ಮಕ್ಕಳನ್ನು ಹೆತ್ತರೆ ಸಾಕೇ..?

Kannada News

05-08-2017

ಭಾರತದ ಜನಸಂಖ್ಯೆ ಸುಮಾರು 130 ಕೋಟಿ. ಜನಸಂಖ್ಯಾ ಸ್ಫೋಟದಿಂದ ದೇಶದ ತುಂಬೆಲ್ಲಾ ಜನವೋ ಜನ. ಹೀಗಿದ್ದರೂ ಕೂಡ, ಇವತ್ತಿಗೂ ಭಾರತೀಯ ಸಮಾಜದಲ್ಲಿ, ಬೇರೆ ಎಲ್ಲದಕ್ಕಿಂತಲೂ ಹೆಚ್ಚಾಗಿ, ಮದುವೆ ಆಗುವುದು ಮತ್ತು ಮಕ್ಕಳನ್ನು ಹೆರುವುದೇ ಒಂದು ದೊಡ್ಡ ಸಾಧನೆ ಎಂಬ ಭಾವನೆಯೇ ಹೆಚ್ಚಾಗಿ ಕಂಡುಬರುತ್ತದೆ. ಒಂದೆರಡು ಮಕ್ಕಳನ್ನು ಹೆತ್ತುಬಿಟ್ಟರೆ ಮುಗಿಯಿತು, ತಮ್ಮ ಬದುಕು ಸಾರ್ಥಕ ಅನ್ನುವ ಮನಸ್ಥಿತಿಯ ಜನರೇ ಸಮಾಜದಲ್ಲಿ ಹೆಚ್ಚಾಗಿದ್ದಾರೆ.

ಇತ್ತೀಚೆಗಂತೂ  ಬಾಡಿಗೆ ತಾಯ್ತನದ ಮೂಲಕವೂ ಮಕ್ಕಳನ್ನು ಪಡೆಯುವ ವ್ಯವಸ್ಥೆ ಬಂದಿದೆ. ಬಾಲಿವುಡ್ಡಿನ ಅನೇಕ ತಾರೆಯರು, ನಿರ್ದೇಶಕರು ಬಾಡಿಗೆ ತಾಯಂದಿರಿಂದ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಆದರೆ, ನನ್ನ ಮಗ ಈ ದೇಶದ ಸೇವೆ ಮಾಡುವ ನಾಯಕನೋ, ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕನೋ, ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ಶಿಕ್ಷಕನೋ, ಅನ್ನ ನೀಡುವ ರೈತನೋ ಆಗಲಿ ಎಂದೇನೂ ಮಕ್ಕಳನ್ನು ಹೆರುವುದಿಲ್ಲ. 

ಯಾವುದರಲ್ಲಿ ಸುಲಭವಾಗಿ ಹೆಚ್ಚು ಹಣ ಸಿಗುತ್ತದೋ, ಕೀರ್ತಿ ಸಿಗುತ್ತದೋ ಅಂಥದನ್ನು ನಮ್ಮ ಮಕ್ಕಳು ಸಾಧ್ಯವಾದಷ್ಟೂ ಬೇಗ ಪಡೆದುಕೊಳ್ಳುವಂಥವರಾಗಲಿ ಅನ್ನುವುದೇ ಬಹುತೇಕ ತಂದೆ ತಾಯಿಗಳ ಅಪೇಕ್ಷೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಅತಿ ಮುದ್ದಿನಿಂದ ಬೆಳೆಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ‘ಅವರ ಅಪ್ಪ ಅಮ್ಮ ತುಂಬಾ ಶ್ರೀಮಂತರು, ತಮ್ಮ ಮಕ್ಕಳನ್ನು ಅತಿ ಮುದ್ದಿನಿಂದ ಬೆಳೆಸಿ ಹಾಳು ಮಾಡಿ ಬಿಟ್ಟಿದ್ದಾರೆ’ ಎಂದು ಒಂದೆರಡು ದಶಕಗಳ ಹಿಂದೆ ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಇದೀಗ  ತಮ್ಮ ಮಕ್ಕಳನ್ನು ಅತಿ ಮುದ್ದು ಮಾಡುವುದರಲ್ಲಿ ಸಮಾಜದ ಶ್ರೀಮಂತ ವರ್ಗ, ಮಧ್ಯಮ ವರ್ಗ ಮತ್ತು ಕೆಳವರ್ಗಗದವರ ನಡುವೆ ಯಾವುದೇ ಬೇಧ ಕಾಣುತ್ತಿಲ್ಲ. ಎಲ್ಲಾ ವರ್ಗದವರೂ ಕೂಡ ಮಕ್ಕಳನ್ನು ಅತಿ ಮುದ್ದು ಮಾಡುವುದರಲ್ಲಿ ಒಬ್ಬರಿಗೊಬ್ಬರು ಸ್ಪರ್ಧೆಗಿಳಿದವರಂತೆ ವರ್ತಿಸುತ್ತಿದ್ದಾರೆ.

ಮಗು ಹುಟ್ಟಿದಾಗಿನಿಂದಲೇ ಶುರುವಾಗುವ ಅತಿ ಮುದ್ದಿನ ವರ್ತನೆ, ಮಕ್ಕಳು ಹದಿಹರೆಯದವರಾಗಿ ಬೆಳೆದು, ತಂದೆ ತಾಯಿಗಳಿಗೆ ಎದುರು ಮಾತನಾಡುವ ಹಂತಕ್ಕೆ ಬರುವವರೆಗೂ ಮುಂದುವರೆಯುತ್ತದೆ. ಆ ಹಂತದಲ್ಲಿ ಕೆಲವರು ಎಚ್ಚೆತ್ತುಕೊಳ್ಳುತ್ತಾರೆ. ನಾವು ಅತಿ ಮುದ್ದಿನಿಂದ ಬೆಳೆಸಿದ್ದಕ್ಕೆ ತಾನೆ ಹೀಗಾಗಾಗಿದ್ದು ಎಂದು ಯೋಚಿಸಲು ಮುಂದಾಗುತ್ತಾರೆ. ಆದರೆ, ಅಷ್ಟೊತ್ತಿಗಾಗಲೇ ತುಂಬಾ ತಡವಾಗಿರುತ್ತದೆ. ಆ ವಯಸ್ಸಿನಲ್ಲಿ ಮಕ್ಕಳನ್ನು ತಿದ್ದುವುದು ಅಷ್ಟು ಸುಲಭವಲ್ಲ.

ಅತಿ ಮುದ್ದು ಅನ್ನುವುದು ಮಕ್ಕಳು ಹುಟ್ಟಿದಾಗಿನಿಂದಲೇ ಆರಂಭವಾಗಿಬಿಡುತ್ತದೆ. ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯ ಬೇಕು ಅನ್ನುವುದು ನಿಜ. ಆದರೆ, ಇಡೀ ದಿನ ಮಗುವನ್ನು ಎತ್ತಿಕೊಂಡೇ ಇರುವುದರಿಂದ ಮಗುವು ತಂದೆ ಅಥವ ತಾಯಿ ಅಥವ ಪೋಷಕರ ಮೇಲೆ ಅತಿ ಅವಲಂಬನೆ ಬೆಳೆಸಿಕೊಳ್ಳುತ್ತದೆ. ಇದು ಅದರ ಸಹಜ ಬೆಳವಣಿಗೆಗೆ ತಡೆಯಾಗಬಹುದು.

ಮಗು ಮೂರು ವರ್ಷ ಮುಗಿಸಿ ಮನೆತುಂಬಾ ನಡೆದಾಡುತ್ತಿದ್ದರೂ ಅದಕ್ಕೆ ತನ್ನ ನಿತ್ಯ ಚಟುವಟಿಕೆಗಳನ್ನು ಹೇಗೆ ನಡೆಸಬೇಕು, ಶೌಚಾಲಯವನ್ನು ಹೇಗೆ ಬಳಸಬೇಕು ಎನ್ನುವ ಬಗ್ಗೆ ತಿಳಿಸಿ ಹೇಳುವ ಪ್ರಯತ್ನವನ್ನೇ ಕೆಲವರು ಮಾಡುವುದಿಲ್ಲ. ಇದೂ ಕೂಡ ಅತಿ ಅವಲಂಬನೆಗೆ ಕಾರಣವಾಗುತ್ತದೆ.

ಮೂರು ನಾಲ್ಕು ವರ್ಷದ ಮಗುವನ್ನು ಆಟವಾಡಿಸುವಾಗಲೂ ಕೆಲವರು ವಿಚಿತ್ರವಾದ ರೀತಿ ನೀತಿಗಳನ್ನು ಬಳಸುತ್ತಾರೆ. ‘ಅಲ್ನೋಡಪ್ಪಾ ಅಪ್ಪನ್ನ, ಕೇಳು ….ಯಾಕೆ ಇಷ್ಟು ಲೇಟಾಗಿ ಬಂದೆ ಅಂತ ಅನ್ನು, ಅಂತಾರೆ,  ‘ನೋಡೂ ಮಾಮನ್ನ ನೋಡು, ಕೇಳು ನಿನ್ನ ಯೋಗ್ಯತೆಗೆ ಇಂಥದ್ದೇ ಬಿಸ್ಕೆಟ್ಟಾ ಸಿಕ್ಕಿದ್ದು ಅಂತ’. ಥೂ ಅನ್ನು…ಇತ್ಯಾದಿ ರೀತಿಯ ವಾಕ್ಯಗಳನ್ನು ಹೇಳಿಕೊಡಲು ಶುರು ಮಾಡಿ ಬಿಟ್ಟಿರುತ್ತಾರೆ. ಮುಗ್ಧ ಮನಸ್ಸಿನ ಮಗು ಇವೆಲ್ಲವನ್ನೂ ಕೇಳಿಸಿಕೊಂಡು ಬೆಳೆಯುತ್ತದೆ. ಕೆಲವು ದಿನಗಳ ಹೋದ ಬಳಿಕ ಅಪ್ಪನಿಗೂ ಅದನ್ನೇ ಹೇಳುತ್ತದೆ, ಅಮ್ಮನಿಗೂ ಅದನ್ನೇ ಹೇಳುತ್ತದೆ.

ಮಕ್ಕಳ ಹಿತದೃಷ್ಟಿಯಿಂದ ತಂದೆ ತಾಯಿ ಇಬ್ಬರೂ ಕೂಡ, ಒಂದೇ ರೀತಿಯ ಮತ್ತು ಸ್ಥಿರವಾದ ಧೋರಣೆ ಹೊಂದಿರಬೇಕು. ಯಾವುದೋ ಕಾರಣಕ್ಕಾಗಿ ಅಮ್ಮ ಮಗುವಿಗೆ ಒಂದು ಏಟುಕೊಟ್ಟಿರುತ್ತಾಳೆ, ಅಷ್ಟಕ್ಕೇ ಏನೋ ಆಗಿಹೋಯಿತೇನೋ ಎಂಬಂತೆ ಓ ಎಂದು ಅಳುತ್ತಾ ಬಂದ ಮಗುವನ್ನು ಅಪ್ಪ ಸಮಾಧಾನ ಮಾಡುತ್ತಾನೆ. ಹೇಗೆಂದರೆ, ಬಾ ಕಂದ ಬಾ ಚಿನ್ನ, ನಿಮ್ಮ ಅಮ್ಮನಿಗೆ ಬುದ್ಧಿಯಿಲ್ಲ, ಬಾ ನಾನು ನಿನಗೆ ಹೊರಗೆ ಕರೆದುಕೊಂಡು ಹೋಗಿ ಚಾಕಲೇಟ್ ಕೊಡಿಸುತ್ತೇನೆ ಅನ್ನುತ್ತಾನೆ ಅಪ್ಪ. ಮಗುವಿಗೆ ಖುಷಿಯಾಗುತ್ತದೆ. ಅಪ್ಪ ಹೊಡೆದಾಗ, ಅಮ್ಮನೂ ಹೆಚ್ಚೂ ಕಮ್ಮಿ ಇದೇ ರೀತಿಯಲ್ಲೇ ನಡೆದುಕೊಳ್ಳುತ್ತಾಳೆ. ಇದರಿಂದ ಮಕ್ಕಳಿಗೆ ತಪ್ಪು ಸಂದೇಶ ತಲುಪುತ್ತದೆ. ಅವರು ಅಪ್ಪ ಮತ್ತು ಅಮ್ಮ ಇಬ್ಬರನ್ನೂ ತಮಗೆ ಬೇಕಾದ ರೀತಿಯಲ್ಲಿ ಆಟ ಆಡಿಸುವ ತಂತ್ರ ಕಲಿತುಕೊಳ್ಳುತ್ತಾರೆ. ಅಪ್ಪನಾಗಿ ಅಥವ ಅಮ್ಮನಾಗಲಿ ಒಬ್ಬರು ಮಕ್ಕಳನ್ನು ತಿದ್ದುವಾಗ ಮತ್ತೊಬ್ಬರು ಮಕ್ಕಳ ಪರ ವಹಿಸಿಕೊಂಡು ಬರುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಹೆತ್ತವರಿಗೆ ಹೆಗ್ಗಣವಾದರೂ ಮುದ್ದು ಅನ್ನುವ ಮಾತಿದೆ, ಆಯಿತು, ಅವರ ಮಕ್ಕಳು ಅವರಿಗೆ ತುಂಬಾ ಮುದ್ದು, ಆದರೆ ಬೇರೆಯವರ ಮನೆಗಳಿಗೆ ಹೋದಾಗಲಾದರೂ ಒಂದಿಷ್ಟು ಶಿಸ್ತಿನಿಂದ ಇರುವುದನ್ನು ಕಲಿಸುವುದು ಬೇಡವೇ.

ತಂದೆ ತಾಯಿಗಳ ಜೊತೆಯಲ್ಲಿ ಬೇರೆಯವರ ಮನೆಗೆ ಹೋಗುವ ಮಕ್ಕಳು, ಅಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲಾ ಎಳೆದುಹಾಕುತ್ತಾರೆ, ಟಿವಿ ರಿಮೋಟ್ ತೆಗೆದುಕೊಂಡು ಕಾರ್ಟೂನೋ ಮತ್ತೊಂದೋ ಚಾನಲ್ ಹಾಕಿ ಹೆಚ್ಚಿನ ಸೌಂಡ್ ಕೊಡುತ್ತಾರೆ, ಕಿರುಚುತ್ತಾರೆ, ಅಲ್ಲೇಎಲ್ಲೋ ಇಟ್ಟಿದ್ದ ಪೆನ್ನು ತೆಗೆದುಕೊಂಡು ಅಲ್ಲೇ ಇರುವ ಯಾವುದು ಪ್ರಮುಖ ಫೈಲಿನಮೇಲೋ ಮತ್ತೊಂದು ಪುಸ್ತಕದ  ಮೇಲೋ ಅಥವ ಗೋಡೆಯ ಮೇಲೋ ಗೀಚುತ್ತಾರೆ.

ಒಂದು ಅರ್ಧ ಗಂಟೆ ಕಳೆಯುವಷ್ಟರಲ್ಲೇ ಆ ಮನೆಯವರಿಗೆ ತಲೆನೋವು ಬಂದಂತಾಗುತ್ತಿರುತ್ತದೆ. ಅವರಾದರೂ ಏನು ಮಾಡಲು ಸಾಧ್ಯ…ದಾಕ್ಷಿಣ್ಯ, ಬೇರೆಯವರ ಮಕ್ಕಳನ್ನು ಗದರುವಂತಿಲ್ಲ, ಹೀಗಾಗಿ ಏನೂ ಅನ್ನಲ್ಲೂ ಆಗದೆ ಸುಮ್ಮನಿರಲೂ ಆಗದೆ ಅನುಭವಿಸುತ್ತಿರುತ್ತಾರೆ. ಆದರೆ, ಮಕ್ಕಳನ್ನು ಹೆತ್ತಿದ್ದೀರಲ್ಲಾ ನಿಮಗೇನು ಸ್ವಾಮಿ ಕಷ್ಟ? ನೀವು ಅವರಿಗೆ ಹೇಳಬಾರದೇ?

ಮಕ್ಕಳು ತುಂಟಾಟ ಮಾಡುವುದು ಸಹಜ, ಆದರೆ ಅದು ಮಿತಿ ಮೀರದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ತಾನೆ? ಇದೆಂಥ ಕುರುಡು ಪ್ರೇಮ ಮಕ್ಕಳ ಮೇಲೆ?

ಯಾರದ್ದೋ ಮನೆಯಲ್ಲಿ ಮಕ್ಕಳು ಅಷ್ಟೆಲ್ಲಾ ಹಾವಳಿ ನಡೆಸಿ ಆ ಮನೆಯವರಿಗೆ ಕಿರಿಕಿರಿ ಉಂಟುಮಾಡುತ್ತಿದ್ದರೂ ಕೂಡ, ಆ ನಿಮ್ಮ ಮಕ್ಕಳನ್ನು ಸುಮ್ಮನಿರಿ ಅನ್ನುವ ಗೋಜಿಗೆ ಹೋಗುವುದಿಲ್ಲ, ಅವರನ್ನು ಮೃದುವಾಗಿ ಗದರುವ ಅಥವ ನಿಯಂತ್ರಿಸುವ ಯಾವುದೇ ಸಣ್ಣ ಪ್ರಯತ್ನವನ್ನೂ ಮಾಡದ ನೀವು ತೆಪ್ಪಗೆ ಕುಳಿತಿರುತ್ತೀರಲ್ಲಾ….ಇದು ಯಾವ ರೀತಿಯ ನಡವಳಿಕೆ ಹೇಳಿ?

ನೀವು ಮತ್ತು ನಿಮ್ಮ ಮಕ್ಕಳ ನಡವಳಿಕೆ ಅನ್ನುವುದು, ನಿಮ್ಮನ್ನು ಆಹ್ವಾನಿಸಿದ ತಪ್ಪಿಗಾಗಿ ಆ ಮನೆಯವರು ಅನುಭವಿಸಬೇಕಾದ ಶಿಕ್ಷೆಯಾಗಿ ಪರಿಣಮಿಸುತ್ತದೆ.

ಇನ್ನು, ನೆರೆಹೊರೆಯಲ್ಲಿ ಅಥವ ಒಂದೇ ಕಟ್ಟಡದಲ್ಲಿ ಪುಟ್ಟ ಮಕ್ಕಳಿದ್ದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ. ಹೀಗಾಗಿ ಆ ಮಕ್ಕಳ ಜೊತೆಗೆ ಒಂದಿಷ್ಟು ಪ್ರೀತಿ ಬೆಳೆಸಿಕೊಂಡಿರುತ್ತಾರೆ. ಸರಿ ಸಂಜೆ ಮನೆಗೆ ಹೋದಾಗ ಆ ಮಕ್ಕಳು ಮನೆಯ ಬಳಿ ಎದುರಾಗುತ್ತವೆ. ನಾನೂ ಬರುವೆ ಅನ್ನುತ್ತವೆ, ಅವರೋ ಆಗಷ್ಟೇ ಹೊರಗಿನಿಂದ ಕೆಲಸ ಮುಗಿಸಿಕೊಂಡು ಸುಸ್ತಾಗಿ ಬಂದಿರುತ್ತಾರೆ, ಪಾಪ ಮಕ್ಕಳಿಗೆ ಅದು ಗೊತ್ತಾಗುವುದಿಲ್ಲ. ಆದರೆ, ಅದರ ಅಮ್ಮನಿಗೆ ಗೊತ್ತಾಗುವುದು ಬೇಡವೇ…. ಆ ಮಕ್ಕಳು ಅವರಿಗೆ ಗಂಟು ಬಿದ್ದು ಮನೆಯೊಳಗೆ ಬಂದು, ಆಟ ಬೊಂಬಾಟ ಶುರುಮಾಡುತ್ತವೆ. ಕಚೇರಿಯ ಕಿರಿಕಿರಿ, ರಸ್ತೆ ಮೇಲಿನ ಟ್ರಾಫಿಕ್ಕು, ಹೊಟ್ಟೆ ಬೇರೆ ಹಸಿದಿರುವುದರ ಜೊತೆಗೆ, ಇದೂ ಸೇರಿಕೊಂಡರೆ ತುಂಬಾ ಕಷ್ಟವಾಗುತ್ತದೆ.

ಇನ್ನು ಕೆಲವು ತಂದೆ ತಾಯಿಗಳು, ತಮ್ಮ ಮಕ್ಕಳನ್ನು ಚಿನ್ನ ರನ್ನ ಎಂದೆಲ್ಲಾ ಕರೆಯುತ್ತಾರೆ. ಸಂತೋಷ, ಅದರಲ್ಲಿ ಯಾವ ತಪ್ಪೂ ಇಲ್ಲ ಬಿಡಿ. ಆದರೆ, ಕೆಲವರು, ತಮ್ಮ ಮಕ್ಕಳನ್ನು, ಬನ್ನಿ ಹೋಗಿ ಎಂದು ಕರೆಯುತ್ತಾರೆ. ಅದಕ್ಕೆ ಪ್ರತಿಯಾಗಿ ಆ ಮಕ್ಕಳು ತಂದೆ ತಾಯಿಗಳಿಗೆ ಏಕ ವಚನ ಬಳಸುತ್ತವೆ, ಬಳಸಲಿ ಪ್ರೀತಿಯಿಂದ, ಏನೂ ನಷ್ಟವಿಲ್ಲ. ಆದರೆ, ಇವರು ಯಾಕೆ ಮಕ್ಕಳಿಗೆ ಅನಗತ್ಯವಾಗಿ ಬಹುವಚನ ಪ್ರಯೋಗ ಮಾಡುತ್ತಾರೋ ಗೊತ್ತಿಲ್ಲ.

ನೆರೆಮನೆಯ ಒಬ್ಬರು, ತಮ್ಮ ನಾಲ್ಕು ವರ್ಷದ ಮಗನನ್ನು ಬನ್ನಿ ಅಪ್ಪಾಜಿ, ಹೋಗಿ ಅಪ್ಪಾಜಿ, ಯಾಕಪ್ಪಾಜಿ, ಏನಪ್ಪಾಜಿ ಎಂದು ಕರೆಯುತ್ತಿದ್ದರು, ಮೊದಲಿಗೆ ಆ ಮಗುವಿನ ಹೆಸರೇ ಅಪ್ಪಾಜಿ ಇರಬೇಕು ಎಂದು ಎಲ್ಲರೂ ಅಂದುಕೊಂಡುಬಿಟ್ಟಿದ್ದರು. ಆದರೆ,  ಆ ಮಗುವಿನ ಹೆಸರು ಬೇರೆ ಇದೆ, ಇವರು ಪ್ರೀತಿಯಿಂದ ಅಪ್ಪಾಜಿ ಎಂದು ಕರೆಯುತ್ತಾರೆ ಎಂದು ಆಮೇಲೆ ಗೊತ್ತಾಯಿತು. ಅಪ್ಪನೇ ಮಗನನ್ನು ಅಪ್ಪಾಜಿ ಎಂದು ಕರೆದು ಬಿಟ್ಟರೆ, ಮಗ ಅಪ್ಪನನ್ನು ಏನೆಂದು ಕರೆಯಬೇಕೋ ಗೊತ್ತಾಗುವುದಿಲ್ಲ. ಅಥವ ‘ಮಗುವು ಮನುಜನ ತಂದೆ’ ಅನ್ನುವ William Wordsworth ಮಹಾ ಕವಿಯ ಮಾತುಗಳೇನಾದರೂ ಆ ಅಪ್ಪನ ಕಿವಿಗೆ ಬಿದ್ದು, ಅದನ್ನು ಆ ರೀತಿಯಾಗಿ ಪದಶಃ ಅರ್ಥಮಾಡಿಕೊಂಡು ಬಿಟ್ಟಿದ್ದಾರೋ ಗೊತ್ತಾಗಲಿಲ್ಲ.

ಇತ್ತೀಚೆಗಂತೂ ಮಧ್ಯಮ ಮತ್ತು ಕೆಳವರ್ಗದ ಯಾವುದೇ ತಂದೆ ತಾಯಿಗಳನ್ನು ಕೇಳಿ ಅವರೆಲ್ಲಾ ಹೇಳುವುದು ಒಂದೇ…ಅಯ್ಯೋ ನಾವಂತೂ ಬದುಕಿನಲ್ಲಿ ತುಂಬಾ ಕಷ್ಟಪಟ್ಟುಬಿಟ್ಟಿದ್ದೇವೆ, ಆದರೆ ನಮ್ಮ ಮಕ್ಕಳಿಗೆ ಹಾಗೆ ಆಗಬಾರದು, ಅವರು ಯಾವುದೇ ಕಷ್ಟಕ್ಕೆ ಸಿಲುಕಬಾರದು ಎಂದೆಲ್ಲಾ ಅನ್ನುತ್ತಾರೆ.

ಆದರೆ, ಈ ಮಾತು ಮತ್ತು ಈ ಧೋರಣೆಯೇ ಅವರ ಮಕ್ಕಳು ಹಾಳಾಗುವಂತೆ ಮಾಡುತ್ತದೆ ಅನ್ನುವುದು ಅವರಿಗೆ ಅರ್ಥವಾಗುತ್ತಿಲ್ಲ.  ನಾವು ಕಷ್ಟ ಪಟ್ಟಿದ್ದೇವೆ, ನಮ್ಮ ಮಕ್ಕಳು ಕಷ್ಟ ಪಡಬಾರದು ಎಂದು ಯೋಚಿಸುವ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಯಾವುದೇ ಕಷ್ಟದ ಅಥವ ಕೊರತೆಯ ಅರಿವೇ ಆಗದಂತೆ ಬೆಳೆಸಲು ಮುಂದಾಗುತ್ತಾರೆ.

ಅಗತ್ಯವಿರಲಿ ಇಲ್ಲದಿರಲಿ, ಮಕ್ಕಳು ಬೇಕು ಅಂದಿದ್ದನ್ನೆಲ್ಲಾ ಕೊಡಿಸುತ್ತಾರೆ. ಅದಕ್ಕಾಗಿ ಹಣ ಹೊಂದಿಸಲು ಅವರು ಸಾಲ ಮಾಡಲೂ ಹೆದರುವುದಿಲ್ಲ ಅಥವ ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡಲೂ ಹಿಂಜರಿಯುವುದಿಲ್ಲ. ಹೀಗೆ, ತಮ್ಮ ಮಕ್ಕಳು  ಯಾಕೆ ಕಷ್ಟ ಪಡಬೇಕು ಎಂಬ ಭಾವನೆಯಲ್ಲಿ, ತಂದೆ ತಾಯಿಗಳು ತೋರುವ ಅತಿ ಪ್ರೀತಿ ಮಕ್ಕಳನ್ನು ಹಾಳು ಮಾಡುತ್ತದೆ. ಅವರಿಗೆ ಕಷ್ಟ ಸುಖಗಳ ಅರಿವೇ ಆಗದಂತೆ ಮಾಡುತ್ತದೆ. ತುಂಬಾ ಸುಲಭವಾಗಿ ಸಿಗುವ ವಸ್ತುವಿನ ಮೌಲ್ಯವನ್ನೇ ಮಕ್ಕಳು ಅರಿಯದಂತೆ ಮಾಡುತ್ತದೆ.

ಬಾಲ್ಯದಲ್ಲಿ ತಾವು ಬಯಸಿದ್ದನ್ನೆಲ್ಲಾ ಪಡೆದುಕೊಂಡ ಮಕ್ಕಳು ಒಂದು ರೀತಿಯ ಭ್ರಮಾ ಲೋಕದಲ್ಲಿರುತ್ತಾರೆ. ಇಂಥವರು, ಬೆಳೆದು ಹದಿಹರೆಯಕ್ಕೆ ಬಂದಮೇಲೆ, ಒಂದು ವೇಳೆ ಅವರಿಗೆ ಬಾಲ್ಯದಲ್ಲಿದ್ದ ಅನುಕೂಲತೆಗಳು ಸಿಗದಿದ್ದರೆ ಅವರು ತಂದೆ ತಾಯಿಗಳನ್ನು ದೂಷಿಸುತ್ತಾರೆ. ಇದರ ಜೊತೆಗೆ ತಮಗೆ ಬೇಕಾದದ್ದನ್ನು ಪಡೆದುಕೊಳ್ಳಲು ಸರಿಯಲ್ಲದ ಮಾರ್ಗವನ್ನು ಅನುಸರಿಸಲೂ ಅವರು ಮುಂದಾಗಬಹುದು. ಹೀಗಾಗಿ, ಇಂತಹ ಮಕ್ಕಳು ಮುಂದೆ ತಂದೆ ತಾಯಿಗಳ ಹಲವು ದುಃಖಗಳಿಗೂ ಕಾರಣರಾಗುತ್ತಾರೆ.  ಬಾಲ್ಯದಲ್ಲೇ ಮಕ್ಕಳಿಗೆ ಜೀವನದ ಕಷ್ಟಗಳ ಒಂದಿಷ್ಟು ಅನುಭವವಾದರೂ ಆಗುವಂತೆ ನೋಡಿಕೊಳ್ಳಬೇಕು. ಕಷ್ಟ ಕಾರ್ಪಣ್ಯಗಳ ಅರಿವುಹೊಂದಿರುವ ಮಕ್ಕಳು ಮುಂದೆ, ತಂದೆ ತಾಯಿಯರಿಗೆ ಉರುಗೋಲಾಗಬಹುದು.

ಅದೇ ರೀತಿ, ಬಾಲ್ಯದಲ್ಲಿ ಅತಿ ಕಠಿಣ ರೀತಿಯಲ್ಲಿ ಮಕ್ಕಳನ್ನು ಬೆಳೆಸುವುದೂ ಕೂಡ ತಪ್ಪೇ.  ಕೆಲ ಮನೆಗಳಲ್ಲಿನ ಮಕ್ಕಳಿಗೆ ಅಪ್ಪ ಒಂದು ರೀತಿಯ ಹೆಬ್ಬುಲಿಯಂತೆ ಕಾಣುತ್ತಿರುತ್ತಾನೆ. ಅಪ್ಪನ ಎದುರು ನಿಂತು ಮಾತನಾಡಲೂ ಅವರಿಗೆ ಧೈರ್ಯವಿರುವುದಿಲ್ಲ. ಕೆಲವು ಮನೆಗಳಲ್ಲಿ ಈ ಪಾತ್ರವನ್ನು ಅಮ್ಮ ವಹಿಸಿರುತ್ತಾಳೆ, ಇಂತಹ ಬಹುತೇಕ ಮನೆಗಳ ಮಕ್ಕಳು ಓದಿನಲ್ಲಿ ಜಾಣರಾಗಿ ತಮ್ಮ ತಮ್ಮ ಬದುಕನ್ನು ಕಂಡುಕೊಳ್ಳುತ್ತಾರೆ, ಇನ್ನೂ ಕೆಲವರು ತಿರುಗಿ ಬಿದ್ದು, ಇಡೀ ಕುಟುಂಬದ ನೆಮ್ಮದಿ ಹಾಳು ಮಾಡುತ್ತಾರೆ. ಹೀಗಾಗಿ, ಅತಿ ಶಿಕ್ಷೆ ಕೊಟ್ಟು ಬೆಳೆಸಿದ ಮಕ್ಕಳೂ ಸಹ ಕೈ ತಪ್ಪಿ ಹೋಗಬಹುದು. ಇದರ ಜೊತೆಗೆ ಬಾಲ್ಯದಲ್ಲಿ ಶಿಸ್ತಿನ ಹೆಸರಿನಲ್ಲಿ ಸರ್ವಾಧಿಕಾರಿ ವರ್ತನೆ ತೋರಿದ್ದ ಅಪ್ಪನನ್ನು ವಯಸ್ಸಾದ ಕಾಲದಲ್ಲಿ ನೋಡಿಕೊಳ್ಳುವಲ್ಲಿ ಈ ಮಕ್ಕಳು ಅಸಡ್ಡೆ ತೋರಿಸಬಹುದು.

ತಂದೆ ತಾಯಿಗಳು ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಸ್ತು, ಸಂಯಮದ ಜೊತೆಗೆ ಸೋಲು ಮತ್ತು ಟೀಕೆಗಳನ್ನು ಸಹಿಸುವುದನ್ನೂ ಕಲಿಸಿಕೊಡಬೇಕು. ಹಣ ಅನ್ನುವುದು ಎಟಿಎಂನಲ್ಲಿ ಯಾರು ಬೇಕಾದರೂ ಹೋಗಿ ತೆಗೆದುಕೊಂಡು ಬಂದುಬಿಡುವುದಲ್ಲಾ, ಅದನ್ನು ಕಷ್ಟಪಟ್ಟು ಸಂಪಾದಿಸಿ ನಮ್ಮ ಬ್ಯಾಂಕ್ ಖಾತೆಗೆ ಹಾಕಿದ ನಂತರವೇ ಎಟಿಎಮ್‌ನಿಂದ ತೆಗೆದುಕೊಳ್ಳಲು ಸಾಧ್ಯ ಅನ್ನುವ ಸತ್ಯ ಬಾಲ್ಯದಿಂದಲೇ ಗೊತ್ತಾಗುವಂತೆ ಮಾಡಬೇಕು.

ತಂದೆ ತಾಯಿಗಳು ಬಾಯಲ್ಲಿ ನೀವು ಹೀಗೆ ಮಾಡಬೇಕು, ಹೀಗೆ ವರ್ತಿಸಬೇಕು ಎಂದು ಹೇಳುವ ಮಾತಿಗಿಂತಲೂ, ಅವರು ದೈನಂದಿನ ಬದುಕಿನಲ್ಲಿ ಹೇಗೆ ವರ್ತಿಸುತ್ತಿದ್ದಾರೆ ಅನ್ನುವುದನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಹೀಗಾಗಿ ತಂದೆ ತಾಯಿಗಳು, ತಮ್ಮ ಮಕ್ಕಳಿಗೆ ತಾವೇ ಸಮಾಜದ ಮೊದಲ ಮಾದರಿ ಎಂಬಂತೆ  ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ.

 

 


ಸಂಬಂಧಿತ ಟ್ಯಾಗ್ಗಳು

ಮಕ್ಕಳನ್ನು ಹೆತ್ತರೆ ಸಾಕೇ..? ಸಾಕೇ..?


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ