ಆಧಾರ್ ಮಾಹಿತಿ ಅಕ್ರಮ ಬಳಕೆ: ವ್ಯಕ್ತಿ ಬಂಧನ

Kannada News

03-08-2017

ಬೆಂಗಳೂರು: ಆಧಾರ್ ಮಾಹಿತಿಯನ್ನು ಅನಧಿಕೃತವಾಗಿ ಬಳಕೆ ಮಾಡಿ ಪರಿಶೀಲನೆಗೆ ಅವಕಾಶ ಕಲ್ಪಿಸುವ ಮೊಬೈಲ್ ಅಪ್ಲಿಕೇಷನ್ನು ಸಿದ್ಧಪಡಿಸಿದ್ದ ಓಲಾ ಕಂಪನಿಯ ಸಾಫ್ಟ್ ವೇರ್ ಎಂಜಿನಿಯರ್ ಅಭಿನವ ಶ್ರೀವಾತ್ಸವ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಉತ್ತರಪ್ರದೇಶದ ಕಾನ್ಪುರದ ಕಿದ್ವಾಯಿ ನಗರ ಮೂಲದ, ಐಐಟಿ ಪದವೀಧರನಾಗಿದ್ದ ಅಭಿನವ ಶ್ರೀವಾತ್ಸವ (30) ಓಲಾ ಕಂಪನಿಯಲ್ಲಿ ವರ್ಷಕ್ಕೆ 40 ಲಕ್ಷ ವೇತನದ ಪ್ಯಾಕೇಜ್ ಪಡೆದಿದ್ದರೂ ಹಣದ ಆಸೆಗಾಗಿ ಇಂತಹ ಕೃತ್ಯಕ್ಕೆ ಇಳಿದಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಯಶವಂತಪುರದಲ್ಲಿ ವಾಸಿಸುತ್ತಿದ್ದ ಆರೋಪಿಯು ಕಳೆದ ಜನವರಿಯಲ್ಲಿ ಆಧಾರ್ ಕೀ ಪರಿಶೀಲನೆ ಮಾಡುವ ಮೊಬೈಲ್ ಮೊಬೈಲ್ ಅಪ್ಲಿಕೇಷನ್ ಅನ್ನು ಸಿದ್ಧಪಡಿಸಿ ಅದರಿಂದ ಪ್ರದರ್ಶಿತವಾಗುವ ಜಾಹೀರಾತಿನಿಂದ 40 ಸಾವಿರ ಹಣಗಳಿಸಿದ್ದೂ, ಪರಿಶೀಲನೆಯ ಆಪ್ ಅನ್ನು ಆತ ಕಳೆದ ತಿಂಗಳು ಸ್ಥಗಿತಗೊಳಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಹವ್ಯಾಸಿ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಷನ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸುತ್ತಿದ್ದ ಈತ ಇದುವರೆಗೂ 5 ಮೊಬೈಲ್ ಅಪ್ಲಿಕೇಷನ್ ಗಳನ್ನು ಅಭಿವೃದ್ಧಿಪಡಿಸಿದ್ದ. ಮೊಬೈಲ್ ಅಪ್ಲಿಕೇಷನ್ ಬಳಸಿ ಅನಧಿಕೃತವಾಗಿ ತಾನು ಸಿದ್ಧಪಡಿಸಿದ್ದ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಈ-ಹಾಸ್ಪಿಟಲ್ ಸರ್ವರ್ ಮೂಲಕ ಯು.ಐ.ಡಿ.ಎ.ಐಗೆ ಸಂಪರ್ಕ ಕಲ್ಪಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಬಳಕೆದಾರರಿಗೆ ಆಧಾರ್ ಸಂಬಂಧಿತ ಮಾಹಿತಿಯನ್ನು ನೀಡುತ್ತಿದ್ದ. ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ 4 ಲ್ಯಾಪ್ ಟಾಪ್, 1 ಟ್ಯಾಬ್, 4 ಮೊಬೈಲ್‍ಗಳು, 6 ಪೆಂಡ್ರೈವ್, 1 ಸಿಪಿಯು ಸೇರಿದಂತೆ 2 ಲಕ್ಷ 25 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2009 ರಲ್ಲಿ ಖರಗ್ಪುರದಲ್ಲಿ ಐಐಟಿ ಇಂಡಸ್ಟ್ರಿಯಲ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪದವಿ ಪಡೆದು, 2010 ರಲ್ಲಿ ನಗರಕ್ಕೆ ಬಂದಿದ್ದ ಆರೋಪಿಯು ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ರಿಸೋರ್ಸರ್ ಆಗಿ, 2012 ರಲ್ಲಿ ಸ್ವಂತ ಕಂಪನಿ ತೆರೆದು ಸರಿಯಾಗಿ ನಿರ್ವಹಣೆ ಮಾಡಲಾಗದೆ 2015 ರಲ್ಲಿ ಖಾಸಗಿ ಕಂಪನಿಗಳಲ್ಲಿ ಸಾಫ್ಟ್‍ ವೇರ್ ಡೆವಲಪರ್ ಆಗಿ 2016 ರಲ್ಲಿ ಮತ್ತೊಂದು ಕಂಪನಿಗೆ ಸೇರಿ, ಕಳೆದ ವರ್ಷ ಕೋರಮಂಗಲದಲ್ಲಿರುವ ಓಲಾ ಕೇಂದ್ರ ಕಚೇರಿಯಲ್ಲಿ ಸಾಫ್ಟ್‍ ವೇರ್ ಅಭಿವೃದ್ಧಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಆರೋಪಿಯು ದೇಶದ ಜನರ ಗೌಪ್ಯತೆಯನ್ನು ಬಹಿರಂಗಪಡಿಸುವ ಗಂಭೀರ ಅಪರಾಧದಲ್ಲಿ ಭಾಗಿಯಾಗಿರುವುದು ಕಾನೂನು ಬಾಹಿರವಾಗಿ ಆಧಾರ್ ಗೆ ಸಂಬಂಧಿಸಿದ 'ನಿಕ್' ಸೇವೆಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ಅನಧಿಕೃತ ಬಳಕೆ ಮಾಡುವ ಆರೋಪಗಳಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

ಆಧಾರ್ ಮಾಹಿತಿ ಅನಧಿಕೃತ ಬಳಕೆ ಸಂಬಂಧ ದಾಖಲಾಗಿದ್ದ ದೂರು ಆಧರಿಸಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ರವಿ ಅವರು, ಎಸಿಪಿ ವೆಂಕಟೇಶ್ ಪ್ರಸನ್ನ ಅವರ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ