ್ಯ ಅಥವ ಒಂದೇ ತತ್ವದ ಎರಡು ಮುಖಗಳೇ ಅಥವ ಒಂದಕ್ಕೊಂದು ಸಂಬಂಧ ಇಲ್ಲವೇ? ಇಷ್ಟಕ್ಕೂ ಈ ವೀರಶೈವ-ಲಿಂಗಾಯತವನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವ ಅಗತ್ಯವಿದೆಯೇ? ಪ್ರತ್ಯೇಕ ಧರ್ಮ ಎಂದು ಮಾನ್ಯತೆ ಪಡೆದರೆ ಆಗುವ ಲಾಭ ನಷ್ಟಗಳೇನು? ಸರ್ಕಾರವೇ ಹೊಸ ಧರ್ಮ ಸೃಷ್ಟಿ ಮಾಡಲು ಸಾಧ್ಯವೇ? ಹೊಸ ಧರ್ಮಕ್ಕೆ ಮಾನ್ಯತೆ ನೀಡಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆಯೇ? ಕಾನೂನು ಏನು ಹೇಳುತ್ತದೆ? ಇತ್ಯಾದಿ ಎಲ್ಲಾ ವಿಚಾರಗಳ ಬಗ್ಗೆ ನಿಮಗಾಗಿ ಒಂದು ಸ್ಪೆಷಲ್ ರಿಪೋರ್ಟ್.

ಕಳೆದ ಒಂದು ತಿಂಗಳಿನಿಂದ ರಾಜ್ಯದ ಸುಮಾರು ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯ ವೀರಶೈವ-ಲಿಂಗಾಯತ ಸಮುದಾಯದ ಒಳಗೆ ಚರ್ಚೆ, ಆರೋಪ ಮತ್ತು ಗೊಂದಲ ತಲೆದೋರಿದ್ದು, ಒಂದಿಷ್ಟು ಘರ್ಷಣೆಗಳೂ ನಡೆದಿವೆ. ಇದಕ್ಕೆಲ್ಲಾ ಕಾರಣವಾಗಿದ್ದು, ‘ನೀವುಗಳೆಲ್ಲಾ ಒಟ್ಟಿಗೆ ಸೇರಿ ಮನವಿ ಸಲ್ಲಿಸಿದರೆ ‘ವೀರಶೈವ-ಲಿಂಗಾಯತ’ವನ್ನು ಒಂದು ಸ್ವತಂತ್ರ ಧರ್ಮ ಎಂದು ಪರಿಗಣಿಸುವಂತೆ ಕೇಂದ್ರಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ ಒಂದು ಮಾತು. ತಮಗೆ ಸಿಕ್ಕ ಸನ್ಮಾನದ ದಾಕ್ಷಿಣ್ಯಕ್ಕಾಗಿ ಅವರು, ಈ ಮಾತನ್ನು ಹೇಳಿದರೋ ಅಥವ ವೀರಶೈವ-ಲಿಂಗಾಯತ ಸಮುದಾಯದವರನ್ನು ಸಂತೋಷಪಡಿಸಿ, ಆ ಮೂಲಕ ಒಂದಿಷ್ಟು ರಾಜಕೀಯ ಲಾಭಪಡೆಯುವ ಸಲುವಾಗಿ ಹೇಳಿದರೋ ಅನ್ನುವ ಪ್ರಶ್ನೆಯನ್ನು ಕೈಬಿಟ್ಟು, ಮುಖ್ಯಮಂತ್ರಿಯವರ ಮಾತಿನ ನಂತರ, ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಒಂದು ಅವಲೋಕನ ನಡೆಸೋಣ.

ವೀರಶೈವ ಅಥವ ಲಿಂಗಾಯತ ಅನ್ನುವುದು ಒಂದು ಪ್ರತ್ಯೇಕ ಧರ್ಮ, ಹಾಗಾಗಿ ಅದಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಅನ್ನುವ ಬೇಡಿಕೆ ಇವತ್ತು ನೆನ್ನೆಯದೇನೂ ಅಲ್ಲ. 1930ನೇ ಇಸವಿಯಲ್ಲೇ ಈ ಬಗ್ಗೆ ಬೇಡಿಕೆ ಮಂಡಿಸಲಾಗಿತ್ತಂತೆ.  ಆನಂತರದ ದಶಕಗಳಲ್ಲಿ, ಆ ಬಗ್ಗೆ ಅಲ್ಲೊಮ್ಮೆ ಇಲ್ಲೊಮ್ಮೆ ಮಾತುಗಳು ಕೇಳಿ ಬರುತ್ತವೇ ಇದ್ದವು. ಆದರೆ, 2013ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದವರು, ಜನಗಣತಿ ವೇಳೆ, ದೇಶಾದ್ಯಂತ ಇರುವ ವೀರಶೈವ ಲಿಂಗಾಯತರಿಗೆ ತಮ್ಮದು ಪ್ರತ್ಯೇಕ ಧರ್ಮ ಎಂದು ದಾಖಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ರಾಜ್ಯದ ಎಲ್ಲ ಲಿಂಗಾಯತ ಶಾಸಕ-ಸಂಸದರ ಸಹಿ ಇದ್ದ ಮನವಿ ಪತ್ರದಲ್ಲಿ  ‘ನಾವು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳ, ಗೋವಾ ಮತ್ತು ದೇಶದ ಇತರ ಭಾಗಗಳಲ್ಲಿ ಲಿಂಗಾಯತ ಸಮುದಾಯದ ನಾಲ್ಕು ಕೋಟಿ ಜನರಿದ್ದೇವೆ.  ನಮ್ಮನ್ನು ಸಿಖ್, ಜೈನ ಮತ್ತು ಬೌದ್ಧರ ರೀತಿಯಲ್ಲಿ ಪ್ರತ್ಯೇಕ ಧರ್ಮದವರೆಂದು ಪರಿಗಣಿಸಬೇಕು’ ಎಂದು ಮನವಿ ಮಾಡಲಾಗಿತ್ತು. ಆನಂತರ ಈ ವಿಚಾರ ಹೆಚ್ಚಿನ ಪ್ರಗತಿ ಕಾಣದೆ ಅಲ್ಲಿಗೇ ನಿಂತಿತ್ತು. ಇದೀಗ ಈ ವಿಚಾರ ಮತ್ತೆ ಪ್ರಚಲಿತಕ್ಕೆ ಬಂದಿದೆ.

ಆದರೆ, ಯಾವುದು ಸ್ವತಂತ್ರ ಧರ್ಮ ಆಗಬೇಕು? ಅದು ವೀರಶೈವ ಧರ್ಮವೋ, ಲಿಂಗಾಯತ ಧರ್ಮವೋ ಅಥವ ಎರಡೂ ಸೇರಿರುವ ವೀರಶೈವ-ಲಿಂಗಾಯತ ಧರ್ಮವೋ ಅನ್ನುವ ಪ್ರಶ್ನೆಗಳು ಒಂದು ಕಡೆ ಇದ್ದರೆ, ಈ ರೀತಿ ಸ್ವತಂತ್ರ ಧರ್ಮದ ಬಗ್ಗೆ ವಿಚಾರ ಮಾಡುವುದೇ ತಪ್ಪು, ವೀರಶೈವವಾಗಲಿ ಅಥವ ಲಿಂಗಾಯಿತವಾಗಲಿ ಹಿಂದೂ ಧರ್ಮದ ಭಾಗವೇ ಹೊರತು ಸ್ವತಂತ್ರ ಧರ್ಮಗಳಾಗುವುದು ಅಸಾಧ್ಯ, ಅನ್ನುವ ಮಾತು ಮತ್ತೊಂದು ಕಡೆಯಿಂದ ಕೇಳಿ ಬರುತ್ತದೆ. ಆದರೆ ಇದೇ ವೇಳೆ, ಬೇರೆ ಜಾತಿ ಮತ್ತು ಧರ್ಮದವರಿಗೆ, ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಈ ಚರ್ಚೆ, ತುಂಬಾ ಗೊಂದಲವಾಗಿ ಕಂಡುಬರುತ್ತಿವೆ. ಏಕೆಂದರೆ, ಈವರೆಗೆ ಈ ವೀರಶೈವರು ಮತ್ತು ಲಿಂಗಾಯತರು ಇಬ್ಬರೂ ಒಂದೇ ಆಗಿದ್ದು, ಇವರು ಶಿವನನ್ನು ಪೂಜೆ ಮಾಡುತ್ತಾರೆ ಎಂದು ರಾಜ್ಯದ ಬಹುತೇಕ ಜನ ನಂಬಿದ್ದರು.

ಆದರೆ, ಈ ಸಂದರ್ಭದಲ್ಲಿ, ವೀರಶೈವ ಪಂಚಪೀಠಾಧೀಶರು ಮತ್ತು ಅವರ ಬೆಂಬಲಿಗರು, ವೀರಶೈವ-ಲಿಂಗಾಯತ ಅನ್ನುವುದೇ ಸ್ವತಂತ್ರ ಧರ್ಮವಾಗಬೇಕು ಎಂದು ಹೇಳಿದರೆ. ಮತ್ತೊಂದು ಕಡೆ, ಬಸವಣ್ಣನೇ ನಮ್ಮ ಧರ್ಮಗುರು, ವಚನಗಳೇ ನಮ್ಮ ಧರ್ಮಗ್ರಂಥ ಎಂದು ಹೇಳುವ ಮಾತೆ ಮಹಾದೇವಿ, ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ, ಮುರುಘಾ ಶರಣರು ಮತ್ತಿತರ ಮಠಾದೀಶರು, ನಾವು ವೀರಶೈವರಲ್ಲ, ಲಿಂಗಾಯತ ಧರ್ಮಕ್ಕೆ ಸೇರಿದವರು, ಹೀಗಾಗಿ, ಲಿಂಗಾಯತ ಧರ್ಮ ಅನ್ನುವುದೇ ಸ್ವತಂತ್ರ ಧರ್ಮ ಆಗಬೇಕು ಅದಕ್ಕೆ ವೀರಶೈವದ ಕೊಂಡಿ ಸೇರಿಸುವುದು ಬೇಡ ಎಂಬ ವಾದ ಮಂಡಿಸುತ್ತಿದ್ದಾರೆ. ಇದೇ ವೇಳೆ ಡಾ.ಚಿದಾನಂದ ಮೂರ್ತಿ, ಪೇಜಾವರ ಶ್ರೀಗಳು ಮತ್ತಿತರರು, ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮದ ಬೇಡಿಕೆಯೇ ತಪ್ಪು, ‘ವೀರಶೈವ ಲಿಂಗಾಯತರು’ ಹಿಂದೂ ಧರ್ಮದ ಭಾಗವೇ ಹೊರತು ಬೇರೆ ಅಲ್ಲ ಅನ್ನುವಂಥ ಪ್ರತಿಪಾದನೆಗಳನ್ನು ಮಾಡುತ್ತಿದ್ದಾರೆ.

ಹೀಗಾಗಿ, ವೀರಶೈವ ಮತ್ತು ಲಿಂಗಾಯತ ಅನ್ನುವುದು ಒಂದೇ ಹೊರತು ಪ್ರತ್ಯೇಕವಲ್ಲ ಅನ್ನುವುದರ ಪರ ಏನೆಲ್ಲಾ ವಿಚಾರಗಳಿವೆ ಅನ್ನುವುದನ್ನು ಮೊದಲು ನೋಡೋಣ.

ವೀರಶೈವ ಅನ್ನುವುದಕ್ಕೆ ಮೂಲವಾದ ಶೈವರು, ಶಿವನ ಆರಾಧಕರು. ಇವರು ಬಸವಣ್ಣನಿಗಿಂತಲೂ ಹಿಂದಿನಿಂದ ಇದ್ದವರು, ಈಗಲೂ ಇದ್ದಾರೆ. ಈ ಶೈವ ಪರಂಪರೆಯಲ್ಲಿ ಬರುವವರೇ ವೀರಶೈವರು.  ಈ ವೀರಶೈವರನ್ನೇ ಲಿಂಗಾಯತ, ಲಿಂಗವಂತ ಎಂಬುದಾಗಿ ಸಮಾನಾರ್ಥಕವಾಗಿ ಬಳಸಲಾಗುತ್ತಿದೆ. ಈ ಪದಗಳಲ್ಲಿ ವೀರಶೈವ ಎಂಬುದು ಮತ ವಾಚಕವಾದರೆ, ಲಿಂಗಾಯತ ಎಂಬುದು ಸಂಸ್ಕಾರ ಎಂದು ವೀರಶೈವದ ಪರ ಇರುವವರು ಹೇಳುತ್ತಾರೆ.

ವೀರಶೈವ ಮತ್ತು ಲಿಂಗಾಯತ ಬೇರೆ ಅಲ್ಲ, ವೀರಶೈವ ಎನ್ನುವ ಪದವೇ ಲಿಂಗಾಯತರಿಗೆ ಮೂಲ. ವಚನಗಳಲ್ಲೂ ವೀರಶೈವದ ಉಲ್ಲೇಖವಿದೆ, ಎರಡೂ ಕಡೆ ಷಟ್‌ಸ್ಥಲ, ಅಷ್ಟಾವರಣ ಮತ್ತು ಪಂಚಾಚಾರಗಳೇ ತುಂಬಿವೆ. ಹೀಗಾಗಿ ಇವೆರಡೂ ಬೇರೆ ಅಲ್ಲ. ವೀರಶೈವದ ಸಿದ್ಧಾಂತ ಶಿಖಾಮಣಿ ಮತ್ತು ವಚನಸಾಹಿತ್ಯ ಎರಡೂ ಉತ್ತಮವಾಗಿದ್ದು, ಇವುಗಳಲ್ಲಿ ಒಂದು ಹೆಚ್ಚು ಮತ್ತೊಂದು ಕಡಿಮೆ ಅನ್ನುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳುತ್ತಾರೆ.

ಲಿಂಗ ಧರಿಸಿ ಅದಕ್ಕೆ ಅಧೀನವಾಗಿ ಬದುಕುವವನೇ ವೀರಶೈವ.  ಬಸವಣ್ಣ ತಾವೇ ಗುರು, ಧರ್ಮ ಸ್ಥಾಪಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಲಿಂಗಾಯತ ಎಂಬ ಪದವನ್ನೂ ಉಲ್ಲೇಖ ಮಾಡಿಲ್ಲ ಅವರ ವಚನಗಳಲ್ಲೂ ಅದು ಕಾಣಸಿಗುವುದಿಲ್ಲ. ಬಸವಣ್ಣ ಹೇಳದೆ ಇರುವುದನ್ನು ಕೆಲವರು ಹೇಳುತ್ತಿದ್ದಾರೆ ಅವರ ಮಾತು ಸರಿಯಲ್ಲ ಅನ್ನುತ್ತಾರೆ. ವೀರಶೈವ ಅನ್ನುವುದು ಸನಾತನ ಧರ್ಮ. ಪಂಚಾಚಾರ್ಯರು ಅದರ ಸಂಸ್ಥಾಪಕರು. ಬಸವಣ್ಣನೇ ಅದರ ಮುಂಚೂಣಿ ಪ್ರಚಾರಕ. ನಾನು ಶೈವನಿದ್ದೆ, ವೀರಶೈವನಾದೆ ಎಂದು ಸ್ವತಃ ಬಸವಣ್ಣನೇ ಹೇಳಿಕೊಂಡಿದ್ದಾರೆ ಎಂದು ಕಾಶಿ ಜಗದ್ಗುರುಗಳು ಹೇಳುತ್ತಾರೆ. ಇನ್ನು ವೀರಶೈವ ಅನ್ನುವುದೇ ಸರಿ ಎಂಬ ವಾದವನ್ನು ತಳ್ಳಿಹಾಕುವ ಕೆಲವು ಮಠಾಧಿಪತಿಗಳು ಮತ್ತು ಲಿಂಗಾಯತ ಸಮಾಜದ ಮುಖಂಡರು, ನಮ್ಮದು ಲಿಂಗಾಯತ ಧರ್ಮ, ವೀರಶೈವ ಧರ್ಮವಲ್ಲ. ವೀರಶೈವ ಅನ್ನುವುದು ವೇದ, ಆಗಮ, ಉಪನಿಷತ್ತುಗಳನ್ನು ಆಧರಿಸಿದ್ದರೆ, ಲಿಂಗಾಯತವು ವೇದ ವಿರೋಧಿಯಾದ ಧರ್ಮ. ಆದ್ದರಿಂದ ನಮಗೆ ‘ಲಿಂಗಾಯತ ಧರ್ಮ’ ವೇ ಬೇಕು ಅನ್ನುತ್ತಾರೆ.

ಬಸವ ಧರ್ಮಪೀಠದ ಮಾತೆ ಮಹಾದೇವಿ ಅವರಂತೂ ಇಡೀ ಕರ್ನಾಟಕದಲ್ಲಿ ಯಾರೂ ವೀರಶೈವರೇ ಇಲ್ಲ. ಇಲ್ಲಿರುವವರೆಲ್ಲರೂ ಲಿಂಗಾಯತ ಧರ್ಮದ ಅನುಯಾಯಿಗಳೇ. ವೀರಶೈವ ಮತ್ತು ಲಿಂಗಾಯತ ಒಂದೇ ಅಲ್ಲ. ವೀರಶೈವ ಎಂಬುದು ಶೈವದ ಒಂದು ಪಂಥ. ಹೀಗಾಗಿ ವೀರಶೈವದಿಂದ ಪ್ರತ್ಯೇಕವಾದ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಅನ್ನುತ್ತಾರೆ. ಲಿಂಗಾಯತ ಮತ್ತು ವೀರಶೈವ ಅನ್ನುವುದರ ಬಗ್ಗೆ ಒಂದಿಷ್ಟು ತಿಳಿಯಲು ಹೊರಟರೆ, ಮೇಲುನೋಟಕ್ಕೆ ಅವೆರಡೂ ಒಂದೇ ಎಂಬಂತೆ ಕಂಡರೂ ಕೂಡ, ಲಿಂಗಾಯತ ಎಂಬ ಪದದ ಅರ್ಥ, ವ್ಯಾಖ್ಯಾನ, ಆಚರಣೆ, ಸಂಪ್ರದಾಯ, ಸಂಸ್ಕಾರಗಳೆಲ್ಲವೂ ವೀರಶೈವರಿಗಿಂತ ಮತ್ತು ಹಿಂದೂ ಧರ್ಮಕ್ಕಿಂತ ಭಿನ್ನವಾಗಿವೆ ಎಂಬುದನ್ನು ಒಪ್ಪಬೇಕಾಗುತ್ತದೆ.

ಹನ್ನೆರಡನೆಯ ಶತಮಾನದ ಸಮಾಜದಲ್ಲಿ ತುಳಿತಕ್ಕೆ ಶೋಷಣೆಗೆ ಒಳಗಾಗಿದ್ದ ಜನತೆಯ ಪರವಾಗಿ ಬಸವಣ್ಣ ಮತ್ತು ಇತರೆ ಅನುಭಾವಿಗಳು ನಡೆಸಿದ ಚಳವಳಿಯ ಫಲಶೃತಿಯಾಗಿ ಹುಟ್ಟಿದ ಧರ್ಮ ಲಿಂಗಾಯತ ಧರ್ಮ ಅನ್ನುವುದು ಒಂದು ಐತಿಹಾಸಿಕ ಸತ್ಯ. ಲಿಂಗಾಯತ ಧರ್ಮ, ಹನ್ನೆರಡನೆಯ ಶತಮಾನದಲ್ಲಿ ಹಿಂದೂ ಧರ್ಮದಲ್ಲಿನ ಸಾಮಾಜಿಕ, ಧಾರ್ಮಿಕ ದಬ್ಬಾಳಿಕೆ, ಶೋಷಣೆ, ಲಿಂಗಾಧಾರಿತ ತಾರತಮ್ಯದ ವಿರುದ್ಧ ಸೆಟೆದು ನಿಂತವರು ಸ್ಥಾಪಿಸಿದ ಹೊಸದೊಂದು ಧರ್ಮ. ಅದು ಹಿಂದೂ ಧರ್ಮದ ಒಂದು ಜಾತಿ ಅಥವ ವೀರಶೈವ ಧರ್ಮದ ರೂಪಾಂತರ ಅಲ್ಲ. ಏಕೆಂದರೆ, ಲಿಂಗಾಯತ ಧರ್ಮದ ಆಶಯ ಜಾತಿರಹಿತ ಸಮಾಜವಾದಿ ಸಮಾಜದ ನಿರ್ಮಾಣ.

ಹಿಂದೂ ಧರ್ಮದ ಮೂಲವಾಗಿರುವ ವೇದ ಆಗಮ, ಉಪನಿಷತ್ತು, ಪುರಾಣ ಮುಂತಾದವುಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ಶರಣರು, ಲಿಂಗಾಯತ ಧರ್ಮವನ್ನು ವೈಜ್ಞಾನಿಕ ಹಾಗೂ ತರ್ಕಬದ್ಧ ಧರ್ಮವಾಗಿ ನಿರೂಪಿಸಿದರು. ಹಲವು ದೇವರುಗಳು ಮತ್ತು ಮೂರ್ತಿಪೂಜೆ ನಿರಾಕರಣೆ ಹಾಗೂ ಪುರೋಹಿತ ಶಾಹಿಯ ತಿರಸ್ಕರಣೆ ಹಾಗೂ ನಿರ್ಮೂಲನೆ, ಪ್ರತಿಯೊಂದನ್ನೂ ವೈಜ್ಞಾನಿಕತೆ, ವಿಚಾರವಾದದ ಒರೆಗಲ್ಲಿಗೆ ಹಚ್ಚಿ ನೋಡುವುದು, ಲಿಂಗಾಯತ ಧರ್ಮದ ಪ್ರಮುಖ ಅಂಶಗಳು.

ಲಿಂಗಾಯತ ಧರ್ಮದ ಪ್ರಮುಖ ಅಂಶಗಳಲ್ಲಿ 'ನ ಸ್ತ್ರೀ ಸ್ವಾತಂತ್ರ್ಯಮ್  ಅರ್ಹತಿ' ಎಂಬ ಮಾತನ್ನು ಹೇಳುವ ಮೂಲಕ ಮಹಿಳೆಯರ ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ಮನುವನ್ನು ತಿರಸ್ಕರಿಸಲಾಗಿದೆ. ಲಿಂಗಾಯತ ಧರ್ಮದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಲಾಗಿದೆ.  ಇಷ್ಟು ಮಾತ್ರವಲ್ಲದೆ, ಹಿಂದೂ ಧರ್ಮದಲ್ಲಿರುವ ಪಂಚಸೂತಕಗಳನ್ನೂ ಲಿಂಗಾಯತ ಧರ್ಮ ತಿರಸ್ಕರಿಸುತ್ತದೆ. ವೈಜ್ಞಾನಿಕವೂ, ತಾರ್ಕಿಕವೂ ಆಗಿರುವ ಜಗತ್ತಿನ ಕೆಲವೇ ಶ್ರೇಷ್ಠ ಮಾನವೀಯ ಧರ್ಮಗಳಲ್ಲಿ ಒಂದಾದ ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದ ಬಾಲಂಗೋಚಿಯೆನ್ನುವಂತೆ ಪ್ರತಿಪಾದಿಸುವುದು ತಪ್ಪು ಅನ್ನುತ್ತಾರೆ ವಿಚಾರವಂತರು.

ಬಸವಣ್ಣನವರು ಇಷ್ಟಲಿಂಗ ಪೂಜೆ ಹೊರತುಪಡಿಸಿದರೆ, ಮಿಕ್ಕ ಯಾವ ಪೂಜೆಯನ್ನೂ ಸೂಚಿಸಿದವರಲ್ಲ. ಅವರು ಯಜ್ಞ, ಯಾಗ, ಹೋಮ, ಬಲಿ ಕೊಡುವುದು ಮುಂತಾದ ಪದ್ಧತಿಗಳನ್ನು ಪ್ರತಿಪಾದಿಸಲಿಲ್ಲ. ಆದರೆ ಇವೆಲ್ಲಾ ಪದ್ಧತಿಗಳು ಶೈವ ಪರಂಪರೆಯಲ್ಲಿವೆ. ವೀರಶೈವರು ಹಾಗೂ ಲಿಂಗಾಯತರ ಆಚರಣೆಗಳ ನಡುವಿನ ಪ್ರಮುಖ ವ್ಯತ್ಯಾಸಗಳಲ್ಲಿ ಇದೂ ಒಂದು. ಹೀಗಾಗಿ, ವೀರಶೈವ ತತ್ವಗಳೇ ಬೇರೆ, ಲಿಂಗಾಯತ ತತ್ವಗಳೇ ಬೇರೆ. ಹಾಗಿರುವುದರಿಂದ, ನಮಗೆ ವೀರಶೈವದಿಂದ ಹೊರತಾದ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಅನ್ನುವುದು ಲಿಂಗಾಯತರ ಆಗ್ರಹ.

12ನೇ ಶತಮಾನದಲ್ಲಿ ಸ್ಥಾಪಿತವಾದ ಲಿಂಗಾಯತ ಧರ್ಮಕ್ಕೆ ಆನಂತರದ ದಿನಗಳಲ್ಲಿ ಬ್ರಾಹ್ಮಣ್ಯದ ಹಿನ್ನೆಲೆಯ ಶೈವ ಪರಂಪರೆ ಆಚರಣೆ ಮಾಡುತ್ತಿದ್ದ ವೀರಶೈವರೂ ಬಂದು ಸೇರಿಕೊಂಡರು. ನಿಧಾನವಾಗಿ ಶೈವಾಚರಣೆಗಳು ಲಿಂಗಾಯತ ಧರ್ಮದ ಮೇಲೆ ಹೇರಲ್ಪಟ್ಟವು ಎಂಬ ಆರೋಪಗಳು ಕೇಳಿಬರುತ್ತವೆ.

ಹೀಗಾಗಿ, ಬಹುತೇಕರು ಹೇಳುವಂತೆ ಮತ್ತು ಒಪ್ಪುವಂತೆ, ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮ, ಹಿಂದೂ ಧರ್ಮ ಅಥವ ವೀರಶೈವ ಧರ್ಮಕ್ಕಿಂತ ವಿಭಿನ್ನವಾದದ್ದು. ಲಿಂಗಾಯತ ಅನ್ನುವುದು ಒಂದು ತತ್ವ, ಸಿದ್ಧಾಂತ, ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರೂ ಲಿಂಗಾಯತರು. ಗುರುವಿನಿಂದ ದೀಕ್ಷೆ ಪಡೆದು ಯಾರು ಬೇಕಾದರೂ ಲಿಂಗಾಯತರಾಗಬಹುದು.

ಲಿಂಗಾಯತ ಧರ್ಮ ಶ್ರೀಸಾಮಾನ್ಯನ ಧರ್ಮ,  ಬಸವಣ್ಣ ಅದರ ಧರ್ಮಗುರು. ಆದರೆ ವೀರಶೈವ ಪಂಚಪೀಠಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ, ಅವರು ಬೇಕಿದ್ದರೆ ವೀರಶೈವಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲಿ. ಆದರೆ, ಲಿಂಗಾಯತ ಧರ್ಮಕ್ಕೆ ತಗಲು ಹಾಕುವುದು ಬೇಡ ಅನ್ನುವುದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ವಾದ.

ಇದೇ ವೇಳೆ, ‘ಲಿಂಗಾಯತ ಮಾತ್ರವೇ ಸ್ವತಂತ್ರ ಧರ್ಮ ಆಗಬೇಕು’ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ವೀರಶೈವ ಮಹಾಸಭಾದ ಶಾಮನೂರು ಶಿವಶಂಕರಪ್ಪ ಅವರಿಗೆ ಪತ್ರಬರೆದಿದ್ದಾರೆ. ‘ಲಿಂಗಾಯತ ಸ್ವತಂತ್ರವಾದ ಪ್ರತ್ಯೇಕ ಧರ್ಮ’ ಅನ್ನುವುದರ ಸ್ಪಷ್ಟ ಅರಿವಿಲ್ಲದ ಕಾರಣ, ಈ ಹಿಂದೆ ಕೇಂದ್ರಕ್ಕೆ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಮನವಿ ಸಲ್ಲಿಸಲಾಗಿತ್ತು. ಈ ಮನವಿ ಪತ್ರಕ್ಕೆ ನಾನು ಸೇರಿ ಹಲವು ಜನಪ್ರತಿನಿಧಿಗಳು ಸಹಿ ಮಾಡಿರುವುದು ತಪ್ಪು ಎಂಬುದು ನನಗೆ ಈಗ ಮನವರಿಕೆ ಆಗಿದೆ. ತಪ್ಪಿನ ಅರಿವಾದ ಮೇಲೆ ತಿದ್ದಿಕೊಳ್ಳಬೇಕು' ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಆದರೆ, ಸ್ವತಃ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿರುವ ಕನ್ನಡದ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು, ವೀರಶೈವ –ಲಿಂಗಾಯತ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಇವು ಭಿನ್ನ ವರ್ಗ­ಗಳನ್ನು ಹೇಳುತ್ತವೆಯೋ ಅಥವಾ ಒಂದೇ ವರ್ಗದ ಸೂಚಕವೋ ಎನ್ನುವ ವಾದ­ಗಳಿಗೆ ಯಾರೂ ಕಿವಿಗೊಡ­ಬಾ­ರದು. ಲಿಂಗಾಯತ ಧರ್ಮ ಅನ್ನುವುದು, ಹಿಂದೂ ಧರ್ಮದ ಒಂದು ಭಾಗವಾಗಿದ್ದು, ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಒತ್ತಾಯಿಸುತ್ತಿರುವುದು ಮೂರ್ಖತನ ಎಂದು ಟೀಕಿಸುತ್ತಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಚಿದಾನಂದ ಮೂರ್ತಿಯವರು. 'ಹುಟ್ಟಿನಿಂದ ಶೈವ ಬ್ರಾಹ್ಮಣನಾಗಿದ್ದ ನಾನು, ಭಕ್ತಿ ಮಾರ್ಗಕ್ಕೆ ಮನಸೋತು ವೀರಶೈವನಾದೆ' ಎಂದು ಬಸವಣ್ಣನವರೇ ಹೇಳಿದ್ದಾರೆ ಅನ್ನುತ್ತಾರೆ. ವೀರಶೈವ ಮಠಗಳಲ್ಲಿ ಈಗಲೂ ವೇದ ಪಾಠಶಾಲೆಗಳಿವೆ. ಮಠಗಳಲ್ಲಿ ಪ್ರತಿ ಸಾಯಂಕಾಲ ವೇದ ಘೋಷ ನಡೆಯುತ್ತದೆ. ಮಕ್ಕಳಿಗೆ ಭಗವದ್ಗೀತೆ ಕಂಠ ಪಾಠ ಮಾಡಿಸಲಾಗುತ್ತದೆ ಹೀಗಾಗಿ ವೀರಶೈವ ಅಥವ ಲಿಂಗಾಯತ ಅನ್ನುವುದು ಹಿಂದೂ ಧರ್ಮದಿಂದ ಬೇರೆ ಅಲ್ಲ ಅನ್ನುವುದಕ್ಕೆ ಇನ್ನೇನು ಸಾಕ್ಷ್ಯಗಳು ಬೇಕು ಎಂದು ಪ್ರಶ್ನಿಸುತ್ತಾರೆ.

ಹಿಂದೂ ಧರ್ಮದ ದೇವತೆಯಾದ ಶಿವನ ಆರಾಧನೆ ಮಾಡುವವರೆಲ್ಲರೂ ಹಿಂದೂಗಳೇ. ಹೀಗಾಗಿ, ಹಿಂದೂ ಧರ್ಮದ ವಿಭಜನೆ ಬೇಡ ಎಂದು ಪೇಜಾವರದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ. ವೀರಶೈವ ಹಾಗೂ ಲಿಂಗಾಯತದ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಅವು ಹಿಂದೂ ಧರ್ಮದಿಂದ ಬೇರ್ಪಟ್ಟು ಸ್ವತಂತ್ರ ಧರ್ಮ ಆಗುವುದು ಬೇಡ ಎಂದು ಮಾಜಿ ಸಿಎಂ  ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದೇ ವೇಳೆ, ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ, ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಆದರೆ, ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಬೇಕು ಎಂದು ವೀರಶೈವ ಮಹಾಸಭಾದವರು ಐದು ವರ್ಷಗಳ ಹಿಂದೆ, ಆಗಿನ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಹಿ ಹಾಕಿದ್ದ ಯಡಿಯೂರಪ್ಪ ನವರು, ಇದೀಗ ಬೇಡ ಅನ್ನುತ್ತಿರುವುದು ಅವರ ದ್ವಂದ್ವ ನಿಲುವನ್ನು ಬಯಲು ಮಾಡಿದೆ. ಇದೆಲ್ಲದರ ನಡುವೆ, ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮಗಳಾಗುವುದು ಬೇಡ. ಇವೆರಡನ್ನೂ ಸೇರಿಸಿ, ‘ಶರಣ ಧರ್ಮ’ ಎಂದು ಮಾಡಲಿ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇಷ್ಟಕ್ಕೂ ಪ್ರತ್ಯೇಕ ಧರ್ಮ ಎಂಬ ಮಾನ್ಯತೆ ಪಡೆದರೆ ಆಗಬಹುದಾದ ಲಾಭವೇನು ಎಂಬ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ವ್ಯಾಪಿಸಿಕೊಂಡಿರುವ ಲಿಂಗಾಯಿತ ಧರ್ಮ ಪ್ರತ್ಯೇಕ ಧರ್ಮವಾದಲ್ಲಿ , ಅದು ಅಲ್ಪ ಸಂಖ್ಯಾತ ಧರ್ಮದ ವ್ಯಾಪ್ತಿಗೆ ಒಳಪಡಬಹುದು. ಈಗಿರುವ ಮುಸ್ಲಿಮ್, ಕ್ರಿಶ್ಚಿಯನ್, ಜೈನ, ಬೌದ್ಧ ಇತ್ಯಾದಿ ಅಲ್ಪಸಂಖ್ಯಾತ ಧರ್ಮಗಳವರಿಗೆ  ಸಿಗುತ್ತಿರುವ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಗಳು ಹೊಸ ಧರ್ಮಕ್ಕೂ ಸಿಗಬಹುದು. ಧರ್ಮದ ಬಲದಿಂದ ರಾಜಕಾರಣದಲ್ಲೂ  ಒಂದಿಷ್ಟು ಲಾಭವಾಗಬಹುದು. ಇಷ್ಟನ್ನು ಬಿಟ್ಟರೆ, ಬೇರೆ ಯಾವುದೇ ರೀತಿಯ ವಿಶೇಷ ಬದಲಾವಣೆಗಳೇನೂ ಆಗುವುದಿಲ್ಲ.

ಆದರೆ, ಹೊಸ ಧರ್ಮಕ್ಕೆ ಮಾನ್ಯತೆ ಸಿಗುವುದು ಅಷ್ಟು ಸುಲಭವಲ್ಲ. ರಾಜ್ಯಸರ್ಕಾರದವರು ಕೇಂದ್ರಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದರ ಬಗ್ಗೆ, ಸಂಸತ್ತಿನಲ್ಲಿ ಚರ್ಚೆ ನಡೆದು ಉಭಯ ಸದನಗಳಲ್ಲಿ ಅಂಗೀಕಾರ ಆಗಬೇಕು, ರಾಷ್ಟ್ರಪತಿಗಳು ಒಪ್ಪಬೇಕು, ಸಂವಿಧಾನಕ್ಕೆ ತಿದ್ದುಪಡಿ ಆಗಬೇಕು.ಅಷ್ಟೆಲ್ಲಾ ಆದಾಗ ಮಾತ್ರವೇ ಹೊಸ ಧರ್ಮವೆಂಬ ಮಾನ್ಯತೆ ಪಡೆಯುವುದು ಸಾಧ್ಯ.  ಅದಕ್ಕಿಂತ ಮೊದಲು ಲಿಂಗಾಯತ ಧರ್ಮ ಅನ್ನುವುದನ್ನು ಸ್ವತಂತ್ರ ಧರ್ಮ ಎಂದು ಪರಿಗಣಿಸಬೇಕೋ ಅಥವ ವೀರಶೈವ ಅನ್ನುವುದನ್ನು ಸ್ವತಂತ್ರ ಧರ್ಮವಾಗಿ ಪರಿಗಣಿಸಬೇಕೋ ಅನ್ನುವ ವಿಚಾರ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳು ಕಂಡುಬರುತ್ತಿವೆ. ಇದರ ಜೊತೆಜೊತೆಗೆ, ಈ ರೀತಿ ಹೊಸದಾಗಿ ಸ್ವತಂತ್ರ ಧರ್ಮವೆಂದು ಮಾನ್ಯತೆ ಕೋರುವ ಮನವಿಯನ್ನು ರಾಜ್ಯ ಅಥವ ಕೇಂದ್ರ ಸರ್ಕಾರ ಪರಿಗಣಿಸಬಹುದೇ ಮತ್ತು ಪುರಸ್ಕರಿಸಬಹುದೇ ಅನ್ನುವುದನ್ನೇ ಕೋರ್ಟಿನಲ್ಲಿ ಪ್ರಶ್ನಿಸುವ ಸಾಧ್ಯತೆಯೂ ಇದೆ.

ಹೀಗಾಗಿ, ಲಿಂಗಾಯತ ಅಥವ ವೀರಶೈವ ಅನ್ನುವ ‘ಸರ್ಕಾರಿ ಮಾನ್ಯತೆ’ ಪಡೆದ ಅಧಿಕೃತ ಹೊಸ ಧರ್ಮ ನಿಜವಾಗಿಯೂ ಅಸ್ತಿತ್ವಕ್ಕೆ ಬರುವುದೇ ಅನ್ನುವ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಈ ನಡುವೆ, ಯಾವುದೇ ಒಂದು ಧರ್ಮ ತನ್ನಿಂದ ತಾನೇ ಅಸ್ತಿತ್ವವನ್ನು ಪಡೆಯಬೇಕೇ ಹೊರತು, ಜಗತ್ತಿನಲ್ಲೆಲ್ಲಾದರೂ ಸರ್ಕಾರದಿಂದಲೇ ಹುಟ್ಟು ಪಡೆದ ಧರ್ಮ ಇದೆಯೇ? ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.  ಇದಲ್ಲದೆ, ಇವತ್ತು ವೀರಶೈವ-ಲಿಂಗಾಯತರಿಗೆ ಮಾನ್ಯತೆ ನೀಡಲು ಹೊರಟಿರುವ ಸರ್ಕಾರ, ನಾಳೆ ಇತರೆ ಜಾತಿ ಜನಾಂಗದವರ ಬೇಡಿಕೆಗಳಿಗೂ ಸ್ಪಂದಿಸುವ ಅನಿವಾರ್ಯತೆಗೆ ಸಿಕ್ಕಿಕೊಳ್ಳುತ್ತದೆ ಎಂಬ ಎಚ್ಚರಿಕೆಯೂ ಕೇಳಿ ಬರುತ್ತಿದೆ.

ಇದೇ ವೇಳೆ, ಯಾವುದೋ ಒಂದು ಕಾರಣಕ್ಕಾಗಿ ಲಿಂಗಾಯತ-ವೀರಶೈವಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಶಿಫಾರಸು ಮಾಡುತ್ತೇನೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರ ಇದೀಗ ಗೊಂದಲಕ್ಕೆ ಸಿಲುಕಿರುವ ಹಾಗೆ ಕಾಣುತ್ತದೆ. ವೀರಶೈವ ಎಂದು ಶಿಫಾರಸು ಮಾಡುವುದೋ ಅಥವ ಲಿಂಗಾಯತಕ್ಕೆ ಮಾನ್ಯತೆ ನೀಡಿ ಎಂದು ಶಿಫಾರಸು ಮಾಡುವುದೋ ಅನ್ನುವುದು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಇತ್ತ ವೀರಶೈವ ಮತ್ತು ಲಿಂಗಾಯತದ ಗೊಂದಲಕ್ಕೆ ಸದ್ಯದಲ್ಲಿ ತರೆಬೀಳುವ ಸಾಧ್ಯತೆಗಳೂ ಕಾಣುತ್ತಿಲ್ಲ. ಆದರೆ, ಸಮಾಜದಲ್ಲಿ ಸಂಸ್ಕಾರವಂತರು, ವಿಚಾರವಂತರು ಎಂಬಂತೆ ಕಂಡುಬರುತ್ತಿದ್ದ ವೀರಶೈವರು ಅಥವ ಲಿಂಗಾಯತರು ತಮ್ಮೊಳಗೇ ಕಚ್ಚಾಡುತ್ತಾ ಪರಸ್ಪರ ಆರೋಪ ಮಾಡುತ್ತಿರುವುದು, ಅವರ ಬಗ್ಗೆ ಇತರೆ ಧರ್ಮೀಯರಲ್ಲಿ ರೇಜಿಗೆ ಹುಟ್ಟಿಸುತ್ತಿದೆ ಅನ್ನುವುದಂತೂ ನಿಜ.

ಇದು 21ನೇ ಶತಮಾನ. ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದ ಇಡೀ ಜಗತ್ತೇ ಒಂದು ಹಳ್ಳಿಯೆಂಬಷ್ಟರಮಟ್ಟಿಗೆ ಬದಲಾಗಿದೆ. ಇವತ್ತಿನ ದಿನಗಳಲ್ಲಿ ಜಾತಿ, ಧರ್ಮ ಅನ್ನುವ ವಿಚಾರಗಳು ಎಷ್ಟರಮಟ್ಟಿಗೆ ಪ್ರಸ್ತುತ ಅನ್ನುವುದೇ ಒಂದು ಚರ್ಚೆಯ ವಿಚಾರ. ಆದರಲ್ಲೂ ಜಾತ್ಯತೀತ ಪ್ರಜಾತಾಂತ್ರಿಕ ಗಣ ರಾಜ್ಯವಾಗಿರುವ ಭಾರತದಂಥ ಪ್ರಗತಿಪರ ಚಿಂತನೆಗಳ ದೇಶಕ್ಕೆ ಜಾತಿ-ಧರ್ಮಗಳು ಅಗತ್ಯವೇ? ಈ ಜಾತಿ-ಧರ್ಮಗಳೆಲ್ಲ ಕೇವಲ ವೈಯಕ್ತಿಕ ಮಟ್ಟದಲ್ಲಿದ್ದರೆ ಸಾಕಲ್ಲವೇ? ಈ ಜಾತಿ-ಧರ್ಮಗಳನ್ನು ಬದಿಗಿಟ್ಟು, ಭಾರತದ ಸಂವಿಧಾನವೇ ನಮ್ಮ ಧರ್ಮ ಗ್ರಂಥ ಎಂದು ಗುರುತಿಸಿಕೊಳ್ಳುವ ಮಟ್ಟಕ್ಕೆ ನಾವೆಲ್ಲರೂ ಬೆಳೆಯಲು ಇನ್ನೂ ಎಷ್ಟು ಸಮಯ ಬೇಕು? ಅನ್ನುವ ಪ್ರಶ್ನೆಗಳು ಪ್ರಜ್ಞಾವಂತರ ವಲಯದಿಂದ ಕೇಳಿ ಬರುತ್ತಿವೆ.


ಸಂಬಂಧಿತ ಟ್ಯಾಗ್ಗಳು

ವೀರಶೈವ Vs ಲಿಂಗಾಯತ Vs ಹಿಂದೂ ಹಿಂದೂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Muchas gracias. ?Como puedo iniciar sesion?
  • bsmxggjuxt
  • nggwcvvvcy