ರಾಜ್ಯಕ್ಕೆ 5 ಸಾವಿರ ಹೊಸ ಬಸ್ಸುಗಳು !

Kannada News

03-08-2017

ಬೆಂಗಳೂರು: ಕೆ.ಎಸ್‍.ಆರ್.ಟಿ.ಸಿ ಮತ್ತು ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ವರ್ಷ 5 ಸಾವಿರಕ್ಕೂ ಹೆಚ್ಚು ಬಸ್ಸುಗಳನ್ನು ಖರೀದಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, ಈ ವಿಷಯ ತಿಳಿಸಿದರಲ್ಲದೇ ಎಂಟು ಲಕ್ಷದಿಂದ ಎಂಟೂವರೆ ಲಕ್ಷ ಕಿಲೋಮೀಟರುಗಳನ್ನು ದೂರ ಓಡಿದ ಬಸ್ಸುಗಳನ್ನು ತೆಗೆದು ಹಾಕಿ, ಹೊಸ ಬಸ್ಸುಗಳನ್ನು ಖರೀದಿಸಲಾಗುತ್ತಿದ್ದು, ಇದೇ ಹಿನ್ನೆಲೆಯಲ್ಲಿ ಐದು ಸಾವಿರಕ್ಕೂ ಹೆಚ್ಚು ಬಸ್ಸುಗಳನ್ನು ಖರೀದಿ ಮಾಡಲಾಗುತ್ತಿದೆ ಎಂದರು.

ಕೆ.ಎಸ್‍.ಆರ್.ಟಿ.ಸಿ,ಈಶಾನ್ಯ ಸಾರಿಗೆ ಸಂಸ್ಥೆ, ವಾಯುವ್ಯ ಸಾರಿಗೆ ಸಂಸ್ಥೆ, ಬಿಎಂಟಿಸಿ ಸೇರಿದಂತೆ ಎಲ್ಲೆಡೆ ಸೇರಿ ಒಟ್ಟು ಐದು ಸಾವಿರಕ್ಕೂ ಹೆಚ್ಚು ಬಸ್ಸುಗಳನ್ನು ಖರೀದಿಸಲಾಗುತ್ತಿದ್ದು, ಅದೇ ಕಾಲಕ್ಕೆ ಈ ವರ್ಷ ಹೊಸತಾಗಿ ನಾಲ್ಕು ಸಾವಿರ ಮಂದಿ ಸಿಬ್ಬಂದಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಕೇಂದ್ರ ಸರ್ಕಾರ ಈ ಹಿಂದಿನಂತೆ ನರ್ಮ್ ಯೋಜನೆಯಡಿ ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಹೆಚ್ಚು ಆದ್ಯತೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂಚೆ ನರ್ಮ್ ಯೋಜನೆಯಡಿ ನಿರ್ದಿಷ್ಟ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ ಒದಗಿಸುತ್ತಿತ್ತು, ಇದರಿಂದಾಗಿ ಕೆ.ಎಸ್‍.ಆರ್.ಟಿ.ಸಿ ಗೆ ಎಂದು ಖರೀದಿ ಮಾಡುವ ಬಸ್ಸುಗಳಿಗೆ ಕೇಂದ್ರ ಸರ್ಕಾರ ಶೇಕಡಾ ಎಂಭತ್ತರಷ್ಟು ಹಾಗೂ ಬಿಎಂಟಿಸಿಗೆ ಖರೀದಿಸುವ ಬಸ್ಸಿಗೆ ಶೇಕಡಾ ಐವತ್ತರಷ್ಟು ಹಣವನ್ನು ಒದಗಿಸುತ್ತಿತ್ತು. ಹಾಗೆಯೇ ಹೊಸ ಡಿಪೋಗಳನ್ನು ನಿರ್ಮಿಸುವುದರಿಂದ ಹಿಡಿದು ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಕೆಲಸಗಳಿಗೆ ಹಣ ಲಭ್ಯವಾಗುತ್ತಿತ್ತು.

ಆದರೆ ಈಗ ಕೇಂದ್ರ ಸರ್ಕಾರ ಅಮೃತ ಎಂಬ ಯೋಜನೆಯನ್ನು ಮಾಡಿದ್ದು ಅದರಡಿ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಹಲವು ರೀತಿಯ ಯೋಜನೆಗಳಿಗೆ ಆದ್ಯತೆ ನೀಡಲು ಸೂಚನೆ ನೀಡಿದೆ. ಈ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಉಳಿಯುವ ಹಣವನ್ನು ಸಾರಿಗೆ ಸಂಸ್ಥೆಗೆ ಒದಗಿಸುವಂತೆ ಅದು ಹೇಳಿದೆ. ಪರಿಣಾಮವಾಗಿ ಇಂತಹ ಕೆಲಸಗಳಿಗೆ ಹಣ ಬಳಕೆಯಾದ ಮೇಲೆ ನಮಗೆ ಕೊಡಲು ಎಲ್ಲಿಂದ ಹಣ ಲಭ್ಯವಾಗುತ್ತದೆ?ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಕಾರಣಕ್ಕಾಗಿ ಕೇಂದ್ರ ಸಚಿವ ಅನಂತಕುಮಾರ್ ಅವರಿಂದ ಹಿಡಿದು ನಿರ್ಮಲಾ ಸೀತಾರಾಮನ್ ಅವರವರೆಗೆ ಮನವಿ ನೀಡಿ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುವಂತೆ ಕೋರಲಾಗಿದೆ ಎಂದರು. ಕೇಂದ್ರ ಸರ್ಕಾರ ನರ್ಮ್ ಯೋಜನೆಯಡಿ ಹೆಚ್ಚಿನ ಹಣ ಒದಗಿಸುತ್ತಿದ್ದ ಕಾರಣದಿಂದ ರಾಜ್ಯದಲ್ಲಿರುವ ನಗರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗಿತ್ತು. ಪುತ್ತೂರು, ಮಡಿಕೇರಿ ಹೊರತುಪಡಿಸಿದಂತೆ ರಾಜ್ಯದ ಮೂವತ್ತಾರು ನಗರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಅವಕಾಶವಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರದ ಕ್ರಮದಿಂದ ಹಿನ್ನಡೆ ಉಂಟಾಗಿದೆ ಎಂದರು.

ಬೆಂಗಳೂರಿನಲ್ಲಿ ಮೆಟ್ರೋ ರೈಲು ಆರಂಭವಾದಂದಿನಿಂದ ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿಲ್ಲ. ಆದರೆ ಅದರಿಂದ ಸಾರಿಗೆ ಸಂಸ್ಥೆಗೆ ನಷ್ಟವೂ ಆಗಿಲ್ಲ ಎಂದರು. ನಗರದ ಕೇಂದ್ರ ಭಾಗದಿಂದ ಇಪ್ಪತ್ತೈದು ಕಿಲೋಮೀಟರುಗಳಷ್ಟು ದೂರದ ಪ್ರದೇಶಗಳಿಗೆ ನಗರ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸಿದ ಪರಿಣಾಮವಾಗಿ ಎಲ್ಲೆಲ್ಲಿ ಪ್ರಯಾಣಿಕರ ಸಂಖ್ಯೆ ಕುಗ್ಗಿದೆಯೋ ಅಲ್ಲಿದ್ದ ಬಸ್ಸುಗಳನ್ನು ಹೊರವಲಯಗಳಿಗೆ ಒದಗಿಸಲಾಗಿದೆ. ಹೀಗಾಗಿ ನಮಗೆ ನಿರೀಕ್ಷಿತ ಪ್ರಮಾಣದ ಆದಾಯವಿದೆ ಎಂದರು.

ಕೆ.ಎಸ್‍.ಆರ್.ಟಿ.ಸಿ ಯಲ್ಲಿ 1.15 ಕೋಟಿ ಜನ ಸಂಚರಿಸುತ್ತಿದ್ದರೆ ಬಿಎಂಟಿಸಿಯಲ್ಲಿ 58 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ ಎಂದು ಸಚಿವರು ವಿವರ ನೀಡಿದರು. ರಾಜ್ಯಕ್ಕೆ ನೂರಾ ಐವತ್ತು ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಾಯಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ