ಬೈಕ್ ಅಡ್ಡಗಟ್ಟಿ ದರೋಡೆ !

Kannada News

04-08-2017

ಬೆಂಗಳೂರು: ಬೈಯಪ್ಪನಹಳ್ಳಿಯ ರೈಲ್ವೆ ಗೇಟ್ ಬಳಿ ಹಾಡುಹಗಲೇ ಐದಾರು ಮಂದಿ ದುಷ್ಕರ್ಮಿಗಳು ಆಪಲ್ ಲ್ಯಾಪ್‍ಟಾಪ್ ಗಳನ್ನು ತೆಗೆದುಕೊಂಡು ಬೈಕ್‍ ನಲ್ಲಿ ಬರುತ್ತಿದ್ದ ಡೆಲಿವರಿ ಬಾಯ್ ಒಬ್ಬನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು 85 ಸಾವಿರ ನಗದು 2 ಆಪಲ್ ಲ್ಯಾಪ್ ಟಾಪ್, ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಚಾಕು ಇರಿತದಿಂದ ಬಲಗೈ ಹಾಗೂ ತಲೆಗೆ ಗಾಯಗೊಂಡಿರುವ ಜಾವದ್, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದಿರಾನಗರದ ಕೆಎಫ್‍ಸಿ ಬಳಿ ಇರುವ ಐಎಫ್‍ಐಎಕ್ಸ್ ಆಪಲ್ ಫೋನ್ ಸರ್ವೀಸ್ ಸೆಂಟರ್‍ ನಲ್ಲಿ ಡೆಲಿವರಿ ಬಾಯ್ ಆಗಿದ್ದ ಜಾವದ್ ಕಳೆದ ಸೋಮವಾರ ಮಧ್ಯಾಹ್ನ 12ರ ವೇಳೆ ಕಮ್ಮನಹಳ್ಳಿಯಲ್ಲಿ ಸರ್ವೀಸ್ ನೀಡಿದ್ದ 2 ಆಪಲ್ ಲ್ಯಾಪ್ ಟಾಪ್ ಗಳು  ಹಾಗೂ 85 ಸಾವಿರ ನಗದನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಇಂದಿರಾನಗರದ ಸೆಂಟರ್‍ಗೆ ಪಲ್ಸರ್ ಬೈಕ್‍ನಲ್ಲಿ ಬರುತ್ತಿದ್ದರು.

ಮಾರ್ಗ ಮಧ್ಯೆ ಬೈಯಪ್ಪನಹಳ್ಳಿ ರೈಲ್ವೆ ಗೇಟ್ ಬಳಿ ಬರುತ್ತಿದ್ದಾಗ ಕಾದು ಕುಳಿತಿದ್ದ ಐವರು ದುಷ್ಕರ್ಮಿಗಳು ಏಕಾಏಕಿ ಬಂದು ಬೈಕ್‍ನ್ನು ಅಡ್ಡಗಟ್ಟಿ ಎಲ್ಲಿಗೆ ಹೋಗುತ್ತಿದ್ದೀಯ? ಏನು ಕೆಲಸ? ಮಾಡುತ್ತೀಯಾ ಎಂದು ಪ್ರಶ್ನಿಸುತ್ತ ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ, ಈ ವೇಳೆ ಪ್ರತಿರೋಧ ತೋರಿದ ಜಾವದ್‍ ನ  ಬಲಗೈ ಹಾಗೂ ತಲೆಗೆ ಚಾಕುವಿನಿಂದ ಇರಿದು, ಬ್ಯಾಗ್ ಅನ್ನು ಕಸಿದುಕೊಂಡು ಪರ್ಸ್ ಹಾಗೂ ಮೊಬೈಲ್‍ನ್ನು  ದೋಚಿ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಜಾವದ್ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸ್ಥಳೀಯರೊಬ್ಬರಿಂದ ಮೊಬೈಲ್ ಪಡೆದು ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿ ಕುಸಿದು ಬಿದ್ದಿದ್ದಾರೆ. ಅಷ್ಟರಲ್ಲಿ ಅದೇ ಮಾರ್ಗವಾಗಿ ಬಂದ ಪೊಲೀಸರು ಜಾವದ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಐಎಫ್‍ಐಎಕ್ಸ್ ಆಪಲ್ ಫೋನ್ ಸರ್ವೀಸ್ ಸೆಂಟರ್ ನ ಮಾಲೀಕ ರಾಜು ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಜಾವದ್ ನಿಂದ ಕಸಿದುಕೊಂಡ ಬ್ಯಾಗ್‍ ನಲ್ಲಿ ಸುಮಾರು 1 ಲಕ್ಷ ಬೆಲೆಯ 2 ಲ್ಯಾಪ್ ಟಾಪ್ ಗಳು, 85 ಸಾವಿರ ನಗದು, ಮೊಬೈಲ್ ಪರ್ಸ್‍ನಲ್ಲಿ 300 ರೂ. ನಗದು ಇತರೆ ವಸ್ತುಗಳಿದ್ದವು ಎಂದು ತಿಳಿಸಿದ್ದಾರೆ. ದುಷ್ಕರ್ಮಿಗಳು 20 ರಿಂದ 25 ವರ್ಷ ವಯಸ್ಸಿನವರಾಗಿದ್ದು, ತಮಿಳಿನಲ್ಲಿ ಮಾತನಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ