ಜ್ಯೋತಿಷ್ಯ ನಂಬಿದ್ದೇ ಪ್ರಾಬ್ಲಮ್ಮಾ…?

Kannada News

03-08-2017

ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವಿಚಾರ, ಇಡೀ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲೂ ಸುದ್ದಿ ಮಾಡುತ್ತಿದೆ. ಆದಾಯ ತೆರಿಗೆ ಇಲಾಖೆಯವರು ಡಿ.ಕೆ.ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ದ್ವಾರಕಾನಾಥ್ ಅವರ ಮನೆಯನ್ನೂ ಶೋಧಿಸಿದ್ದಾರೆ. ಅಲ್ಲೆಲ್ಲಾ ಏನು ಸಿಕ್ಕಿದೆಯೋ ಸಿಕ್ಕಿಲ್ಲವೋ ಗೊತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ್ ಅಪಾರವಾದ ದೈವಭಕ್ತಿಯುಳ್ಳ ಮತ್ತು ಜ್ಯೋತಿಷ್ಯವನ್ನು ಬಹುವಾಗಿ ನಂಬುವಂಥ ವ್ಯಕ್ತಿ ಅನ್ನುವುದಂತೂ ನಿಜ.

ಇಂಥ ದೇವರಿಂದ ತಮಗೆ ಒಳಿತು ಕಂಡಿದೆ ಎಂದಾದರೆ ಆ ದೈವವನ್ನು ಬಹುವಾಗಿ ಹಚ್ಚಿಕೊಳ್ಳುವುದು ಡಿ.ಕೆ.ಶಿವಕುಮಾರ್ ಅವರ ಜಾಯಮಾನ. ಇದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರಿಗೆ ಜ್ಯೋತಿಷ್ಯದ ಬಗ್ಗೆಯೂ ಅಪಾರವಾದ ಒಲವು. ಯಾರಾದರೂ ಜ್ಯೋತಿಷಿಗಳು ಹೇಳಿದ ಸಲಹೆಯಿಂದ, ಅವರು ಹೇಳಿದ್ದನ್ನು ಮಾಡಿದ್ದರಿಂದ, ತಮಗೆ ಒಳ್ಳೆಯದೇನಾದರೂ ಆಯಿತೆಂದರೆ ಮುಗಿಯಿತು, ಮುಂದೆ ಕೈಗೊಳ್ಳುವ ಎಲ್ಲಾ ನಿರ್ಧಾರಗಳಲ್ಲೂ ಆ ಜ್ಯೋತಿಷಿಯ ಮಾತೇ ಅಂತಿಮವಾಗುತ್ತದೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರ ಚಿಂತನೆಗಳಿಗೆ ಮತ್ತು ಆಸೆ ಆಕಾಂಕ್ಷೆಗಳಿಗೆ ಪೂರಕವಾಗುವ ರೀತಿಯಲ್ಲಿ ಹೇಳಿಬಿಟ್ಟರಂತೂ ಮುಗಿಯಿತು. ಆ ಜ್ಯೋತಿಷಿ ಹಾಕಿದ ಗೆರೆಯನ್ನು ಅವರು ದಾಟುವುದೇ ಇಲ್ಲವಂತೆ. ಇದರ ಜೊತೆಗೆ ಡಿ.ಕೆ.ಶಿವಕುಮಾರ್ ಅವರ ಇಂಗ್ಲಿಷ್ ರಾಶಿ ಟಾರಸ್ (ವೃಷಭ) ಆಗಿರುವುದರಿಂದ ಅದಕ್ಕೆ ತಕ್ಕಂತೆ ಗೂಳಿಯಂತೆ ನುಗ್ಗುವ ಮನೋಭಾವವನ್ನೂ ಬೆಳೆಸಿಕೊಂಡಿರಬಹುದು. ಜ್ಯೋತಿಷ್ಯದ ಬಗ್ಗೆ ಇಟ್ಟುಕೊಂಡಿರುವ ನಂಬಿಕೆಗಳ ಕಾರಣಗಳಿಂದಾಗಿಯೇ, ಡಿ.ಕೆ.ಶಿವಕುಮಾರ್ ಅವರು ಸಂಕಷ್ಟಕ್ಕೆ ಸಿಲುಕಿದರೇ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ನೀವು ರಾಜನಾಗುತ್ತೀರಿ, ನಿಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಜ್ಯೋತಿಷಿಗಳು ಹೇಳುವ ಮಾತಿನಿಂದಲೇ ಡಿ.ಕೆ.ಶಿವಕುಮಾರ್ ಎಚ್ಚರ ತಪ್ಪಿರಬಹುದು, ತಮ್ಮ ರಾಜಕೀಯ ಮತ್ತು ವ್ಯಾವಹಾರಿಕ ವಿಚಾರಗಳ ಬಗ್ಗೆ ವಾಸ್ತವಿಕವಾಗಿ ಯೋಚಿಸಿ, ನಿರ್ಧರಿಸುವಲ್ಲಿ ಎಡವಿರಬಹುದು ಎನ್ನಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ