ಐಟಿ ದಾಳಿ: ಸಂಪುಟ ವಿಸ್ತರಣೆ ಮುಂದೂಡಿಕೆ..?

Kannada News

03-08-2017

ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೂ ಮುನ್ನ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಲು  ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದು, ಹಿರಿಯ ನಾಯಕರಾದ ಹೆಚ್.ಎಂ.ರೇವಣ್ಣ, ಷಡಾಕ್ಷರಿ ಹಾಗೂ ನರೇಂದ್ರಸ್ವಾಮಿ ಅವರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು, ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಹಿಂದುಳಿದ ವರ್ಗದ ಕೋಟಾದಡಿ ಹೆಚ್.ಎಂ.ರೇವಣ್ಣ, ಲಿಂಗಾಯತ ಸಮುದಾಯದ ಕೋಟಾದಡಿ, ತಿಪಟೂರು ಶಾಸಕ ಷಡಾಕ್ಷರಿ ಹಾಗೂ ದಲಿತರ ಕೋಟಾದಡಿ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿವೆ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಅಬಕಾರಿ ಸಚಿವ ಹೆಚ್.ವೈ.ಮೇಟಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆ ಸ್ಥಾನಕ್ಕೆ ಆ ಸಮುದಾಯದಿಂದ ಯಾರನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಸಿದ್ಧರಾಮಯ್ಯ ಪರಿಶೀಲನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಭೈರತಿ ಬಸವರಾಜ್, ಹೆಚ್.ಎಂ.ರೇವಣ್ಣ ಸೇರಿದಂತೆ ಕುರುಬ ಸಮುದಾಯದ ಹಲವು ಮಂದಿ ನಾಯಕರ ಹೆಸರುಗಳು ಮಂತ್ರಿಗಿರಿಯ ರೇಸಿಗೆ ಬಂದಿದ್ದವು. ಆದರೆ ಹೆಚ್.ಎಂ.ರೇವಣ್ಣ ಅವರು ಈ ಹಿಂದೆಯೇ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಸಮುದಾಯದ ಹಿರಿಯ ನಾಯಕರೂ ಆಗಿರುವುದರಿಂದ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಒಗ್ಗಟ್ಟಿನ ಮಾತುಗಳು ಆ ಸಮುದಾಯದ ಪ್ರಮುಖರಿಂದಲೇ ಕೇಳಿ ಬಂತು. ಹೀಗಾಗಿ ಮಂತ್ರಿ ಮಂಡಲ ವಿಸ್ತರಣೆಯ ಸಂದರ್ಭದಲ್ಲಿ ಹೆಚ್.ಎಂ.ರೇವಣ್ಣ ಅವರನ್ನು ಸಚಿವರನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.

ಈ ಮಧ್ಯೆ ಲಿಂಗಾಯತ ಕೋಟಾದಡಿ ಯಾರನ್ನು ತೆಗೆದುಕೊಳ್ಳಬೇಕು ಎಂಬ ಕುರಿತಂತೆಯೂ ಸುಧೀರ್ಘ ಚರ್ಚೆ ನಡೆದು ಅಂತಿಮವಾಗಿ ಲಿಂಗಾಯತ ಪ್ರಮುಖರ ಅಭಿಪ್ರಾಯಗಳನ್ನು ಪಡೆದೇ ತಿಪಟೂರು ಶಾಸಕ ಷಡಾಕ್ಷರಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಪರಮೇಶ್ವರ್ ಅವರು ತೆರವು ಮಾಡಿದ ಸಚಿವ ಸ್ಥಾನಕ್ಕೆ ನರೇಂದ್ರಸ್ವಾಮಿ. ಆರ್.ಬಿ.ತಿಮ್ಮಾಪೂರ ಸೇರಿದಂತೆ ಹಲವರ ಹೆಸರುಗಳು ಪ್ರಸ್ತಾಪವಾದರೂ ದಲಿತ ವರ್ಗದ ಬಲಗೈ ಸಮುದಾಯದವರು ತೆರವು ಮಾಡಿರುವ ಜಾಗವನ್ನು ಅದೇ ಸಮುದಾಯಕ್ಕೆ ನೀಡಬೇಕು ಎಂಬ ಧ್ವನಿ ಗಟ್ಟಿಯಾಗಿದ್ದರಿಂದ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ತಿಂಗಳ ಮೊದಲ ವಾರವೇ ಸಚಿವ ಸಂಪುಟವನ್ನು ವಿಸ್ತರಿಸಲು ಸಿದ್ಧರಾಮಯ್ಯ ಯೋಚಿಸಿದ್ದರಾದರೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಏಕಾಏಕಿ ನಡೆದ ಐಟಿ ಧಾಳಿಯಿಂದ ರಾಜ್ಯ ಕಾಂಗ್ರೆಸ್ ತಲ್ಲಣಗೊಂಡಿದ್ದು, ಇದಕ್ಕಾಗಿಯೇ ಮಂತ್ರಿ ಮಂಡಲ ವಿಸ್ತರಣೆ ಕಾರ್ಯವನ್ನು ಮುಂದೂಡಲು ಸಿದ್ಧರಾಮಯ್ಯ ತೀರ್ಮಾನಿಸಿದರೆನ್ನಲಾಗಿದೆ. ಆಗಸ್ಟ್ ಎಂಟರಂದು ಗುಜರಾತ್‍ನಿಂದ ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು ಇದಾದ ನಂತರ ಸಿದ್ದರಾಮಯ್ಯ ಅವರು, ದೆಹಲಿಗೆ ತೆರಳಿ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ. ಇದಾದ ನಂತರ ಎರಡು ಅಥವಾ ಮೂರನೇ ವಾರ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿ ಮೂರು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ ಎಂದೂ ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ